ಜಗದೀಶ್ ಶೆಟ್ಟರ್ ರಾಜೀನಾಮೆ ಬೆನ್ನಲ್ಲೇ ಡ್ಯಾಮೇಜ್ ಕಂಟ್ರೋಲ್ ಮಾಡಲು ಅಖಾಡಕ್ಕಿಳಿದ ಪ್ರಲ್ಹಾದ್ ಜೋಶಿ
ಹುಬ್ಬಳ್ಳಿಯ ಖಾಸಗಿ ಹೋಟೆಲ್ ಒಂದರಲ್ಲಿ ಪಾಲಿಕೆ ಕಾರ್ಪೋರೆಟರ್‌ಗಳು, ಬಿಜೆಪಿ ಪದಾಧಿಕಾರಿಗಳು, ಮುಖಂಡರ ಜೊತೆ ಪ್ರಲ್ಹಾದ್ ಜೋಶಿ ಚರ್ಚೆ ನಡೆಸಿದರು.
ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್(Jagdish Shettar) ಬಿಜೆಪಿಗೆ ಗುಡ್ ಬೈ ಹೇಳಿದ ಬೆನ್ನಲ್ಲೇ ಪಕ್ಷಕ್ಕಾಗುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ(Pralhad Joshi) ಅಖಾಡಕ್ಕಿಳಿದಿದ್ದಾರೆ. ಜಗದೀಶ್ ಶೆಟ್ಟರ್ ಬೆಂಬಲಿಸಿ ರಾಜೀನಾಮೆ ನೀಡಲು ಮುಂದಾಗಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರ ಜೊತೆ ಜೋಶಿ ಮಹತ್ವದ ಸಭೆ ನಡೆಸಿದರು.
ಹುಬ್ಬಳ್ಳಿಯ ಖಾಸಗಿ ಹೋಟೆಲ್ ಒಂದರಲ್ಲಿ ಪಾಲಿಕೆ ಕಾರ್ಪೋರೆಟರ್‌ಗಳು, ಬಿಜೆಪಿ ಪದಾಧಿಕಾರಿಗಳು, ಮುಖಂಡರ ಜೊತೆ ಪ್ರಲ್ಹಾದ್ ಜೋಶಿ ಚರ್ಚೆ ನಡೆಸಿದರು. ಶೆಟ್ಟರ್ ಬೆಂಬಲಿಸಿ ರಾಜೀನಾಮೆಗೆ ಮುಂದಾಗಿದ್ದವರ ಮನವೊಲಿಕೆಗೆ ಖದ್ದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮುಂದಾಗಿದ್ದಾರೆ. ಜಗದೀಶ್ ಶೆಟ್ಟರ್ ಅವರ ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಂಡ ವಾಸ್ತವ ಸಂಗತಿಗಳನ್ನ ಪಾಲಿಕೆ ಸದಸ್ಯರ ಮುಂದಿಟ್ಟಿರುವ ಜೋಶಿಯವರು, ಶೆಟ್ಟರ್ ಗೆ ಹೈಕಮಾಂಡ್ ನೀಡಿದ ಆಫರ್ ಗಳು ಹಾಗೂ ಅವರ ಮುಂದೆ ಇಡಲಾಗಿದ್ದ ಹಲವು ಆಯ್ಕೆಗಳ ಕುರಿತಂತೆಯೂ ನೈಜ ಸಂಗತಿಗಳನ್ನ ಶೆಟ್ಟರ್ ಬೆಂಬಲಿಗರಿಗೆ ತಿಳಿಸಿ ಹೇಳಿದ್ದಾರೆ.
ಇದನ್ನೂ ಓದಿ: Karnataka Assembly Election: ಪಕ್ಷವನ್ನು ಮುಳುಗಿಸಿದ ಕೀರ್ತಿ ಯಡಿಯೂರಪ್ಪಗೂ ಇದೆ: ಲಕ್ಷ್ಮಣ್ ಸವದಿ ತಿರುಗೇಟು
ಅಲ್ಲದೇ ಪಕ್ಷದ ತಿರ್ಮಾನದ ವಿರುದ್ಧ ಬಹಿರಂಗವಾಗಿ ಮಾತನಾಡದಂತೆ ಪಾಲಿಕೆ ಸದಸ್ಯರುಗಳಿಗೆ, ಪದಾಧಿಕಾರಿಗಳಿಗೆ ಸೂಚನೆ ನೀಡಿರುವ ಜೋಶಿ, ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಕಾರ್ಯಕರ್ತರು, ಮುಖಂಡರಿಗೆ ಕರೆ ನೀಡಿದ್ದಾರೆ. ಪ್ರಹ್ಲಾದ್ ಜೋಶಿ ಸಂದೇಶಕ್ಕೆ ರೆಬಲ್‌ಗಳು ಮಣಿದಿದ್ದಾರೆ ಎನ್ನಲಾಗಿದೆ. ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಪರ ಬಿಜೆಪಿ ಪಡೆ ಸನ್ನದ್ಧ ಮಾಡುವ ನಿಟ್ಟಿನಲ್ಲಿ ಪ್ರಲ್ಹಾದ ಜೋಶಿಯವರು ಮಹತ್ವದ ಸಭೆ ನಡೆಸಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್, ಡಾ. ಮಹೇಶ್ ನಾಲವಾಡ್, ಪಾಲಿಕೆ ಉಪಮೇಯರ್ ಉಮಾ ಮುಕುಂದ, ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಕಪಟಕರ್ ಸೇರಿದಂತೆ ಹಲವು ಬಿಜೆಪಿ ಮುಖಂಡರು, ಪಾಲಿಕೆ ಸದಸ್ಯರು, ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:30 pm, Sun, 16 April 23