
ಪಶ್ಚಿಮಬಂಗಾಳ ಹಾಗೂ ಆಸ್ಸಾಂ ವಿಧಾನಸಭಾ ಚುನಾವಣೆಗಳ ಮೊದಲ ಹಂತದ ಮತದಾನ ಇಂದು ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ 30 ವಿಧಾನಸಭಾ ಕ್ಷೇತ್ರಗಳು ಹಾಗೂ ಆಸ್ಸಾಂನಲ್ಲಿ 47 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಬೆಳಗ್ಗೆಯಿಂದಲೇ ಜನರು ಮತ ಚಲಾಯಿಸುತ್ತಿದ್ದಾರೆ. ಬೆಳಗ್ಗೆ 11 ಗಂಟೆ ಹೊತ್ತಿಗೆ ಆಸ್ಸಾಂನಲ್ಲಿ ಶೇ. 24.91 ಮತ್ತು ಪಶ್ಚಿಮಬಂಗಾಳದಲ್ಲಿ ಶೇ.28.13ರಷ್ಟು ವೋಟಿಂಗ್ ಆಗಿದ್ದಾಗಿ ಚುನಾವಣಾ ಆಯೋಗ ತಿಳಿಸಿದೆ. ಪಶ್ಚಿಮಬಂಗಾಳದಲ್ಲಿ ಪುರುಲಿಯಾ, ಝಾರ್ಗರಮ್, ಬಂಕುರಾ, ಪಶ್ಚಿಮ ಮೇದಿನಿಪುರ ಮತ್ತು ಪೂರ್ವ ಮೇದಿನಿಪುರಗಳ ಒಟ್ಟು 30 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಎಲ್ಲ ಸೇರಿ 73 ಲಕ್ಷ ಮತದಾರರು ಇದ್ದಾರೆ. 10,200ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಹಾಗೇ ಆಸ್ಸಾಂನಲ್ಲಿ 11,000 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 81 ಲಕ್ಷ ಮತದಾರರು ಇಂದು ವೋಟ್ ಮಾಡಬೇಕಾಗಿದೆ.
ಪಶ್ಚಿಮ ಬಂಗಾಳದಲ್ಲಿ ಇಂದು ಮತದಾನ ಇರುವ 30 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ಗಳು ತಲಾ 29 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಕಾಂಗ್ರೆಸ್ ಕೇವಲ 5 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಹಾಕಿದೆ. ಹಾಗೇ ಆಸ್ಸಾಂನಲ್ಲಿ 47 ವಿಧಾನಸಭಾ ಕ್ಷೇತ್ರಗಳಲ್ಲಿ 39 ರಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಗಳು ಇದ್ದಾರೆ. ಕಾಂಗ್ರೆಸ್ 43 ಕ್ಷೇತ್ರಗಲ್ಲಿ ಸ್ಪರ್ಧೆಗೆ ಇಳಿದಿದೆ.
ಬಿಜೆಪಿ ಕಾರ್ಯಕರ್ತ ಬಲಿ
ಆಸ್ಸಾಂನಲ್ಲಿ ಬಹುತೇಕ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದರೂ ಪಶ್ಚಿಮ ಬಂಗಾಳದ ಹಲವುಕಡೆ ನಿನ್ನೆ ರಾತ್ರಿಯಿಂದಲೇ ಹಿಂಸಾಚಾರ ಶುರುವಾಗಿದೆ. ಈಗಾಗಲೇ ಎಡಪಕ್ಷೀಯ ಅಭ್ಯರ್ಥಿ ಸುಶಾಂತ್ ಘೋಷ್ ಮತ್ತು ವರದಿಗೆ ತೆರಳಿದ್ದ ಟಿವಿ 9 ಬಾಂಗ್ಲಾ ಸಿಬ್ಬಂದಿ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದು ವರದಿಯಾಗಿದೆ. ಅಲ್ಲದೆ, ಮತಗಟ್ಟೆ ಬಳಿ ಕರ್ತವ್ಯದಲ್ಲಿದ್ದ ಇಬ್ಬರು ಭದ್ರತಾ ಸಿಬ್ಬಂದಿ ಮೇಲೆ ಫೈರಿಂಗ್ ಆಗಿದೆ. ಈ ಮಧ್ಯೆ ಮತದಾನ ನಡೆಯುತ್ತಿರುವ ಪೂರ್ವ ಮೇದಿನಿಪುರ್ನ ಕೇಶಿಯಾರಿ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನ ಮೃತದೇಹ ಪತ್ತೆಯಾಗಿದೆ. ಈ ಕಾರ್ಯಕರ್ತನನ್ನು 35 ವರ್ಷದ ಮಂಗಲ್ ಸೋರೆನ್ ಎಂದು ಪೊಲೀಸರು ಗುರುತಿಸಿದ್ದಾರೆ. ಈತ ಕೇಶಿಯಾರಿಯ ಬೇಗಂಪುರ ನಿವಾಸಿ ಎಂದೂ ಹೇಳಿದ್ದಾರೆ.
Published On - 12:20 pm, Sat, 27 March 21