Karnataka Election 2023: ಸಿಟಿ ರವಿ ಸೋಲಿಸಲು ಚಾಮುಂಡಿ ರೂಪ ತಾಳಿದ ಹೆಣ್ಣು; ವಿವಾದಕ್ಕೆ ಕಾರಣವಾದ ಕಾಂಗ್ರೆಸ್ ಕಾರ್ಯಕರ್ತರ ಪೋಸ್ಟ್

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ರೇಖಾ ಹುಲಿಯಪ್ಪ ಗೌಡ ಅವರ ಮುಖವನ್ನು ಕಾಂಗ್ರೆಸ್ ಕಾರ್ಯಕರ್ತರು ಚಾಮುಂಡಿ ಫೋಟೋಗೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಹಿಂದೂ ದೇವರನ್ನು ದುರ್ಬಳಕೆ ಮಾಡಿಕೊಂಡಿರುವುದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

Karnataka Election 2023: ಸಿಟಿ ರವಿ ಸೋಲಿಸಲು ಚಾಮುಂಡಿ ರೂಪ ತಾಳಿದ ಹೆಣ್ಣು; ವಿವಾದಕ್ಕೆ ಕಾರಣವಾದ ಕಾಂಗ್ರೆಸ್ ಕಾರ್ಯಕರ್ತರ ಪೋಸ್ಟ್
ಚಾಮುಂಡೇಶ್ವರಿ ಮುಖಕ್ಕೆ ರೇಖಾ ಹುಲಿಯಪ್ಪಗೌಡರ ಮುಖ ಜೋಡಿಸಿದ ಕಾಂಗ್ರೆಸ್‌ ಕಾರ್ಯಕರ್ತರು

Updated on: Mar 30, 2023 | 8:39 PM

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravri) ಸ್ಪರ್ಧಿಸುವ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ರಾಜ್ಯ ಮಹಿಳಾ ಉಪಾಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ (Rekha Huliyappa Gowda) ಅವರ ಮುಖವನ್ನು ಕಾಂಗ್ರೆಸ್ ಕಾರ್ಯಕರ್ತರು ಚಾಮುಂಡಿ ಫೋಟೋಗೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿ.ಟಿ.ರವಿ ಸೋಲಿಸಲು ಚಾಮುಂಡಿ ಅವತಾರ ತಾಳಿದ ಹೆಣ್ಣು ಎಂದು ಪೋಸ್ಟ್ ಮಾಡಲಾಗಿದೆ. ಸದ್ಯ ರಾಜಕೀಯಕ್ಕಾಗಿ ಹಿಂದೂ ದೇವರ ಫೋಟೋವನ್ನು ದುರ್ಬಳಕೆ ಮಾಡಿಕೊಂಡ ಕೈ ಕಾರ್ಯಕರ್ತರು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ರೇಖಾ ಹುಲಿಯಪ್ಪ ಗೌಡ ಅವರು ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇವರ ಬೆಂಬಲಿಗರು ರಾಕ್ಷಸರ ಸಂಹಾರಕ್ಕೆ ಅವತಾರ ತಾಳಿದ ಚಾಮುಂಡಿ ರೂಪವನ್ನು ಸಿಟಿ ರವಿ ವಿರುದ್ಧ ಪ್ರಚಾರಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಚಾಮುಂಡೇಶ್ವರಿ ಮುಖಕ್ಕೆ ರೇಖಾ ಹುಲಿಯಪ್ಪಗೌಡರ ಮುಖ ಜೋಡಿಸಿ ಸಾಮಾಜಿಕ ಜಾಲತಣದಲ್ಲಿ ವೈರಲ್ ಮಾಡಿದ್ದಾರೆ.

ಇದನ್ನೂ ಓದಿ: ನೀವು ಮಾಡಿದ್ದೆಲ್ಲ ಸಹಿಸಿಕೊಂಡು ಬಿರಿಯಾನಿ ಹಾಕುವ ದೇಶ ಇದಲ್ಲ; ಎಸ್​ಡಿಪಿಐ ಮುಖಂಡಗೆ ಸಿಟಿ ರವಿ ತಿರುಗೇಟು

ರೇಖಾಹುಲಿಯಪ್ಪಗೌಡ ಅಭಿಮಾನಿ ಬಳಗ ರೇಖಾ ಎಂಬ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಳ್ಳಲಾಗಿದ್ದು, ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಖಾತೆಗೆ ಟ್ಯಾಗ್ ಮಾಡಿದ್ದಾರೆ. “ಚಿಕ್ಕಮಗಳೂರಿನಲ್ಲಿ ಚಂಡ ಮುಂಡಾಸುರ ನಿಗ್ರಹಕ್ಕೆ ಚಾಮುಂಡಿಯಾಗಿ ರೂಪ ಧರಿಸುವ ಸಾಮರ್ಥ್ಯ ಇರುವ ಸಿಟಿ ರವಿ ಕಟ್ಟಾ ವಿರೋಧಿ ಹೆಣ್ಣುಮಗಳು ಶ್ರೀಮತಿ ರೇಖಾಹುಲಿಯಪ್ಪಗೌಡರಿಗೆ ಕಾಂಗ್ರೆಸ್ ಪಕ್ಷ ಅವಕಾಶ ನೀಡಿದರೆ ದುರಹಂಕಾರಿಯ ಆರ್ಭಟ ಅಂತ್ಯ.. ಕಮಲೇ ಕಮಲೋತ್ಪತ್ತಿಹಿ” ಎಂದು ಪೋಸ್ಟ್​ನಲ್ಲಿ ಶೀರ್ಷಿಕೆ ಬರೆಯಲಾಗಿದೆ. ಈ ಪೋಸ್ಟ್ ಗಮನಿಸಿದ ಹಿಂದೂ ಸಂಘಟನೆಗಳು ಆಕ್ರೋಶ ಹೊರಹಾಕುತ್ತಿದ್ದಾರೆ.

ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್​ಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಪೈಪೋಟಿ

ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್​ಗಾಗಿ ಆರು ಮಂದಿ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ರೇಖಾ ಹುಲಿಯಪ್ಪಗೌಡ, ಡಾ.ಡಿ.ಎಲ್‌.ವಿಜಯಕುಮಾರ್‌, ನಯಾಜ್‌, ಸತೀಶ್‌ ಮಹಡಿಮನೆ, ಎ.ಎನ್‌. ಮಹೇಶ್‌, ಬಿ.ಎಚ್‌. ಹರೀಶ್‌ ಎಂಬವರು ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ಆರು ಮಂದಿಯಲ್ಲಿ ಟಿಕೆಟ್ ಯಾರಿಗೆ ಕೊಟ್ಟರೂ ನಾವೆಲ್ಲರು ಒಗ್ಗಟ್ಟಿನಿಂದ ಪಕ್ಷದ ಕೆಲಸ ಮಾಡುತ್ತೇವೆ ಎಂದು ತೀರ್ಮಾನಿಸಿದ್ದಾರೆ. ಈ ನಡುವೆ ಸಿಟಿ ರವಿ ಆಪ್ತ ಎಚ್​ಡಿ ತಮ್ಮಯ್ಯ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವುದು ಟಿಕೆಟ್ ಆಕಾಂಕ್ಷಿಗಳಲ್ಲಿ ಆತಂಕವೂ ಉಂಟಾಗಿದೆ. ಆದರೆ ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.

ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:37 pm, Thu, 30 March 23