Karnataka Polls 2023: ಸಿದ್ದರಾಮಯ್ಯ ವಿರುದ್ಧ ವರುಣಾದಿಂದ ಬಿವೈ ವಿಜಯೇಂದ್ರ ಸ್ಪರ್ಧೆ ಬಗ್ಗೆ ಬಿಸಿಬಿಸಿ ಚರ್ಚೆ: ಗೆದ್ದರೆ ಮುಂದೇನು?
ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧಿಸುವುದು ಖಚಿತವಾಗಿದೆ. ಟಿಕೆಟ್ ಕೂಡ ಘೋಷಣೆಯಾಗಿದೆ. ಇದೀಗ ಇವರ ವಿರುದ್ಧ ಮಾಜಿ ಸಿಎಂ ಪುತ್ರ ಬಿವೈ ವಿಜಯೇಂದ್ರ ಅವರು ಸ್ಪರ್ಧಿಸುವ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆ (karnataka Assembly Election 2023) ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಇನ್ನಷ್ಟು ಬಿರುಸುಗೊಂಡಿದ್ದು, ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಈವರೆಗೆ ಪಟ್ಟಿ ಬಿಡುಗಡೆ ಮಾಡದ ಬಿಜೆಪಿ ಯಾರನ್ನು ಕಣಕ್ಕಿಳಿಸಲಿದೆ ಎಂಬ ಕುತೂಹಲವೂ ಮೂಡಿಸಿದೆ. ಈಗಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ವರುಣಾ ಕ್ಷೇತ್ರ ಫಿಕ್ಸ್ ಆಗಿದೆ. ಆದರೆ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಅಂತ್ಯಗೊಳಿಸಲು ಪಣ ತೊಟ್ಟಿರುವ ಬಿಜೆಪಿ ಆ ಕ್ಷೇತ್ರದಲ್ಲಿ ಯಾರನ್ನು ಕಣಕ್ಕಿಳಿಸಲಿದೆ ಎಂದು ರಾಜ್ಯದ ಜನರು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಅವರ ಪುತ್ರನೂ ಆಗಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಅವರು ಸಿದ್ದರಾಮಯ್ಯ ವಿರುದ್ಧ ವುರಣಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರ ಪಕ್ಷದ ಒಳಗೆ ಚರ್ಚೆಯಲ್ಲಿದೆ. ವರುಣದಿಂದ ಸ್ಪರ್ಧೆ ಬಗ್ಗೆ ಇನ್ನೂ ಯೋಚನೆಯಲ್ಲಿರುವ ಹಿನ್ನೆಲೆ ವಿಜಯೇಂದ್ರ ಅವರು ಈವರೆಗೆ ಸ್ಪಷ್ಟ ಇಂಗಿತ ವ್ಯಕ್ತಪಡಿಸಿಲ್ಲ. ಅಲ್ಲದೆ, ವರುಣದಿಂದ ಸ್ಪರ್ಧೆ ಬಗ್ಗೆ ಪಕ್ಷವೇ ಹೇಳಲಿ ಎಂಬ ನಿಲುವು ತಾಳಿದ್ದಾರೆ.
ವರುಣಾ ಕ್ಷೇತ್ರದಿಂದ ಕಣಕ್ಕಿಳಿಸಬೇಕೇ ಅಥವಾ ಬೇಡವೇ ಎಂಬುದನ್ನು ಪಕ್ಷ ಹೇಳಲಿ ಎಂಬ ನಿಲುವು ತಾಳಿದ ವಿಜಯೇಂದ್ರ ಅವರು ಇಂದು ಆರ್ಎಸ್ಎಸ್ ಕಚೇರಿಗೆ ಭೇಟಿ ನೀಡಿದ್ದಾರೆ. ಶ್ರೀರಾಮನವಮಿ ಆಚರಣೆ ಜೊತೆಗೆ ಸಂಘದ ಪ್ರಮುಖರ ಜೊತೆ ಚರ್ಚೆ ನಡೆಸಿದ್ದಾರೆ. ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಕಣಕ್ಕಿಳಿದರೆ ಘಟಾನುಘಟಿ ನಾಯಕರ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ. ಮಾತ್ರವಲ್ಲದೆ, ವಿಜಯೇಂದ್ರ ಅವರ ಮುಂದಿನ ರಾಜಕೀಯ ಜೀವನವೂ ಇದರಲ್ಲಿ ಅಡಗಿದೆ. ಪಕ್ಷವು ವರುಣಾ ಕ್ಷೇತ್ರದಿಂದ ವಿಜಯೇಂದ್ರ ಅವರನ್ನು ಕಣಕ್ಕಿಳಿಸಿ ಸಿದ್ದರಾಮಯ್ಯ ಅವರ ವಿರುದ್ಧ ಗೆಲುವು ದಾಖಲಿಸಿದರೆ ಜೈಂಟ್ ಕಿಲ್ಲರ್ ಎಂದು ಎನಿಸಿಕೊಳ್ಳುವ ಅವಕಾಶ ವಿಜಯೇಂದ್ರಗೆ ಸಿಗಲಿದೆ. ಆದರೆ ಸಿದ್ದರಾಮಯ್ಯ ವಿರುದ್ಧ ಪರಾಜಯಗೊಂಡರೆ ರಾಜಕೀಯ ಭವಿಷ್ಯಕ್ಕೆ ಏಟು ಬೀಳುವ ಆತಂಕವೂ ವಿಜಯೇಂದ್ರ ಅವರನ್ನು ಕಾಡುತ್ತಿದೆ.
ಇದನ್ನೂ ಓದಿ: ಸಿದ್ದರಾಮಯ್ಯ, ಸುರ್ಜೇವಾಲ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಛಲವಾದಿ ನಾರಾಯಣಸ್ವಾಮಿ
ಇದೇ ಕಾರಣಕ್ಕೆ ವರುಣಾ ಕ್ಷೇತ್ರದಿಂದ ಸ್ಪರ್ಧೆ ವಿಚಾರದ ಬಗ್ಗೆ ಪಕ್ಷದಿಂದಲೇ ಭರವಸೆ ಸಿಗಲಿ, ರಾಜಕೀಯ ಸುರಕ್ಷತೆ ಭರವಸೆ ನೀಡಲಿ ಎಂಬ ನಿಲುವನ್ನು ವಿಜಯೇಂದ್ರ ಅವರು ತಾಳಿದ್ದಾರೆ. ವಿಜಯೇಂದ್ರ ಇನ್ನೂ ಕ್ಷೇತ್ರವನ್ನು ಒಪ್ಪಿಕೊಂಡಿಲ್ಲ ಎಂದು ಬಿಎಸ್ ಯಡಿಯೂರಪ್ಪ ಅವರು ಪುತ್ರನ ಸ್ಪರ್ಧೆ ಬಗ್ಗೆ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಅದಾಗ್ಯೂ, ವಿಜಯೇಂದ್ರ ಅವರು ತಂದೆಯ ಕ್ಷೇತ್ರವಾಗಿದ್ದ ಶಿಕಾರಿಪುರದಿಂದಲೇ ಸ್ಪರ್ಧಿಸುತ್ತಾರೆ ಎಂದು ಬಿಜೆಪಿ ಸಂಸದ ಬಿವೈ ರಾಘವೇಂದ್ರ ಹೇಳಿಕೆ ನೀಡಿದ್ದಾರೆ. ವಿಜಯೇಂದ್ರ ಅವರು ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸುವುದು ತಮ್ಮ ತಂದೆ, ಕ್ಷೇತ್ರದ ಜನರು, ಕಾರ್ಯಕರ್ತರು ಹಾಗೂ ನಮ್ಮ ಅಪೇಕ್ಷೆಯಾಗಿದೆ. ಅವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸುವ ಮುನ್ನವೇ ವಿಜಯೇಂದ್ರ ಅವರಿಗೆ ತನ್ನ ಕ್ಷೇತ್ರ (ಶಿಕಾರಿಪುರ) ಬಿಟ್ಟುಕೊಡುವ ಬಗ್ಗೆ ಯಡಿಯೂರಪ್ಪ ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ತದನಂತರ ಯೂ ಟರ್ನ್ ಹೊಡೆದ ಅವರು, ನಿನ್ನೆ ನಾನು ನೀಡಿದ ಹೇಳಿಕೆ ಬಗ್ಗೆ ಸಾಕಷ್ಟು ಗೊಂದಲ ಆಗಿದೆ. ಶಿಕಾರಿಪುರದ ಜನ ಒತ್ತಾಯ ಮಾಡಿದ್ದಕ್ಕೆ ನಿನ್ನೆ ಆ ರೀತಿ ಹೇಳಿದ್ದೇನೆ. ಆದ್ರೆ ಅಂತಿಮ ತೀರ್ಮಾನ ಮಾಡುವುದು ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಹಾಗೂ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ. ನಾನು ನನ್ನ ಸಲಹೆ ಹೇಳಿದ್ದೇನೆ ಅಷ್ಟೇ ಎಂದಿದ್ದರು. ಹಾಗಿದ್ದರೆ ಬಿಜೆಪಿ ವಿಜಯೇಂದ್ರ ಅವರನ್ನು ವರುಣಾದಿಂದ ಕಣಕ್ಕಿಳಿಸುತ್ತಾರಾ? ಅಥವಾ ತಂದೆಯ ಕ್ಷೇತ್ರವಾಗಿದ್ದ ಶಿಕಾರಿಪುರದಿಂದಲೇ ಸ್ಪರ್ಧಿಸಲು ಅವಕಾಶ ನೀಡುತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ