ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನ ಎಣಿಕೆ ಶುರುವಾಗಿದೆ(Karnataka Assembly Elections 2023). ಈಗಾಗಲೇ ಪ್ರಮುಖ ಮೂರು ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ. ರಾಜ್ಯ ರಾಜಕಾರಣದಲ್ಲಿ ಮಹತ್ತರವಾದ ಬೆಳವಣಿಗೆಗಳು ನಡೆಯುತ್ತಿವೆ. ಬಿಜೆಪಿಯ ಘಟಾನುಘಟಿ ನಾಯಕ ಮಾಜಿ ಡಿಸಿಎಂ ಲಕ್ಷ್ಮಣ ಸವದಿ(Laxman Savadi) ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಇದರ ಬೆನ್ನಲ್ಲೆ ಇಂದು(ಏ.16) ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್( Jagdish Shettar) ಬಿಜೆಪಿಗೆ ರಾಜೀನಾಮೆ ಸಲ್ಲಿಸೋದಾಗಿ ಘೋಷಿಸಿದ್ದಾರೆ. ಇದರಿಂದ ರಾಜ್ಯ ಬಿಜೆಪಿಗೆ ಬಹಳ ದೊಡ್ಡ ಪೆಟ್ಟು ಬಿದ್ದಿದೆ ಎಂದು ರಾಜಕೀಯ ಪಡಸಾಲೆಯಿಂದ ಮಾತುಗಳು ಕೇಳಿ ಬರುತ್ತಿವೆ. ಇದರ ಜೊತೆಗೆ ಇಂದು ರಾಹುಲ್ ಗಾಂಧಿ(Rahul Gandhi) ಕೋಲಾರಕ್ಕೆ ಆಗಮಿಸಲಿದ್ದು ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ. ಇನ್ನು ಜೆಡಿಎಸ್ 2ನೇ ಪಟ್ಟಿಯಲ್ಲಿ ಹಾಸನ ಟಿಕೆಟ್ ಅನ್ನು ಜೆಡಿಎಸ್ ಸ್ಥಳೀಯ ನಾಯಕ ಸ್ವರೂಪ್ ಅವರಿಗೆ ಒಲಿಯುವ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಹಿಡಿದ ಹಠವನ್ನು ಸಾಧಿಸಿದ್ದಾರೆ. ಜೊತೆಗೆ ಯಡಿಯೂರಪ್ಪ ಸಂಬಂಧಿ ಎನ್ ಆರ್ ಸಂತೋಷ್ಗೆ ಅರಸೀಕೆರೆ ಟಿಕೆಟ್ ಫೈನಲ್ ಆಗಿದೆ. ಇಂದಿನ ಕ್ಷಣ ಕ್ಷಣದ ರಾಜಕೀಯ ಅಪ್ಡೇಟ್ಸ್ ಇಲ್ಲಿದೆ.
ಬೆಂಗಳೂರು: ಪುಲಕೇಶಿ ನಗರದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆ ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡ ಕ್ಷೇತ್ರದ ಹಾಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ಪಕ್ಷಕ್ಕೆ ಕೈ ಕೊಡಲು ಮುಂದಾಗಿದ್ದಾರೆ. ಅದರಂತೆ ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಅವರು, ಪಕ್ಷೇತರರಾಗಿ ಸ್ಪರ್ದೆ ಮಾಡಬೇಕು ಅಂತ ಯೋಚಿಸಿದ್ದೇನೆ. ಅಂತಿಮವಾಗಿ ನಮ್ಮ ಮುಖಂಡರು, ಜನತೆಯ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ. ಅತ್ಯಂತ ಹೆಚ್ಚು ಲೀಡ್ನಿಂದ ಗೆದ್ದ ಶಾಸಕ ನಾನು. ಆದರೆ ನನಗೆ ಪಕ್ಷದ ನಡೆಯಿಂದ ನೋವುಂಟಾಗಿದೆ. ಮೂರನೇ ಲಿಸ್ಟ್ನಲ್ಲೂ ನನಗೆ ಟಿಕೇಟ್ ನೀಡಲಿಲ್ಲ. ಇದರ ಹಿಂದೆ ಪಕ್ಷದ ಹಿರಿಯ ನಾಯಕರಿದ್ದಾರೆ. ಹಿರಿಯ ನಾಯಕರು ಯಾರು ಎಂದು ನೀವೇ ಅರ್ಥ ಮಾಡಿಕೊಳ್ಳಬೇಕು ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದರು. ಕ್ಷೇತ್ರದಲ್ಲಿ ಹಿಂದೂ- ಮುಸ್ಲಿಂ- ಕ್ರಿಶ್ಚಿಯನ್ ಎಲ್ಲಾ ಅಣ್ಣ ತಮ್ಮಂದಿರ ರೀತಿ ಇದ್ದೇವೆ. ನನ್ನ ಬಗ್ಗೆ ಮನೆ ಮನೆಗೆ ಹೋಗಿ ಕೇಳಲಿ ಬೇಕಾದರೆ ಎಂದರು.
ವಿಜಯನಗರ: ಜಗದೀಶ್ ಶೆಟ್ಟರ್ ಅವರಿಗೆ ದೊಡ್ಡ ಸ್ಥಾನಮಾನಗಳನ್ನ ಕೊಟ್ಟಿದೆ. ಅವರ ಶಾಸಕರಾಗಲು ಸಾವಿರಾರು ಕಾರ್ಯಕರ್ತರ ಶ್ರಮವಿದೆ. ಇತಂಹ ನಾಯಕರು ಪಕ್ಷ ಬಿಟ್ಟು ಹೋದರೂ ಅವರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಮಾತನಾಡಿ ಅವರು, ಬಿಜೆಪಿಯಲ್ಲಿ ಮೋದಿಯವರು ಕಾಲ ಕಾಲಕ್ಕೆ ಬದಲಾವಣೆ ಮಾಡುತ್ತಲೇ ಬಂದಿದ್ದಾರೆ. ಶಾಸಕರು, ಸಚಿವರು, ಸಿಎಂ ಬದಲಾವಣೆ ಮಾಡುವ ಧೈರ್ಯ ಮೋದಿ ಮತ್ತು ಬಿಜೆಪಿಗೆ ಮಾತ್ರ ಇದೆ. ಹಲವಾರು ಸರ್ವೆ ಮತ್ತು ಬೇರೆ ಬೇರೆ ಕಾರಣಗಳಿಗೆ ಬದಲಾವಣೆ ಆಗಿದೆ. ಪಕ್ಷಕ್ಕೆ ಅದನ್ನ ನಿಭಾಯಿಸುವ ಶಕ್ತಿ ಇದೆ ಎಂದರು.
ಬಾಗಲಕೋಟೆ: ತೇರದಾಳ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆ ಉಮಾಶ್ರೀ ಬೆಂಬಲಿಗರು ಮಹಾಲಿಂಗಪುರ ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಬೆಂಬಲಿಗರಿಂದ ಧರಣಿ ನಡೆಸಿದರು. ಸಿದ್ದು ಕೊಣ್ಣೂರಗೆ ತೇರದಾಳ ಕ್ಷೇತ್ರದ ಟಿಕೆಟ್ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಉಮಾಶ್ರೀಗೆ ಟಿಕೆಟ್ ನೀಡದಿದ್ದರೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು, ಪುರಸಭೆ, ನಗರಸಭೆ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ವಿಜಯನಗರ: ಹೊಸಪೇಟೆ ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ಠಾಕೂರ್ ಪರವಾಗಿ ಸಿಎಂ ಪ್ರಚಾರ ಬೊಮ್ಮಾಯಿ ಮಾಡಿದ್ದಾರೆ. ಸಮಾನ ಮನಸ್ಕರ ಸಮಾಲೋಚನೆ ಸಭೆಯಲ್ಲಿ ಭಾಷಣ ಮಾಡಿದ ಅವರು, ಸಚಿವ ಆನಂದಸಿಂಗ್ ಅಂದರೆ ಹೆಸರಿನಲ್ಲಿ ಆನಂದವೂ ಇದೆ. ಸಿಂಗ್ ಇದೆ. ಸದಾಕಾಲ ಸವಾಲುಗಳನ್ನು ಇಟ್ಟುಕೊಂಡು ಗುರಿ ಮುಟ್ಟುವ ಗುಣ ಆನಂದಸಿಂಗ್ಗೆ ಇದೆ. ಆನಂದಸಿಂಗ್ ಅಸಾಧ್ಯವಾದ ಕೆಲಸಗಳಿಗೆ ಕೈ ಹಾಕಿ ಸಾಧಿಸಿ ತೋರಿಸಿದ್ದಾರೆ. ವಿಜಯನಗರ ಜಿಲ್ಲೆ ಮಾಡಲು ನಮ್ಮ ಪಕ್ಷ ಬಿಟ್ಟು ಕಾಂಗ್ರೆಸ್ಗೆ ಹೋಗಿದ್ರು. ಆದ್ರೆ ಸಮ್ಮಿಶ್ರ ಸರ್ಕಾರ ಬಂತು. ಸಮ್ಮಿಶ್ರ ಸರ್ಕಾರ ಅಂದ್ರೆ ಮಿಶಳ್ ಬಾಜಿ ಇದ್ದ ಹಾಗೆ ಇತ್ತು. ಸಮ್ಮಿಶ್ರ ಸರ್ಕಾರದಲ್ಲಿ ಕೆಲಸ ಆಗಲ್ಲ ಅಂದುಕೊಂಡು ಒಂದು ದಿನ ಬಳಿ ಬಂದ್ರು ಬಿಜೆಪಿ ಸೇರಿದರು. ಮಾತ್ರವಲ್ಲದೆ, ಯಡಿಯೂರಪ್ಪ ಬೆನ್ನು ಬಿದ್ದು ದಾರಿಯಲ್ಲಿ ನಿಂತು ಸಹಿ ಮಾಡಿಸಿ ವಿಜಯನಗರ ಜಿಲ್ಲೆ ಮಾಡಿಸಿದರು. ಆನಂದಸಿಂಗ್ ಸರಳ ಅಲ್ಲ. ಆನಂದಸಿಂಗ್ ಬಂದರೆ ಹಾರ್ಟ್ ಅಟ್ಯಾಕ್ ಬಂದ ಹಾಗೆ ಆಗ್ತಿತ್ತು. ಯಾಕಂದ್ರೆ ಎನಾದ್ರು ಫೈಲ್ ಹಿಡಿದುಕೊಂಡು ಬಂದೂ ಸಹಿ ಹಾಕಿಸುತ್ತಿದ್ದರು. ಸದ್ಯ ಆನಂದಸಿಂಗ್ ಪಟ್ಟು ಬಿಡದೇ ಪುತ್ರನನ್ನ ಕಣಕ್ಕೆ ಇಳಿಸಿದ್ದಾರೆ. ಸಿದ್ದಾರ್ಥ ಸಿಂಗ್ ಸಾಮಾನ್ಯರಲ್ಲಿ ಸಾಮಾನ್ಯ ಅಭ್ಯರ್ಥಿ. ಸಿದ್ದಾರ್ಥ ಸಿಂಗ್ಗೆ ಸಮಸ್ಯೆಗಳನ್ನ ತಿಳಿದುಕೊಂಡು ಅದಕ್ಕೆ ಪರಿಹಾರ ಕೊಡುವ ಯೋಚನೆ ಇದೆ. ಆನಂದಸಿಂಗ್ ಶೇರ್ ಆದ್ರೆ ಮಗ ಸವಾಶೇರು ಅನ್ನೋ ಹಂಗೆ ಇದ್ದಾರೆ. ನೀವೂ ಸಿದ್ದಾರ್ಥ ಸಿಂಗ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಇಬ್ಬರ ಪೋಟೋಗಳನ್ನ ಕಣ್ಣು ಮುಚ್ಚಿ ಒಮ್ಮೆ ನೋಡಿ ಬಿಡಿ. ಆಗ ನೀವೇ ಯಾರಿಗೆ ಗೆಲ್ಲಿಸಬೇಕು ಅಂತಾ ಇದ್ದೆ ನಿರ್ಧರಿಸುತ್ತಾರೆ ಎಂದರು.
ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಂಗಳೂರಿನತ್ತ ಪ್ರಯಾಣ ಕೈಗೊಂಡಿದ್ದು, ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಕಳುಹಿಸಿದ ವಿಶೇಷ ವಿಮಾನದಲ್ಲಿ ತೆರಳಿದ ಶೆಟ್ಟರ್ ಅವರೊಂದಿಗೆ ಉದ್ಯಮಿ ಯು.ಬಿ.ಶೆಟ್ಟಿ, ಹು-ಧಾ ಸೆಂಟ್ರಲ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ರಜತ್ ಉಳ್ಳಾಗಡ್ಡಿ ಇದ್ದಾರೆ.
ರಾಯಚೂರು: ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಬಿಜೆಪಿ ತೊರೆದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಗೋವಿಂದ ಕಾರಜೋಳ, ಆತುರದ ನಿರ್ಧಾರ ನಮ್ಮ ಮೂಗನ್ನು ನಾವೇ ಕುಯ್ದುಕೊಂಡಂತೆ ಎಂದರು. ಯಾವುದೇ ನಾಯಕರು ಅವಸರದ ನಿರ್ಧಾರ ಕೈಗೊಳ್ಳಬಾರದು. ಕೈ ಮುಗಿದು ಕೇಳುತ್ತೇನೆ ಯಾರೂ ಆತುರದ ನಿರ್ಧಾರ ಕೈಗೊಳ್ಳಬೇಡಿ. ಕಾಂಗ್ರೆಸ್ಗೆ ನೆಲೆಯಿಲ್ಲ ಹಾಗಾಗಿ ಅಭ್ಯರ್ಥಿಗಾಗಿ ಹುಡುಕುತ್ತಿದೆ. ಹೀಗಾಗಿ ಬಿಜೆಪಿ ಟಿಕೆಟ್ ವಂಚಿತರನ್ನು ಕರೆದೊಯ್ಯುತ್ತಿದೆ. ಕೈ ಕಾಲು ಹಿಡಿದು ಅಭ್ಯರ್ಥಿಗಳನ್ನು ಕರೆದೊಯ್ಯುತ್ತಿದ್ದಾರೆ ಎಂದರು.
ಹುಬ್ಬಳ್ಳಿ: ನನ್ನ ನಿರ್ಧಾರವನ್ನು ಪ್ರಶ್ನಿಸುತ್ತಿರುವ ಯಡಿಯೂರಪ್ಪ ಅವರು 2012ರಲ್ಲಿ ಬಿಜೆಪಿ ಒಡೆದು ಕೆಜೆಪಿ ಕಟ್ಟಿದ್ದರು ಎಂದು ಜಗದೀಶ್ ಶೆಟ್ಟರ್ ಟಾಂಗ್ ಕೊಟ್ಟರು. ಹುಬ್ಬಳ್ಳಿ-ಧಾರವಾಡದಲ್ಲಿ ನಾನೇ ಬೆಳೆಸಿದ ಹುಡುಗರು ಇದ್ದಾರೆ. ಅವರನ್ನು ಎಷ್ಟು ದಿನ ಅಂತಾ ಹಿಡಿದಿಟ್ಟುಕೊಳ್ಳಲು ಆಗುತ್ತದೆ. ದೈಹಿಕವಾಗಿ ಬಿಜೆಪಿಯಲ್ಲಿದ್ದರೂ ಮಾನಸಿಕವಾಗಿ ನನ್ನ ಜತೆಗಿದ್ದಾರೆ. ಇದುವರೆಗೆ ಬೇರೆ ಪಕ್ಷಗಳ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು. ಬಿಜೆಪಿಗೆ ರಾಜೀನಾಮೆ ನೀಡಿದ ನಂತರ ಮುಂದಿನ ತೀರ್ಮಾನ ಮಾಡುತ್ತೇನೆ. ಇಂದು ಸಂಜೆ ಬೆಂಗಳೂರಿಗೆ ತೆರಳಿದ ನಂತರ ಒಂದು ನಿರ್ಧಾರಕ್ಕೆ ಬಂದು ಮಾಹಿತಿ ನೀಡುತ್ತೇನೆ ಎಂದರು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಮಾತ್ರ ಕೇಳಿದ್ದೆ. ಆದರೆ ರಾಜ್ಯಸಭೆಗೆ ಕಳಿಸುವುದಾಗಿ ಬಿಜೆಪಿ ನಾಯಕರು ಹೇಳಿದ್ದಾರೆ. ಯಾಕೆ ಮೂಲೆಗೆ ಕೂರಿಸಲು ಯತ್ನಿಸುತ್ತಿದ್ದೀರಿ ಎಂದು ಪ್ರಶ್ನಿಸಿದೆ. ನಾನು ಕೇಳುತ್ತಿರುವುದು ಒಂದು ಟಿಕೆಟ್ ಎಂದರೂ ಒಪ್ಪಲೇ ಇಲ್ಲ. ಅನಿವಾರ್ಯವಾಗಿ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು.
ಕೋಲಾರ: ಕರ್ನಾಟಕದಲ್ಲಿ ಇರುವುದು 40% ಸರ್ಕಾರ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ‘ಜೈ ಭಾರತ’ ಸಮಾವೇಶದಲ್ಲಿ ಮಾತನಾಡಿದ ಅವರು, ಯಾವುದೇ ಕೆಲಸ ಆಗಬೇಕಾದರೂ 40% ಕಮಿಷನ್ ಕೊಡಬೇಕಿದೆ. ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಗರಣಗಳ ದೊಡ್ಡ ಪಟ್ಟಿಯೇ ಇದೆ. PSI ನೇಮಕಾತಿ ಹಗರಣ, ಸಹಾಯಕ ಪ್ರಾಧ್ಯಾಪಕ ನೇಮಕಾತಿ ಹಗರಣ, ಪಿಡಬ್ಲ್ಯುಡಿ ಸಹಾಯಕ ಇಂಜಿನಿಯರ್ಗಳ ನೇಮಕಾತಿ ಹಗರಣ, KPTCL ನೇಮಕಾತಿ ಹಗರಣ, ಶಿಕ್ಷಕರ ನೇಮಕಾತಿ ಹಗರಣ ನಡೆದಿದೆ ಎಂದರು.
ಕೋಲಾರ: ರಾಜ್ಯದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ ಆಗಲಿ, ಆ ಪಟ್ಟ ನನಗೆ ಬೇಡ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಅಷ್ಟೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ‘ಜೈ ಭಾರತ’ ಸಮಾವೇಶದಲ್ಲಿಮಾತನಾಡಿದ ಅವರು, ಸಿಎಂ ಯಾರಾಗಬೇಕೆಂದು ‘ಕೈ’ ನಾಯಕರು ತಲೆ ಕೆಡಿಸಿಕೊಳ್ಳಬೇಡಿ. ರಾಜ್ಯದ ಜನರ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳಿ. ಪಕ್ಷಕ್ಕೆ ಬಹುಮತ ಬಂದಾಗ ಸಿಎಂ ಬಗ್ಗೆ ಶಾಸಕರು ನಿರ್ಧರಿಸುತ್ತಾರೆ. ಡಬಲ್ ಇಂಜಿನ್ ಸರ್ಕಾರ ಅಂತಾರೆ, ಹೊಸ ಯೋಜನೆ ತಂದಿಲ್ಲ. ಹಳೇ ಡಬ್ಬಿಗೆ ಹೊಸ ಇಂಜಿನ್ ಕಲರ್ ಹಚ್ಚುತ್ತಿದ್ದಾರೆ. ಈ ಬಿಜೆಪಿ ಸರ್ಕಾರ ತೆಗೆಯದಿದ್ದರೆ ಯಾವುದೇ ಅಭಿವೃದ್ಧಿ ಆಗಲ್ಲ ಎಂದರು.
ವೀರೇಂದ್ರ ಪಾಟಿಲ್ ಅವರನ್ನು ಹೇಗೆ ಕಾಂಗ್ರೆಸ್ ನಡೆಸಿಕೊಂಡಿತ್ತು ಎಂಬುದನ್ನು ನೆನಪಿಸುವಂತೆ ಭಗವಂತ ಖುಬಾ ಹೇಳಿದ್ದಾರೆ. ವೀರೇಂದ್ರ ಪಾಟೀಲರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿ ಶೆಟ್ಟರ್ ಮತ್ತು ಸವದಿ ಮರೆತಂತಿದೆ. ಮೇ 10ರಂದು ಶೆಟ್ಟರ್ ಮತ್ತು ಸವದಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ. ಕಾರ್ಯಕರ್ತರು ಅವರಿಬ್ಬರನ್ನು ಹೀನಾಯವಾಗಿ ಸೋಲಿಸಲಿದ್ದಾರೆ ಎಂದರು.
ಕಲಬುರಗಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಜಯ್ ಕುಮಾರ್ಗೆ ಸಿಗದೇ ಇದ್ದಿದ್ದಕ್ಕೆ ಆಕ್ರೋಶಗೊಂಡಿರುವ ಮಾದಿಗ ಸಮಾಜ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿದೆ. ಕಾಂಗ್ರೆಸ್ ಕಚೇರಿಯ ಬಿಗ ಒಡೆದು ಮಾದಿಗ ಸಮಾಜ ಆಕ್ರೋಶ ವ್ಯಕ್ತಪಡಿಸಿದ್ದು, ವಿಜಯಕುಮಾರ ಜಿ ರಾಮಕೃಷ್ಣ ಅವರಿಗೆ ಟಿಕೆಟ್ ನೀಡಿಲ್ಲ ಎಂದು ಕಿಡಿಕಾರಿದೆ. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದೆ. ಕಲ್ಯಾಣ ಕರ್ನಾಟಕದಲ್ಲಿ ಯಾವೊಬ್ಬ ಮಾದಿಗ ಸಮಾಜದ ಮುಖಂಡರಿಗೆ ಟಿಕೆಟ್ ನೀಡಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ ಪಾಟೀಲ್, ಡಿಕೆ ಶಿವಕುಮಾರ್ ಸೇರಿ ರಾಜ್ಯ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯ ಕೈ ನಾಯಕರ ಭಾವಚಿತ್ರಗಳಿಗೆ ಸಗಣಿ ಬಳಿದು ಅಸಮಾಧಾನ ಹೊರಹಾಕಿದ್ದಾರೆ. ಮುಂಜಾಗೃತ ಕ್ರಮವಾಗಿ ಕಾಂಗ್ರೆಸ್ ಕಚೇರಿ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಕೋಲಾರ: ಜಿಲ್ಲೆಯಲ್ಲಿ ಆಯೋಜಿಸಿದ ಕಾಂಗ್ರೆಸ್ ಜೈ ಭಾರತ್ ಸಮಾವೇಶದಲ್ಲಿ ಭಿನ್ನಮತ ಎದ್ದುಕಾಣಿಸಿದೆ. ಒಂದೆಡೆ ರಾಹುಲ್ ಗಾಂಧಿ ಸುತ್ತಮುತ್ತ ಕೆ.ಎಚ್ ಮುನಿಯಪ್ಪ ಸುತ್ತಾಡುತ್ತಾ ಮೊದಲ ಸಾಲಿನಲ್ಲಿ ಕುಳಿತುಕೊಂಡರೆ, ಇನ್ನೊಂದೆಡೆ ರಮೇಶ್ ಕುಮಾರ್ ಮೂರನೇ ಸಾಲಿನಲ್ಲಿ ಕುಳಿತುಕೊಂಡಿದ್ದಾರೆ. ಸಿದ್ದರಾಮಯ್ಯಗೆ ಕೋಲಾರದಿಂದ ಸ್ಪರ್ಧೆ ಅವಕಾಶ ಕೈ ತಪ್ಪಿದ ಕಾರಣಕ್ಕೆ ಮತ್ತಷ್ಟು ಅಸಮಾಧಾನಗೊಂಡಿದ್ದರೂ ರಮೇಶ್ ಕುಮಾರ್ ಹಾಜರಾಗಿದ್ದಾರೆ.
ಕೋಲಾರ: ರಾಹುಲ್ ಗಾಂಧಿ 4,000 ಕಿ.ಮೀ. ಭಾರತ್ ಜೋಡೋ ಯಾತ್ರೆ ಯಶಸ್ವಿಗೊಳಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕೋಲಾರದಲ್ಲಿ ನಡೆದ ಕಾಂಗ್ರೆಸ್ ‘ಜೈ ಭಾರತ’ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಕೋಲಾರ, ತುಮಕೂರು, ರಾಯಚೂರಿನಲ್ಲಿ ಬಂಗಾರ ಸಿಗುವುದು. ಬರಗಾಲಕ್ಕೆ ತುತ್ತಾದ ಈ ಜಿಲ್ಲೆಯಲ್ಲಿ ನೀರಾವರಿಗೆ ಆದ್ಯತೆ ನೀಡುತ್ತಿರಲಿಲ್ಲ. ಆದರೆ ನಮ್ಮ ಸರ್ಕಾರ ಬಂದ ಮೇಲೆ ಕೆರೆಗಳಿಗೆ ನೀರು ತುಂಬಿಸಿದ್ದೇವೆ. ಬಂಗಾರದಂತಹ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಶುರು ಮಾಡಿದ್ದೇವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. 40 ಪರ್ಸೆಂಟ್ ಸರ್ಕಾರಕ್ಕೆ ರಾಜ್ಯದ ಜನರು ಬೇಸತ್ತು ಹೋಗಿದ್ದಾರೆ ಎಂದರು.
ದಾವಣಗೆರೆ: ಶಾಸಕ ಮಾಡಾಳು ವಿರುಪಾಕ್ಷಪ್ಪ ಪುತ್ರ ಮಲ್ಲಿಕಾರ್ಜು ಮಾಡಾಳು ಅವರು ಚನ್ನಗಿರಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿ ನಡೆದ ಸಂಕಲ್ಪ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ.
ಬೆಂಗಳೂರು: ಕನಕಪುರ ಬಂಡೆ ಹೋಗಿ ಹೃದಯವಂತರ ತಾಲೂಕು ಆಗಬೇಕು. ಕನಕಪುರ ಕ್ಷೇತ್ರದ ಪ್ರತಿ ಗ್ರಾಮದಲ್ಲಿ ನನ್ನ ಹೆಸರು ಹೇಳುತ್ತಿದ್ದಾರೆ. ನಾ ಬರೋವರೆಗೂ ಮಾತ್ರ ನಿನ್ನ ಹವಾ, ನಾ ಬಂದ್ಮೇಲೆ ನಂದೇ ಹವಾ ಎಂದು ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲಿಪುರ ಗ್ರಾಮದಲ್ಲಿ ನಡೆದ ಕನಕಪುರ ಬಿಜೆಪಿ ಮುಖಂಡರ ಸಭೆಯಲ್ಲಿ ಸಚಿವ ಆರ್. ಅಶೋಕ ಡೈಲಾಗ್ ಹೊಡೆದಿದ್ದಾರೆ.
ಬೆಂಗಳೂರು: ಬದಾಮಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಡಾ. ದೇವರಾಜ ಪಾಟೀಲ್ ಕಾಂಗ್ರೆಸ್ ತೊರೆದು ಬೆಂಗಳೂರಲ್ಲಿ ಹೆಚ್.ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರಿದ್ದಾರೆ.
ಬೆಂಗಳೂರು: ನಾನು ಹಿಂದೆ ಕೆಜೆಪಿ ಕಟ್ಟಿದ್ದಕ್ಕೆ ಜನರ ಕ್ಷಮೆ ಕೇಳಿದ್ದೇನೆ. ಅದು ನನ್ನ ಬದುಕಿನಲ್ಲಿ ಮಾಡಿದ ಅಕ್ಷಮ್ಯ ಅಪರಾಧ. ಪಕ್ಷ ಅವರನ್ನು ಯಾವ ಅನ್ಯಾಯವೂ ಮಾಡಿಲ್ಲ. ನಿವೃತ್ತಿಯಾಗಿ ಅಂತ ಶೆಟ್ಟರ್ ಅವರಿಗೆ ಯಾರೂ ಹೇಳಿಲ್ಲ. ನಿನ್ನೆ ಪ್ರಧಾನ್, ಸಿಎಂ ಹುಬ್ಬಳ್ಳಿಗೆ ಹೋಗಿ ಶೆಟ್ಟರ್ ಮನವೊಲಿಸುವ ಪ್ರಯತ್ನ ಮಾಡಿದರು. ಕೇಂದ್ರದಲ್ಲಿ ಅವಕಾಶ, ಕುಟುಂಬದಲ್ಲಿ ಟಿಕೆಟ್ ಭರವಸೆ ಕೊಟ್ಟಿದ್ದರು. ಆದರೂ ಅವರು ಬಿಜೆಪಿ ಬಿಟ್ಟಿದಾರೆ
ಜನ ಅವರನ್ನು ಕ್ಷಮಿಸಲ್ಲ. ನಾನು ಶೆಟ್ಟರ್ಗೆ ಎರಡು ಮೂರು ಸಲ ಮಾತಾಡಿದೆ. ಯಾರೇ ಪಕ್ಷ ಬಿಟ್ಟರೂ ನಮಗೆ ಸಮಸ್ಯೆ ಆಗಲ್ಲ. ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಅವರು ಮತ್ತೆ ಪಕ್ಷಕ್ಕೆ ಬಂದರೇ ನಾನು ಸ್ವಾಗಿತಿಸುತ್ತೇನೆ ಎಂದು ಬಿಎಸ್ ಯಡಿಯೂರಪ್ಪ ತಿಳಿಸಿದರು.
ಬೆಂಗಳೂರು: ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಪಕ್ಷ ಸ್ಥಾನಮಾನ ನೀಡಿದೆ.ರಾಜ್ಯಾದ್ಯಂತ ಸುತ್ತಾಡಿ ಇವರ ಬಂಡವಾಳ ಬಯಲು ಮಾಡುತ್ತೇನೆ. ಮತ್ತೆ ನಿಮಗೆ ಅಧಿಕಾರ ಕೊಡಲ್ಲ ಎಂದು ಶೆಟ್ಟರ್ಗೆ ಹೇಳಿದ್ದೀವಾ? ನಿಮ್ಮನ್ನು ರಾಜ್ಯಸಭೆಗೆ ಕಳುಹಿಸುತ್ತೇವೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದರು. ಕೇಂದ್ರಕ್ಕೆ ಬನ್ನಿ ಮಂತ್ರಿ ಮಾಡುತ್ತೇವೆ ಎಂದು ಪ್ರಧಾನ್ ಹೇಳಿದ್ದರು. ಆದರೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಜಗದೀಶ್ ಶೆಟ್ಟರ್ಗೆ ಒಳ್ಳೆಯದಾಗಲಿ, ಇನ್ನು ಹೆಚ್ಚಾಗಿ ಮಾತಾಡಲ್ಲ. ಒಂದು ವೇಳೆ ಅವರಿಗೆ ತಪ್ಪು ಅರಿವಾಗಿ ಪಕ್ಷಕ್ಕೆ ಮರಳಿದರೆ ಸ್ವಾಗತ. ನಾನೇ ಮುಂದೆ ನಿಂತು ಶೆಟ್ಟರ್, ಸವದಿಯನ್ನು ಸ್ವಾಗತ ಮಾಡುವೆ. ಪಕ್ಷದಲ್ಲಿ ಅವರಿಗೆ ಸ್ಥಾನಮಾನ ನೀಡುವುದು ನಮ್ಮ ಜವಾಬ್ದಾರಿ ಎಂದು ಬಿಎಸ್ ಯಡಿಯೂರಪ್ಪ ಮಾತನಾಡಿದರು.
ಬೆಂಗಳೂರು: ನನ್ನ ಸಂಪೂರ್ಣ ಬದುಕನ್ನು ಬಿಜೆಪಿ, ದೇಶಕ್ಕೆ ಮುಡಿಪಿಟ್ಟಿದ್ದೇನೆ. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಆಗಲ್ಲ. ಈ ಚುನಾವಣೆಯಲ್ಲಿ ಹೊಸಮುಖಗಳಿಗೆ ಅವಕಾಶ ಕೊಟ್ಟಿದ್ದೇವೆ. ಎಲ್ಲಾ ಸಮುದಾಯಗಳ ಕೊಂಡೊಯ್ಯುವ ಪ್ರಯತ್ನ ಮಾಡಿದ್ದೇವೆ. ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಮೀಸಲಾತಿ ಹೆಚ್ಚಿಸಿ ಅನೇಕ ದಶಕಗಳ ಬೇಡಿಕೆ ಈಡೇರಿಸಿದ್ದೇವೆ. ಬಿಜೆಪಿ ಸಾಮಾಜಿಕ ನ್ಯಾಯ ಪಾಲನೆ ಮಾಡಿದೆ. ಮೀಸಲಾತಿ ವಿಚಾರದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.
ಬೆಂಗಳೂರು: ಜಗದೀಶ್ ಶೆಟ್ಟರ್ ಅವರು ಜನಸಂಘದ ಕಾಲದಿಂದಲೂ ಬಿಜೆಪಿಯಲ್ಲಿದ್ದರು. ಜಗದೀಶ್ ಶೆಟ್ಟರ್ರನ್ನು ಶಾಸಕ, ಮಂತ್ರಿ, ಸಿಎಂ ಮಾಡಿದ್ದೆವು. ಜಗದೀಶ್ ಶೆಟ್ಟರ್ ಅವರಿಗೆ ನಾನು, ಅನಂತಕುಮಾರ್ ಕಾವಲಾಗಿದ್ದೆವು.
ನನ್ನ ಜತೆ ಹೆಜ್ಜೆ ಹಾಕುವ ಜವಾಬ್ದಾರಿ ಜಗದೀಶ್ ಶೆಟ್ಟರ್ಗೆ ಇತ್ತು. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಜಗತ್ತಿನಾದ್ಯಂತ ಗೌರವ ಇದೆ. ಇಂಥ ಸಂದರ್ಭದಲ್ಲಿ ಶೆಟ್ಟರ್ ಹೇಳಿಕೆ, ನಿರ್ಧಾರ ಅವರು ನಂಬಿದ ವಿಚಾರಕ್ಕೆ ತದ್ವಿರುದ್ಧ ಇದೆ. ಸ್ಥಾನಮಾನ ಸಿಗಲಿ ಸಿಗದಿರಲಿ. ದೇಶಕ್ಕಾಗಿ ಕೆಲಸ ಮಾಡಬೇಕಿರೋದು ನಾವು ನಡೆದುಕೊಂಡು ಬಂದ ದಾರಿ. ಪಕ್ಷದ ಸಹಕಾರ ಇಲ್ಲದಿದ್ದರೇ ವ್ಯಕ್ತಿ ಎತ್ತರಕ್ಕೆ ಬೆಳೆಯಲ್ಲ. ಪಕ್ಷದ ಸಹಕಾರ ಇಲ್ಲದಿದ್ರೆ ವ್ಯಕ್ತಿ ಸಿಎಂ ಆಗಲಾರ ಎಂದು ಬಿಎಸ್. ಯಡಿಯೂರಪ್ಪ ಅವರು ಹೇಳಿದರು.
ಬೆಂಗಳೂರು: ಭಾರತೀಯ ಜನತಾ ಪಕ್ಷ ಒಂದು ರಾಷ್ಟ್ರೀಯ ಪಕ್ಷವಾಗಿದೆ. ಹಳೇ ಬೇರು, ಹೊಸ ಚಿಗುರು ಸೇರಿ ಪಕ್ಷ ಬಲಪಡಿಸಬೇಕಾಗಿದೆ. ನನಗೆ, ಜಗದೀಶ್ ಶೆಟ್ಟರ್ ಅವರಿಗೆ, ಲಕ್ಷ್ಮಣ ಸವದಿ ಅವರಿಗೆ ಪಕ್ಷ ಹಲವು ಅವಕಾಶ ನೀಡಿದೆ. ಲಕ್ಷ್ಮಣ ಸವದಿಯವರನ್ನು ಬಿಜೆಪಿಗೆ ಕರೆತಂದು ಶಾಸಕ, ಸಚಿವ ಮಾಡಿದ್ದೇವು. 2018ರ ವಿಧಾನಸಭಾ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಅವರು ಸೋತಿದ್ದರು. ಸೋತಿದ್ದ ಲಕ್ಷ್ಮಣ ಸವದಿಯನ್ನು ಡಿಸಿಎಂ ಮಾಡಿದ್ದೆವು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬೆಳಗಾವಿ: ಪಕ್ಷ ಬಿಡುವ ಬಗ್ಗೆ ಚಿಂತನೆ ಮಾಡಿಲ್ಲ, ಈ ವಯಸ್ಸಿನಲ್ಲಿ ಪಕ್ಷ ಬಿಡಬೇಕು ಅಂತಾ ಯೋಚನೆ ಮಾಡಿಲ್ಲ ಎಂದು ಬಿಜೆಪಿ ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ್ ಕೋರೆ ಹೇಳಿದ್ದಾರೆ.
ಬೆಂಗಳೂರು: ಕೋಲಾರದಲ್ಲಿ ಇಂದು (ಏ.16) ಆಯೋಜಿಸಲಾಗಿರುವ ಕಾಂಗ್ರೇಸ್ ಜೈ ಭಾರತ್ ಯಾತ್ರೆ ಸಮಾವೇಶದಲ್ಲಿ ಭಾಗಿಯಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ಏರ್ಪೋರ್ಟ್ನಿಂದ ಕೋಲಾರಕ್ಕೆ ತೆರಳಿದ್ದಾರೆ. ರಾಹುಲ್ ಗಾಂಧಿಯವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಶಾಸಕ ಜಮೀರ್ ಅಹಮ್ಮದ್ ಅವರು ಸ್ವಾಗತಿಸಿದ್ದಾರೆ.
ಉತ್ತರ ಕನ್ನಡ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅಂತಿಮ ಹಂತದ ಮನವೊಲಿಕೆಗೆ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಮುಂದಾಗಿದ್ದಾರೆ.
ಮಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ನನ್ನನ್ನು ಸಂಪರ್ಕ ಮಾಡಿಲ್ಲ. ನಮಗೆ ಅಂತಹ ದೊಡ್ಡ ನಾಯಕರ ಅವಶ್ಯಕತೆ ಇಲ್ಲ. ಸಣ್ಣವರು ಯಾರಾದರೂ ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ದೊಡ್ಡ ನಾಯಕರ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದು ಧರ್ಮಸ್ಥಳದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಉತ್ತರ ಕನ್ನಡ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಶಿರಸಿಯಲ್ಲಿ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿಯವರನ್ನು ಭೇಟಿಯಾಗಿ ಶಾಸಕ ಸ್ಥಾನಕ್ಕೆ ಅಧಿಕೃತವಾಗಿ ರಾಜಿನಾಮೆ ನೀಡಿದ್ದಾರೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿಗೆ ರಾಜಿನಾಮೆ ನೀಡಲು ಘೋಷಿಸಿದ್ದು, ಕಾಂಗ್ರೆಸ್ ಸೇರುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಈಗಾಗಲೆ ರಾಜ್ಯ ಕಾಂಗ್ರೆಸ್ ನಾಯಕರು ಜಗದೀಶ್ ಶೆಟ್ಟರ್ ಅವರನ್ನು ಸಂಪರ್ಕಿಸಿದ್ದು, ಫೋನ್ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ಗೆ ಸೇರುವುದು ಪಕ್ಕಾ ಆದಲ್ಲಿ ರೆಡ್ ಕಾರ್ಪೆಟ್ ಹಾಕಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಸೇರುವ ಸಾಧ್ಯತೆ ಇದೆ.
ಬೆಂಗಳೂರು: ಪುಲಿಕೇಶಿನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗದ ಹಿನ್ನೆಲೆ ಅಸಮಾಧಾನಗೊಂಡಿರುವ ಅಖಂಡ ಶ್ರೀನಿವಾಸಮೂರ್ತಿ ತಮ್ಮ ಶಾಸಕ ರಾಜಿನಾಮೆ ನೀಡುವ ಸಾಧ್ಯತೆ ಇದೆ.
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ದೊಡ್ಡ ಹುದ್ದೆ ಕೊಡುತ್ತೇವೆ ಎಂದು ಹೇಳಿದ್ದೇವು. ದೆಹಲಿ ಮಟ್ಟದಲ್ಲಿ ಹುದ್ದೆ ನೀಡುವುದಾಗಿ ನಾಯಕರು ಹೇಳಿದ್ದರು. ಈ ಬಗ್ಗೆ ಜಗದೀಶ್ ಶೆಟ್ಟರ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭರವಸೆ ನೀಡಿದ್ದರು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು: ಟಿಕೆಟ್ ಸಿಗದ ಹಿನ್ನೆಲೆ ಬಿಜೆಪಿ ಪ್ರಾಥಮಿಕ ಸ್ಥಾನಕ್ಕೆ ರಾಜಿನಾಮೆ ನೀಡಲು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಿರ್ಧರಿಸಿದ್ದಾರೆ. ಈ ಹಿನ್ನೆಲೆ ಇಂದು ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳಸಿದ್ದಾರೆ. ಪ್ರಯಾಣದಲ್ಲಿ ಧಾರವಾಡ ಜಿಲ್ಲೆಯ ಕಾಂಗ್ರೆಸ್ ಮುಖಂಡ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಪ್ತ ಜೊತೆಯಾಗಿದ್ದು ಕುತೂಹಲ ಮೂಡಿಸಿದೆ.
ಹುಬ್ಬಳ್ಳಿ: ನಿಮ್ಮ ಮನೆ ಮೇಲೆ ಐಟಿ, ಇಡಿ ದಾಳಿ ಮಾಡುತ್ತಾರೆಂಬ ವಿಚಾರ‘ ಕಾನೂನು ಮೀರಿ ನಾನು ಏನೂ ಮಾಡಿಲ್ಲ.
ಭಯ ಇಲ್ಲದೆ ಇರುವುದಕ್ಕೆ ನಾನು ಬಿಜೆಪಿ ಬಿಟ್ಟು ಬಂದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿ: ಇಲ್ಲಿರುವ ಉಸ್ತುವಾರಿಗಳು ಹಾಗೂ ಇಲ್ಲಿನ ನಾಯಕರು ಬಿಜೆಪಿ ಅಧಿಕಾರಕ್ಕೆ ತರೋದು ಬೇಡ ಅನ್ನೋ ನಿರ್ಧಾರ ಮಾಡಿದ್ದಾರೆ ಅನ್ನಿಸುತ್ತೆ. ಮೋದಿ, ಅಮಿತ್ ಶಾ ಅವರಿಗೆ ಗ್ರೌಂಡ್ ರಿಪೋರ್ಟ್ ಗೊತ್ತಿಲ್ಲ ಎನ್ನುವ ಮೂಲಕ ಜಗದೀಶ್ ಶೆಟ್ಟರ್ ಪರೋಕ್ಷವಾಗಿ ರಾಜ್ಯ ಚುನಾಚಣೆ ಉಸ್ತುವಾರಿ ಧರ್ಮೆಂದ್ರ ಪ್ರಧಾನ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆ ಹಿರಿಯರಿಗೆ ಗೌರವ ಕೊಡದೆ ಇರುವುದು, ಕೀಳಾಗಿ ನೋಡುವುದು ಬಿಜೆಪಿಗೆ ಮುಳುವಾಗಿದೆ. ಇದನ್ನ ಮೋದಿ ಅವರ ಗಮನಕ್ಕೆ ತರುವ ಪ್ರಯತ್ನ ನಾನು ಮಾಡಲ್ಲ. ಅವರು ತಿಳಿದುಕೊಳ್ಳಬೇಕು ಎಂದಿದ್ದಾರೆ.
ಹುಬ್ಬಳ್ಳಿ: ಇಂದು(ಏ.16) ಸ್ಪೀಕರ್ ಕಾಗೇರಿ ಭೇಟಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಶಿರಸಿಗೆ ಹೊರಡುವೆ ಎಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್. ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸೇರಿ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ನೀಡುತ್ತೇನೆ.
ಸ್ಪೀಕರ್ಗೆ ರಾಜೀನಾಮೆ ನೀಡಿದ ಬಳಿಕ ಹುಬ್ಬಳ್ಳಿಗೆ ವಾಪಸಾಗುತ್ತೇನೆ. ಜೊತೆ್ಗೆ ಈ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದು ನಿಶ್ಚಿತ ಎಂದಿದ್ದಾರೆ. ಈವರೆಗೆ ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ಬೆಂಬಲಿಗರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಮಾಡುತ್ತೆನೆ ಎಂದರು
Published On - 8:57 am, Sun, 16 April 23