Amit Shah: ಧಾರವಾಡ, ಗದಗ, ಹಾವೇರಿಯಲ್ಲಿ ಅಮಿತ್ ಶಾ ಅಬ್ಬರದ ಪ್ರಚಾರ; ಮತಬೇಟೆಯೊಂದಿಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ

|

Updated on: Apr 28, 2023 | 10:18 PM

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಠಿಕಾಣಿ ಹೂಡಿರುವ ಬಿಜೆಪಿ ಚಾಣಕ್ಯ ಅಮಿತ್ ಶಾ ವಿವಿಧ ಜಿಲ್ಲೆಗಳಲ್ಲಿ ರೋಡ್ ಶೋ, ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಇಂದು ಹುಬ್ಬಳ್ಳಿ ಧಾರವಾಡ, ಹಾವೇರಿ, ಗದಗದಲ್ಲಿ ಮತಬೇಟೆಯಾಡಿದರು.

Amit Shah: ಧಾರವಾಡ, ಗದಗ, ಹಾವೇರಿಯಲ್ಲಿ ಅಮಿತ್ ಶಾ ಅಬ್ಬರದ ಪ್ರಚಾರ; ಮತಬೇಟೆಯೊಂದಿಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಗದಗದಲ್ಲಿ ಅಮಿತ್ ಶಾ ಭಾಷಣ
Follow us on

ಹುಬ್ಬಳ್ಳಿ/ಧಾರವಾಡ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಹಿನ್ನೆಲೆ ರಾಜ್ಯದಲ್ಲಿ ಠಿಕಾಣಿ ಹೂಡಿರುವ ಬಿಜೆಪಿ ಚಾಣಕ್ಯ ಅಮಿತ್ ಶಾ (Amit Shah) ವಿವಿಧ ಜಿಲ್ಲೆಗಳಲ್ಲಿ ರೋಡ್ ಶೋ, ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಇಂದು ಹುಬ್ಬಳ್ಳಿ ಧಾರವಾಡ, ಹಾವೇರಿ, ಗದಗದಲ್ಲಿ ಮತಬೇಟೆಯಾಡಿದರು. ಹೆಲಿಕಾಪ್ಟರ್ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ಬಿಜೆಪಿ ಚಾಣಕ್ಯನಿಗೆ ಭರ್ಜರಿ ಸ್ವಾಗತ ಕೋರಲಾಯಿತು. ನಂತರ ಭಾಷಣ ಆರಂಭಿಸಿದ ಶಾ, ಕಾಂಗ್ರೆಸ್​ನ ಗಾಂಧಿ ಕುಟುಂಬ ಹಾಗೂ ರಾಜ್ಯ ಕಾಂಗ್ರೆಸ್ (Congress) ನಾಯಕರ ವಿರುದ್ಧ ಹರಿಹಾಯ್ದರು.

ದೇಶದ ಪ್ರಧಾನಿ ಎಂಬುದನ್ನು ಲೆಕ್ಕಿಸದೆ ನರೇಂದ್ರ ಮೋದಿಯನ್ನು ವೈಯಕ್ತಿಕವಾಗಿ ನಿಂದಿಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ ಅಮಿತ್ ಶಾ, ಯಾವುದೇ ಕಾರಣಕ್ಕೂ ಕಾಂಗ್ರೆಸ್​ ಪಕ್ಷಕ್ಕೆ ವೋಟ್ ಹಾಕಬೇಡಿ ಎಂದು ಖಂಡತುಂಡವಾಗಿ ಹೇಳಿದರು. ಅಲ್ಲದೆ, ಮೋದಿಗೆ ಧಮ್ಕಿ ಹಾಕಿದಷ್ಟು ಅವರ ಪರ ಅಲೆ ಏಳುತ್ತದೆ ಎಂದು ಹೇಳುವ ಮೂಲಕ ಕೈ ನಾಯಕರಿಗೆ ಟಾಂಗ್ ಕೊಟ್ಟರು. ಅಷ್ಟಕ್ಕೂ ನಿಲ್ಲದ ಶಾ ಭಾಷಣ, ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರ ಮುಂದಿಟ್ಟು, ಹಿಂದಿನ ಕಾಂಗ್ರೆಸ್ ಸರ್ಕಾರಗಳ ವೈಫಲ್ಯಗಳನ್ನು ಬಿಚ್ಚಿಟ್ಟು ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸುವಂತೆ ಕೋರಿ ಭಾಷಣಕ್ಕೆ ಫುಲ್​ಸ್ಟಾಪ್ ಇಟ್ಟರು.

ಹುಬಳ್ಳಿಯಲ್ಲಿ ಭಾಷಣ ಮುಗಿಸಿ ಅದೇ ಹೆಲಿಕಾಪ್ಟರ್​ನಲ್ಲಿ ಧಾರವಾಡಕ್ಕೆ ಆಗಮಿಸಿದ ಬಿಜೆಪಿ ಮಾಸ್ ಲೀಡರ್​ಗಳಲ್ಲಿ ಒಬ್ಬರಾಗಿರುವ ಅಮಿತ್ ಶಾ, ನವಲಗುಂದ ಕ್ಷೇತ್ರದ ಅಣ್ಣಿಗೇರಿ ಪಟ್ಟಣದಲ್ಲಿ ಆಯೋಜಿಸಿದ ಸಮಾವೇಶದಲ್ಲಿ ಭಾಗಿಯಾದರು. ಇಲ್ಲಿಯೂ ಅಮಿತ್ ಶಾ ಅವರಿಗೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದರು. ನಂತರ ಪೋಡಿಯಂ ಬಳಿ ತೆರಳಿ ಭಾಷಣಕ್ಕೆ ನಿಂತ ಶಾ, ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದರಷ್ಟೇ ಅಭಿವೃದ್ಧಿ ಸಾಧ್ಯ ಎಂಬ ಸಂದೇಶವನ್ನು ಸಾರಿದರು.

ಬಸವಣ್ಣನವರು ಸಮಾಜ ಸುಧಾರಣೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಸಮಗ್ರ ಕರ್ನಾಟಕದ ಅಭಿವೃದ್ಧಿಗಾಗಿ ನೀವು ನಿರ್ಣಯ ಮಾಡಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಮತ್ತಷ್ಟು ಕುಂಠಿತವಾಗಲಿದೆ. ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದರಷ್ಟೇ ಅಭಿವೃದ್ಧಿ ಸಾಧ್ಯ ಎಂದರು. ಮುಂದುವರಿದು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರೈತರನ್ನು ನಡೆಸಿಕೊಂಡ ರೀತಿಯನ್ನು ಬಿಚ್ಚಿಟ್ಟರು. ಕಾಂಗ್ರೆಸ್​ ಪಕ್ಷದಿಂದ ರೈತರಿಗೆ ಯಾವಾಗಲೂ ಅನ್ಯಾಯವಾಗಿದೆ. ರೈತರ ಮೇಲೆ ಗೋಲಿಬಾರ್​ ಮಾಡಿಸಿದ್ದು ಇದೇ ಕಾಂಗ್ರೆಸ್ ಪಕ್ಷ ಎಂಬುದನ್ನು ರೈತರಿಗೆ ನೆನಪಿಸಿದರು.

ಇದನ್ನೂ ಓದಿ: ಲಿಂಗಾಯತ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಸಿದ್ದರಾಮಯ್ಯ, ಅಮಿತ್ ಶಾ ಹೇಳಿದ್ದೇನು ಗೊತ್ತಾ?

ಹೀಗೆ ಅಬ್ಬರ ಭಾಷಣ ಮಾಡುತ್ತಾ ಅಮಿತ್ ಶಾ ಅವರು ನೇರವಾಗಿ ಮುಸ್ಲಿಂ ಮೀಸಲಾತಿ ವಿಚಾರವನ್ನು ಎತ್ತಿದರು. ಭಾರತದ ಸಂವಿಧಾನದಲ್ಲಿ ಧರ್ಮಧಾರಿತ ಮೀಸಲಾತಿ ನೀಡುವಂತಿಲ್ಲ. ಹೀಗಿದ್ದರೂ ಕಾಂಗ್ರೆಸ್ ಮುಸ್ಲಿಮರಿಗೆ ಮೀಸಲಾತಿ ನೀಡಿತ್ತು. ಧರ್ಮಾಧರಿತವಾಗಿ ನೀಡಿದ್ದ ಮೀಸಲಾತಿಯನ್ನು ನಾವು ತೆಗೆದು ಎಸ್​ಸಿ, ಎಸ್​ಟಿ ಮೀಸಲಾತಿ ಹೆಚ್ಚಿಸುವುದರ ಜೊತೆಗೆ ಲಿಂಗಾಯತರಿಗೂ ಮೀಸಲಾತಿ ಕಲ್ಪಿಸಿದ್ದೇವೆ. ಕಾಂಗ್ರೆಸ್ ಪಕ್ಷ ಪಿಎಫ್​ಐ ಸಂಘಟನೆಯನ್ನ ಪೋಷಿಸುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಪಿಎಫ್​ಐ ಸಂಘಟನೆಯನ್ನು ಬ್ಯಾನ್ ಮಾಡುವ ಮೂಲಕ ಕರ್ನಾಟಕವನ್ನು ಕಾಪಾಡಿದೆ. ಹೀಗಾಗಿ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿಗೆ ಅಧಿಕಾರ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಮೋದಿಯನ್ನು ಅಮಿತ್ ಶಾ ಮಹಾನ್ ನಾಯಕ ಎಂದಿದ್ದೇಕೆ?

ಮೋದಿ ವಿರುದ್ಧ ಟೀಕಿಸುತ್ತಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅಮಿತ್ ಶಾ, ಭಾರತದ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಕೆಲಸ ಮಾಡುತ್ತಿದ್ದಾರೆ, ಯಾವುದೇ ರಾಷ್ಟ್ರಕ್ಕೆ ಹೋದರೂ ಮೋದಿ ಮೋದಿ ಎಂಬ ಜಯಘೋಷಗಳು ಮೊಳಗುತ್ತವೆ. ಪ್ರಧಾನಿ ಮೋದಿ ನಾಯಕತ್ವವನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಇಂತಹ ಮಹಾನ್ ನಾಯಕನ ಬಗ್ಗೆ ಕಾಂಗ್ರೆಸ್ ಟೀಕೆ ಮಾಡುತ್ತಿದೆ, ಇಂತಹ ಪಕ್ಷಕ್ಕೆ ವೋಟ್ ಹಾಕಬೇಕಾ ಎಂದು ಪ್ರಶ್ನಿಸಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿ ಭಾಷಣ ಕೊನೆಗೊಳಿಸಿದರು.

ಗದಗದಲ್ಲಿ ಹೇಗಿತ್ತು ಅಮಿತ್ ಶಾ ಮತಬೇಟೆ?

ಅಣ್ಣಿಗೇರಿ ಪಟ್ಟಣದಿಂದ ಹೆಲಿಕಾಪ್ಟರ್​ ಮೂಲಕ ಗದಗ ಜಿಲ್ಲೆಗೆ ಪ್ರಯಾಣ ಕೈಗೊಂಡ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಲಕ್ಷ್ಮೇಶ್ವರ ಪಟ್ಟಣದಲ್ಲಿ ಭರ್ಜರಿ ಸ್ವಾಗತದೊಂದಿಗೆ ವೇದಿಕೆ ಮೇಲೇರಿ ಕಾರ್ಯಕರ್ತರತ್ತ ಕೈ ಬೀಸಿ ಕಾಯ್ದಿರಿಸಿದ ಆಸನದಲ್ಲಿ ಹಾಸೀನರಾದರು. ಸನ್ಮಾನ ಸ್ವೀಕರಿಸಿದ ನಂತರ ಪೋಡಿಯಂ ಬಳಿ ನಿಂತು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನ ಕಾಂಗ್ರೆಸ್ ನಡೆಸಿಕೊಂಡ ರೀತಿಯನ್ನು ವಿವರಿಸಿದರು.

ಕಾಂಗ್ರೆಸ್ ಪಕ್ಷ ಡಾ.ಬಿ.ಆರ್​.ಅಂಬೇಡ್ಕರ್​​​​​ಗೆ ಅಪಮಾನ ಮಾಡಿದೆ. ಡಾ.ಬಿ.ಆರ್​.ಅಂಬೇಡ್ಕರ್​ಗೆ ನಿಜವಾದ ಗೌರವ ಸಿಕ್ಕಿರುವುದು ಮೋದಿ ಸರ್ಕಾರ ಬಂದ ಮೇಲೆ ಎಂದು ಹೇಳಿದ ಶಾ, ಡಾ.ಬಿ.ಆರ್​.ಅಂಬೇಡ್ಕರ್​​ ಹೆಸರಿನಲ್ಲಿ ಜಾರಿ ಮಾಡಿದ ಯೋಜನೆ ಬಗ್ಗೆ ಮತದಾರರಿಗೆ ನೆನಪಿಸಿದರು. ಇದೇ ವೇಳೆ ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಸೇರಿದಂತೆ ಜಾರಿ ಮಾಡಿದ ಪ್ರಮುಖ ಕಾನೂನುಗಳ ಬಗ್ಗೆ ಜನರಿಗೆ ತಿಳಿಸಿದರು.

ಕಾಂಗ್ರೆಸ್ ತುಷ್ಠಿಕರಣ ನೀತಿ‌ ಬಗ್ಗೆ ವಾಗ್ದಾಳಿ ನಡೆಸಿದ ಅಮಿತ್ ಶಾ, ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯ ಬಿಜೆಪಿಯಿಂದ ಮಾತ್ರ ಸಾದ್ಯ. ಮೀಸಲಾತಿಯನ್ನು ದಲಿತ, ಎಸ್ಟಿ, ಆದಿವಾಸಿ ನೀಡಲಾಗುತ್ತದೆ. ಬಿಜೆಪಿ‌ ಮುಸ್ಲಿಂ ಮೀಸಲಾತಿ ತೆಗೆದು ಹಾಕಿದೆ. ಆದರೆ ನಾವು ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ ಮೀಸಲಾತಿ‌ ಮತ್ತೆ ನೀಡುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಕಾಂಗ್ರೆಸ್​ನವರು ದಲಿತ, ಲಿಂಗಾಯತ, ಆದಿವಾಸಿ ಮೀಸಲಾತೀ ತೆಗೆದು ನೀಡುತ್ತಾರೆ. ಆ ಮೂಲಕ ಕಾಂಗ್ರೆಸ್ ತುಷ್ಠಿಕರಣ ನೀತಿ‌ ಮಾಡುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದೇ ವೇಳೆ ಡಾ. ಚಂದ್ರು ಲಮಾಣಿಗೆ ವೋಟ್ ಹಾಕಿ ವಿಧಾನಸಭೆಗೆ ಕಳುಹಿಸಿ ಅವರನ್ನ ದೊಡ್ಡ ವಕ್ತಿಯನ್ನಾಗಿ ನಾನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಹಾವೇರಿಯಲ್ಲಿ ಅಮಿತ್ ಶಾ ಪ್ರಚಾರ ಹೇಗಿತ್ತು?

ಗದಗದ ಲಕ್ಷ್ಮೇಶ್ವರ ಪಟ್ಟಣದಿಂದ ಹೆಲಿಕಾಪ್ಟರ್ ಮೂಲಕ ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಅಕ್ಕಿಆಲೂರಿಗೆ ಆಗಮಿಸಿ ಧೂಳೆಬ್ಬಿಸಿದ ಅಮಿತ್ ಶಾ ಅವರನ್ನು ಬಿಜೆಪಿ ಮುಖಂಡರು ಭರ್ಜರಿ ಸ್ವಾಗತದೊಂದಿಗೆ ವೇದಿಕೆಗೆ ಬರಮಾಡಿಕೊಂಡರು. ನಂತರ ಭಾಷಣ ಆರಂಭಿಸಿದ ಬಿಜೆಪಿ ಚಾಣಕ್ಯ, ಶಿಶುನಾಳ ಶೃರೀಫ್ , ಸರ್ವಜ್ಞನರನ್ನ ನೆನೆದು ಕನದಾಸರು ಹಾಗೂ ಬಸವಣ್ಣನವರ ಪಾದಳಿಗೆ ನನ್ನ ನಮಸ್ಕಾರಗಳನ್ನು ಸಲ್ಲಿಸುತ್ತೇನೆ. ಕಮಲ ಚಿಹ್ನೆಯ ಮುಂದಿನ ಬಟನ್ ಒತ್ತುವುದರ ಮೂಲಕ ಮೋದಿ ಸರ್ಕಾರಕ್ಕೆ ಶಕ್ತಿ ತುಂಬಿ ಎಂದು ಮನವಿ ಮಾಡಿದರು.

ಮಾತು ಮುಂದುವರಿಸಿದ ಶಾ, ಕರ್ನಾಟಕದಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಚುನಾವಣೆ ನಡೆಯುತ್ತಿದೆ. ಜೆಡಿಎಸ್​ ಇಲ್ಲವೇ ಇಲ್ಲ ಎಂದು ವ್ಯಂಗ್ಯವಾಡಿದರು. ಕರ್ನಾಟಕ ದೆಹಲಿ ಕಾಂಗ್ರೆಸ್​ಗೆ ಎಟಿಎಂ ಇದ್ದಂತೆ. ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಿ ದೆಹಲಿಯಲ್ಲಿ ದುಡ್ಡ ಮಾಡುವುದೇ ಕಾಂಗ್ರೆಸ್​ನ ಉದ್ದೇಶವಾಗಿದೆ ಎಂದು ಆರೋಪಿಸಿದ ಅಮಿತ್ ಶಾ, ಮೋದಿ ಸರ್ಕಾರ ಹಾಗೂ ಬೊಮ್ಮಾಯಿ ನೇತೃತ್ವದ ಸರ್ಕಾರದ ಸಾಧನೆಗಳನ್ನು ಬಿಚ್ಚಿಟ್ಟರು.

ನಂತರ ಹರಿಹದ ಗಾಂಧಿ ಮೈದಾನದಲ್ಲಿ ನಡೆದ ಚುನಾವಣಾ ಪ್ರಚಾರ ಬಹಿರಂಗ ಸಭೆಯಲ್ಲಿ ಪಾಲ್ಗೊಂಡ ಅಮಿತ್ ಶಾ ಅವರಿಗೆ ಶಾಲು, ಮೈಸೂರು ಪೇಟಾ, ರುದ್ರಾಕ್ಷಿ ಹಾರ ಹಾಕಿ ಹರಿಹರೇಶ್ವರನ ಪೋಟೋ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಭಾಷಣಕ್ಕೆ ನಿಂತ ಶಾ, ಹರಿಹರದ ಹರಿಹರೇಶ್ವರಗೆ ನಮಸ್ತರಿಸುವೆ, ಪಂಚಮಸಾಲಿ, ವಾಲ್ಮೀಕಿ ಗುರುಪೀಠ ಹಾಗೂ ಕನಕ ಗುರು‌ ಪೀಠಗಳಿಗೆ ನಮಸ್ಕರಿಸುವೆ ಎಂದು ಹೇಳಿ ಬಿಜೆಪಿ ಅಭ್ಯರ್ಥಿ ಬಿಪಿ ಹರೀಶ್ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: Amit Shah: ಚುನಾವಣಾ ಪೂರ್ವ ಸಮೀಕ್ಷೆ ಕಾಂಗ್ರೆಸ್ ಪರ ಇದ್ದರೂ ಗೆಲ್ಲುವುದು ಬಿಜೆಪಿಯೇ; ಅಮಿತ್ ಶಾ

ನೀವು ನೀಡಿವ ಮತ ರಾಜ್ಯದಲ್ಲಿ ಅಭಿವೃದ್ಧಿ ನಿರ್ಧರಿಸುತ್ತದೆ ಎಂದು ಹೇಳಿದ ಶಾ, ಬಿಜೆಪಿಗೆ ಮತ ನೀಡಿದರೆ ಮೋದಿ ಅವರ ಡಬಲ್ ಇಂಜನ್ ಸರ್ಕಾರದ ಕೈಗೆ ಹೋಗಿ ಅಭಿವೃದ್ಧಿಯಾಗುತ್ತದೆ. ರಾಹುಲ್ ಬಾಬಾ ಕೈಗೆ ಹೋದರೆ ಎನಾಗುತ್ತದೆ ಎಂದು ಪ್ರಶ್ನಿಸಿದರು. ಮುಂದುವರಿದ ಅವರು, ಪಿಎಫ್​ಐ ನಂತಹ ಸಂಘಟನೆ ಬೆಳೆಸಿದ್ದು ಕಾಂಗ್ರೆಸ್. ನರೇಂದ್ರ ಮೋದಿ ಪಿಎಫ್​ಐಗೆ ಪಾಠ ಕಲಿಸಿ ಸಂಘಟನೆಯ ಪ್ರಮುಖ ನಾಯಕರನ್ನು ಜೈಲಿಗಟ್ಟಿದ್ದಾರೆ ಎಂದರು.

ಹಿಂದಿನ ಕಾಂಗ್ರೆಸ್ ಸರ್ಕಾರಗಳು ಬಡ ಜನರಿಗೆ ಏನೂ ಮಾಡಿಲ್ಲ ಎಂದು ಹೇಳಿದ ಅಮಿತ್ ಶಾ, ಬಿಜೆಪಿ ಸರ್ಕಾರ ರಾಜ್ಯದಲ್ಲಿ 43 ಲಕ್ಷ ಕುಟುಂಬಗಳಿಗೆ ನೀರಿನ ಸಂಪರ್ಕ ಕಲ್ಪಸಿದೆ. 37 ಲಕ್ಷ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಉಚಿತವಾಗಿ ನೀಡಲಾಗಿದೆ ಎಂದರು. ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು ರಾಹುಲ್ ಬಾಬಾ ಹೇಳುತ್ತಿದ್ದರು. ಆದರೆ ರಾತ್ರಿ ವೇಳೆ ಹೋಗಿ ಕೊರೋನಾ ಲಸಿಕೆ ಹಾಕಿಸಿಕೊಂಡರು ಎಂದು ವ್ಯಂಗ್ಯವಾಡಿದರು.

ಪಂಚಮಸಾಲಿ ಮಠ ಬಳಿಕ ಕನಕ ಪೀಠಕ್ಕೆ ಅಮಿತ್ ಶಾ ಭೇಟಿ

ದಾವಣಗೆರೆಯಲ್ಲಿ ಪಂಚಮಸಾಲಿ ಮಠಕ್ಕೆ ಭೇಟಿ ನೀಡಿದ ಬಳಿಕ ಅಮಿತ್ ಶಾ ಅವರು ಕನಕ ಪೀಠಕ್ಕೂ ಆಗಮಿಸಿ ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಆಶೀರ್ವಾದ ಪಡೆದರು. ಈ ವೇಳೆ ಸಂಪ್ರದಾಯದಂತೆ ಅಮಿತ್ ಶಾ ಅವರಿಗೆ ಶ್ರೀಗಳು ಕಂಬಳಿ ಹೊದಿಸಿ ಭಂಡಾರ ಹಚ್ಚಿ ಸನ್ಮಾನ ಮಾಡಿದರು. ಕುರುಬರು, ಪಂಚಮಸಾಲಿ ಮತಗಳು ಹೆಚ್ಚಾಗಿರುವ ಹರಿಹರ ವಿಧಾನಸಭಾ ಕ್ಷೇತ್ರ ಎರಡು ಸಮುದಾಯದ ಸ್ವಾಮೀಜಿಗಳನ್ನ ಭೇಟಿ‌ಮಾಡಿ ಕೆಲ ಹೊತ್ತು‌ ಮಾತನಾಡಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:18 pm, Fri, 28 April 23