ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಸಂಘಟನೆಗಾಗಿ ಕಾಂಗ್ರೆಸ್ ಪಕ್ಷವು ರಾಜ್ಯದಾದ್ಯಂತ ಬಸ್ ಯಾತ್ರೆ ನಡೆಸಲು ಮುಂದಾಗಿದೆ. ಆದರೆ ಬಸ್ ಯಾತ್ರೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಇದೇ ಅಂಶವನ್ನು ಮೈಸೂರಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಹೇಳಿದರು. ಯಾತ್ರೆಗೆ ಬಸ್ ಸಿದ್ಧವಾಗುತ್ತಿದೆ. ನಾನು ಮತ್ತು ಡಿ.ಕೆ.ಶಿವಕುಮಾರ್ ಎರಡು ಪ್ರತ್ಯೇಕ ತಂಡಗಳಾಗಿ ಪ್ರಚಾರ ಮಾಡಲಿದ್ದೇವೆ. ಬಸ್ ಯಾತ್ರೆಗೆ ದಿನಾಂಕ ನಿಗದಿಪಡಿಸಲು ನಾನೇನು ಜ್ಯೋತಿಷ್ಯ ನೋಡುವುದಿಲ್ಲ. ಮೊದಲು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಕಾಂಗ್ರೆಸ್ ಉಮೇದುವಾರರ ಪಟ್ಟಿ ಬಿಡುಗಡೆಯಾಗಬಹುದು ಎಂದು ಅವರು ತಿಳಿಸಿದರು.
ಪ್ರಚಾರಕ್ಕೆ ಬಳಸಲಾಗುವ ಬಸ್ ಸಿದ್ಧವಾಗುತ್ತಿದೆ. ಕೋಲಾರದಲ್ಲಿ ಈಗಾಗಲೇ ಒಮ್ಮೆ ಪ್ರಾಯೋಗಿಕವಾಗಿ ಬಸ್ ಓಡಿಸಲಾಗಿದೆ. ನಾವು ಜೋತಿಷ್ಯ ನೋಡುವುದಿಲ್ಲ. ಶೂನ್ಯ ಮಾಸದಲ್ಲಿ ಹುಟ್ಟಿದ ಮಕ್ಕಳೆಲ್ಲಾ ಏನ್ ಸತ್ತು ಹೋಗ್ತಾರಾ? ನಮಗೆ ರಾಹುಕಾಲ, ಗುಳಿಕ ಕಾಲ, ಯಮಗಂಡ ಕಾಲ ಯಾವುದೂ ಇಲ್ಲ. ಎಲ್ಲವೂ ಒಳ್ಳೆಯ ಕಾಲವೇ ಎಂದು ಅವರು ತಿಳಿಸಿದರು.
ಮೈಸೂರಿನಲ್ಲಿ ಗುಂಬಜ್ ಮಾದರಿ ಬಸ್ ನಿಲ್ದಾಣಗಳನ್ನು ತೆರವುಗೊಳಿಸುವ ಪ್ರತಾಪ್ ಸಿಂಹ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಒಬ್ಬ ಸಂಸದನಿಗೆ ಸಾಮಾನ್ಯ ಜ್ಞಾನ ಇಲ್ಲವೆಂದರೆ ಏನು ಹೇಳಲು ಸಾಧ್ಯ? ಗುಂಬಜ್ ಒಡೆಯುತ್ತೇನೆ ಎನ್ನಲು ಪ್ರತಾಪ್ ಸಿಂಹ ಯಾರು? ಅವರ ಮನೆಯಿಂದ ದುಡ್ಡು ಹಾಕಿ ಬಸ್ ನಿಲ್ದಾಣ ಮಾಡಿದ್ದಾರಾ ಅಧಿಕಾರಿಗಳು ವಿನ್ಯಾಸ ಮಾಡುವಾಗ ಏನು ಮಾಡುತ್ತಿದ್ದರು? ಗುಂಬಜ್ ಮಾದರಿಯ ನಿಲ್ದಾಣ ಒಡೆಯುತ್ತೇನೆ ಅಂದ್ರೆ ಏನರ್ಥ? ಅಶಾಂತಿ ನಿರ್ಮಾಣ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮತವನ್ನು ಕ್ರೋಡಿಕರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ನಿಲ್ದಾಣಗಳು ಹೀಗೆಯೇ ಇರಬೇಕು ಎಂಬ ರೂಲ್ಸ್ ಎಲ್ಲಿದೆ? ಬಿಜೆಪಿಯ ಈ ತಂತ್ರ ಫಲ ನೀಡುವುದಿಲ್ಲ. ಕರ್ನಾಟಕದ ಮತ್ತು ಈ ದೇಶದ ಜನರು ಜಾತ್ಯತೀತರು. ಜಾತಿ ಧರ್ಮದ ವಿಚಾರವನ್ನು ಜನರು ಒಪ್ಪುವುದಿಲ್ಲ. 600 ವರ್ಷಗಳ ಹಿಂದೆ ಮೊಘಲರು ನಮ್ಮ ದೇಶವನ್ನ ಆಳುವಾಗ ಆಗ ಇವರೆಲ್ಲಾ ಏನು ಮಾಡುತ್ತಿದ್ದರು ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.
ಬಲವಂತದ ಮತಾಂತರಕ್ಕೆ ನನ್ನ ವಿರೋಧವಿದೆ ಎಂದು ಹೇಳಿದ ಅವರು, ಯಾರನ್ನೂ ಬಲವಂತವಾಗಿ ಮತಾಂತರ ಮಾಡಬಾರದು. ಯಾರು ಯಾವ ಧರ್ಮ ಬೇಕಾದರೂ ಪಾಲನೆ ಮಾಡಬಹುದು. ಈ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ಆದೇಶ ಪರವಾಗಿ ನಾನಿದ್ದೇನೆ ಎಂದು ಅವರು ತಿಳಿಸಿದರು. ಸಿದ್ದರಾಮಯ್ಯ ಅವಧಿಯಲ್ಲೂ PSI ನೇಮಕಾತಿ ಅಕ್ರಮ ನಡೆದಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ಅವಧಿಯಲ್ಲೂ ಅಕ್ರಮ ನೇಮಕಾತಿ ಆಗಿದ್ದರೆ ತನಿಖೆ ಆಗಲಿ. ತನಿಖೆ ಮಾಡಿಸದೇ ಮೂರೂವರೆ ವರ್ಷದಿಂದ ಏನು ಮಾಡುತ್ತಿದ್ದರು? ಬಿಜೆಪಿಯವರು ಏಕೆ ಹೀಗೆ ಪದೇಪದೆ ಅದೇ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಕಾಂಗ್ರೆಸ್ ಟಿಕೆಟ್ಗೆ 400ಕ್ಕೂ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ: ಸಾವಿರಕ್ಕೂ ಹೆಚ್ಚು ಮಂದಿಯಿಂದ ಅರ್ಜಿ ಸ್ವೀಕಾರ
ಎರಡು ದಿನಗಳ ಪ್ರವಾಸಕ್ಕೆಂದು ಮೈಸೂರಿಗೆ ಸಿದ್ದರಾಮಯ್ಯ ಬಂದಿರುವ ಹಿನ್ನೆಲೆಯಲ್ಲಿ ಅವರ ಮನೆಯು ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿದೆ. ಟಿಕೆಟ್ ಆಕಾಂಕ್ಷಿಗಳು ಅವರ ಮನೆಯತ್ತ ದೌಡಾಯಿಸಿದ್ದಾರೆ. ಗುಂಡ್ಲುಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಚ್.ಎಂ.ಗಣೇಶ್ ಪ್ರಸಾದ್, ಕೆಆರ್ ನಗರ ಕ್ಷೇತ್ರದ ಆಕಾಂಕ್ಷಿ ರವಿಶಂಕರ್, ಚಾಮರಾಜ ಕ್ಷೇತ್ರದ ಆಕಾಂಕ್ಷಿ ಹರೀಶ್ ಗೌಡ, ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಕೆ ಮರಿಗೌಡ ಸೇರಿದಂತೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಹಲವು ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳು ಸಿದ್ದರಾಮಯ್ಯ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು.
Published On - 1:06 pm, Tue, 15 November 22