ಗೋವಾದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ (Goa Assembly Elections) ಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಗೋವಾದ ಪ್ರಾದೇಶಿಕ ಪಕ್ಷ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ ಘೋಷಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ ಅಧ್ಯಕ್ಷ ದೀಪಕ್ ಧವಲೀಕರ್, ಮುಂದಿನ ಚುನಾವಣೆಯನ್ನು ಟಿಎಂಸಿಯೊಂದಿಗೆ ಸೇರಿ ಎದುರಿಸಲು ನಮ್ಮ ಪಕ್ಷದ ಕೇಂದ್ರೀಯ ಸಮಿತಿ ನಿರ್ಧಾರ ಮಾಡಿದೆ ಎಂದು ಹೇಳಿದ್ದಾರೆ.
2017ರ ಚುನಾವಣೆಯಲ್ಲಿ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ 17 ಸೀಟುಗಳನ್ನು ಗೆದ್ದುಕೊಂಡಿತ್ತು. ಆದರೆ ಬಿಜೆಪಿ ಗೋವಾದ ಎಂಜಿಪಿ ಸೇರಿ ಪ್ರಾದೇಶಿಕ ಪಕ್ಷಗಳು, ಸ್ವತಂತ್ರ್ಯ ಅಭ್ಯರ್ಥಿಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿತ್ತು. ಮನೋಹರ್ ಪರಿಕ್ಕರ್ ಮುಖ್ಯಮಂತ್ರಿಯಾಗಿದ್ದಾಗ, ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿಯ ಸುಧಿನ್ ಧವಲೀಕರ್ ಅವರ ಕ್ಯಾಬಿನೆಟ್ನಲ್ಲಿ ಸಚಿವರಾಗಿದ್ದರು. 2019ರ ಮಾರ್ಚ್ನಲ್ಲಿ ಅವರು ಮೃತಪಟ್ಟ ನಂತರ ಪ್ರಮೋದ್ ಸಾವಂತ್ ಸಿಎಂ ಆದರು. ಅದಾದ ಬಳಿಕ ಸುಧಿನ್ರನ್ನು ಸಂಪುಟದಿಂದ ಕೈಬಿಡಲಾಗಿತ್ತು. 2017ರ ಚುನಾವಣೆಯಲ್ಲಿ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ ಕೇವಲ 3 ಕ್ಷೇತ್ರಗಳಲ್ಲಿ ಗೆದ್ದುಕೊಂಡಿತ್ತು. ಬಿಜೆಪಿ ಜತೆ ಮೈತ್ರಿ ತೊರೆದರೂ ಕೂಡ ಈ ಪಕ್ಷದ ಇನ್ನಿಬ್ಬರು ಎಂಎಲ್ಎಗಳು ಬಿಜೆಪಿ ಸೇರಿದ್ದು, ಈಗ ಉಳಿದವರು ಸುಧಿನ್ ಧವಲೀಕರ್ ಒಬ್ಬರೇ ಆಗಿದ್ದಾರೆ.
ಇನ್ನು ತೃಣಮೂಲ ಕಾಂಗ್ರೆಸ್ ಮುಂಬರುವ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ನನಗೆ ಗೋವಾ ಅಧಿಕಾರ ಹಿಡಿಯಬೇಕು ಎಂಬ ಆಸೆ ಖಂಡಿತ ಇಲ್ಲ. ಆದರೆ ಬಿಜೆಪಿಯನ್ನು ಗೆಲ್ಲಲು ಬಿಡಬಾರದು ಎಂಬುದೇ ನನ್ನ ಉದ್ದೇಶ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಈಗಾಗಲೇ ಒಮ್ಮೆ ಗೋವಾ ಪ್ರವಾಸಕ್ಕೆ ಹೋಗಿ, ಅಲ್ಲಿನ ಮೀನುಗಾರರೊಂದಿಗೆ ಸಂವಾದ ನಡೆಸಿದ್ದಾರೆ. ಈಗ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಟಿಎಂಸಿ ಹಾದಿ ಇನ್ನಷ್ಟು ಸುಗಮಗೊಳ್ಳಲಿದೆ. ಈ ಮಧ್ಯೆ ಗೋವಾದಲ್ಲಿ ಮಾಜಿ ಖ್ಯಾತ ಟೆನ್ನಿಸ್ ಆಟಗಾರ ಲಿಯಾಂಡರ್ ಪೇಸ್ ಕೂಡ ಟಿಎಂಸಿ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: ನನ್ನ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬಂದು ನಿಂತ್ರು: ಬಿಬಿ ಚಿಮ್ಮನಕಟ್ಟಿ ಭಾಷಣ; ಸಿದ್ದರಾಮಯ್ಯಗೆ ಮುಜುಗರ!
Published On - 3:31 pm, Mon, 6 December 21