AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RRB ಗ್ರೂಪ್ D ಫಲಿತಾಂಶ ಪ್ರಕಟ: ಬೆಂಗಳೂರು ವಲಯದ ಕಟ್‌ಆಫ್ ಎಷ್ಟು? ಇಲ್ಲಿದೆ ವಲಯವಾರು ಸಂಪೂರ್ಣ ವಿವರ!

ರೈಲ್ವೆ ನೇಮಕಾತಿ ಮಂಡಳಿ (RRB) ಗ್ರೂಪ್ D CBT ಫಲಿತಾಂಶಗಳನ್ನು ಪ್ರಕಟಿಸಿದೆ. ಬೆಂಗಳೂರು ವಲಯದ UR ಕಟ್‌ಆಫ್ 79.29352 ದಾಖಲಾಗಿದ್ದು, ಸ್ಪರ್ಧೆ ತೀವ್ರವಾಗಿದೆ. ಚೆನ್ನೈನಲ್ಲಿ OBC ಕಟ್‌ಆಫ್ UR ಗಿಂತ ಹೆಚ್ಚಾಗಿದೆ. ಕೋಲ್ಕತ್ತಾ ಕಟ್‌ಆಫ್ ದೇಶದಲ್ಲೇ ಅತಿ ಹೆಚ್ಚು. CBTಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಈಗ ದೈಹಿಕ ದಕ್ಷತೆ ಪರೀಕ್ಷೆ (PET) ಸಿದ್ಧತೆ ನಡೆಸಬೇಕು.

RRB ಗ್ರೂಪ್ D ಫಲಿತಾಂಶ ಪ್ರಕಟ: ಬೆಂಗಳೂರು ವಲಯದ ಕಟ್‌ಆಫ್ ಎಷ್ಟು? ಇಲ್ಲಿದೆ ವಲಯವಾರು ಸಂಪೂರ್ಣ ವಿವರ!
RRB ಗ್ರೂಪ್ D ಫಲಿತಾಂಶ ಪ್ರಕಟ
ಅಕ್ಷತಾ ವರ್ಕಾಡಿ
|

Updated on: Nov 14, 2026 | 3:06 PM

Share

ಬೆಂಗಳೂರು: ರೈಲ್ವೆ ನೇಮಕಾತಿ ಮಂಡಳಿ (RRB) ಬಹುನಿರೀಕ್ಷಿತ ಗ್ರೂಪ್ D (Group D) ನೇಮಕಾತಿಯ ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT) ಫಲಿತಾಂಶಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಫಲಿತಾಂಶದ ಜೊತೆಗೆ, ಕರ್ನಾಟಕದ ಬೆಂಗಳೂರು ಸೇರಿದಂತೆ ಎಲ್ಲಾ ಪ್ರಾದೇಶಿಕ ಮಂಡಳಿಗಳು ಮುಂದಿನ ಹಂತವಾದ ದೈಹಿಕ ದಕ್ಷತೆ ಪರೀಕ್ಷೆಗೆ (PET) ಆಯ್ಕೆಯಾದ ಅಭ್ಯರ್ಥಿಗಳ ರೋಲ್ ಸಂಖ್ಯೆಗಳ ಪಟ್ಟಿಯನ್ನು ಸಹ ಪ್ರಕಟಿಸಿವೆ. ಇದರೊಂದಿಗೆ ಸಾಮಾನ್ಯ (UR), ಒಬಿಸಿ (OBC), ಇಡಬ್ಲ್ಯೂಎಸ್ (EWS), ಎಸ್‌ಸಿ (SC) ಮತ್ತು ಎಸ್‌ಟಿ (ST) ವರ್ಗಗಳಿಗೆ ವಲಯವಾರು ಕಟ್‌ಆಫ್ ಅಂಕಗಳನ್ನು ಬಿಡುಗಡೆ ಮಾಡಲಾಗಿದೆ.

ಕರ್ನಾಟಕದ ಬೆಂಗಳೂರು ವಲಯದ ಕಟ್‌ಆಫ್ ಎಷ್ಟಿದೆ?

ಕರ್ನಾಟಕದ ಅಭ್ಯರ್ಥಿಗಳು ಕಾತರದಿಂದ ಕಾಯುತ್ತಿದ್ದ ಬೆಂಗಳೂರು ಆರ್‌ಆರ್‌ಬಿ (RRB Bengaluru) ವಲಯದಲ್ಲಿ ಸಾಮಾನ್ಯ ವರ್ಗದ (UR) ಕಟ್‌ಆಫ್ 79.29352 ದಾಖಲಾಗಿದೆ. ದೇಶದ ಇತರ ಪ್ರಮುಖ ವಲಯಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಸ್ಪರ್ಧೆ ತೀವ್ರವಾಗಿದ್ದು, ಅರ್ಹತೆ ಪಡೆದ ಅಭ್ಯರ್ಥಿಗಳು ಇದೀಗ ದೈಹಿಕ ದಕ್ಷತೆ ಪರೀಕ್ಷೆಗೆ (PET) ಸಿದ್ಧತೆ ನಡೆಸಬೇಕಿದೆ.

ಚೆನ್ನೈನಲ್ಲಿ ಸಾಮಾನ್ಯರಿಗಿಂತ ಒಬಿಸಿ ಕಟ್‌ಆಫ್ ಹೆಚ್ಚು!

ಈ ಬಾರಿಯ ಫಲಿತಾಂಶದಲ್ಲಿ ಚೆನ್ನೈ ಆರ್‌ಆರ್‌ಬಿ ಕಟ್‌ಆಫ್ ಅಂಕಿಅಂಶಗಳು ಅತ್ಯಂತ ಅಸಾಧಾರಣವಾಗಿದ್ದು, ಎಲ್ಲರ ಗಮನ ಸೆಳೆದಿವೆ. ಚೆನ್ನೈನಲ್ಲಿ ಒಬಿಸಿ ವರ್ಗದ ಕಟ್‌ಆಫ್ 82.79168 ತಲುಪಿದ್ದರೆ, ಸಾಮಾನ್ಯ ವರ್ಗದ ಕಟ್‌ಆಫ್ 80.75601 ಆಗಿದೆ. ಅಂದರೆ, ಸಾಮಾನ್ಯ ವರ್ಗಕ್ಕಿಂತ ಒಬಿಸಿ ವರ್ಗದ ಕಟ್‌ಆಫ್ ಬರೋಬ್ಬರಿ 2.03567 ಅಂಕಗಳಷ್ಟು ಹೆಚ್ಚಾಗಿದೆ. ಮತ್ತೊಂದೆಡೆ, ಅಜ್ಮೀರ್ ವಲಯದಲ್ಲಿ ಸಾಮಾನ್ಯ ವರ್ಗದ ಕಟ್‌ಆಫ್ 80.68220 ದಾಖಲಾಗಿದ್ದು, ಇಲ್ಲಿ ಒಬಿಸಿ ವಿಭಾಗಕ್ಕೆ ಯಾವುದೇ ಹುದ್ದೆಗಳು ಲಭ್ಯವಿರಲಿಲ್ಲ.

ಕೋಲ್ಕತ್ತಾ, ಪಾಟ್ನಾ ಮತ್ತು ಗೋರಖ್‌ಪುರ ವಲಯಗಳ ಕಟ್‌ಆಫ್ ವಿವರ:

ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ, ಕೋಲ್ಕತ್ತಾ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಕಾಯ್ದಿರಿಸದ (ಸಾಮಾನ್ಯ) ವರ್ಗದ ಕಟ್‌ಆಫ್ ದೇಶದಲ್ಲೇ ಅತಿ ಹೆಚ್ಚು ಅಂದರೆ 84.16794 ಆಗಿದೆ. ಇದೇ ವಲಯದಲ್ಲಿ ಒಬಿಸಿ ವರ್ಗಕ್ಕೆ 80.99859, ಇಡಬ್ಲ್ಯೂಎಸ್‌ಗೆ 74.02487, ಎಸ್‌ಸಿಗೆ 77.44996 ಮತ್ತು ಎಸ್‌ಟಿ ವರ್ಗಕ್ಕೆ 66.59089 ಕಟ್‌ಆಫ್ ನಿಗದಿಯಾಗಿದೆ. ಇನ್ನು ಪಾಟ್ನಾ ವಲಯದಲ್ಲಿ ಸಾಮಾನ್ಯ ವರ್ಗದ ಕಟ್‌ಆಫ್ 82.51333 ಮತ್ತು ಒಬಿಸಿ ಕಟ್‌ಆಫ್ 82.51135 ಆಗಿದ್ದು, ಈ ಎರಡೂ ವಿಭಾಗಗಳ ಅಂಕಗಳ ನಡುವಿನ ವ್ಯತ್ಯಾಸ ತೀರಾ ಕಡಿಮೆಯಾಗಿದೆ. ಗೋರಖ್‌ಪುರದಲ್ಲಿ ಸಾಮಾನ್ಯ ವರ್ಗಕ್ಕೆ 81.46204 ಮತ್ತು ಒಬಿಸಿ ವರ್ಗಕ್ಕೆ 80.92605 ಕಟ್‌ಆಫ್ ದಾಖಲಾಗಿದೆ.

ಇದನ್ನೂ ಓದಿ: 68ರ ವಯಸ್ಸಿನಲ್ಲೂ ಕಲಿಕೆಯ ಉತ್ಸಾಹ; ನಿವೃತ್ತ ಅಧಿಕಾರಿ ಈಗ ಸೈಕಾಲಜಿ ಸ್ಟೂಡೆಂಟ್!

ದೇಶದ ಇತರ ಪ್ರಮುಖ ವಲಯಗಳ ಸಾಮಾನ್ಯ ವರ್ಗದ ಕಟ್‌ಆಫ್:

ಇತರ ಪ್ರಮುಖ ರೈಲ್ವೆ ವಲಯಗಳ ಸಾಮಾನ್ಯ ವರ್ಗದ ಕಟ್‌ಆಫ್ ವಿವರಗಳನ್ನು ಗಮನಿಸುವುದಾದರೆ, ರಾಂಚಿಯಲ್ಲಿ 80.51944, ಚಂಡೀಗಢದಲ್ಲಿ 80.25070 ಮತ್ತು ಭೋಪಾಲ್‌ನಲ್ಲಿ 79.81581 ದಾಖಲಾಗಿದೆ. ಹಾಗೆಯೇ ಬಿಲಾಸ್ಪುರ್‌ನಲ್ಲಿ 78.89454, ಭುವನೇಶ್ವರದಲ್ಲಿ 78.06946, ಪ್ರಯಾಗ್‌ರಾಜ್‌ನಲ್ಲಿ 77.69152, ಮುಂಬೈನಲ್ಲಿ 77.65710 ಹಾಗೂ ಅಹಮದಾಬಾದ್‌ನಲ್ಲಿ 77.28827 ಕಟ್‌ಆಫ್ ನಿಗದಿಯಾಗಿದೆ.

ಒಟ್ಟಾರೆ ಫಲಿತಾಂಶದ ವಿಶ್ಲೇಷಣೆ:

ಒಟ್ಟಾರೆ ಅಂಕಿಅಂಶಗಳನ್ನು ವಿಶ್ಲೇಷಿಸಿದಾಗ, ದೇಶದ ಹೆಚ್ಚಿನ ವಲಯಗಳಲ್ಲಿ ಸಾಮಾನ್ಯ ಮತ್ತು ಒಬಿಸಿ ವರ್ಗದ ಕಟ್‌ಆಫ್ ಅಂಕಗಳ ನಡುವಿನ ವ್ಯತ್ಯಾಸ ಒಂದು ಅಂಕಕ್ಕಿಂತ ಕಡಿಮೆಯಿರುವುದು ಕಂಡುಬಂದಿದೆ. ಅಲ್ಲದೆ, ಬಹುತೇಕ ವಲಯಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ (EWS) ಕಟ್‌ಆಫ್ ಅಂಕಗಳು ಸಾಮಾನ್ಯ ಮತ್ತು ಒಬಿಸಿ ವರ್ಗಗಳಿಗಿಂತ ಕಡಿಮೆಯಾಗಿವೆ. ಸಿಬಿಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಆಯಾ ಪ್ರಾದೇಶಿಕ ಆರ್‌ಆರ್‌ಬಿ (ಕರ್ನಾಟಕದ ಅಭ್ಯರ್ಥಿಗಳು RRB ಬೆಂಗಳೂರು) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಸದ್ಯ ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ರಾಜಕೀಯ, ಕ್ರೈಂ ಸುದ್ದಿಗಳನ್ನು ಬರೆಯುತ್ತಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More