ಕಾಂಗ್ರೆಸ್ ಸದ್ಯದಲ್ಲೇ ಧೂಳೀಪಟವಾಗಲಿದೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ

|

Updated on: May 02, 2023 | 7:48 AM

ಕಾಂಗ್ರೆಸ್ ಈಗ ಏನೇನೋ ಗ್ಯಾರಂಟಿಗಳನ್ನು ಕೊಡುತ್ತಿದೆ. ಆದರೆ ಅಧಿಕಾರದಲ್ಲಿದ್ದಾಗ ಯಾಕೆ ಏನನ್ನೂ ಕೊಡಲಿಲ್ಲ. ಜನರಿಗೆ ಟೋಪಿ ಹಾಕುವುದೇ ಆ ಪಕ್ಷದ ಸಂಸ್ಕೃತಿ ಎಂದು ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಸದ್ಯದಲ್ಲೇ ಧೂಳೀಪಟವಾಗಲಿದೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಪ್ರಲ್ಹಾದ್ ಜೋಶಿ
Follow us on

ಬೆಂಗಳೂರು: ಈ ವರ್ಷದ ಕೊನೆಯ ಹೊತ್ತಿಗೆ ರಾಜಸ್ಥಾನ, ಛತ್ತೀಸಗಢಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಲ್ಲಿಯೂ ಕಾಂಗ್ರೆಸ್ ಧೂಳೀಪಟವಾಗಲಿದೆ. ಆ ವಿದ್ಯಮಾನದ ದೃಷ್ಟಿಯಿಂದ ಕರ್ನಾಟಕದ ಚುನಾವಣೆ ಮಹತ್ವದ್ದು(Karnataka Assembly Elections 2023). ಹೀಗಾಗಿ ಬಿಜೆಪಿಗೆ ಮತ ಹಾಕಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi) ಮನವಿ ಮಾಡಿದರು. ಮಲ್ಲೇಶ್ವರ ಕ್ಷೇತ್ರದ ವ್ಯಾಪ್ತಿ ಸುಬ್ರಹ್ಮಣ್ಯ ನಗರದ ಶ್ರೀವಾಣಿ ವಿದ್ಯಾಕೇಂದ್ರ ಮತ್ತು ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲ್ಲೇಶ್ವರ ಕ್ಷೇತ್ರದಲ್ಲಿ 250 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಮಾಡಿಸಲಾಗಿದೆ. ರಾಜ್ಯದಲ್ಲಿ ಮೋದಿಯವರ ವೇಗ ಮತ್ತು ಕಲ್ಪನೆಗೆ ತಕ್ಕ ಸರಕಾರ ಇರಬೇಕು. ಹೀಗಾಗಿ ಮತ್ತೊಮ್ಮೆ ಬಿಜೆಪಿಗೆ ಅವಕಾಶ ಕೊಡಬೇಕು ಎಂದು ಕೋರಿದರು.

ಕಾಂಗ್ರೆಸ್ ಈಗ ಏನೇನೋ ಗ್ಯಾರಂಟಿಗಳನ್ನು ಕೊಡುತ್ತಿದೆ. ಆದರೆ ಅಧಿಕಾರದಲ್ಲಿದ್ದಾಗ ಯಾಕೆ ಏನನ್ನೂ ಕೊಡಲಿಲ್ಲ. ಜನರಿಗೆ ಟೋಪಿ ಹಾಕುವುದೇ ಆ ಪಕ್ಷದ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದ ಜೋಶಿ, ರಾಹುಲ್ ಗಾಂಧಿ ಈಗ ದೇಶದ ಬಗ್ಗೆ, ರಾಮನ ಬಗ್ಗೆ ಎಲ್ಲ ಮಾತನಾಡುತ್ತಿದ್ದಾರೆ. ಆದರೆ ಹೊರದೇಶಗಳಲ್ಲಿ ಭಾರತದ ಅಸ್ತಿತ್ವವನ್ನೇ ಪ್ರಶ್ನಿಸಿದ್ದರು. ರಾಮನ ಮೂಲವನ್ನು ಪ್ರಶ್ನಿಸಿ ಅಫಿಡವಿಟ್ ಸಲ್ಲಿಸಿದ್ದ ಅಯೋಗ್ಯ ಇವರು. ಈ ದೇಶ ಅವರ ತಾತ, ಮುತ್ತಾತನ ಆಸ್ತಿಯಲ್ಲ. ಇವರು ಮಾಡಿಕೊಂಡು ಬಂದಿದ್ದೆಲ್ಲ ಬರೀ ತುಷ್ಟಿಕರಣದ ರಾಜಕಾರಣ ಎಂದು ಪ್ರಹಾರ ನಡೆಸಿದರು.

ಇದನ್ನೂ ಓದಿ: ನರೇಂದ್ರ ಮೋದಿ ವಿಷ ಸರ್ಪವಲ್ಲ, ದೇಶ ಕಾಯುವ ಕಾಳಿಂಗ ಸರ್ಪ: ಡಾ. ಕೆ ಸುಧಾಕರ್

ಮೋದಿಯವರು ಭಾರತವನ್ನು 2047ರ ಹೊತ್ತಿಗೆ ನಂಬ‌ರ್ ಒನ್ ಮಾಡಲು ಪಣ ತೊಟ್ಟಿದ್ದಾರೆ. ಇದು ನನಸಾಗಲು ದೇಶದಲ್ಲಿ ಕರ್ನಾಟಕವೂ ನಂಬರ್ ಒನ್ ಆಗಬೇಕು. ಒಂದು ದಿನ ಮುಸ್ಲಿಮರ ಟೋಪಿ, ಮರುದಿನ ಜನಿವಾರ ಹಾಕಿಕೊಂಡು ಹೋಗುವ ಕಾಂಗ್ರೆಸ್ಸಿನವರನ್ನು ನಂಬಿ ಹಾಳಾಗಬಾರದು ಎಂದು ಅವರು ಪ್ರತಿಪಾದಿಸಿದರು.

ಡಬಲ್ ಎಂಜಿನ್ ಬಿಜೆಪಿ ಸರಕಾರವು ರಾಜ್ಯದಲ್ಲಿ ಹೆದ್ದಾರಿ, ವಿಮಾನ ನಿಲ್ದಾಣ, ಮೂಲಸೌಲಭ್ಯ, ರಿಂಗ್ ರಸ್ತೆ, ಎಕ್ಸ್‌ಪ್ರೆಸ್ ವೇ, ವಂದೇ ಭಾರತ್ ಎಕ್ಸ್‌ಪ್ರೆಸ್ ಎಲ್ಲವನ್ನೂ ಮಾಡಿ ತೋರಿಸಿದೆ. ಬಿಜೆಪಿ ನೇತೃತ್ವದಲ್ಲಿ ದೇಶವು ಸ್ವಾವಲಂಬಿ ಆಗುತ್ತಿದೆ ಎಂದು ಪ್ರಲ್ಹಾದ ಜೋಶಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:44 am, Tue, 2 May 23