ಬೆಳಗಾವಿ: ರಾಜಕೀಯ ಬದ್ಧವೈರಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಕ್ಷೇತ್ರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಫುಲ್ ಆಕ್ಟೀವ್ ಆಗಿದ್ದು, 2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಶತಾಯಗತಾಯವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸಲು ಈಗಿನಿಂದಲೇ ಭರ್ಜರಿ ತಯಾರಿ ನಡೆಸಿದ್ದಾರೆ.
ಹೇಗಾದರೂ ಸರಿ ಲಕ್ಷ್ಮಿ ಹೆಬ್ಬಾಳ್ಕರ್ನ್ನು ಸೋಲಿಸಲೇಬೇಕೆಂಬ ಹಠಕ್ಕೆ ಬಿದ್ದಿರುವ ರಮೇಶ್ ಜಾರಕಿಹೊಳಿ ಪದೇ ಪದೇ ಬೆಳಗಾವಿ ಗ್ರಾಮೀಣ (Belgavi) ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಇಲ್ಲಿ ಆಯೋಜಿಸಲಾಗುತ್ತಿರುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ಸಾಹುಕಾರ್ ಮತದಾರರನ್ನು ಓಲೈಸುವ ತಂತ್ರ ಆರಂಭಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ಅಪ್ತ ನಾಗೇಶ್ ಮನೋಳ್ಕರ್ ಆಯೋಜಿಸಿರುವ ಜನಸಂಪರ್ಕ ಕಚೇರಿಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸುವಂತೆ ಕರೆಕೊಟ್ಟರು.
ಈ ವೇಳೆ ಮಾತನಾಡಿದ ರಮೇಶ್ ಜಾರಕಿಹೊಳಿ, ಒಂದು ವರ್ಷದ ಬಳಿಕ ನಾನು ಮಾತನಾಡುತ್ತಿದ್ದೇನೆ. ನಾಗೇಶ್ ಮನೋಳ್ಕರ್, ಸಂಜಯ್ ಪಾಟೀಲ್, ಕಿರಣ್ ಜಾಧವ್ ಗ್ರಾಮೀಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು. ಮೂರ್ನಾಲ್ಕು ವರ್ಷದಿಂದ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಮಲಗಿತ್ತು. ನಾಗೇಶ್ ಮನೋಳ್ಕರ್ ವರಿಷ್ಠರಿಗೆ ಭೇಟಿ ಮಾಡಿಸಿದ್ದೇನೆ. ನಮ್ಮ ಕಡೆಯಿಂದ ನಾಗೇಶ್ ಮನೋಳ್ಕರ್ ನಿಲ್ಲಿಸುತ್ತೇವೆ ಅಂತಾ ಹೇಳಿದ್ದೇನೆ. ಅವರು ಬೇಡಾ ಅಂದ್ರೇ ನೀವು ಯಾರಿಗೆ ಹೇಳಿದ್ರೂ ನಾವು ಸಪೋರ್ಟ್ ಮಾಡುತ್ತೇವೆ ಎಂದರು.
ಕಳೆದ ಬಾರಿ ಶಾಸಕರನ್ನ ಮಾಡಲು ಎಷ್ಟು ಪ್ರಯತ್ನ ಮಾಡಿದ್ದೇವೆ. ಆರಿಸಿ ಬಂದ ಒಂದು ತಾಸಿನಲ್ಲಿ ನಮ್ಮೆಲ್ಲರ ತಲೆ ಮೇಲೆ ಕುಳಿತ್ರು. ಏನೇನೋ ಆಕಾಂಕ್ಷಿ ಇಟ್ಟುಕೊಂಡಿದ್ದಾರೆ ಆಗಲಿ ಎಂದು ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕಿಡಿಕಾರಿದ ಜಾರಕಿಹೊಳಿ, 2023ರಲ್ಲಿ 25ಸಾವಿರ ಮತದಿಂದ ಗೆಲ್ಲಿಸುತ್ತೇವೆ. ಪ್ರತಿಯೊಂದು ಬೂತ್ ನಲ್ಲಿ 25 ಜನರನ್ನ ಸಿದ್ದಪಡಿಸುತ್ತೇವೆ. ಮುಂದಿನ ಜನವರಿ ತಿಂಗಳಿಂದ ಪ್ರತಿಯೊಂದು ಜಿಲ್ಲಾ ಪಂಚಾಯತಿವಾರು ಸಭೆ ಮಾಡುತ್ತೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸಲು ರಣತಂತ್ರಗಳನ್ನ ಬಿಚ್ಚಿಟ್ಟರು.
ವರಿಷ್ಠರು ಟಿಕೆಟ್ ಯಾರಿಗೆ ಕೊಟ್ಟರೂ ನಮ್ಮ ಶಕ್ತಿ ಹಾಕಿ ಗೆಲ್ಲಿಸಲು ಪ್ರಯತ್ನ ಮಾಡುತ್ತೇವೆ. ಚುನಾವಣಾ ಫಲಿತಾಂಶ ಆದ ಮೇಲೆ ಮಾತನಾಡಬೇಕು ಅಂತಾ ಶಪಥ ಮಾಡಿದ್ದೇನೆ. ಗ್ರಾಮೀಣ ಕ್ಷೇತ್ರದಲ್ಲಿ ಮಾತನಾಡುವ ಅನಿವಾರ್ಯತೆ ಇದೆ ಅಂತಾ ಮಾತನಾಡುತ್ತಿದ್ದೇನೆ. ಕೆಲಸ ಮಾಡಿ ಗೆಲ್ಲಿಸಿ ಮಾಧ್ಯಮದ ಮುಂದೆ ಮಾತನಾಡಲು ಶಪಥ ಮಾಡಿದರು.
ಮೂರು ಜಿಲ್ಲಾ ಪಂಚಾಯಿತಿಯಲ್ಲಿ 25ಸಾವಿರ ಲೀಡ್ ದಿಂದ ಗೆಲ್ಲಿಸುತ್ತೇವೆ ಅಂತಾ ಪ್ರಮಾಣ ಮಾಡಬೇಕು. ಕಾಂಗ್ರೆಸ್ ನಲ್ಲಿ ಲೀಡರ್ ದಂಡು ಜಾಸ್ತಿ, ಬಿಜೆಪಿಯಲ್ಲಿ ಕಾರ್ಯಕರ್ತರ ದಂಡು ಜಾಸ್ತಿ. ಲೀಡರ್ ಏನೇ ಮಾಡಿಕೊಂಡ್ರೂ ನಮ್ಮಲ್ಲಿ ಕಾರ್ಯಕರ್ತರಿಗೆ ಎಲ್ಲ ಶಕ್ತಿ ತುಂಬುತ್ತೇವೆ. ದೇವರ ಮೇಲೆ ಪ್ರಮಾಣ ಮಾಡಿ ಬಿಜೆಪಿ ಗ್ರಾಮೀಣ ಕ್ಷೇತ್ರದಲ್ಲಿ ಗೆಲ್ಲಿಸಬೇಕು ಅಂತಾ ದೃಡಸಂಕಲ್ಪ ಮಾಡೋಣ. ನಾಲ್ಕು ಗೋಡೆ ಮಧ್ಯೆ ಹೇಳುವುದು ಬಹಳಷ್ಟಿದೆ ನಿಮ್ಮೆಲ್ಲರ ಜತೆ ಮಾತಾಡ್ತೇನಿ ಎಂದು ಹೇಳುವ ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸಲು ಕರೆಕೊಟ್ಟು ಮತ್ತೆ ಸಂಕಲ್ಪ ಮಾಡಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹಳೇ ದ್ವೇಷ ತೀರಿಸಿಕೊಳ್ಳಲು ಹೊಸ ಲೆಕ್ಕಾಚಾರವನ್ನು ರಮೇಶ್ ಜಾರಕಿಹೊಳಿ ಮಾಡುತ್ತಿದ್ದಾರೆ. ಮರಾಠಾ ಅಸ್ತ್ರ ಬಳಸಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸಲು ರಮೇಶ್ ಜಾರಕಿಹೊಳಿ ಪ್ಲ್ಯಾನ್ ಹಾಕಿದ್ದು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬರುವ ಸಾಂಬ್ರಾ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮುಖಂಡರ ಸಭೆ ನಡೆಸಿದ್ದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮರಾಠಾ ಸಮುದಾಯದ ನಾಯಕರ ಜೊತೆ ನಿರಂತರ ಸಂಪರ್ಕ ಇಟ್ಟುಕೊಳ್ಳುತ್ತಿದ್ದು ಶತಾಯಗತಾಯ ಈ ಬಾರಿ ಚುನಾವಣೆಯಲ್ಲಿ ಲಕ್ಷೀ ಹೆಬ್ಬಾಳ್ಕರ್ ಸೋಲಿಸಲು ರಮೇಶ್ ಜಾರಕಿಹೊಳಿ ತೀವ್ರ ಕಸರತ್ತು ನಡೆಸಿದ್ದಾರೆ. ಅದಕ್ಕಾಗಿ ಮರಾಠಾ ಸಮುದಾಯ ಮುಖಂಡನನ್ನು ಬಿಜೆಪಿ ನಾಯಕರಿಗೆ ಪರಿಚಯ ಮಾಡುತ್ತಿದ್ದು ಹಿಂಡಲಗಾ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ್ ಮನ್ನೋಳ್ಕರ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಭೇಟಿ ಮಾಡಿಸಿದ್ದರು. ಇದರೊಂದಿಗೆ ಜಿಲ್ಲಾ ರಾಜಕಾರಣದಲ್ಲಿ ರಮೇಶ್ ಜಾರಕಿಹೊಳಿ ನಡೆ ಕುತೂಹಲ ಮೂಡಿಸಿದ್ದರು.
ಒಟ್ಟಿನಲ್ಲಿ ಹೆಬ್ಬಾಳ್ಕರ್ ಅಖಾಡದಲ್ಲಿ ಸಾಹುಕಾರ್ ಫುಲ್ ಆ್ಯಕ್ಟೀವ್ ಆಗಿದ್ದು, ಹಳೇ ದ್ವೇಷಕ್ಕೆ ಸೇಡು ತೀರಿಸಿಕೊಳ್ಳಲು ಪಣ ತೊಟ್ಟಿದ್ದಾರೆ.
ಇನ್ನಷ್ಟು ರಾಜ್ಯ ರಾಜಕಾರಣದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:00 pm, Sat, 24 December 22