ಆತುರದ ನಿರ್ಧಾರದ ನಮ್ಮ ಮೂಗನ್ನು ನಾವೇ ಕುಯ್ದುಕೊಂಡಂತೆ: ಗೋವಿಂದ ಕಾರಜೋಳ

|

Updated on: Apr 16, 2023 | 4:50 PM

ಲಕ್ಷ್ಮಣ ಸವದಿ ಬೆನ್ನಲ್ಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆಯಲು ನಿರ್ಧರಿಸಿದ್ದು, ಯಾವುದೇ ನಾಯಕರು ಆತುತರದ ನಿರ್ಧಾರ ಕೈಗೊಳ್ಳದಂತೆ ಸಚಿವ ಗೋವಿಂದ ಎಂ ಕಾರಜೋಳ ಮನವಿ ಮಾಡಿದ್ದಾರೆ.

ಆತುರದ ನಿರ್ಧಾರದ ನಮ್ಮ ಮೂಗನ್ನು ನಾವೇ ಕುಯ್ದುಕೊಂಡಂತೆ: ಗೋವಿಂದ ಕಾರಜೋಳ
ಜಗದೀಶ್ ಶೆಟ್ಟರ್ ಮತ್ತು ಗೋವಿಂದ ಎಂ ಕಾರಜೋಳ
Follow us on

ರಾಯಚೂರು: ಬಿಜೆಪಿ ಟಿಕೆಟ್ ವಂಚಿತರ ಬಂಡಾಯ ಶಮನಕ್ಕೆ ಹೈಕಮಾಂಡ್ ಮತ್ತು ರಾಜ್ಯ ನಾಯಕರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ (Laxman Savadi) ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇವರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಬಿಜೆಪಿ ತೊರೆಯಲು ಮುಂದಾಗಿದ್ದು, ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಗೋವಿಂದ ಎಂ ಕಾರಜೋಳ (Govind M Karjol), ಆತುರದ ನಿರ್ಧಾರದಿಂದ ನಮ್ಮ ಮೂಗನ್ನು ನಾವೇ ಕುಯ್ದುಕೊಂಡಂತೆ. ಹೀಗಾಗಿ ಯಾವುದೇ ನಾಯಕರು ಅವಸರದ ನಿರ್ಧಾರ ಕೈಗೊಳ್ಳಬಾರದು ಎಂದು ಮನವಿ ಮಾಡಿದರು.

ರಾಯಚೂರು ನಗರದಲ್ಲಿ ಮಾತನಾಡಿದ ಅವರು, ಯಾರೂ ಆತುರದ ನಿರ್ಧಾರ ಕೈಗೊಳ್ಳಬೇಡಿ ಕೈ ಮುಗಿದು ಕೇಳುತ್ತೇನೆ. ನೆಲೆ ಇಲ್ಲದ ಕಾಂಗ್ರೆಸ್​ ಅಭ್ಯರ್ಥಿಗಳಿಗಾಗಿ ಹುಡುಕುತ್ತಿದೆ. ಹೀಗಾಗಿ ಬಿಜೆಪಿ ಟಿಕೆಟ್ ವಂಚಿತರ ಕೈ ಕಾಲು ಹಿಡಿದು ಅಭ್ಯರ್ಥಿಗಳನ್ನು ಕರೆದೊಯ್ಯುತ್ತಿದ್ದಾರೆ. ಅವಸರದ ನಿರ್ಧಾರ ಯಾವ ನಾಯಕರು ಮಾಡುವುದು ಬೇಡ. ಹೊಸಬರನ್ನ ತಯಾರು ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಬಿಜೆಪಿಯಿಂದ ಹೊರ ಬಂದು ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಜಗದೀಶ್ ಶೆಟ್ಟರ್ ಗೆಲ್ಲುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ, ಪ್ರದಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ನಾಯಕತ್ವದಲ್ಲಿ ಬಿಜೆಪಿ ಮುನ್ನಡೆಯುತ್ತಿದೆ. ನಮ್ಮಲ್ಲಿ ಕಾರ್ಯಕರ್ತರ ಸಮಸ್ಯೆಯಿಲ್ಲ. ಜಗದೀಶ್ ಶೆಟ್ಟರ್ ನಿಲ್ಲುವ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗುವ ಪರಿಸ್ಥಿತಿ ಉದ್ಭವವಾಗಲ್ಲ ಎಂದರು.

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಕೇಂದ್ರದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕು: ಬಿಜೆಪಿ ಮುಖಂಡರಿಗೆ ಪ್ರಲ್ಹಾದ್ ಜೋಶಿ ಮನವಿ

ಟಿಕೆಟ್ ನೀಡದ ಹಿನ್ನೆಲೆ ಪಕ್ಷದ ವಿರುದ್ಧ ಅಸಮಾಧಾನಗೊಂಡ ಜಗದೀಶ್ ಶೆಟ್ಟರ್, ಈಗಾಗಲೇ ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಈಗಾಗಲೇ ಶಿರಸಿಯಲ್ಲಿ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಕಚೇರಿಗೆ ಭೇಟಿ ನೀಡಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೂ ಮುನ್ನ ಸ್ಪೀಕರ್​ ಕಚೇರಿಯಲ್ಲಿ ಜಗದೀಶ್ ಶೆಟ್ಟರ್​ ಮನವೊಲಿಕೆಗೆ ಅಂತಿಮ ಸಂಧಾನ ಸರ್ಕಸ್ ನಡೆದಿದೆ.

ರಾಜೀನಾಮೆ ಪತ್ರ ಹಿಡಿದು ಬಂದ ಶೆಟ್ಟರ್ ಅವರ ಮನವೋಲಿಕೆಗೆ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಇನ್ನಿಲ್ಲದ ಪ್ರಯತ್ನ ಮಾಡಿದರು. ಅಮಿತ್ ಶಾಗೆ ದೂರವಾಣಿ ಕರೆ ಮಾಡಿ ಶೆಟ್ಟರ್​ ಜೊತೆ ಮಾತನಾಡಿಸಿದರು. ಆದರೂ ಬಗ್ಗದ ಶೆಟ್ಟರ್, ರಾಜೀನಾಮೆ ಪತ್ರವನ್ನು ಸ್ಪೀಕರ್​ಗೆ ನೀಡಿ ಹುಬ್ಬಳ್ಳಿಗೆ ವಾಪಸ್ ಆದರು. ಬಳಿಕ ಮಾತನಾಡಿದ ಶೆಟ್ಟರ್, ಸ್ಪೀಕರ್​​ ಕಾಗೇರಿ ಮತ್ತು ನಮ್ಮದು ಹಳೇ ಸ್ನೇಹ. ಹಾಗಾಗಿ ಅವರು ನನ್ನ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಅಮಿತ್ ಶಾ ನನ್ನ ಜೊತೆ ಮಾತಾಡಿಲ್ಲ. ಸ್ಪೀಕರ್​​​​ ಭೇಟಿ ವೇಳೆ ಅಮಿತ್ ಶಾರಿಂದ ದೂರವಾಣಿ ಕರೆ ಬಂದಿಲ್ಲ ಎಂದು ಹೇಳಿದರು.

ಶೆಟ್ಟರ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಆಪ್ತರೂ ಪ್ರಯತ್ನ ನಡೆಸುತ್ತಿದ್ದಾರೆ. ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರು ಶೆಟ್ಟರ್ ಪತ್ನಿ ಜೊತೆ ಸುದೀರ್ಘ ಚರ್ಚೆ ನಡೆಸಿ ಮನವೋಲಿಸುವ ಯತ್ನ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶೆಟ್ಟರ್, ಮುನೇನಕೊಪ್ಪ ಅವರಿಗೆ ಇನ್ನು ಹೋಪ್ಸ್ ಇರಬಹುದು ಎಂದರು. ಇನ್ನೊಂದೆಡೆ, ಬಿಜೆಪಿ ವಿರುದ್ಧ ಅಸಮಾಧಾನಗೊಂಡಿರುವ ಶೆಟ್ಟರ್​ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಕೈ ನಾಯಕರು ಸಂಪರ್ಕ ಮಾಡುತ್ತಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿದ ಅವರು, ಕಾಂಗ್ರೆಸ್ ನಾಯಕರು ಬಂದಿರುವುದು ಸಹಜ ಎಂದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:50 pm, Sun, 16 April 23