- Kannada News Photo gallery Cricket photos Sanju Samson and Saly Samson set to play in the same T20 team
ಒಂದೇ ತಂಡದ ಪರ ಕಣಕ್ಕಿಳಿಯಲಿದ್ದಾರೆ ಸ್ಯಾಮ್ಸನ್ ಬ್ರದರ್ಸ್
KCL 2025: ಕೇರಳ ಕ್ರಿಕೆಟ್ ಲೀಗ್ ಟಿ20 ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿವೆ. ಆ ತಂಡಗಳೆಂದರೆ ಕೊಚ್ಚಿ ಬ್ಲೂ ಟೈಗರ್ಸ್, ತಿರುವನಂತಪುರಂ ರಾಯಲ್ಸ್, ಅಲೆಪ್ಪಿ ರಿಪ್ಪಲ್ಸ್, ತ್ರಿಶ್ಶೂರ್ ಟೈಟಾನ್ಸ್, ಅರೀಸ್ ಕೊಲ್ಲಂ ಸೈಲರ್ಸ್ ಮತ್ತು ಕ್ಯಾಲಿಕಪ್ ಗ್ಲೋಬ್ಸ್ಟಾರ್ಸ್. ಈ ತಂಡಗಳ ನಡುವೆ ಆಗಸ್ಟ್ 22 ರಿಂದ ಟಿ20 ಕ್ರಿಕೆಟ್ ಕದನ ನಡೆಯಲಿದೆ.
Updated on:Jul 09, 2025 | 7:24 AM

ಕೇರಳ ಕ್ರಿಕೆಟ್ ಲೀಗ್ (KCL 2025) ಸೀಸನ್-2 ರ ಸಿದ್ಧತೆಗಳು ಶುರುವಾಗಿದೆ. ಇದರ ಮೊದಲ ಹೆಜ್ಜೆಯಾಗಿ ಇತ್ತೀಚೆಗೆ ಹರಾಜು ಪ್ರಕ್ರಿಯೆಯನ್ನು ನಡೆಸಲಾಗಿದೆ. ಈ ವೇಳೆ ದಾಖಲೆಯ ಮೊತ್ತಕ್ಕೆ ಬಿಕರಿಯಾಗುವ ಮೂಲಕ ಸಂಜು ಸ್ಯಾಮ್ಸನ್ ಇತಿಹಾಸ ನಿರ್ಮಿಸಿದ್ದಾರೆ. ವಿಶೇಷ ಎಂದರೆ ಸಂಜು ಜೊತೆ ಅವರ ಅಣ್ಣ ಸ್ಯಾಲಿ ಸ್ಯಾಮ್ಸನ್ ಕೂಡ ಕೆಸಿಎಲ್ಗೆ ಆಯ್ಕೆಯಾಗಿದ್ದಾರೆ.

ಕೊಚ್ಚಿ ಬ್ಲೂ ಟೈಗರ್ಸ್ ಫ್ರಾಂಚೈಸಿ ಸಂಜು ಸ್ಯಾಮ್ಸನ್ ಹಾಗೂ ಸ್ಯಾಲಿ ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಿಕೊಂಡಿದೆ. 75 ಸಾವಿರ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸ್ಯಾಲಿ ಸ್ಯಾಮ್ಸನ್ ಅವರನ್ನು ಬೇಸ್ ಪ್ರೈಸ್ಗೆ ಬ್ಲೂ ಟೈಗರ್ಸ್ ಫ್ರಾಂಚೈಸಿ ಖರೀದಿಸಿದ್ದು, ಈ ಮೂಲಕ ಅಣ್ಣ-ತಮ್ಮಂದಿರನ್ನು ಒಂದೇ ತಂಡದಲ್ಲಿರಿಸಲು ಯಶಸ್ವಿಯಾಗಿದ್ದಾರೆ.

ಇದಕ್ಕೂ ಮುನ್ನ 3 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸಂಜು ಸ್ಯಾಮ್ಸನ್ ಅವರನ್ನು ಖರೀದಿಸಲು ಎಲ್ಲಾ ಫ್ರಾಂಚೈಸಿಗಳ ನಡುವೆ ಭರ್ಜರಿ ಪೈಪೋಟಿ ಕಂಡು ಬಂತು. ಪರಿಣಾಮ ನಿಮಿಷಗಳಲ್ಲಿ ಸ್ಯಾಮ್ಸನ್ ಅವರ ಮೊತ್ತವು 20 ಲಕ್ಷ ರೂ. ದಾಟಿದೆ. ಅಂತಿಮವಾಗಿ ಕೊಚ್ಚಿ ಬ್ಲೂ ಟೈಗರ್ಸ್ ಫ್ರಾಂಚೈಸಿಯು ಬರೋಬ್ಬರಿ 26.8 ಲಕ್ಷ ರೂ. ನೀಡಿ ಸ್ಯಾಮ್ಸನ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇದರೊಂದಿಗೆ ಕೇರಳ ಕ್ರಿಕೆಟ್ ಲೀಗ್ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಬಿಕರಿಯಾದ ಆಟಗಾರ ಎಂಬ ದಾಖಲೆ ಸಂಜು ಸ್ಯಾಮ್ಸನ್ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಎಂಎಸ್ ಅಖಿಲ್ ಹೆಸರಿನಲ್ಲಿತ್ತು. 2024ರ ಹರಾಜಿನಲ್ಲಿ ತಿರುವನಂತಪುರಂ ರಾಯಲ್ಸ್ ಫ್ರಾಂಚೈಸಿಯು ಅಖಿಲ್ ಅವರನ್ನು 7.4 ಲಕ್ಷ ರೂ. ನೀಡಿ ಖರೀದಿಸಿತ್ತು. ಇದೀಗ ಬರೋಬ್ಬರಿ 26.8 ಲಕ್ಷಕ್ಕೆ ಮಾರಾಟವಾಗುವ ಮೂಲಕ ಸ್ಯಾಮ್ಸನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇನ್ನು ಕೇರಳ ಕ್ರಿಕೆಟ್ ಲೀಗ್ನ ಎರಡನೇ ಆವೃತ್ತಿಯು ಆಗಸ್ಟ್ 22 ರಿಂದ ಶುರುವಾಗಲಿದೆ. 6 ತಂಡಗಳ ನಡುವಣ ಈ ಕದನದ ಫೈನಲ್ ಪಂದ್ಯವು ಸೆಪ್ಟೆಂಬರ್ 7 ರಂದು ನಡೆಯಲಿದೆ. ಇನ್ನು ಈ ಟೂರ್ನಿಯ ಎಲ್ಲಾ ಪಂದ್ಯಗಳು ತಿರುವನಂತಪುರಂದ ಗ್ರೀನ್ಫೀಲ್ಡ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಜರುಗಲಿದೆ.
Published On - 10:53 am, Tue, 8 July 25
