ChatGPT: ಏನಿದು ಚಾಟ್ ಜಿಪಿಟಿ, ಹೇಗೆ ಕೆಲಸ ಮಾಡುತ್ತೆ? ಇತಿ, ಮಿತಿಗಳ ಬಗ್ಗೆ ಇಲ್ಲಿದೆ ವಿವರ
ಕಳೆದ ಕೆಲವು ದಿನಗಳಿಂದ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್ಬಾಟ್ ತಂತ್ರಾಂಶ ಚಾಟ್ ಜಿಪಿಟಿ ಬಹಳಷ್ಟು ಸುದ್ದಿಯಲ್ಲಿದೆ. ಏನಿದು ಚಾಟ್ ಜಿಪಿಟಿ? ಎಲ್ಲಿ ದೊರೆಯುತ್ತದೆ? ಇದರ ಇತಿ-ಮಿತಿಗಳೇನು? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಕಳೆದ ಕೆಲವು ದಿನಗಳಿಂದ ಕೃತಕ ಬುದ್ಧಿಮತ್ತೆ (Artificial intelligence) ಆಧಾರಿತ ಚಾಟ್ಬಾಟ್ ತಂತ್ರಾಂಶ ಚಾಟ್ ಜಿಪಿಟಿ (ChatGPT) ಬಹಳಷ್ಟು ಸುದ್ದಿಯಲ್ಲಿದೆ. ಓಪನ್ ಎಐ (OpenAI) ಎಂಬ ಕೃತಕಬುದ್ಧಿಮತ್ತೆ ಕಂಪನಿ ಚಾಟ್ ಜಿಪಿಟಿಯನ್ನು ಅಭಿವೃದ್ಧಿಪಡಿಸಿದ್ದು, ಹಲವಾರು ಉದ್ಯಮಿಗಳು ಇದರಲ್ಲಿ ಹೂಡಿಕೆ ಮಾಡಿದ್ದಾರೆ. ಉದ್ಯಮಿ ಎಲಾನ್ ಮಸ್ಕ್ ಸಹ ಚಾಟ್ ಜಿಪಿಟಿ ಅಭಿವೃದ್ಧಿಗಾಗಿ ಹೂಡಿಕೆ ಮಾಡಿದವರಲ್ಲಿ ಒಬ್ಬರಾಗಿದ್ದಾರೆ. ಚಾಟ್ ಜಿಪಿಟಿಯನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಲಭ್ಯವಾಗಿರುವಂತೆ ಮಾಡಿರುವುದಾಗಿ 2022ರ ಡಿಸೆಂಬರ್ ಆರಂಭದಲ್ಲಿ ಓಪನ್ ಎಐ ತಿಳಿಸಿತ್ತು. ಕೃತಕ ಬುದ್ಧಿಮತ್ತೆ ಆಧಾರಿತ ಈ ಚಾಟಿಂಗ್ ತಾಣ ಬಳಕೆದಾರರು ಏನೇ ಕೇಳಿದರೂ ಬರಹ ರೂಪದಲ್ಲಿ ಉತ್ತರ ನೀಡುತ್ತದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಟೆಕ್ ಸಮ್ಮಿಟ್ನಲ್ಲಿ ಮೈಕ್ರೋಸಾಫ್ಟ್ ಕಂಪನಿ ಮುಖ್ಯಸ್ಥ ಸತ್ಯ ನಾದೆಲ್ಲಾ, ‘ಚಾಟ್ಜಿಪಿಟಿ’ ಜತೆ ಚಾಟ್ ನಡೆಸಿ ದಕ್ಷಿಣ ಭಾರತದ ಬೆಳಗ್ಗಿನ ಉಪಾಹಾರದ ಬಗ್ಗೆ ವಿವರ ಕೇಳಿದ್ದು ಮತ್ತು ಅದಕ್ಕೆ ದೊರೆತ ಉತ್ತರ ಬಗ್ಗೆ ಚರ್ಚೆಯಾಗಿತ್ತು. ಹಾಗಿದ್ದರೆ ಏನಿದು ಚಾಟ್ ಜಿಪಿಟಿ? ಎಲ್ಲಿ ದೊರೆಯುತ್ತದೆ? ಇದರ ಇತಿ-ಮಿತಿಗಳೇನು? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಚಾಟ್ ಜಿಪಿಟಿ ಎಂದರೇನು? ಹೇಗೆ ಕೆಲಸ ಮಾಡುತ್ತದೆ?
ಚಾಟ್ ಜಿಪಿಟಿ ಎಂಬುದು ಒಂದು ಮಷಿನ್ ಲರ್ನಿಂಗ್ ಮಾಡೆಲ್. ಕೃತಕ ಬುದ್ಧಿಮತ್ತೆ ಆಧಾರಿತ ಈ ಚಾಟ್ ಜಿಪಿಟಿಯನ್ನು ಓಪನ್ ಎಐ ಅಭಿವೃದ್ಧಿಪಡಿಸಿದೆ. ಇದು ಈ ಹಿಂದಿನ ಎಲ್ಲ ಚಾಟ್ ತಂತ್ರಜ್ಞಾನಗಳಿಗಿಂತ ಅತ್ಯಾಧುನಿಕವಾಗಿದ್ದು, ಹೆಚ್ಚು ನಿಖರವಾಗಿ ಮತ್ತು ಸ್ಪಷ್ಟವಾಗಿ ಪ್ರತಿಕ್ರಿಯಿಸುತ್ತದೆ. ಸರಳವಾಗಿ ಹೇಳುವುದಾದರೆ, ಬಳಕೆದಾರರು ಕೇಳುವ ಪ್ರಶ್ನೆಗಳಿಗೆ ತಕ್ಷಣವೇ ಬರಹ ರೂಪದಲ್ಲಿ ಉತ್ತರ ನೀಡುವ ಒಂದು ತಂತ್ರಜ್ಞಾನ ಇದಾಗಿದೆ. ನಿರ್ದಿಷ್ಟ ವಿಷಯವೊಂದನ್ನು ಸೂಚಿಸಿ ಕತೆ ಬರೆದುಕೊಡು ಎಂದರೆ ಅದನ್ನೂ ಮಾಡುತ್ತದೆ. ಕವಿತೆ ಬರೆಯಲು ಹೇಳಿದರೆ ಅದನ್ನೂ ಮಾಡುತ್ತದೆ. ಸಂಕೀರ್ಣವಾದ ಗಣಿತದ ಸೂತ್ರಗಳನ್ನು ಬಿಡಿಸಿಕೊಡಲು ಹೇಳಿದರೆ ಉತ್ತರವನ್ನು ನಮ್ಮ ಮುಂದಿಡುತ್ತದೆ.
ಗೂಗಲ್ಗಿಂತ ಚಾಟ್ ಜಿಪಿಟಿ ಹೇಗೆ ಭಿನ್ನ?
ಪ್ರಸ್ತುತ ನಾವೇನಾದರೂ ಸಂದೇಹಗಳಿದ್ದರೆ ಅಥವಾ ಮಾಹಿತಿ ಬೇಕಿದ್ದರೆ ತಕ್ಷಣ ಗೂಗಲ್ ಮೊರೆ ಹೋಗುತ್ತೇವೆ. ಗೂಗಲ್ನಲ್ಲಿ ಹತ್ತಾರು ಮಾಹಿತಿಗಳು, ಲೇಖನಗಳು ನಮಗೆ ಕಾಣಿಸುತ್ತವೆ. ಅವುಗಳಲ್ಲಿ ನಮಗೆ ಬೇಕಿರುವುದನ್ನು ನಾವು ಆಯ್ಕೆ ಮಾಡಿಕೊಂಡು, ಅದು ಸರಿ ಇದೆಯೇ ಎಂದು ವಿವೇಚಿಸಿ ಆ ಮಾಹಿತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಆದರೆ, ಚಾಟ್ ಜಿಪಿಟಿ ಹಾಗಲ್ಲ. ಅದರಲ್ಲಿ ಏನಾದರೂ ಪ್ರಶ್ನೆ ಕೇಳಿದರೆ ನಿಖರ ಉತ್ತರವನ್ನು ನೀಡುತ್ತದೆ. ಅಂದರೆ, ನಮ್ಮ ಸ್ನೇಹಿತರಲ್ಲೋ ಸಹೋದ್ಯೋಗಿಗಳಲ್ಲೋ ಪ್ರಶ್ನೆ ಕೇಳಿದಾಗ ಹೇಗೆ ಉತ್ತರ ದೊರೆಯುತ್ತದೆಯೋ ಅದೇ ರೀತಿ ಪಠ್ಯ ರೂಪದಲ್ಲಿ ಉತ್ತರ ನೀಡುತ್ತದೆ ಚಾಟ್ ಜಿಪಿಟಿ. ಹೀಗಾಗಿ ಇದು ಈ ನಿಟ್ಟಿನಲ್ಲಿ ಗೂಗಲ್ಗಿಂತ ಭಿನ್ನವಾಗಿದೆ. ಇನ್ನು ಗೂಗಲ್ನಲ್ಲಿ ಟೈಪಿಸಿ ಮಾಹಿತಿ ಪಡೆಯಲು ಲಾಗಿನ್ ಆಗಬೇಕಾಗಿಲ್ಲ. ಆದರೆ, ಚಾಟ್ ಜಿಪಿಟಿ ಸಾಮಾಜಿಕ ಮಾಧ್ಯಮದ ಮಾದರಿಯಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿದ್ದು, ಅದರ ಜತೆ ಸಂವಹನ ನಡೆಸಬೇಕಿದ್ದರೆ ಲಾಗಿನ್ ಆಗುವ ಅಗತ್ಯವಿದೆ. ಚಾಟ್ ಜಿಪಿಟಿ (https://openai.com/blog/chatgpt/) ಈ ಲಿಂಕ್ನಲ್ಲಿ ಲಭ್ಯವಿದೆ.
ಚಾಟ್ ಜಿಪಿಟಿ ಇತಿ-ಮಿತಿಗಳೇನು?
ಚಾಟ್ ಜಿಪಿಟಿಗೂ ಇತಿ-ಮಿತಿಗಳಿವೆ ಎಂದು ಓಪನ್ ಎಐ ತಿಳಿಸಿದೆ. ಕೆಲವೊಮ್ಮೆ ಇದು ಸೂಕ್ತವಲ್ಲದ ಉತ್ತರಗಳನ್ನು ನೀಡುವ ಸಾಧ್ಯತೆ ಇದೆ. ಅದೇ ರೀತಿ ಅನಗತ್ಯ ಮಾಹಿತಿ ನೀಡುವುದೋ ಹಾನಿಕಾರಕ ಎನ್ನಿಸಬಲ್ಲ ಸೂಚನೆಗಳನ್ನು ನೀಡುವುದನ್ನೋ ಮಾಡುವ ಸಾಧ್ಯತೆಗಳಿವೆ ಎಂದು ಓಪನ್ ಎಐ ಹೇಳಿದೆ. ಹೀಗಾಗಿ ಸದ್ಯದ ಮಟ್ಟಿಗೆ ಇದನ್ನು ಎಚ್ಚರಿಕೆಯಿಂದಲೇ ಬಳಸುವುದು ಒಳ್ಳೆಯದು ಎನ್ನಲಾಗುತ್ತಿದೆ. ಅಸುರಕ್ಷಿತ ಎನ್ನಿಸುವಂಥ ಕಂಟೆಂಟ್ಗಳನ್ನು ಬ್ಲಾಕ್ ಮಾಡುವಂತೆ ಮಾಡಲು ನಾವು ಸದ್ಯ ಎಪಿಐ ಮಾಡರೇಷನ್ ಬಳಸುತ್ತಿದ್ದೇವೆ. ಆದರೂ ಸದ್ಯಕ್ಕೆ ಕೆಲವೊಂದು ತಪ್ಪು, ಹಾನಿಕಾರಕ ಸಂದೇಶಗಳನ್ನು ಇದು ರವಾನಿಸಬಹುದು ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಓಪನ್ ಎಐ ಹೇಳಿದೆ.
ತಪ್ಪನ್ನು ಸರಿಪಡಿಸಿಕೊಳ್ಳುವ ಜಾಣ್ಮೆಯೂ ಇದೆ!
ಚಾಟ್ ಜಿಪಿಟಿ ನೀಡುವ ಉತ್ತರದಲ್ಲೇನಾದರೂ ತಪ್ಪಿದ್ದರೆ, ನಾವದನ್ನು ಅದರ ಗಮನಕ್ಕೆ ತಂದರೆ ಸರಿಪಡಿಸಿಕೊಳ್ಳುವ ಕೆಲಸವನ್ನು ಅದು ಮಾಡುತ್ತದೆ. ಉದಾಹರಣೆಗೆ, ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾದೆಲ್ಲಾ ವಿಚಾರವನ್ನೇ ತೆಗೆದುಕೊಳ್ಳೋಣ. ದಕ್ಷಿಣ ಭಾರತದ ಬೆಳಗ್ಗಿನ ಉಪಾಹಾರದ ತಿಂಡಿಗಳು ಯಾವುವೆಲ್ಲ ಎಂದು ಚಾಟ್ ಜಿಪಿಟಿಯನ್ನು ಅವರು ಪ್ರಶ್ನಿಸಿದ್ದರು. ಅದು, ಇಡ್ಲಿ, ವಡಾ, ಉತ್ತಪ್ಪ, ದೋಸೆ, ಪೊಂಗಲ್ ದಕ್ಷಿಣ ಭಾರತದ ಸಾಂಪ್ರದಾಯಿಕ ತಿನಿಸುಗಳು ಎಂದಿತ್ತು. ಜತೆಗೆ ಬಿರಿಯಾನಿಯನ್ನೂ ಸೇರಿಸಿತ್ತು. ಬಿರಿಯಾನಿ ದಕ್ಷಿಣ ಭಾರತದ ಬೆಳಗ್ಗಿನ ತಿಂಡಿಯಲ್ಲ ಎಂದು ಅವರು ಹೇಳಿದ ಕೂಡಲೇ ತನ್ನ ಉತ್ತರವನ್ನು ತಿದ್ದಿಕೊಂಡಿದ್ದ ಚಾಟ್ ಜಿಪಿಟಿ, ನೀವು ಹೇಳಿದ್ದು ನಿಜ. ಬಿರಿಯಾನಿಯನ್ನು ದಕ್ಷಿಣ ಭಾರತದ ಬೆಳಗ್ಗಿನ ತಿಂಡಿ ಎಂದು ಪರಿಗಣಿಸುವುದಿಲ್ಲ ಎಂದು ಹೇಳಿತ್ತು.
ಚಾಟ್ ಜಿಪಿಟಿ ಈಗ ಯಾಕೆ ಸುದ್ದಿಯಲ್ಲಿದೆ?
ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ತಂತ್ರಜ್ಞಾನ ಎಂಬ ನೆಲೆಯಲ್ಲಿ ಚಾಟ್ ಜಿಪಿಟಿ ಸದ್ಯ ಹೆಚ್ಚು ಸುದ್ದಿಯಲ್ಲಿದೆ. ಆದರೆ, ಅದು ಹೆಚ್ಚು ಚರ್ಚೆಗೆ ಗ್ರಾಸವಾಗಲು ಇದೊಂದೇ ಕಾರಣವಲ್ಲ. ಶಾಲಾ ವಿದ್ಯಾರ್ಥಿಗಳು ತಮ್ಮ ಮನೆ ಕೆಲಸ, ಅಸೈನ್ಮೆಂಟ್ ಇತ್ಯಾದಿಗಳನ್ನು ಮಾಡಲು ಚಾಟ್ ಜಿಪಿಟಿ ಮೊರೆ ಹೋಗುತ್ತಿರುವುದು ಅಮೆರಿಕದಲ್ಲಿ ಇತ್ತೀಚೆಗೆ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ವಿದ್ಯಾರ್ಥಿಗಳು ದುರುಪಯೋಗ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ನ್ಯೂಯಾರ್ಕ್ನ ಶಾಲೆಗಳಲ್ಲಿ ಚಾಟ್ ಜಿಪಿಟಿಯನ್ನು ನಿಷೇಧಿಸಲಾಗಿದೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿಯೂ ಶಾಲೆಗಳಲ್ಲಿ ಇದನ್ನು ನಿಷೇಧಿಸಬೇಕು ಎಂಬ ಕೂಗು ಕೇಳಿಬಂದಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:49 pm, Tue, 24 January 23