Pariksha Pe Charcha 2023: ಶಾರ್ಟ್​​ಕಟ್ ಬೇಡ, ಸಮಯ ನಿರ್ವಹಣೆಯನ್ನು ಅಮ್ಮಂದಿರಿಂದ ಕಲಿಯಿರಿ; ವಿದ್ಯಾರ್ಥಿಗಳಿಗೆ ಮೋದಿ ನೀಡಿದ ಸಲಹೆಗಳಿವು

| Updated By: ರಶ್ಮಿ ಕಲ್ಲಕಟ್ಟ

Updated on: Jan 27, 2023 | 2:56 PM

PM Narendra Modi ಕೆಲಸ ಮಾಡದೆ ಕೇವಲ ಆಲೋಚಿಸುತ್ತಾ ಇರುವುದೇ ಹೆಚ್ಚು ಒತ್ತಡ ಮತ್ತು ಆಯಾಸವುಂಟು ಮಾಡುತ್ತದೆ. ನಿಮ್ಮ ತಾಯಿಯ ಸಮಯ ನಿರ್ವಹಣಾ ಕೌಶಲ್ಯವನ್ನು ಗಮನಿಸಿ. ಪರೀಕ್ಷೆಯ ಸಮಯದಲ್ಲಿ ನಿಮ್ಮ ಅಧ್ಯಯನವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ನೀವು ಇಲ್ಲಿಂದ ತಿಳಿದುಕೊಳ್ಳುತ್ತೀರಿ.

Pariksha Pe Charcha 2023: ಶಾರ್ಟ್​​ಕಟ್ ಬೇಡ, ಸಮಯ ನಿರ್ವಹಣೆಯನ್ನು ಅಮ್ಮಂದಿರಿಂದ ಕಲಿಯಿರಿ; ವಿದ್ಯಾರ್ಥಿಗಳಿಗೆ ಮೋದಿ ನೀಡಿದ ಸಲಹೆಗಳಿವು
ಪರೀಕ್ಷಾ ಪೆ ಚರ್ಚಾದಲ್ಲಿ ಮೋದಿ
Follow us on

ಪರೀಕ್ಷಾ ಪೆ ಚರ್ಚಾ 2023 (Pariksha Pe Charcha) 6ನೇ ಆವೃತ್ತಿಯಲ್ಲಿ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ಶುಕ್ರವಾರ) ಪರೀಕ್ಷೆಯ ಒತ್ತಡವನ್ನು ನಿವಾರಿಸಲು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಪ್ರಶ್ನೆಗಳಿಗೆ ಉತ್ತರ ನೀಡುವುದಲ್ಲದೆ ಜೀವನ ಪಾಠವನ್ನೂ ಅವರು ಹೇಳಿಕೊಟ್ಟರು. ಈ ವರ್ಷ, ಸುಮಾರು 38 ಲಕ್ಷ ವಿದ್ಯಾರ್ಥಿಗಳು PPC 2023 ಗೆ ನೋಂದಾಯಿಸಿಕೊಂಡಿದ್ದಾರೆ. ಸ್ವೀಕರಿಸಿದ 20 ಲಕ್ಷ ಪ್ರಶ್ನೆಗಳಿಂದ ಪ್ರಶ್ನೆಗಳನ್ನು ಶಿಕ್ಷಣ ಸಚಿವರು ಶಾರ್ಟ್‌ಲಿಸ್ಟ್ ಮಾಡಿದ್ದಾರೆ. ಕೌಟುಂಬಿಕ ಒತ್ತಡ, ಒತ್ತಡ ನಿರ್ವಹಣೆ, ಚೀಟಿಂಗ್ ತಡೆಗಟ್ಟುವಿಕೆ, ವೃತ್ತಿ ಆಯ್ಕೆ ಮುಂತಾದ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸಿದ್ದಾರೆ.

ಚೀಟಿಂಗ್ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

ಪರೀಕ್ಷೆಯ ಸಮಯದಲ್ಲಿ ನಕಲು ಹೊಡೆದು ವಂಚಿಸುವುದನ್ನು ಹೇಗೆ ತಪ್ಪಿಸುವುದು ಎಂದು ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಕಠಿಣ ಪರಿಶ್ರಮವಹಿಸುವ ವಿದ್ಯಾರ್ಥಿಗಳು ಇತರರು ಚೀಟಿಂಗ್ ಮಾಡುವುದನ್ನು ನಿಯಂತ್ರಿಸುವುದಕ್ಕೆ ಮಾರ್ಗಗಳೇನು ಎಂದು ಕೇಳಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಚೀಟಿಂಗ್​​ನ್ನು ತುಂಬಾ ಸೃಜನಾತ್ಮಕ ರೀತಿಯಲ್ಲಿ ಕೆಲವು ವಿದ್ಯಾರ್ಥಿಗಳು ಮಾಡುತ್ತಾರೆ. ಆದರೆ ಆ ವಿದ್ಯಾರ್ಥಿಗಳು ತಮ್ಮ ಸಮಯ ಮತ್ತು ಸೃಜನಶೀಲತೆಯನ್ನು ಉತ್ತಮ ರೀತಿಯಲ್ಲಿ ಬಳಸಿದರೆ ಅವರು ಯಶಸ್ಸು ಸಾಧಿಸಿತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ಯಾವಾಗಲೂ ಶಾರ್ಟ್‌ಕಟ್‌ಗಳನ್ನು ಹುಡುಕಬಾರದು. ರೈಲ್ವೆ ನಿಲ್ದಾಣಗಳಲ್ಲಿನ ಕೆಲವು ಜನರು ಫುಟ್‌ಓವರ್ ಸೇತುವೆಯನ್ನು ಬಳಸುವ ಬದಲು ರೈಲ್ವೆ ಮಾರ್ಗಗಳನ್ನು ದಾಟುತ್ತಾರೆ. ಇದು ಅಪಾಯಕಾರಿ. ಹೆಚ್ಚಿನ ಬಾರಿ ಶಾರ್ಟ್ ಕಟ್ ನಿಮ್ಮನ್ನೇ ಇಲ್ಲದಾಗಿಸುತ್ತದೆ. ಚೀಟಿಂಗ್ ಮಾಡುವುದಕ್ಕಾಗಿ, ನಕಲು ಹೊಡೆಯಲು ಚೀಟಿ ಬರೆಯುವ ಬದಲು ಪರೀಕ್ಷೆ ತಯಾರಿಯಲ್ಲಿ ತೊಡಗಿಸಿಕೊಂಡರೆ, ವಿದ್ಯಾರ್ಥಿಗಳಿಗೆ ಇದು ಸಹಾಯವಾಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಎಂದರೆ ಜೀವನದಲ್ಲಿ ಉತ್ತೀರ್ಣರಾಗುವುದು ಅಲ್ಲ. ಇವತ್ತು ಎಲ್ಲೆಂದರಲ್ಲಿ ಪರೀಕ್ಷೆ ಕೊಡಬೇಕು, ಎಷ್ಟು ಕಡೆ ಮೋಸ ಮಾಡಬಲ್ಲರಿ? ಜೀವನದಲ್ಲಿ ಶಾರ್ಟ್‌ಕಟ್‌ಗಳನ್ನು ಎಂದಿಗೂ ತೆಗೆದುಕೊಳ್ಳಬೇಡಿ ಎಂದಿದ್ದಾರೆ ಮೋದಿ.

ನಿಮ್ಮ ಅಮ್ಮನಿಂದ ಸಮಯ ನಿರ್ವಹಣೆಯನ್ನು ಕಲಿಯಿರಿ

ಸಮಯವನ್ನು ಹೇಗೆ ನಿರ್ವಹಿಸುವುದು ಮತ್ತು ಸಮಯಕ್ಕೆ ಸರಿಯಾಗಿ ಕೆಲಸವನ್ನು ಹೇಗೆ ಪೂರ್ಣಗೊಳಿಸುವುದು ಎಂಬುದರ ಕುರಿತು ಕೇಳಲಾದ ಪ್ರಶ್ನೆಗೆ, ನಾವು ಒಮ್ಮೆ ಮಾಡಲು ಪ್ರಾರಂಭಿಸಿದಾಗ ಅದು ನಂತರ ಸುಲಭವಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಕೆಲಸ ಮಾಡದೆ ಕೇವಲ ಆಲೋಚಿಸುತ್ತಾ ಇರುವುದೇ ಹೆಚ್ಚು ಒತ್ತಡ ಮತ್ತು ಆಯಾಸವುಂಟು ಮಾಡುತ್ತದೆ. ನಿಮ್ಮ ತಾಯಿಯ ಸಮಯ ನಿರ್ವಹಣಾ ಕೌಶಲ್ಯವನ್ನು ಗಮನಿಸಿ. ಪರೀಕ್ಷೆಯ ಸಮಯದಲ್ಲಿ ನಿಮ್ಮ ಅಧ್ಯಯನವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ನೀವು ಇಲ್ಲಿಂದ ತಿಳಿದುಕೊಳ್ಳುತ್ತೀರಿ. ಭಾರವೆಂದು ತೋರಿಸದೆ ಕಾರ್ಯಗಳನ್ನು ಸರಾಗವಾಗಿ ನಿರ್ವಹಿಸುವ ನಿಮ್ಮ ತಾಯಂದಿರಿಂದ ಸೂಕ್ಷ್ಮ ನಿರ್ವಹಣೆಯನ್ನು ನೀವು ಕಲಿಯಬೇಕು.

ಇದನ್ನೂ ಓದಿPariksha Pe Charcha 2023: ಪರೀಕ್ಷಾ ಪೆ ಚರ್ಚಾ ಆರಂಭ: ಇದು ನನ್ನ ಪರೀಕ್ಷೆ ಎಂದ ಪ್ರಧಾನಿ ಮೋದಿ

ಹಾರ್ಡ್ ವರ್ಕ್ Vs ಸ್ಮಾರ್ಟ್ ವರ್ಕ್

ಕಠಿಣ ಪರಿಶ್ರಮ ಅಥವಾ ಸ್ಮಾರ್ಟ್ ವರ್ಕ್ ಇವುಗಳಲ್ಲಿ ಯಾವುದರತ್ತ ಗಮನ ಹರಿಸಬೇಕು ಎಂದು ವಿದ್ಯಾರ್ಥಿಯೊಬ್ಬರು ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಿದಾಗ. ಬಾಯಾರಿದ ಕಾಗೆಗೆ ಕಲ್ಲನ್ನು ಒಯ್ದು ಮಡಕೆಗೆ ಎಸೆದು ಕೊನೆಗೆ ನೀರು ಕುಡಿದ ಕಥೆಯನ್ನು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದು ಸ್ಮಾರ್ಟ್ ವರ್ಕ್ ಅಥವಾ ಹಾರ್ಡ್ ವರ್ಕ್? ಎಂದು ವಿದ್ಯಾರ್ಥಿಗಳಲ್ಲಿ ಕೇಳಿದಾಗ ಪ್ರೇಕ್ಷಕರು ಗೊಂದಲಕ್ಕೊಳಗಾದರು. “ಬಾಯಾರಿದ ಕಾಗೆ” ಕಥೆಯು ನಮಗೆ ಕಷ್ಟಪಟ್ಟು ಕೆಲಸ ಮಾಡಲು ಕಲಿಸುತ್ತದೆ. ನಿಮ್ಮ ಕೆಲಸವನ್ನು ಪ್ರಾರಂಭಿಸುವ ಮೊದಲು ಯಾವಾಗಲೂ ಬುದ್ಧಿವಂತಿಕೆಯನ್ನು ಬಳಸಿ ಎಂದು ಮೋದಿ ಹೇಳಿದ್ದಾರೆ

ಕೆಲವರು ಹಾರ್ಡ್ ವರ್ಕ್ ಮಾಡುತ್ತಲೇ ಇರುತ್ತಾರೆ, ಕೆಲವರು ತಮ್ಮ ಜೀವನದಲ್ಲಿ ಕಠಿಣ ಪರಿಶ್ರಮದ ಕುರುಹು ಇಲ್ಲದವರು ಇದ್ದಾರೆ, ಕೆಲವರು ಅಷ್ಟೇನೂ ಬುದ್ಧಿವಂತಿಕೆಯಿಂದ ಕೆಲಸ ಮಾಡುವುದಿಲ್ಲ, ಮತ್ತು ಇನ್ನೂ ಕೆಲವರು ಬುದ್ಧಿವಂತಿಕೆಯಿಂದ ಕೆಲಸ ಮಾಡುತ್ತಾರೆ ಎಂದಿದ್ದಾರೆ ಮೋದಿ.

ಗ್ಯಾಜೆಟ್​​ಗಳಿಂದ ದೂರವಿರಿ

ಗ್ಯಾಜೆಟ್‌ಗಳ ಮೇಲಿನ ಅವಲಂಬನೆಯ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ಗ್ಯಾಜೆಟ್‌ಗಳು ನಿಮಗಿಂತ ಸ್ಮಾರ್ಟ್ ಆಗಲು ಸಾಧ್ಯವಿಲ್ಲ. ನೀವು ಎಷ್ಟು ಚುರುಕಾಗಿದ್ದೀರೋ ಅಷ್ಟು ಹೆಚ್ಚು ಗ್ಯಾಜೆಟ್‌ಗಳನ್ನು ಉತ್ತಮ ರೀತಿಯಲ್ಲಿ ಬಳಸಲಾಗುತ್ತದೆ. ಅವರು ತಮ್ಮ ಮನೆಯ ಒಂದು ಮೂಲೆಯಲ್ಲಿ ಯಾವುದೇ ಗ್ಯಾಜೆಟ್ ಬಳಸದೆ ಇರುವ ಜಾಗವನ್ನು ಮಾಡಿ ಎಂದು ಮೋದಿ ಪೋಷಕರಿಗೆ ಹೇಳಿದ್ದಾರೆ. ಆ ಜಾಗಕ್ಕೆಪ್ರವೇಶಿಸುವ ಯಾರೂ ಗ್ಯಾಜೆಟ್ ಅನ್ನು ಒಯ್ಯದೆಯೇ ಪ್ರವೇಶಿಸಬೇಕಾಗುತ್ತದೆ. ಇದು ಸಂವಹನವನ್ನು ಹೆಚ್ಚಿಸುತ್ತದೆ ಮತ್ತು ಕುಟುಂಬದ ಸದಸ್ಯರು ಪರಸ್ಪರ ಹೆಚ್ಚು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ವಿದ್ಯಾರ್ಥಿಗಳು ಸಮಾಜದಲ್ಲಿ ಹೇಗೆ ವರ್ತಿಸಬೇಕು ಎಂದು ಶಿಕ್ಷಕರು ಪ್ರಧಾನಿ ಮೋದಿಯವರನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಧಾನಿ, ಸಮಾಜದಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಮತ್ತು ಪೋಷಕರು, ಶಿಕ್ಷಕರು ಅವರ ಕುತೂಹಲವನ್ನು ಪ್ರೋತ್ಸಾಹಿಸಬೇಕು ಎಂದಿದ್ದಾರೆ.. ನಿಮ್ಮ ವಿದ್ಯಾರ್ಥಿಗಳನ್ನು ಕುಗ್ಗಿಸಲು ಪ್ರಯತ್ನಿಸಬೇಡಿ ಎಂದು ಪ್ರಧಾನಿ ಮೋದಿ ಹೇಳಿದರು.
ವಿದ್ಯಾರ್ಥಿಗಳು ಪ್ರಾದೇಶಿಕ ಭಾಷೆಗಳನ್ನು ಕಲಿಯಬೇಕು. ಈ ಮೂಲಕ ವಿದ್ಯಾರ್ಥಿಗಳು ಇತಿಹಾಸವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಬೋರ್ಡ್ ಪರೀಕ್ಷೆಯ ನಂತರ ಅವರ ರಾಜ್ಯಕ್ಕೆ ಅಥವಾ ಇತರ ರಾಜ್ಯಗಳಿಗೆ 5 ದಿನಗಳ ಪ್ರವಾಸಕ್ಕೆ ಕಳುಹಿಸುವಂತೆ ಪಿಎಂ ಮೋದಿ ಪೋಷಕರನ್ನು ಒತ್ತಾಯಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ