ನವದೆಹಲಿ: ಹಿಂಡನ್ಬರ್ಗ್ ರಿಸರ್ಚ್ (Hindenburg Research) ಆರೋಪದಿಂದಾಗಿ ಅದಾನಿ ಸಮೂಹದ (Adani Group) ಕಂಪನಿಗಳ ಷೇರು ಮೌಲ್ಯದಲ್ಲಿ ಭಾರೀ ಕುಸಿತವಾಗುತ್ತಿರುವ ಮಧ್ಯೆಯೇ ಕಂಪನಿಯ ಮಾಲೀಕ ಗೌತಮ್ ಅದಾನಿ (Gautam Adani) ಕೇಂದ್ರ ವಿದ್ಯುತ್ ಸಚಿವ ಆರ್ಕೆ ಸಿಂಗ್ (RK Singh) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಇಬ್ಬರೂ ದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ. ಯಾವ ವಿಚಾರವಾಗಿ ಮಾತುಕತೆ ನಡೆದಿದೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಈ ಮಧ್ಯೆ, ಅದಾನಿ ಸಮೂಹ ಸಂಸ್ಥೆಗಳ ವಿರುದ್ಧ ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್ಬರ್ಗ್ ರಿಸರ್ಚ್ ಮಾಡಿರುವ ಆರೋಪಗಳ ಬಗ್ಗೆ ಮಾರುಕಟ್ಟೆ ನಿಯಂತ್ರಕ ಸೆಬಿಯಿಂದ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಲೆಕ್ಕಪತ್ರ ವಂಚನೆ ಮತ್ತು ಷೇರು ಬೆಲೆಯ ಮೇಲೆ ಪರಿಣಾಮ ಬೀರಿರುವ ಬಗ್ಗೆ ಅದಾನಿ ಸಮೂಹದ ವಿರುದ್ಧ ಹಿಂಡನ್ಬರ್ಗ್ ರಿಸರ್ಚ್ ಆರೋಪ ಮಾಡಿತ್ತು.
ಈ ಮಧ್ಯೆ, ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಒಡೆತನದಲ್ಲಿರುವ ಕಂಪನಿಗಳ ಷೇರು ಮೌಲ್ಯದಲ್ಲಿ ಕುಸಿತ ಮುಂದುವರಿದಿದೆ. ಶುಕ್ರವಾರ ಬೆಳಗ್ಗಿನ ವಹಿವಾಟಿನಲ್ಲಿ ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ಶೇ 20ರಷ್ಟು ಕುಸಿತವಾಗಿದೆ. ಅದಾನಿ ಟೋಟಲ್ ಗ್ಯಾಸ್ ಷೇರು ಮೌಲ್ಯ ಶೇ 19.65, ಅದಾನಿ ಟ್ರಾನ್ಸ್ಮಿಷನ್ ಷೇರು ಮೌಲ್ಯ ಶೇ 19, ಅದಾನಿ ಗ್ರೀನ್ ಎನರ್ಜಿ ಷೇರು ಮೌಲ್ಯ ಶೇ 15.50ರಷ್ಟು ಕುಸಿದಿದೆ.
ಇದನ್ನೂ ಓದಿ: Adani Stocks: ಹಿಂಡನ್ಬರ್ಗ್ ಹೊಡೆತದಿಂದ ಇನ್ನೂ ಚೇತರಿಸದ ಅದಾನಿ ಸಮೂಹ; ಷೇರು ಮೌಲ್ಯ ಶೇ 20 ಕುಸಿತ
ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಷೇರು ಮೌಲ್ಯ ಶೇ 5.31, ಅದಾನಿ ವಿಲ್ಮರ್ ಷೇರು ಮೌಲ್ಯ ಶೇ 5 ಹಾಗೂ ಅದಾನಿ ಪವರ್ ಷೇರು ಮೌಲ್ಯ ಶೇ 4.99ರಷ್ಟು ಕುಸಿದಿದೆ. 2020ರ ಮಾರ್ಚ್ ನಂತರ ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ಕಂಡುಬಂದಿರುವ ಅತಿದೊಡ್ಡ ಪ್ರಮಾಣದ ಕುಸಿತ ಇದು ಎನ್ನಲಾಗಿದೆ.
ಅದಾನಿ ಎಂಟರ್ಪ್ರೈಸಸ್ ಷೇರು ಮೌಲ್ಯ ಶೇ 6.19ರಷ್ಟು ಕುಸಿದಿದೆ. ಕಂಪನಿಯು ಎಫ್ಪಿಒ ಆರಂಭಿಸಿರುವ ಸಂದರ್ಭದಲ್ಲೇ ಷೇರು ಮೌಲ್ಯದಲ್ಲಿ ಭಾರೀ ಕುಸಿತವಾಗಿದ್ದು, ದೊಡ್ಡ ಮೊತ್ತದ ಬಂಡವಾಳ ಸಂಗ್ರಹಕ್ಕೆ ಮುಂದಾಗಿರುವ ಕಂಪನಿಗೆ ಹಿನ್ನಡೆ ಎಂದೇ ಹೇಳಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:47 pm, Fri, 27 January 23