Himachal Pradesh Polls: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ

| Updated By: ರಮೇಶ್ ಬಿ. ಜವಳಗೇರಾ

Updated on: Oct 14, 2022 | 4:17 PM

ಕೇಂದ್ರ ಚುನಾವಣಾ ಆಯೋಗವು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ.

Himachal Pradesh Polls: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ
ಚುನಾವಣಾ ಆಯೋಗ
Follow us on

ನವದೆಹಲಿ: ಈ ಬಾರಿ ತೀವ್ರ ಕುತೂಹಲ ಮೂಡಿಸಿರುವ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಗೆ(Himachal Pradesh Assembly poll) ಕೊನೆಗೂ ನಿರೀಕ್ಷೆಯಂತೆ ದಿನಾಂಕ ಘೋಷಣೆಯಾಗಿದ್ದು, ಇದೇ ನವೆಂಬರ್ 12ರಂದು ಮತದಾನ ನಡೆಯಲಿದೆ. ಇನ್ನು  ಡಿಸೆಂಬರ್‌ 8ಕ್ಕೆ ಮತ ಎಣಿಕೆ ನಡೆಯಲಿದೆ.

ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್  ಇಂದು(ಅಕ್ಟೋಬರ್.14) ಸುದ್ದಿಗೋಷ್ಠಿ ನಡೆಸಿ ದಿನಾಂಕ ಪ್ರಕಟಿಸಿದ್ದು, 68 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 12ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ  ಇದೇ ಅಕ್ಟೋಬರ್ 25 ಕೊನೆ ದಿನವಾಗಿದೆ. ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ರಾಜೀವ್ ಕುಮಾರ್ ಮಾಹಿತಿ ನೀಡಿದರು.

ಅಕ್ಟೋಬರ್ 25ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಅ.29ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದೆ..

ಯಾವುದೇ ಅಡೆ ತಡೆ ಇಲ್ಲದೆ ಚುನಾವಣೆ ನಡೆಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ. ಹಿಮಾಚಲ ಪ್ರದೇಶ ಗಡಿಗಳಲ್ಲಿ ಹದ್ದಿನ ಕಣ್ಣಿಡಲಾಗುತ್ತದೆ. ಈ ಮೂಲಕ ಹಣ ಸಾಗಾಣೆ, ಡ್ರಗ್ಸ್ ಸೇರಿದಂತೆ ಇತರ ಯಾವುದೇ ಕಾನೂನು ಬಾಹಿರ ಸಾಗಣೆಗೆ ಅವಕಾಶ ನೀಡದಂತೆ ಸೂಚನೆ ನೀಡಲಾಗಿದೆ ಎಂದು ರಾಜೀಕ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

80 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮತದಾರರ ಮನೆಗೆ ತೆರಳಿ ಮತದಾನ ಮಾಡಿಸಿಕೊಳ್ಳಲಾಗುವುದು. ಸಿಬ್ಬಂಧಿಗಳು ಅವರ ಮನೆಗೆ ತೆರಳಿ ಮತದಾನಕ್ಕೆ ವ್ಯವಸ್ಥೆ ಮಾಡಲಿದ್ದಾರೆ. ಸಂಪೂರ್ಣ ಪ್ರಕ್ರಿಯೆ ವಿಡಿಯೋ ರೆಕಾರ್ಡ್ ಮಾಡಲಾಗುವುದು. ಹಾಗೇ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಕೋವಿಡ್ ಮಾರ್ಗಸೂಚಿಗಳು ಪಾಲನೆಯಾಗಲಿದೆ ಎಂದು ಸ್ಪಷ್ಟಪಡಿಸಿದರು.

ಹಿಮಾಚಲ ಪ್ರದೇಶದ ವಿಧಾನಸಭೆಯ ಅವಧಿ 2023ರ ಜನವರಿ 8ರಂದು ಅಂತ್ಯಗೊಳ್ಳಲಿದೆ. ಹಿಮಾಚಲ ಪ್ರದೇಶ ವಿಧಾನಸಭೆ 68 ಸದಸ್ಯ ಬಲ ಹೊಂದಿದ್ದು, ಬಹುಮತಕ್ಕೆ 35 ಸ್ಥಾನದ ಅಗತ್ಯವಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 44 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೇರಿತ್ತು. ಇನ್ನು ಕಾಂಗ್ರೆಸ್ 21 ಸ್ಥಾನಗಳನ್ನಷ್ಟೇ ಗೆಲ್ಲುವಲ್ಲಿ ಸಫಲವಾಗಿತ್ತು.

ಆದ್ರೆ, ಈ ಬಾರಿ ಹಿಮಾಚಲ ಪ್ರದೇಶದಲ್ಲಿ ಅಧಿಕಾರಿ ಹಿಡಿಯಲು ಬಿಜೆಪಿ ಅಷ್ಟು ಹೇಳುಕೊಳ್ಳುವ ವಾತಾವರಣ ಇಲ್ಲ. ಯಾಕಂದ್ರೆ ಆಡಳಿತ ವಿರೋಧಿ ಅಲೆ ಬಿಜೆಪಿಗೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಇನ್ನು ಕಾಂಗ್ರೆಸ್ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಇನ್ನಿಲ್ಲದ ಕಸರತ್ತು ನಡೆಸಿದೆ. ಈ ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಆಮ್ ಆದ್ಮಿ ಪಕ್ಷ ಸಹ ತನ್ನ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ.

ಒಟ್ಟಿನಲ್ಲಿ ಈ ಬಾರಿಯ ಹಿಮಾಚಲ ಪ್ರದೇಶ ಚುನಾವಣೆ ಜಿದ್ದಾಜಿದ್ದಿಯಿಂದ ಕೂಡಿದ್ದು, ಮೋದಿ ಅಲೆ ಮತ್ತೊಮ್ಮೆ ವರ್ಕೌಟ್ ಆಗುತ್ತಾ? ಕಾಂಗ್ರೆಸ್ ಸೇಡು ತೀರಿಸಿಕೊಳ್ಳುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

Published On - 3:47 pm, Fri, 14 October 22