ಸ್ವಂತ ವಾಹನವಿಲ್ಲ, ಕೋಟಿಗಟ್ಟಲೇ ಸಾಲ: ಇಲ್ಲಿದೆ ‘ಕಾಮನ್‌ ಮ್ಯಾನ್‌’ ಸಿಎಂ ಬಸವರಾಜ ಬೊಮ್ಮಾಯಿ ಆಸ್ತಿ ವಿವರ

|

Updated on: Apr 15, 2023 | 7:05 PM

Basavaraj Bommai Assets Details: ಕಾಮಾನ್ ಮ್ಯಾನ್​ ಎಂದೇ ಖ್ಯಾತರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ ತಮ್ಮ ವೈಯಕ್ತಿ ಮತ್ತು ಕಟುಂಬದ ಆಸ್ತಿ ವಿವರ ನೀಡಿದ್ದಾರೆ. ಹಾಗಾದ್ರೆ, ಸಿಎಂ ಬೊಮ್ಮಾಯಿ ಚರಾಸ್ತಿ ಮತ್ತು ಸ್ಥಿರಾಸ್ತಿ ಎಷ್ಟಿದೆ. ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ

ಸ್ವಂತ ವಾಹನವಿಲ್ಲ, ಕೋಟಿಗಟ್ಟಲೇ ಸಾಲ: ಇಲ್ಲಿದೆ ಕಾಮನ್‌ ಮ್ಯಾನ್‌ ಸಿಎಂ ಬಸವರಾಜ ಬೊಮ್ಮಾಯಿ ಆಸ್ತಿ ವಿವರ
ಬಸವರಾಜ ಬೊಮ್ಮಾಯಿ
Follow us on

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರ ಇಂದು(ಏಪ್ರಿಲ್ 15) ಶಿಗ್ಗಾಂವಿ(shiggaon) ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ಇನ್ನು ಬೊಮ್ಮಾಯಿ ಅವರು ನಾಮಪತ್ರದಲ್ಲಿ ತಮ್ಮ ವೈಯಕ್ತಿ ಮತ್ತು ಕಟುಂಬದ ಆಸ್ತಿ ವಿವರ ನೀಡಿದ್ದು, 5.98 ಕೋಟಿ ರೂ. ಚರಾಸ್ತಿ ಹಾಗೂ 22.95 ಕೋಟಿ ರೂ. ಸ್ಥಿರಾಸ್ತಿ ಘೋಷಿಸಿಕೊಂಡಿದ್ದಾರೆ. ವಿಶೇಷವೆಂದರೆ ತಮ್ಮ ಹಾಗೂ ತಮ್ಮ ಕುಟುಂಬದವರ ಬಳಿ ಯಾವುದೇ ವಾಹನಗಳಿಲ್ಲ ಎಂದು ಬೊಮ್ಮಾಯಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಇನ್ನು ತಮ್ಮ ಪತ್ನಿ ಚೆನ್ನಮ್ಮ ಬಳಿ ಯಾವುದೇ ಸ್ಥಿರ ಆಸ್ತಿ ಇಲ್ಲ ಎಂದಿರುವ ಸಿಎಂ, 1.14 ಕೋಟಿ ರೂ. ಚರಾಸ್ತಿ ಇರುವುದಾಗಿ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ತಮ್ಮ ಹಿಂದೂ ಅವಿಭಜಿತ ಕುಟುಂಬದಲ್ಲಿ 1.57 ಕೋಟಿ ರೂ. ಚರಾಸ್ತಿ, 19.20 ಕೋಟಿ ರೂ. ಸ್ಥಿರಾಸ್ತಿ ಇದೆ. ಪುತ್ರಿ ಹೆಸರಲ್ಲಿ 1.28 ಕೋಟಿ ರೂ. ಚರಾಸ್ತಿ ಇರುವುದಾಗಿಯೂ ಬೊಮ್ಮಾಯಿ ನಾಮಪತ್ರದಲ್ಲಿ ಆಸ್ತಿ ವಿವರಣೆ ನೀಡಿದ್ದಾರೆ.

ಇದನ್ನೂ ಓದಿ: Richest CMs of India: ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಯಾರು ಗೊತ್ತಾ? ಬಸವರಾಜ ಬೊಮ್ಮಾಯಿಗೆ ಯಾವ ಸ್ಥಾನ

ತಮ್ಮ ಕೈಯಲ್ಲಿ 3 ಲಕ್ಷ ರೂ. ನಗದು, ಪತ್ನಿ ಕೈಯಲ್ಲಿ 50,000 ಹಾಗೂ ಪುತ್ರಿ ಅದಿತಿ ಬೊಮ್ಮಾಯಿ ಕೈಯಲ್ಲಿ 25,000 ನಗದು ಇರುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇನ್ನು ಬೊಮ್ಮಾಯಿ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ 40 ಲಕ್ಷ ರೂ.ಗೂ ಹೆಚ್ಚು ಠೇವಣಿ ಇದ್ದರೆ, ಪತ್ನಿ ಬಳಿ 27.6 ಲಕ್ಷ ರೂ. ಠೇವಣಿ ಇದೆ. ವಿವಿಧ ಕಂಪನಿಗಳಲ್ಲಿ ಅವರು 3.23 ಕೋಟಿ ರೂ. ಹೂಡಿಕೆ ಮಾಡಿದ್ದರೆ, ಪತ್ನಿ ಸುಮಾರು 7 ಲಕ್ಷ ರೂ. ಹೂಡಿಕೆ ಹೊಂದಿದ್ದಾರೆ. ಪುತ್ರಿ ಹೆಸರಲ್ಲೂ 23 ಲಕ್ಷ ರೂ.ಗೂ ಮಿಕ್ಕಿ ಹೂಡಿಕೆ ಇದೆ.

ಇನ್ನು ಪುತ್ರ ಭರತ್‌ ಬೊಮ್ಮಾಯಿ ಹಾಗೂ ಸುಗುಣ ಎನ್ನುವವರಿಗೆ ಬೊಮ್ಮಾಯಿ ಅವರು ಕ್ರಮವಾಗಿ 14.74 ಲಕ್ಷ ರೂ. ಹಾಗೂ 2 ಲಕ್ಷ ರೂ. ಸಾಲ ನೀಡಿದ್ದಾರೆ. ಅವಿಭಕ್ತ ಕುಟುಂಬದಿಂದ ಬಸವರಾಜ ಬೊಮ್ಮಾಯಿ 1.42 ಕೋಟಿ ರೂ. ಸಾಲವಾಗಿ ಪಡೆದಿದ್ದಾರೆ. ಇನ್ನು ಬೊಮ್ಮಾಯಿ ಅವರ ಬಳಿ 1.50 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳಿದ್ದರೆ, ಪತ್ನಿ ಬಳಿ 78.83 ಲಕ್ಷ ರೂ., ಪುತ್ರಿ ಬಳಿ 53.84 ಲಕ್ಷ ರೂ., ಕುಟುಂಬದ ಬಳಿ 13.78 ಲಕ್ಷ ರು. ಮೌಲ್ಯದ ಚಿನ್ನಾಭರಣಗಳಿವೆ.

ಬಸವರಾಜ ಬೊಮ್ಮಾಯಿ ಬಳಿ 1 ಕೃಷಿ ಜಮೀನಿದ್ದು, ಕುಟುಂಬದ ಬಳಿ ಒಂದು ಜಮೀನಿದೆ. ಬೆಂಗಳೂರಿನ ಯಲಹಂಕ ಹಾಗೂ ಹುಬ್ಬಳ್ಳಿಯಲ್ಲಿ ಬೊಮ್ಮಾಯಿ ಅವರಿಗೆ ತಲಾ ಒಂದು ಕೃಷಿಯೇತರ ಭೂಮಿಯೂ ಇದೆ. ಕುಟುಂಬದ ಹೆಸರಲ್ಲಿ ಹುಬ್ಬಳ್ಳಿಯ ನಾಲ್ಕು ಕೃಷಿಯೇತರ ಭೂಮಿ ಇದೆ. ದೊಡ್ಡಬಳ್ಳಾಪುರ,ಕಾರಾವರ ಮತ್ತು ಧಾರವಡದ ಇಂಡಸ್ಟ್ರಿಯಲ್‌ ಏರಿಯಾದಲ್ಲಿ ಬೊಮ್ಮಾಯಿ ಅವರು ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ. ಶಿಗ್ಗಾಂವಿಯಲ್ಲಿ ಅವರಿಗೆ ಮನೆಯಿದ್ದರೆ, ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿ ಫ್ಲ್ಯಾಟ್‌ ಇದೆ. ಕುಟುಂಬದ ಹೆಸರಲ್ಲಿ ಹುಬ್ಬಳ್ಳಿ ಹಾಗೂ ಬೆಂಗಳೂರಿನ ಆರ್‌ಟಿ ನಗರದಲ್ಲಿ ಮನೆಗಳಿವೆ.

ಬೊಮ್ಮಾಯಿಗೆ ಇದೆ ಹತ್ತಾರು ಕೈ ಸಾಲ

ಬೊಮ್ಮಾಯಿ ಅವರ ಬಳಿ 22.95 ಕೋಟಿ ರೂ. ಸ್ಥಿರಾಸ್ತಿ ಹಾಗೂ ಕುಟುಂಬದ ಬಳಿ 19.20 ಕೋಟಿ ರೂ. ಮೌಲ್ಯದ ಆಸ್ತಿ ಇದ್ದರೂ ಸಹ ಬಹಳಷ್ಟು ಸಾಲ ಸಹ ಇದೆ. ಐಸಿಐಸಿಐ ಬ್ಯಾಂಕ್‌ನಲ್ಲಿ 47.35 ಲಕ್ಷ ರೂ., ಎಸ್‌ಬಿಐನಲ್ಲಿ 37.47 ಲಕ್ಷ ರೂ. ಗೃಹ ಸಾಲವಿದೆ. 79 ಸಾವಿರದ ಇನ್ನೊಂದು ಗೃಹ ಸಾಲವೂ ಎಸ್‌ಬಿಐನಲ್ಲಿದೆ. ಇದಲ್ಲದೆ ಕುಟುಂಬದಿಂದ 1.42 ಕೋಟಿ ರೂ. ಸಾಲ ಪಡೆದುಕೊಂಡಿದ್ದು, 9 ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದಲೂ ಅಪಾರ ಪ್ರಮಾಣದ ಸಾಲ ಪಡೆದುಕೊಂಡಿದ್ದಾರೆ. ಹೀಗೆ ಒಟ್ಟು 5.79 ಕೋಟಿ ರೂ. ಸಾಲ ಹೊಂದಿದ್ದಾರೆ. ಇನ್ನು 2021-22ರಲ್ಲಿ 41.09 ಲಕ್ಷ ರೂ. ಆದಾಯ ಗಳಿಸಿರುವುದಾಗಿ ಬೊಮ್ಮಾಯಿ ಉಲ್ಲೇಖಿಸಿದ್ದ, ಪತ್ನಿ ಆದಾಯ 2.69 ಲಕ್ಷ ರೂ. ಎಂದು ಘೋಷಿಸಿಕೊಂಡಿದ್ದಾರೆ.

Published On - 6:49 pm, Sat, 15 April 23