Gautam Adani: ಮಂಜಿನಂತೆ ಕರಗುತ್ತಿದೆ ಗೌತಮ್ ಅದಾನಿ ಸಂಪತ್ತು; ಪೋರ್ಬ್ಸ್ ಸಿರಿವಂತರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದ ಉದ್ಯಮಿ
ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಅದಾನಿ ಇದೀಗ ಫೋರ್ಬ್ಸ್ ರಿಯಲ್ಟೈಮ್ ಬಿಲಿಯನೇರ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರ ನಿವ್ವಳ ಸಂಪತ್ತಿನಲ್ಲಿ 22.7 ಶತಕೋಟಿ ಡಾಲರ್ಗಿಂತಲೂ ಹೆಚ್ಚಿನ, ಅಂದರೆ ಶೇ 19ರಷ್ಟು ಕುಸಿತವಾಗಿದೆ.
ನವದೆಹಲಿ: ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್ಬರ್ಗ್ ರಿಸರ್ಚ್ ಲೆಕ್ಕಪತ್ರ ವಂಚನೆ ಮತ್ತು ಷೇರು ಬೆಲೆಯ ಮೇಲೆ ಪರಿಣಾಮ ಬೀರಿರುವ ಬಗ್ಗೆ ಆರೋಪ ಮಾಡಿದ ಬಳಿಕ ಅದಾನಿ ಸಮೂಹದ (Adani Group) ಷೇರುಮೌಲ್ಯ ಕುಸಿಯುತ್ತಲೇ ಬಂದಿದೆ. ಉದ್ಯಮಿ ಗೌತಮ್ ಅದಾನಿ (Gautam Adani) ಒಡೆತನದ ಕಂಪನಿ ಕೇವಲ ಎರಡೇ ದಿನಗಳಲ್ಲಿ ಲಕ್ಷಾಂತರ ಕೋಟಿ ರೂ. ಸಂಪತ್ತನ್ನು ಕಳೆದುಕೊಂಡಿದೆ. ಇದರಿಂದ ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಅದಾನಿ ಇದೀಗ ಫೋರ್ಬ್ಸ್ ರಿಯಲ್ಟೈಮ್ ಬಿಲಿಯನೇರ್ಸ್ (Forbes Real Time Billionaires) ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರ ನಿವ್ವಳ ಸಂಪತ್ತಿನಲ್ಲಿ 22.7 ಶತಕೋಟಿ ಡಾಲರ್ಗಿಂತಲೂ ಹೆಚ್ಚಿನ, ಅಂದರೆ ಶೇ 19ರಷ್ಟು ಕುಸಿತವಾಗಿದ್ದು, ಈಗ (ಜನವರಿ 27) 96.5 ಶತಕೋಟಿ ಡಾಲರ್ ಆಗಿದೆ. ಇತ್ತೀಚೆಗಷ್ಟೇ ‘ಬ್ಲೂಮ್ಬರ್ಗ್ ಕೋಟ್ಯಧಿಪತಿಗಳ ಸೂಚ್ಯಂಕ’ದಲ್ಲಿಯೂ ಅದಾನಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದರು. ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ (Jeff Bezos) ಮೂರನೇ ಸ್ಥಾನಕ್ಕೇರಿದ್ದರು.
ಅದಾನಿ ಸಮೂಹದ ಕಂಪನಿಗಳ ಷೇರುಗಳ ಮೌಲ್ಯದಲ್ಲಿನ ಕುಸಿತ ಶುಕ್ರವಾರವೂ ಮುಂದುವರಿದಿದೆ. ಕೇವಲ ಒಂದು ವರದಿಯ ಪರಿಣಾಮವಾಗಿ ಸತತ ಎರಡನೇ ದಿನದ ವಹಿವಾಟಿನಲ್ಲಿಯೂ ಅದಾನಿ ಸಮೂಹದ ಸಂಪತ್ತು ಕರಗಿದೆ. ಈ ಮಧ್ಯೆ, ಹಿಂಡನ್ಬರ್ಗ್ ವರದಿ ದುಷ್ಟತನದಿಂದ ಮತ್ತು ಕುಚೇಷ್ಟೆಯಿಂದ ಕೂಡಿದ್ದು ಎಂದು ಆರೋಪಿಸಿರುವ ಅದಾನಿ ಸಮೂಹ, ಅಮೆರಿಕದ ಸಂಸ್ಥೆ ವಿರುದ್ಧ ಕಾನೂನು ಕ್ರಮದ ಮೊರೆ ಹೋಗಲು ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ.
ಶುಕ್ರವಾರದ ವಹಿವಾಟಿನ ಸಂದರ್ಭದಲ್ಲಿ ಅದಾನಿ ಸಮೂಹದ ಅಂಗಸಂಸ್ಥೆಗಳಾದ ಅದಾನಿ ಟ್ರಾನ್ಸ್ಮಿಷನ್ ಷೇರುಗಳ ಮೌಲ್ಯದಲ್ಲಿ ಶೇ 19, ಅದಾನಿ ಟೋಟಲ್ ಗ್ಯಾಸ್ ಷೇರು ಮೌಲ್ಯದಲ್ಲಿ ಶೇ 19.1 ಹಾಗೂ ಅದಾನಿ ಗ್ರೀನ್ ಎನರ್ಜಿ ಷೇರು ಮೌಲ್ಯದಲ್ಲಿ ಶೇ 16ರಷ್ಟು ಕುಸಿತವಾಗಿದೆ.
ಸೆಬಿ ತನಿಖೆಗೆ ಕಾಂಗ್ರೆಸ್ ಆಗ್ರಹ
ಈ ಮಧ್ಯೆ, ಅದಾನಿ ಸಮೂಹ ಸಂಸ್ಥೆಗಳ ವಿರುದ್ಧದ ಆರೋಪಗಳ ಬಗ್ಗೆ ಮಾರುಕಟ್ಟೆ ನಿಯಂತ್ರಕ ಸೆಬಿಯಿಂದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಎಲ್ಐಸಿಯಂಥ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಅದಾನಿ ಸಮೂಹ ಪಾಲು ಹೊಂದಿದೆ. ಹೀಗಾಗಿ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:34 pm, Fri, 27 January 23