ದೆಹಲಿ: ದೇಶದ ಗಮನ ಸೆಳೆದಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ (Gujrat Assembly Elections) ಇಂದು (ನ 3, ಗುರುವಾರ) ಕೇಂದ್ರ ಚುನಾವಣಾ ಆಯೋಗವು (Election Commission of India) ದಿನಾಂಕ ಪ್ರಕಟಿಸಲಿದೆ. ಮಧ್ಯಾಹ್ನ 12 ಗಂಟೆಗೆ ಈ ಸಂಬಂಧ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ತವರು ರಾಜ್ಯ ಗುಜರಾತ್ನಲ್ಲಿ ಜಯಗಳಿಸುವುದು ಬಿಜೆಪಿಗೆ ಆತ್ಮವಿಶ್ವಾಸ ವೃದ್ಧಿಯ ದೃಷ್ಟಿಯಿಂದ ಮಹತ್ವದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಪ್ರಯತ್ನಗಳ ಮೇಲೆಯೂ ಗುಜರಾತ್ ಚುನಾವಣೆಯು ಪ್ರಭಾವ ಬೀರಲಿದೆ.
ಬಿಜೆಪಿ ಈಗಾಗಲೇ ಗುಜರಾತ್ನಲ್ಲಿ ಚುನಾವಣೆ ಸಿದ್ಧತೆ ಆರಂಭಿಸಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಬಾರಿ ರಾಜ್ಯಕ್ಕೆ ಭೇಟಿ ನೀಡಿ ಜನ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಬಿಜೆಪಿ ಸಮಾವೇಶಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರುತ್ತಿರುವುದು ಮೋದಿ ಪ್ರಭಾವ ಪ್ರಕಾಶಿಸುತ್ತಿರುವುದನ್ನು ಸೂಚಿಸಿಸುತ್ತದೆ. ಕಳೆದ ಬಾರಿ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಯಾಸದ ಗೆಲುವು ಸಾಧಿಸಿತ್ತು.
ಮತ್ತೊಂದೆಡೆ ಗುಜರಾತ್ನಲ್ಲಿ ಆಮ್ ಆದ್ಮಿ ಪಕ್ಷವು (ಆಪ್) ಚಟುವಟಿಕೆ ಚುರುಕುಗೊಳಿಸಿದ್ದು, ಪಂಜಾಬ್ ಮಾದರಿಯ ಫಲಿತಾಂಶ ಮರುಕಳಿಸುವ ವಿಶ್ವಾಸದಲ್ಲಿದೆ. ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಹಲವು ಬಾರಿ ಗುಜರಾತ್ಗೆ ಭೇಟಿ ನೀಡಿದ್ದು ಸಂಘಟನೆ ಚುರುಕುಗೊಳಿಸಲು ಯತ್ನಿಸಿದ್ದಾರೆ. ಗುಜರಾತ್ನಲ್ಲಿ ಆಪ್ ಮತ್ತು ಬಿಜೆಪಿ ನಡುವೆ ಹಣಾಹಣಿ ನಡೆಯುವ ನಿರೀಕ್ಷೆಯಿದೆ. ಕಾಂಗ್ರೆಸ್ ಪಕ್ಷದ ಚಟುವಟಿಕೆಗಳು ಹೇಳಿಕೊಳ್ಳುವ ರೀತಿಯಲ್ಲಿ ಕಂಡುಬರುತ್ತಿಲ್ಲ. ಭಾರತ್ ಜೋಡೋ ಯಾತ್ರೆ, ಎಐಸಿಸಿ ಅಧ್ಯಕ್ಷರ ಚುನಾವಣೆ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಮುಳುಗಿರುವ ಪಕ್ಷದ ನಾಯಕರು ಇನ್ನಷ್ಟೇ ಗುಜರಾತ್ನತ್ತ ಗಮನ ಹರಿಸಬೇಕಿದೆ.
Published On - 7:51 am, Thu, 3 November 22