SSLC Exams 2023: ಬೇರೊಬ್ಬ ವಿದ್ಯಾರ್ಥಿ ಹೆಸರಲ್ಲಿ SSLC ಪರೀಕ್ಷೆ ಬರೆಯುತ್ತಿದ್ದ ಮತ್ತೋರ್ವ ಅಪ್ರಾಪ್ತ ಬಾಲಕ: ಪೋಲಿಸ್​ ವಶಕ್ಕೆ

|

Updated on: Mar 31, 2023 | 8:03 PM

ರಾಜ್ಯಾದ್ಯಂತ ಇಂದಿನಿಂದ ಎಸ್​ಎಸ್​ಎಲ್​ಸಿ ಪರೀಕ್ಷೆಗಳು ಆರಂಭಗೊಂಡಿದ್ದು, ಪರೀಕ್ಷೆಯ ಮೊದಲ ದಿನವೇ ಬೇರೊಬ್ಬ ವಿದ್ಯಾರ್ಥಿ ಹೆಸರಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುತ್ತಿದ್ದ ನಕಲಿ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

SSLC Exams 2023: ಬೇರೊಬ್ಬ ವಿದ್ಯಾರ್ಥಿ ಹೆಸರಲ್ಲಿ SSLC ಪರೀಕ್ಷೆ ಬರೆಯುತ್ತಿದ್ದ ಮತ್ತೋರ್ವ ಅಪ್ರಾಪ್ತ ಬಾಲಕ: ಪೋಲಿಸ್​ ವಶಕ್ಕೆ
ಪ್ರಾತಿನಿಧಿಕ ಚಿತ್ರ
Image Credit source: livemint.com
Follow us on

ಕಲಬುರಗಿ: ರಾಜ್ಯಾದ್ಯಂತ ಇಂದಿನಿಂದ ಎಸ್​ಎಸ್​ಎಲ್​ಸಿ ಪರೀಕ್ಷೆಗಳು (SSLC Exams 2023) ಆರಂಭಗೊಂಡಿದ್ದು, ಪರೀಕ್ಷೆಯ ಮೊದಲ ದಿನವೇ ಬೇರೊಬ್ಬ ವಿದ್ಯಾರ್ಥಿ ಹೆಸರಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುತ್ತಿದ್ದ ನಕಲಿ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಲಬುರಗಿ ನಗರದ ವಿನಾಯಕ ಶಾಲೆ ಪರೀಕ್ಷಾ ಕೇಂದ್ರದಲ್ಲಿ ಘಟನೆ ನಡೆದಿದೆ. ಇಂದು ಎಸ್​ಎಸ್​ಎಲ್​ಸಿ ಕನ್ನಡ ಪರೀಕ್ಷೆ ನಡೆದಿದ್ದು, ಈ ವೇಳೆ ಡಿಡಿಪಿಐ ಸಕ್ರೆಪ್ಪಗೌಡ ಭೇಟಿ ವೇಳೆ ಅಕ್ರಮ ಬೆಳಕಿಗೆ ಬಂದಿದೆ. ಬೇರೊಬ್ಬ ವಿದ್ಯಾರ್ಥಿ ಹೆಸರಲ್ಲಿ ಪರೀಕ್ಷೆ ಬರೆಯಲು ಬಂದು ಬಾಲಕ ಸಿಕ್ಕು ಬಿದಿದ್ದಾನೆ. ನಕಲಿ ವಿದ್ಯಾರ್ಥಿಯನ್ನು ಕುಮಾರ ಪವಾರ ಎಂದು ಗುರುತಿಸಲಾಗಿದ್ದು, ಸ್ಟೇಷನ್​ ಬಜಾರ್ ಠಾಣೆ ಪೊಲೀಸರಿಂದ ವಿಚಾರಣೆ ಮಾಡಲಾಗಿದೆ. ಮೊದಲ ದಿನವೇ ಕನ್ನಡ ಭಾಷಾ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿತ್ತು.

ಪ್ರಶ್ನೆ ಪತ್ರಿಕೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಕೂಡ ಆಗಿತ್ತು. ಪ್ರಥಮ ಭಾಷೆ ಕನ್ನಡ ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದು ಕಿಡಿಗೇಡಿಗಳು ವಾಟ್ಸ್ ಆ್ಯಪ್​ನಲ್ಲಿ ವೈರಲ್ ಮಾಡಿದ್ದರು. ಆದರೆ ಈ ಕುರಿತಾಗಿ ಯಾವುದೇ ಅಧಿಕಾರಿಗಳು ಪ್ರಶ್ನೆ ಪತ್ರಿಕೆ ಸೋರಿಯಾಗಿರುವ ಬಗ್ಗೆ ಖಚಿತಪಡಿಸಿಲ್ಲ. ಪರೀಕ್ಷೆಯು ಬೆಳಿಗ್ಗೆ 10.30 ರಿಂದ ಆರಂಭವಾಗಿದ್ದು, ಮಧ್ಯಾಹ್ನ 1.30 ರವರೆಗೆ ನಡೆಯಲಿದ್ದು, ಇಂದಿನಿಂದ ಆರಂಭವಾದ ಪರೀಕ್ಷೆಗಳು ಏಪ್ರಿಲ್​ 15ರವರೆಗೆ ನಡೆಯಲಿವೆ.

ಇದನ್ನೂ ಓದಿ: SSLC Exams 2023: ಎಸ್​ಎಸ್​ಎಲ್​ಸಿ ಕನ್ನಡ ಪ್ರಶ್ನೆ ಪತ್ರಿಕೆ ಸೋರಿಕೆ! ಸಾಮಾಜಿಕ ಜಾಲತಾಣದಲ್ಲಿ ವೈರಲ್

ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್

ರಾಜ್ಯಾದ್ಯಂತ ನಡೆಯುವ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬೆಂಗಳೂರಿನ ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ (Prohibitory) ಜಾರಿಗೊಳಿಸಲಾಗಿದೆ.​ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಜೆರಾಕ್ಸ್ ಅಂಗಡಿಗಳನ್ನು ಬಂದ್​ ಮಾಡುವಂತೆ ಆದೇಶ ಹೊರಡಿಸಲಾಗಿದೆ. ಇನ್ನು ಪರೀಕ್ಷಾ ಕೇಂದ್ರಕ್ಕೆ ಮೊಬೈಲ್‌ ಫೋನ್, ಸ್ಮಾರ್ಟ್‌ವಾಚ್​​, ಇಯರ್‌ಫೋನ್, ಎಲೆಕ್ಟ್ರಾನಿಕ್ಸ್ ಉಪಕರಣ ತರುವಂತಿಲ್ಲ. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಒಟ್ಟು 8,42,811 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ರಾಜ್ಯಾದ್ಯಂತ ಒಟ್ಟು 3,305 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.

ಇದನ್ನೂ ಓದಿ: SSLC Exams 2023: ಎಂಟು ವಿದ್ಯಾರ್ಥಿಗಳಿಗೆ ಎಸ್​ಎಸ್ಎಲ್​ಸಿ ಪರೀಕ್ಷೆ ಬರೆಯಲು ಅವಕಾಶ

ಪರೀಕ್ಷಾ ಸಹಾಯವಾಣಿ

ವಿದ್ಯಾರ್ಥಿಗಳು ಹಾಗೂ ಪೋಷಕರ ಅನುಕೂಲಕ್ಕಾಗಿ ಪರೀಕ್ಷಾ ಸಹಾಯವಾಣಿ ಆರಂಭಿಸಲಾಗಿದೆ. ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪೋಷಕರಲ್ಲಿ ಯಾವುದೇ ಸಂದೇಹ, ಗೊಂದಲ, ಆತಂಕ ಪರಿಹರಿಸಲು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಈ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ. ಎಸ್.ಎಸ್.ಎಲ್.ಸಿ. ಪರೀಕ್ಷೆ ಕುರಿತಾದ ಯಾವುದೇ ಗೊಂದಲ ಮಾಹಿತಿಗೆ 080 -23310075/76 ಸಂಪರ್ಕಿಸಬಹುದಾಗಿದೆ.

ಉಚಿತ ಪ್ರಯಾಣ 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇದೀಗ ಎಸ್​​ಎಸ್​ಎಲ್​ಸಿ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೂ ಉಚಿತ ಪ್ರಯಾಣ ಘೋಷಿಸಿದೆ. ಏಪ್ರಿಲ್ 15ರ ವರೆಗೆ ಪರೀಕ್ಷಾ ದಿನಗಳಲ್ಲಿ ವಿದ್ಯಾರ್ಥಿಗಳು ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಉಚಿತವಾಗಿ ಸಂಚರಿಸಬಹುದು. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ಗಳಲ್ಲಿಯೂ ಹಾಲ್ ಟಿಕೆಟ್ ತೋರಿಸಿ ಪರೀಕ್ಷಾ ಕೇಂದ್ರಗಳಿಗೆ ಹೋಗಬಹುದಾಗಿದೆ. ಪರೀಕ್ಷಾ ಪ್ರವೇಶ ಪತ್ರ ತೋರಿಸಿ ಈ ಸೇವೆಯ ಪ್ರಯೋಜನ ಪಡೆಯಬಹುದಾಗಿದೆ ಎಂದು ನಿಗಮಗಳು ತಿಳಿಸಿವೆ. ಪರೀಕ್ಷಾ ಕೇಂದ್ರಗಳ ಬಳಿಯೇ ಬಸ್​ ನಿಲುಗಡೆ ನೀಡುವಂತೆ ಮತ್ತು ಕೋರಿಕೆಯ ನಿಲುಗಡೆ ನೀಡುವಂತೆ ಚಾಲಕರಿಗೆ ಸೂಚನೆ ನೀಡಲಾಗಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:02 pm, Fri, 31 March 23