ಬೆಂಗಳೂರು, ಮಾ.12: 5, 8, 9 ಹಾಗೂ 11 ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ (Board exam) ಅನುಮತಿ ನೀಡುವ ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠದ ಆದೇಶಕ್ಕೆ ಸುಪ್ರೀಂ ಕೋರ್ಟ್ (Supreme Court) ತಡೆ ನೀಡಿದೆ. 5, 8, 9, 11ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡಿ ಹೈಕೋರ್ಟ್ ಆದೇಶವನ್ನು ರೂಪ್ಸ ಹಾಗೂ ಅವರ್ ಸ್ಕೂಲ್ಸ್ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಅದರಂತೆ ಮೇಲ್ಮನವಿಯನ್ನು ಪುರಸ್ಕರಿಸಿದ ಸುಪ್ರೀಂ, ಪರೀಕ್ಷೆ ನಡೆಸದಂತೆ ತಡೆ ನೀಡಿದೆ.
2023-24ನೇ ಸಾಲಿನಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವತಿಯಿಂದ 5,8,9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಅನುದಾನ ರಹಿತ ಶಾಲೆಗಳ ಸಂಘ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಏಕಸದಸ್ಯ ಪೀಠ ಬೋರ್ಡ್ ಪರೀಕ್ಷೆಯನ್ನು ರದ್ದುಪಡಿಸಿತ್ತು.
ಇದನ್ನು ಪ್ರಶ್ನಿಸಿದ ರಾಜ್ಯ ಸರ್ಕಾರ ಮೇಲ್ಮನವಿಯನ್ನು ಸಲ್ಲಿಸಿತ್ತು. ಅದರಂತೆ, ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ವಾದ ಪ್ರತಿವಾದ ಆಲಿಸಿ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ರೂಪ್ಸಾ ಮತ್ತು ಅವರ್ ಸ್ಕೂಲ್ಸ್ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.
5, 8, 9ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ಹಿನ್ನೆಲೆ ಈಗಾಗಲೇ ನಡೆಯುತ್ತಿರುವ ಪರೀಕ್ಷೆ ಮುಂದೂಡಲಾಗಿದೆ. ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ ಬಿಬಿ ಕಾವೇರಿ ಆದೇಶ ಹೊರಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ