ದೆಹಲಿ: ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಹುದ್ದೆಯನ್ನು ಸ್ಪಷ್ಟವಾಗಿ ತೋರಿಸಿದ್ದಕ್ಕಾಗಿ ಅಧಿಕಾರಿಯೊಬ್ಬರನ್ನು ಗುಜರಾತ್ ಚುನಾವಣಾ ವೀಕ್ಷಕ(Gujarat election observer) ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ. ಅಭಿಷೇಕ್ ಸಿಂಗ್ ಅವರು ತಮ್ಮ ಹುದ್ದೆಯ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹಂಚಿಕೊಂಡಿದ್ದು ತಮ್ಮ ಅಧಿಕೃತ ಸ್ಥಾನವನ್ನು ಪ್ರಚಾರ ಪಡೆಯುವುದಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ.ಉತ್ತರ ಪ್ರದೇಶ ಕೇಡರ್ ಅಧಿಕಾರಿಯಾಗಿರುವ ಅಭಿಷೇಕ್ ಸಿಂಗ್ ಅವರನ್ನು ಅಹಮದಾಬಾದ್‌ನ ಬಾಪುನಗರ ಮತ್ತು ಅಸರ್ವಾ ಎಂಬ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸಾಮಾನ್ಯ ವೀಕ್ಷಕರನ್ನಾಗಿ ನೇಮಿಸಲಾಗಿತ್ತು. ಅಧಿಕಾರಿಯ ಇನ್‌ಸ್ಟಾ ಪೋಸ್ಟ್ ಬಗ್ಗೆ “ತೀರಾ ಗಂಭೀರವಾದ ನಿಲುವು ತೆಗೆದುಕೊಂಡಿದೆ. ಆದ್ದರಿಂದ, “ಸಾಮಾನ್ಯ ವೀಕ್ಷಕರಾಗಿ ಅವರ ಕರ್ತವ್ಯದಿಂದ ತಕ್ಷಣವೇ ತೆಗೆದುಹಾಕಲಾಗಿದೆ. ಮುಂದಿನ ಆದೇಶದವರೆಗೆ ಯಾವುದೇ ಚುನಾವಣೆ ಸಂಬಂಧಿತ ಕರ್ತವ್ಯದಿಂದ ಅವರನ್ನು ಹೊರಗಿಡಲಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಅಧಿಕಾರಿಗೆ ಇಂದೇ ಕ್ಷೇತ್ರವನ್ನು ತೊರೆಯುವಂತೆಯೂ ಆದೇಶಿಸಲಾಗಿದೆ. ವೀಕ್ಷಕರ ಕರ್ತವ್ಯಗಳಿಗಾಗಿ ಅವರಿಗೆ ಒದಗಿಸಿದ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಅವರು ತಕ್ಷಣವೇ ಕಳೆದುಕೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ.
ಸಿಂಗ್ ಅವರ ಸ್ಥಾನಕ್ಕೆ ಮತ್ತೊಬ್ಬ ಐಎಎಸ್ (ಭಾರತೀಯ ಆಡಳಿತ ಸೇವೆ) ಅಧಿಕಾರಿ ಕ್ರಿಶನ್ ಬಾಜ್‌ಪೇಯ್ ಅವರನ್ನು ನೇಮಿಸಲಾಗಿದೆ.
ಗುಜರಾತ್ ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.