ಜಗದೀಶ್ ಶೆಟ್ಟರ್​ರನ್ನ ಮತ್ತೊಂದು ಅಖಾಡಕ್ಕೆ ಸಿದ್ಧಗೊಳಿಸುತ್ತಿರುವ ಕಾಂಗ್ರೆಸ್: ಮಹತ್ವದ ಹುದ್ದೆ ನೀಡುವ ಪ್ಲ್ಯಾನ್!

|

Updated on: May 19, 2023 | 3:19 PM

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ ಅವರನ್ನು ಮತ್ತೊಂದು ಅಖಾಡಕ್ಕೆ ಅಣಿ ಮಾಡಲು ಚಿಂತನೆ ನಡೆಸಿದೆ. ಹೀಗಾಗಿ ಅವರಿಗೆ ಮಹತ್ವದ ಹುದ್ದೆ ನೀಡುವ ಬಗ್ಗೆ ಕಾಂಗ್ರೆಸ್​​ನಲ್ಲಿ ಚರ್ಚೆಗಳು ನಡೆದಿವೆ.

ಜಗದೀಶ್ ಶೆಟ್ಟರ್​ರನ್ನ ಮತ್ತೊಂದು ಅಖಾಡಕ್ಕೆ ಸಿದ್ಧಗೊಳಿಸುತ್ತಿರುವ ಕಾಂಗ್ರೆಸ್: ಮಹತ್ವದ ಹುದ್ದೆ ನೀಡುವ ಪ್ಲ್ಯಾನ್!
Follow us on

ಬೆಂಗಳೂರು: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಕಾಂಗ್ರೆಸ್(Congress) ಅಭೂತಪೂರ್ವ ಗೆಲುವು ಸಾಧಿಸಿದೆ. ಈ ಫಲಿತಾಂಶದ ಮೂಲಕ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಸಂದೇಶ ರವಾನಿಸಿದೆ. ಹೀಗಾಗಿ ಕಾಂಗ್ರೆಸ್​ ಮುಂದಿನ ಲೋಕಸಭೆ ಚುನಾವಣೆಗಾಗಿ ಈಗಿನಿಂದಲೇ ತಂತ್ರಗಾರಿಕೆ ಮಾಡುತ್ತಿದೆ. ಹೌದು…ಕರ್ನಾಟಕದಲ್ಲಿ ಗೆಲುವಿನ ಗದ್ದುಗೆ ಏರಿದ ಕಾಂಗ್ರೆಸ್ ಈಗ ಮತ್ತೊಂದು ಕಾರ್ಯತಂತ್ರಕ್ಕೆ ಮುಂದಾಗಿದೆ. ಸೋತ ಜಗದೀಶ್ ಶೆಟ್ಟರ್‌(Jagadish Shettar) ಅವರನ್ನು ಮತ್ತೊಂದು ಅಖಾಡಕ್ಕೆ ಅಣಿ ಮಾಡಲು ಚಿಂತನೆ ನಡೆಸಿದೆ. ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿರುವ ಶೆಟ್ಟರ್ ಅವರ ಮೂಲಕ ಲಿಂಗಾಯತ ಅಸ್ತ್ರ ಬಳಸು ಕೈ ಪಡೆ ತಂತ್ರರೂಪಿಸಿದೆ. ಹೀಗಾಗಿ ಸೋತಿರುವ ಜಗದೀಶ್ ಶೆಟ್ಟರ್​ ಅವರಿಗೆ ಮಹತ್ವದ ಹುದ್ದೆ ನೀಡಲು ಕಾಂಗ್ರೆಸ್​ ಪ್ಲ್ಯಾನ್ ಮಾಡಿದೆ.

ಹೌದು.. ಬಿಜೆಪಿ ಟಿಕೆಟ್ ತಪ್ಪಿದ ತಕ್ಷಣ ಕಾಂಗ್ರೆಸ್‌ ಸೇರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಿಷ್ಯ ಮಹೇಶ ಟೆಂಗಿನಕಾಯಿ ವಿರುದ್ಧ ಸೋಲುಂಡಿದ್ದಾರೆ. ಇದು ನನ್ನ ಕೊನೆಯ ಚುನಾವಣೆ ಎಂದಿದ್ದ ಶೆಟ್ಟರ್, ನನಗಿನ್ನೂ ವಯಸ್ಸಾಗಿಲ್ಲ ಎನ್ನುವ ಮೂಲಕ ಮುಂದಿನ ರಾಜಕೀಯ ನಡೆಯ ಬಗ್ಗೆ ಕುತೂಹಲ ಮೂಡಿಸಿದ್ದಾರೆ. ಈತನ್ಮಧ್ಯೆ ಈಗ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಕಣಕ್ಕೆ ಇಳಿಸಲು ತೆರೆಮರೆಯ ಕಸರತ್ತು ನಡೆದಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ಪಲ್ಲಾದ ಜೋಶಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಆಗಬಹುದೇ? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಮೂಲೆಗಟ್ಟುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್, ಸಂತೋಷ್ ಎಂದು ಶೆಟ್ಟರ್ ನೇರ ಆರೋಪ ಮಾಡಿದ್ದರು. ಇದನ್ನೇ ರಾಜಕೀಯ ದಾಳವಾಗಿ ಕಾಂಗ್ರೆಸ್ ತೆಗೆದುಕೊಂಡರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೋಶಿಗೆ ಎದುರಾಳಿಯನ್ನಾಗಿ ಜಗದೀಶ ಶೆಟ್ಟರ್ ಅವರನ್ನು ನಿಲ್ಲಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

2019ರ ಲೋಕಸಭೆ ಚುನಾವಣೆಯಲ್ಲಿ ಪ್ರಹ್ಲಾದ ಜೋಶಿ ವಿರುದ್ಧ ವಿನಯ ಕುಲಕರ್ಣಿ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿತ್ತು. ಆದರೆ, ವಿನಯಗೆ ಗೆಲುವು ಸಾಧಿಸಲಾಗಿರಲಿಲ್ಲ. ಜೋಶಿ ಅವರನ್ನು ಗೆಲ್ಲಿಸುವಲ್ಲಿ ಜಗದೀಶ ಶೆಟ್ಟರ್ ಅವರ ಪಾತ್ರವೂ ಇದೆ. ಈಗ ವಿನಯ್ ಕುಲಕರ್ಣಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಶಾಸಕರಾಗಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದಿಂದ ಪ್ರಲ್ಹಾದ್​ ಜೋಶಿ ವಿರುದ್ಧ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್​ ಕಣಕ್ಕಿಳಿಸಿದರೂ ಅಚ್ಚರಿ ಪಡಬೇಕಿಲ್ಲ.

ಮಹತ್ವದ ಹುದ್ದೆ ನೀಡುವ ಚಿಂತನೆ

ಬಿಜೆಪಿ ನಾಯಕರ ವಿರುದ್ಧ ಸಾಲು-ಸಾಲು ಆರೋಪಗಳನ್ನು ಮಾಡಿ ಕಾಂಗ್ರೆಸ್ ಸೇರ್ಪಡೆಯಾಗಿರುವ ಜಗದೀಶ್ ಶೆಟ್ಟರ್ ಅವರನ್ನು ಗೌರವಿತವಾಗಿ ನಡೆಸಿಕೊಳ್ಳಲು ಕಾಂಗ್ರೆಸ್​ ಸಹ ಮುಂದಾಗಿದೆ. ಶೆಟ್ಟರ್​ ಸೋತ ಬಳಿಕ ಅವರ ನಿವಾಸಕ್ಕೆ ಕಾಂಗ್ರೆಸ್​ ಹಿರಿಯ ನಾಯಕರ ಭೇಟಿ ನೀಡಿ ಧೈರ್ಯ ಹೇಳಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಕೊಪ್ಪಳ, ವಿಜಯಪುರ ಸೇರಿದಂತೆ ಹಲವೆಡೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ. ಇದರಿಂದ ಸೋತಿರುವ ಜಗದೀಶ್ ಶೆಟ್ಟರ್ ಅವರನ್ನು ಮುಂದಿನ ಚುನಾವಣೆಗಳಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಲು ಅವರಗೆ ಮಹತ್ವದ ಹುದ್ದೆ ನೀಡುವ ಸಾಧ್ಯತೆಗಳು ಎನ್ನಲಾಗುತ್ತಿದೆ. ಇನ್ನು ಸಿದ್ದರಾಮಯ್ಯ ಸರ್ಕಾರದಲ್ಲಿ ಜಗದೀಶ್ ಶೆಟ್ಟರ್​ಗೆ ಸಚಿವ ಸಂಪುಟದ ಸ್ಥಾನಮಾನ ನೀಡುವ ಬಗ್ಗೆಯೂ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಯಾಗಿದೆ.

ಯಾವುದೇ ಹುದ್ದೆ ಕೊಟ್ಟರೂ ಓಕೆ ಎಂದ ಶೆಟ್ಟರ್​

ಇನ್ನು ಜಗದೀಶ್ ಶೆಟ್ಟರ್​ ಇಂದು(ಮೇ 19) ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಭಿನಂದನೆ ತಿಳಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್, ನಿಯೋಜಿತ ಸಿಎಂ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸಿದ್ದೇನೆ. ನಾನು ಯಾವುದೇ ಸ್ಥಾನಮಾನದ ಆಕಾಂಕ್ಷಿ ಅಲ್ಲ. ಆದ್ರೆ, ಹೈಕಮಾಂಡ್​ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುವೆ ಎಂದು ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದರು.

ಒಟ್ಟಿನಲ್ಲಿ ಸೋತಿರುವ ಜಗದೀಶ್ ಶೆಟ್ಟರ್​ ಅವರಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಗುವುದಂತೂ ಗ್ಯಾರಂಟಿ ಎನ್ನಲಾಗಿದ್ದು, ಯಾವ ಹುದ್ದೆ ನೀಡಲಿದ್ದಾರೆ ಎಂದು ಕಾದುನೋಡಬೇಕಿದೆ.