ಬೆಂಗಳೂರು / ಪ್ಯಾರೀಸ್: ಫ್ರಾನ್ಸ್ ರಾಜಧಾನಿ ಪ್ಯಾರೀಸ್ನಲ್ಲಿರುವ ಪ್ರತಿಷ್ಠಿತ ‘ಸೈನ್ಸಸ್ ಪೊ ಸ್ಕೂಲ್’ ವಿಶ್ವವಿದ್ಯಾಲಯವು ಅಮೆರಿಕ ಮೂಲದ ‘ಓಪನ್ಎಐ’ (OpenAI) ಕೃತಕ ಬುದ್ಧಿಮತ್ತೆ ಕಂಪನಿ ರೂಪಿಸಿರುವ ‘ಚಾಟ್ಜಿಪಿಟಿ’ (ChatGPT) ಬಳಕೆಯನ್ನು ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ನಿಷೇಧಿಸಿದೆ. ಕರ್ನಾಟಕದಲ್ಲಿಯೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಈ ಕುರಿತು ಚರ್ಚೆ ಆರಂಭವಾಗಿದ್ದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಇತರ ಡೀಮ್ಡ್ ವಿವಿಗಳು ಈ ಕುರಿತು ಶೀಘ್ರ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ. ‘ಅಸೈನ್ಮೆಂಟ್ಗಳಿಗಾಗಿ ಕೃತಕ ಬುದ್ಧಿಮತ್ತೆ ಬಳಸುವುದನ್ನು ನಾವು ಸಂಪೂರ್ಣವಾಗಿ ನಿಷೇಧಿಸುತ್ತೇವೆ. ಯಾರೇ ಆದರೂ ಇಂಥ ಸಾಧನಗಳ ನೆರವಿನಿಂದ ಅಸೈನ್ಮೆಂಟ್ ಪೂರ್ಣಗೊಳಿಸಿದ್ದು ಬೆಳಕಿಗೆ ಬಂದರೆ ವಿಶ್ವವಿದ್ಯಾಲಯದಿಂದ ನಿಷೇಧಿಸುವುದೂ ಸೇರಿದಂತೆ ಉನ್ನತ ಶಿಕ್ಷಣದ ಅವಕಾಶ ನಿರ್ಬಂಧಿಸಲಾಗುವುದು’ ಎಂದು ವಿಶ್ವವಿದ್ಯಾಲಯವು ಎಚ್ಚರಿಸಿದೆ.
ಫ್ರಾನ್ಸ್ನ ವಿವಿ ತನ್ನ ಆದೇಶದಲ್ಲಿ ಎಲ್ಲಿಯೂ ChatGPT ಎಂದು ಉಲ್ಲೇಖಿಸಿಲ್ಲ. ಆದರೆ ‘ವಿದ್ಯಾರ್ಥಿಗಳು ಮೌಖಿಕ ಅಥವಾ ಲಿಖಿತ ಅಸೈನ್ಮೆಂಟ್ ಪೂರ್ಣಗೊಳಿಸಲು ಕೃತಕ ಬುದ್ಧಿಮತ್ತೆ ಬಳಸುವಂತಿಲ್ಲ’ ಎಂದಷ್ಟೇ ಹೇಳಿದೆ. ‘ಉಪನ್ಯಾಸಕರ ಮಾರ್ಗದರ್ಶನದಲ್ಲಿ ಕಲಿಕೆಗಾಗಿ ಚಾಟ್ಜಿಪಿಟಿ ಬಳಸಲು ಅವಕಾಶವಿದೆ’ ಎಂದು ಹೇಳಿರುವ ವಿವಿ ಆಡಳಿತವು, ಚಾಟ್ಜಿಪಿಟಿ ಬಳಕೆಯಿಂದ ಸಂಶೋಧನಾ ಪ್ರಬಂಧಗಳು ನಕಲಾಗುವ ಅಪಾಯ ಹೆಚ್ಚಾಗಿದೆ’ ಎಂದು ಅಭಿಪ್ರಾಯಪಟ್ಟಿದೆ.
ಕರ್ನಾಟಕದಲ್ಲಿಯೂ ನಿಷೇಧಕ್ಕೆ ಚಿಂತನೆ
ಶಿಕ್ಷಣದ ಮೇಲೆ ‘ಚಾಟ್ಜಿಪಿಟಿ’ ಪರಿಣಾಮದ ಬಗ್ಗೆ ಚರ್ಚೆ ಆರಂಭವಾಗಿದೆ. ಅಸೈನ್ಮೆಂಟ್ ಮತ್ತು ವರ್ಕ್ಶೀಟ್ ಬರೆಯಲು ವಿದ್ಯಾರ್ಥಿಗಳು ‘ಚಾಟ್ಜಿಪಿಟಿ’ ಬಳಸಲು ಆರಂಭಿಸಿದರೆ ಅವರ ಕಲಿಕೆ ಹಿಂದುಳಿಯಬಹುದು, ಸೃಜನಶೀಲತೆ ಸತ್ತು ಹೋಗಬಹುದು ಎಂದು ಹಲವು ಉಪನ್ಯಾಸಕರು ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಆರ್ವಿ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗವು ಆಂತರಿಕ ಅಧಿಸೂಚನೆ ಹೊರಡಿಸಿದ್ದು ವಿದ್ಯಾರ್ಥಿಗಳಿಗೆ ಚಾಟ್ಜಿಪಿಟಿ (ChatGPT) ಹಾಗೂ ಗಿಟ್ಹಬ್ ಕೊಪೈಲಟ್ (GitHub Copilot) ಬಳಸುವಂತಿಲ್ಲ ಎಂದು ಸೂಚಿಸಿದೆ. ‘ಈ ವಿಚಾರದಲ್ಲಿ ನಾವು ವ್ಯವಸ್ಥಿತವಾಗಿ ಮುಂದಿನ ಹೆಜ್ಜೆ ಇಡುತ್ತೇವೆ’ ಎಂದು ಆರ್ವಿ ವಿವಿಯ ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದ ಡೀನ್ ಸಂಜಯ್ ಆರ್.ಚಿಟ್ನೀಸ್ ಹೇಳಿದ್ದಾರೆ.
ಚಾಟ್ಜಿಪಿಟಿ ವಿಚಾರದಲ್ಲಿ ಜೈನ್ ವಿಶ್ವವಿದ್ಯಾಲಯವು (ಡಿಮ್ಡ್ ಟು ಬಿ ಯೂನಿವರ್ಸಿಟಿ) ಸ್ಪಷ್ಟ ನಿಲುವು ತೆಗೆದುಕೊಂಡಿದೆ. ‘ಇದು ಅಪ್ರಾಮಾಣಿಕತೆ. ವಿದ್ಯಾರ್ಥಿಗಳು ಇಂಥ ಸಾಧನಗಳನ್ನು ಬಳಸುವಂತಿಲ್ಲ. ಈ ಬಗ್ಗೆ ನಾವು ಶೀಘ್ರ ನೀತಿಯೊಂದನ್ನು ರೂಪಿಸುತ್ತೇವೆ’ ಎಂದು ಜೈನ್ ವಿವಿಯ ಜಂಟಿ ಕುಲಸಚಿವ ಎಂ.ಎಸ್.ಸಂತೋಷ್ ತಿಳಿಸಿದರು.
‘ಚಾಟ್ಜಿಪಿಟಿ ಈಗಷ್ಟೇ ಬಂದಿದೆ. ಅದರ ಬಳಕೆಯನ್ನು ನಿಷೇಧಿಸುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ನಕಲು ಪತ್ತೆ ತುಂಬಾ ಕಷ್ಟ. ಮುಂದಿನ ದಿನಗಳಲ್ಲಿ ಸಂಯೋಜಿತ ಕಾಲೇಜುಗಳ ಪ್ರಾಚಾರ್ಯರ ಅಭಿಪ್ರಾಯಪಡೆದು ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (Visvesvaraya Technological University – VTU) ಉಪಕುಲಪತಿ ಎಸ್.ವಿದ್ಯಾಶಂಕರ್ ಹೇಳಿದರು. ಈ ಹೇಳಿಕೆಯನ್ನು ‘ಡೆಕ್ಕನ್ ಹೆರಾಲ್ಡ್’ ದಿನಪತ್ರಿಕೆ ವರದಿ ಮಾಡಿದೆ.
ಇದನ್ನೂ ಓದಿ: ChatGPT: ಏನಿದು ಚಾಟ್ ಜಿಪಿಟಿ, ಹೇಗೆ ಕೆಲಸ ಮಾಡುತ್ತೆ? ಇತಿ, ಮಿತಿಗಳ ಬಗ್ಗೆ ಇಲ್ಲಿದೆ ವಿವರ
ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:24 am, Sat, 28 January 23