AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ-ಧಾರವಾಡ ಕೇಂದ್ರದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕು: ಬಿಜೆಪಿ ಮುಖಂಡರಿಗೆ ಪ್ರಲ್ಹಾದ್ ಜೋಶಿ ಮನವಿ

ಜಗದೀಶ್ ಶೆಟ್ಟರ್ ಇಂದು ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತ ಬಿಜೆಪಿ ನಾಯಕರು ಶೆಟ್ಟರ್ ವಾಪಸ್ ಆಗುವ ಬಗ್ಗೆ ಸಂಜೆವರೆಗೆ ಕಾದು ನೋಡುವ ನಿರ್ಧಾರ ತಾಳಿದ್ದಾರೆ.

ಹುಬ್ಬಳ್ಳಿ-ಧಾರವಾಡ ಕೇಂದ್ರದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕು: ಬಿಜೆಪಿ ಮುಖಂಡರಿಗೆ ಪ್ರಲ್ಹಾದ್ ಜೋಶಿ ಮನವಿ
ಜಗದೀಶ್ ಶೆಟ್ಟರ್ ಮತ್ತು ಪ್ರಲ್ಹಾದ್ ಜೋಶಿ
Rakesh Nayak Manchi
|

Updated on:Apr 16, 2023 | 3:55 PM

Share

ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಇಂದು ಶಾಸಕ ಸ್ಥಾನಕ್ಕೆ ಹಾಗೂ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಇನ್ನೊಂದೆಡೆ ಶೆಟ್ಟರ್ ಮರಳಿ ಪಕ್ಷ ಸೇರ್ಪಡೆಗಾಗಿ ಬಿಜೆಪಿ ನಾಯಕರು ಸಂಜೆವರೆಗೆ ಕಾದು ನೋಡುವ ನಿರ್ಧಾರ ತಾಳಿದ್ದಾರೆ. ಒಂದೊಮ್ಮೆ ಶೆಟ್ಟರ್ ವಾಪಸ್ ಆಗದಿದ್ದರೆ ಹೈಕಮಾಂಡ್ ಘೋಷಿಸುವ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಹುಬ್ಬಳ್ಳಿ-ಧಾರವಾಡ ಪಾಲಿಕೆ ಪದಾಧಿಕಾರಿಗಳಿಗೆ ಪ್ರಲ್ಹಾದ್ ಜೋಶಿ (Pralhad Joshi) ಮನವಿ ಮಾಡಿದ್ದಾರೆ. ಖಾಸಗಿ ಹೋಟೆಲ್​ನಲ್ಲಿ ನಡೆಯುತ್ತಿರುವ ಬಿಜೆಪಿ‌ ಸಭೆಯಲ್ಲಿ ವ್ಯಕ್ತಿ ನಿಷ್ಟೆಗಿಂತ ಪಕ್ಷ ನಿಷ್ಟೆ ದೊಡ್ಡದು ಎಂದು ಪದಾಧಿಕಾರಿಗಳಿಗೆ ಜೋಶಿ ಮನವರಿಕೆ ಮಾಡಿದ್ದಾರೆ. ಜಗದೀಶ್ ಶೆಟ್ಟರ್ ವಾಪಸ್ ಆಗುವ ಬಗ್ಗೆ ಸಂಜೆವರೆಗೂ ಕಾದು ನೋಡುವ. ಅವರು ಬಾರದೇ ಇದ್ದಲ್ಲಿ ನೀವೆಲ್ಲರೂ ಪಕ್ಷಕ್ಕೆ ನಿಷ್ಟೆ ತೋರಬೇಕು. ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಘೊಷಿಸುವ ಅಭ್ಯರ್ಥಿ ಪರ ಕೆಲಸ ಮಾಡಿ ಗೆಲ್ಲಿಸುವಂತೆ ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಈಗಾಗಲೇ ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಅದರಂತೆ ಇಂದು ಶಿರಸಿಯಲ್ಲಿ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಕಚೇರಿಗೆ ಭೇಟಿ ನೀಡಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜೀನಾಮೆಗೂ ಮುನ್ನ ಸ್ಪೀಕರ್​ ಕಚೇರಿಯಲ್ಲಿ ಜಗದೀಶ್ ಶೆಟ್ಟರ್​ ಮನವೊಲಿಕೆಗೆ ಅಂತಿಮ ಸಂಧಾನದ ಕಸರತ್ತು ನಡೆಯಿತು. ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಮಿತ್ ಶಾಗೆ ದೂರವಾಣಿ ಕರೆ ಮಾಡಿ ಶೆಟ್ಟರ್​ ಜೊತೆ ಮಾತನಾಡಿಸಿದರು. ಈ ಮೂಲಕ ಪಕ್ಷದಲ್ಲೇ ಉಳಿಸಿಕೊಳ್ಳಲು ಖುದ್ದು ಕಾಗೇರಿ, ಅಮಿತ್ ಶಾ ಮೂಲಕ​ ಶೆಟ್ಟರ್​ ಮನವೊಲಿಕೆಗೆ ಶತಪ್ರಯತ್ನ ಮಾಡಿದರು. ಆದರೂ ಜಗ್ಗದ ಶೆಟ್ಟರ್, ರಾಜೀನಾಮೆ ಪತ್ರವನ್ನು ಸ್ಪೀಕರ್​ಗೆ ನೀಡಿ ಕಚೇರಿಯಿಂದ ಹೊರ ನಡೆದರು.

ಇದನ್ನೂ ಓದಿ: ಜಗದೀಶ್ ಶೆಟ್ಟರ್ ಪತ್ನಿ ಜತೆ ಮುನೇನಕೊಪ್ಪ ಮಹತ್ವದ ಚರ್ಚೆ, ನಿರ್ಧಾರ ಬದಲಾಗಬಹುದು: ಅಚ್ಚರಿಕೆ ಹೇಳಿಕೆ ಕೊಟ್ಟ ಸಚಿವ

ಅಧಿಕಾರದ ಆಸೆಗಾಗಿ ನಾನು ರಾಜಕಾರಣಕ್ಕೆ ಬಂದವನಲ್ಲ. ಜನರ ಅಪೇಕ್ಷೆ ಮೇರೆಗೆ ಶಾಸಕನಾಗಿ ಕೆಲಸ ಮಾಡುವ ಆಸೆ. ನಾನು ರೌಡಿಶೀಟರ್​ ಅಲ್ಲ, ನನ್ನದು ಯಾವುದೇ ಸಿಡಿ ಇಲ್ಲ. ಬಿಎಸ್ ಯಡಿಯೂರಪ್ಪ, ಅನಂತಕುಮಾರ್ ನೇತೃತ್ವದ ವೇಳೆ ಪಕ್ಷ ಸಂಘಟನೆ ಮಾಡಿದ್ದೇನೆ. ಅಧಿಕಾರದಲ್ಲಿ ಇಲ್ಲದ ಸಂದರ್ಭದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಪಕ್ಷ ಬಲಿಷ್ಠವಾಗಿದೆ. ಆದರೆ ಈಗ ನಮ್ಮ ಪಕ್ಷದಿಂದ ನಮ್ಮನ್ನೇ ಹೊರಹಾಕುತ್ತಿದ್ದಾರೆ ಎಂದು ಶೆಟ್ಟರ್ ಅಸಮಾಧಾನ ಹೊರಹಾಕಿದ್ದಾರೆ.

ಶೆಟ್ಟರ್ ಸ್ವಾಗತಿಸಿದ ಕಾಂಗ್ರೆಸ್ ಮುಖಂಡರು

ರಾಜೀನಾಮೆ ಸಲ್ಲಿಸಿ ಶಿರಸಿಯಿಂದ ಹುಬ್ಬಳ್ಳಿಗೆ ಆಗಮಿಸಿದ ಶೆಟ್ಟರ್ ಅವರನ್ನು ಕಾಂಗ್ರೆಸ್ ಮುಖಂಡರು ರುದ್ರಾಕ್ಷಿ ಮಾಲೆ ಹಾಕಿ ಸ್ವಾಗತಿಸಿದರು. ಇತ್ತ ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರು ಶೆಟ್ಟರ್ ನಿವಾಸಕ್ಕೆ ಆಗಮಿಸಿ ಕಳೆದ ಒಂದು ಗಂಟೆಯಿಂದ ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್ ಅವರ ಮನವೋಲಿಸುವ ಪ್ರಯತ್ನ ಮಾಡಿದ್ದಾರೆ. ಶಂಕರಪಾಟೀಲ ಮುನೇನಕೊಪ್ಪ ಅವರ ಜಗದೀಶ್ ಶೆಟ್ಟರ್ ಅವರ ಆಪ್ತರಾಗಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರನ್ನು ಬಿಡಲ್ಲ ಎನ್ನುವುದು ನನ್ನ ವಯಕ್ತಿಕ ನಂಬಿಕೆ ಎಂದಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:55 pm, Sun, 16 April 23