ನೀತಿ ಸಂಹಿತೆ ಎಫೆಕ್ಟ್: ಸಿವಿಜಿಲ್ ಆ್ಯಪ್ ಮೂಲಕ ಚುನಾವಣಾ ಆಯೋಗಕ್ಕೆ 3,147 ದೂರು
ಸಿವಿಜಿಲ್ ಆ್ಯಪ್ ಮೂಲಕ ಇಲ್ಲಿಯವರೆಗೆ 3,147 ದೂರು ದಾಖಲಾಗಿದ್ದು, ಅದರಲ್ಲಿ 2,643 ದೂರುಗಳು ಸತ್ಯವಾಗಿವೆ ಎಂದು ಚುನಾವಣಾ ಆಯೋಗ ಹೇಳಿದೆ.
ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ನಾಯಕರ ಬಂಡಾಯ ಒಂದೆಡೆಯಾದರೇ, ಮತ್ತೊಂದೆಡೆ ನಾಯಕರ ನಡೆ, ನುಡಿ ಮೇಲೆ ಗಮನವಿರಿಸಲು ಚುನಾವಣಾ ಆಯೋಗ (Election Commission) ಡಿಜಿಟಲ್ ಕಣ್ಣಿಟ್ಟಿದೆ. ಹೌದು ಭಾರತದ ಚುನಾವಣಾ ಆಯೋಗ ಸಿವಿಜಿಲ್ (cVIGIL) ಆ್ಯಪ್ವೊಂದನ್ನು ಪರಿಚಯಿಸಿದ್ದು, ಇದರ ಮೂಲಕ ಸಾರ್ವಜನಿಕರು ಆಯೋಗಕ್ಕೆ ದೂರು ನೀಡಬಹುದಾಗಿದೆ. ಹೀಗೆ ಆ್ಯಪ್ ಮೂಲಕ ಇಲ್ಲಿಯವರೆಗೆ 3,147 ದೂರು ದಾಖಲಾಗಿದ್ದು, ಅದರಲ್ಲಿ 2,643 ದೂರುಗಳು ಸತ್ಯವಾಗಿವೆ ಎಂದು ಚುನಾವಣಾ ಆಯೋಗ ಹೇಳಿದೆ.
ಸಿವಿಜಿಲ್ ಮೂಲಕ ಹೆಚ್ಚಿನ ದೂರುಗಳು ಅನುಮತಿಯಿಲ್ಲದೆ ಬ್ಯಾನರ್ ಅಥವಾ ಪೋಸ್ಟರ್‌ಗಳನ್ನು ಹಾಕುವ ಬಗ್ಗೆ ಮತ್ತು ಉಡುಗೊರೆ, ಹಣ, ಮದ್ಯ ಮತ್ತು ಆಸ್ತಿ ಹಾನಿ ಕುರಿತಾಗಿವೆ. ಈ ಬಗ್ಗೆ ಫ್ಲೈಯಿಂಗ್ ಸ್ಕ್ವಾಡ್‌ಗಳು ಮತ್ತು ಪೊಲೀಸ್ ಅಧಿಕಾರಿಗಳು ಇಲ್ಲಿಯವರೆಗೆ 1,334 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಎಂದು ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Karnataka Assembly Elections 2023: ಕೋಲಾರದ ರಾಮಸಂದ್ರ ಚೆಕ್‌ಪೋಸ್ಟ್‌ನಲ್ಲಿ 1.81 ಕೋಟಿ ಹಣ ಜಪ್ತಿ
ಮಾರ್ಚ್ 29ರಿಂದ ಏಪ್ರಿಲ್ 14ರ ತನಕ ಚುನಾವಣಾ ಅಧಿಕಾರಿಗಳು 161 ಕೋಟಿ ರೂ. ಹಣ, ಉಡುಗೊರೆ, ಮಾದಕ ವಸ್ತುಗಳನ್ನು ಮತ್ತು ಲೋಹಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಆದಾಯ ತೆರಿಗೆ ಇಲಾಖೆ ಬೆಂಗಳೂರಿನ ದಾಸರಹಳ್ಳಿ, ಶಿವಾಜಿನಗರ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ಬಿಟಿಎಂ ಲೇಔಟ್ ಮತ್ತು ಮಲ್ಲೇಶ್ವರಂನಲ್ಲಿ ಚಿನ್ನ, ನಗದು ಸೇರಿದಂತೆ 25.45 ಕೋಟಿ ರೂ. ಅನ್ನು ಜಪ್ತಿ ಮಾಡಿದೆ.
ಕಾರ್ಕಳ: ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 50 ಲಕ್ಷ ರೂ. ನಗದು ಜಪ್ತಿ
ಉಡುಪಿ: ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 50 ಲಕ್ಷ ರೂ. ನಗದನ್ನು ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರು ಚೆಕ್‌ಪೋಸ್ಟ್ ಪೊಲೀಸರು ನಿನ್ನೆ (ಏ.15)ರಂದು ಜಪ್ತಿ ಮಾಡಿದ್ದರು. ದಾಖಲೆ ಇಲ್ಲದೆ ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಬೊಲೆರೊ ವಾಹನದಲ್ಲಿ ಹಣ ಸಾಗಿಸುತ್ತಿದ್ದರು. ಚುನಾವಣಾಧಿಕಾರಿ ಮದನ್ ಮೋಹನ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿದ್ದು, ಬ್ಯಾಂಕ್ ಲೆಟರ್ ವಶಪಡಿಸಿಕೊಂಡಿದ್ದರು. ಸಾಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಬಸ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 8 ಲಕ್ಷ ರೂ. ನಗದು ಜಪ್ತಿ
ಬೆಳಗಾವಿ: ಬಸ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 8 ಲಕ್ಷ ರೂ. ನಗದನ್ನು ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್‌ನಲ್ಲಿ ಬಸ್‌ನಲ್ಲಿ ತಪಾಸಣೆ ವೇಳೆ ಪತ್ತೆ ಆಗಿತ್ತು. ಮಹಾರಾಷ್ಟ್ರದ ಕೊಲ್ಹಾಪುರದಿಂದ ನಿಪ್ಪಾಣಿಗೆ ಬಸ್ ಆಗಮಿಸುತ್ತಿತ್ತು. ತಪಾಸಣೆ ವೇಳೆ ಮಹಾರಾಷ್ಟ್ರ ನೀರಾವರಿ ಇಲಾಖೆ ನಿವೃತ್ತ ಅಧಿಕಾರಿ ಅಣ್ಣಾಸಾಹೇಬ್ ಪಾಟೀಲ್ ಬಳಿ 8 ಲಕ್ಷ ಹಣ ಪತ್ತೆ ಆಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದರು. ನಿಪ್ಪಾಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Sun, 16 April 23