ರಾಜ್ಯದಲ್ಲಿ ಈ ಹಿಂದೆ ಯಾವಾಗೆಲ್ಲ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು? ಸಮ್ಮಿಶ್ರ ಸರ್ಕಾರಗಳ ಪರಿಚಯ

| Updated By: ಆಯೇಷಾ ಬಾನು

Updated on: May 13, 2023 | 10:53 AM

ಈ ಹಿಂದಿನ ವಿಧಾನಸಭಾ ಚುನಾವಣೆಗಳಲ್ಲಿ ಯಾವಾಗ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂಬ ವಿವರ ಇಲ್ಲಿದೆ.

ರಾಜ್ಯದಲ್ಲಿ ಈ ಹಿಂದೆ ಯಾವಾಗೆಲ್ಲ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು? ಸಮ್ಮಿಶ್ರ ಸರ್ಕಾರಗಳ ಪರಿಚಯ
ಕರ್ನಾಟಕ ವಿಧಾನಸಭಾ ಚುನಾವಣೆ
Follow us on

ಪ್ರಸಕ್ತ ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ(Karnataka Assembly Election Result 2023). ಮೇ 10ರಂದು ಒಂದು ಹಂತದಲ್ಲಿ ಮತದಾನ ನಡೆದಿತ್ತು. ಇಂದು ರಾಜಕೀಯ ನಾಯಕರ ಭವಿಷ್ಯ ನಿರ್ಣಯವಾಗಲಿದೆ. ಕೆಲವೇ ಗಂಟೆಗಳಲ್ಲಿ ರಾಜ್ಯದ ಚುಕ್ಕಾಣಿ ಹಿಡಿಯುವವರ್ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಇದರ ಜೊತೆಗೆ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೋಟ ನೋಡುವುದಾದರೆ, ಅಥವಾ ಈ ಹಿಂದಿನ ಚುನಾವಣೆಗಳಲ್ಲಿ ಯಾವಾಗ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂಬ ವಿವರ ಇಲ್ಲಿದೆ.

ಕರ್ನಾಟಕದಲ್ಲಿ ಮೊದಲ ವಿಧಾನಸಭಾ ಚುನಾವಣೆ ನಡೆದದ್ದು 1952ರಲ್ಲಿ. ಅಂದ್ರೆ ಇಲ್ಲಿಗೆ 71ವರ್ಷ ಕಳೆದಿದೆ. ಮೊದಲ ವಿಧಾನಸಭಾ ಚುನಾವಣೆ ಆರಂಭವಾದಾಗ ಪೂರ್ಣ ಪ್ರಮಾಣದ ಕರ್ನಾಟಕ ರಚನೆಯಾಗಿರಲಿಲ್ಲ. ಮೈಸೂರು ಪ್ರಾಂತ್ಯ ಮಾತ್ರ ಇತ್ತು. ಅಲ್ಲಿಂದ ಇಲ್ಲಿಯವರೆಗೂ ಸುಮಾರು 15 ಸಾರ್ವತ್ರಿಕ ಚುನಾವಣೆಗಳು ನಡೆದಿವೆ. ಈಗ ನಡೆದಿರುವುದು 16ನೇ ಸಾರ್ವತ್ರಿಕ ಚುನಾವಣೆ.

ಇನ್ನು ರಾಜ್ಯದಲ್ಲಿ ಯಾವಾಗೆಲ್ಲ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು, ಯಾವಾಗ ಸಮ್ಮಿಶ್ರ ಸರ್ಕಾರಗಳ ಆಳ್ವಿಕೆ ನಡೆಯಿತು ಎಂಬುವುದುನ್ನು ನೋಡುವುದಾದರೇ. 1952 ರಿಂದ 1983 ರವರೆಗೆ ಕಾಂಗ್ರೆಸ್ ಪಕ್ಷ ಪ್ರತಿ ವಿಧಾನಸಭಾ ಚುನಾವಣೆಯಲ್ಲೂ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರುತ್ತಿತ್ತು. ಏಕೆಂದರೆ ಇದರ ವಿರುದ್ಧ ನಿಲ್ಲುವ ಮತ್ತೊಂದು ಪಕ್ಷ ಇರಲಿಲ್ಲ. ಆದ್ರೆ ತುರ್ತುಪರಿಸ್ಥಿತಿಯ ಬಳಿಕ ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಿತು. ನಂತರ ಕರ್ನಾಟಕದಲ್ಲೂ ತನ್ನ ಹಿಡಿತ ಸಾಧಿಸುವ ಪ್ರಯತ್ನ ನಡೆಸಿತು. ಇದರ ಫಲವಾಗಿ 1983 ರ ಚುನಾವಣೆಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್​ನ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಆದರೆ ಇಲ್ಲಿ ವಿಪರ್ಯಾಸ ಅಂದ್ರೆ ಇದು ಪೂರ್ಣಾವಧಿ ಆಡಳಿತ ನಡೆಸಲಿಲ್ಲ. ಆ ಬಳಿಕ 2004, 2008 ಮತ್ತು 2018 ರಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಿ ಸಮ್ಮಿಶ್ರ ಸರ್ಕಾರಗಳು ಅಧಿಕಾರಕ್ಕೆ ಬಂದವು.

ಮೊದಲ ಬಾರಿಗೆ ಕಾಂಗ್ರೇಸೇತರ ಪಕ್ಷದಿಂದ ಅಧಿಕಾರ

ಆಗಿನ ಕಾಂಗ್ರೆಸ್‌ ಸರ್ಕಾರದ ದುರಾಡಳಿತ, ರೈತ ವಿರೋಧ ನೀತಿಯ ವಿರುದ್ಧ ಜನತಾಪಕ್ಷ, ಕ್ರಾಂತಿರಂಗ, ಬಿಜೆಪಿ, ಸಿಪಿಐ, ಸಿಪಿಎಂ, ಕರ್ನಾಟಕ ರಾಜ್ಯ ರೈತ ಸಂಘ ಸೆಣಸಿದ್ದವು. 1983ರ ಚುನಾವಣೆಯಲ್ಲಿ ಜನತಾ ಪಕ್ಷ 95 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು. ಕಾಂಗ್ರೆಸ್‌ 82 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಆಗ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಹೆಚ್‌.ಡಿ.ದೇವೇಗೌಡ ಮತ್ತು ಎಸ್‌.ಬಂಗಾರಪ್ಪ ಅವರ ಮಧ್ಯೆ ತಿಕ್ಕಾಟ ಆರಂಭವಾಯಿತು. ಆಗ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ ರಾಮಕೃಷ್ಣ ಹೆಗಡೆ, ಕರ್ನಾಟಕ ರಾಜಕಾರಣಕ್ಕೆ ಮರಳಿ ಮುಖ್ಯಮಂತ್ರಿ ಹುದ್ದೆ ಏರಿದರು. 18 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಬಾಹ್ಯ ಬೆಂಬಲ ನೀಡಿತ್ತು. ಇತರ ಸಣ್ಣ ಪಕ್ಷಗಳ ಜೊತೆ ನೆರವಿನೊಂದಿಗೆ ರಾಮಕೃಷ್ಣ ಹೆಗಡೆ ಸರ್ಕಾರ ರಚಿಸಿದರು. ಈ ಏಳನೆಯ ವಿಧಾನಸಭೆಯು 24 ಜೂಲೈ 1983 ರಿಂದ 2 ಜನವರಿ 1985ರ ವರೆಗೆ ಆಸ್ತಿತ್ವದಲ್ಲಿತ್ತು ಮತ್ತು ಜನತಾ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ತೀರಾ ಕಡಿಮೆ ಸ್ಥಾನಗಳನ್ನು ಪಡೆದ ಕಾರಣಕ್ಕೆ ರಾಮಕೃಷ್ಣ ಹೆಗಡೆಯವರು ವಿಧಾನಸಭೆ ವಿಸರ್ಜಿಸಿ ಮತ್ತೆ ಜನಾಧೇಶ ಕೋರಿದರು. ಹೀಗಾಗಿ ಏಳನೆಯ ವಿಧಾನಸಭೆ ಅವಧಿಗೆ ಮುನ್ನವೇ ವಿಸರ್ಜನೆಗೊಂಡಿತು. ಈ ವಿಧಾನಸಭೆಯ ಅವಧಿಯಲ್ಲಿ ಜನತಾ ಪಕ್ಷದ ಡಿ. ಬಿ. ಚಂದ್ರೇಗೌಡ ವಿಧಾನಸಭೆಯ ಸ್ಪೀಕರ್ ಆಗಿದ್ದರು.

ಇದನ್ನೂ ಓದಿ: 38 year old Jinx: ಇಂದು ಮತದಾನ -38 ವರ್ಷಗಳ ಶಾಪದಿಂದ ಕರ್ನಾಟಕಕ್ಕೆ ವಿಮೋಚನೆ ಸಿಗುತ್ತದಾ? ಚುನಾವಣಾ ವೇಳೆ ಇಲ್ಲಿದೆ ಆ ಇಂಟರೆಸ್ಟಿಂಗ್ ಸ್ಟೋರಿ ನಿಮಗಾಗಿ

2004 ರಲ್ಲಿ ಸಮ್ಮಿಶ್ರ ಸರ್ಕಾರ

2004 ಏಪ್ರಿಲ್ 20 ಮತ್ತು ಏಪ್ರಿಲ್ 26ರಂದು ಎಲ್ಲಾ 224 ಕ್ಷೇತ್ರಗಳಿಗೂ ಚುನಾವಣೆ ನಡೆಯಿತು ಮತ್ತು ಪಲಿತಾಂಶಗಳನ್ನು ಮೇ 13, 2004ರ ಎಣಿಕೆಯ ನಂತರ ಪ್ರಕಟಿಸಲಾಯಿತು. ಯಾವ ಪಕ್ಷಕ್ಕೂ ಸರಕಾರ ರಚಿಸಲು ಅಗತ್ಯ ಬಹುಮತ ಬರಲಿಲ್ಲ. ಭಾರತೀಯ ಜನತಾ ಪಕ್ಷ 79 ಸ್ಥಾನ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 65 ಸ್ಥಾನ, ಮತ್ತು ಜನತಾ ದಳ 58 ಸ್ಥಾನ ಗಳಿಸಿತ್ತು. ‘ಜನಪ್ರಿಯತೆ’ಯ ಉತ್ತುಂಗದಲ್ಲಿದ್ದ ಎಸ್‌.ಎಂ.ಕೃಷ್ಣ ಅವರು ಲೋಕಸಭೆ ಚುನಾವಣೆ ಜೊತೆಗೆ ಹೋದರೆ ಮತ್ತೆ ಅಧಿಕಾರ ಹಿಡಿಯಬಹುದು ಎಂಬ ತವಕದಲ್ಲಿ ಆರು ತಿಂಗಳ ಮೊದಲೇ ವಿಧಾನಸಭೆ ವಿಸರ್ಜಿಸಿದರು. ಅಷ್ಟೊತ್ತಿಗೆ ಕೃಷ್ಣರ ಜೊತೆ ಮುನಿಸಿಕೊಂಡಿದ್ದ ಎಸ್. ಬಂಗಾರಪ್ಪ ಬಿಜೆಪಿ ಸೇರಿದ್ದರು. ‘ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕು’ ಎಂದು ಹೇಳಿಕೊಂಡ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದವು. ಕಾಂಗ್ರೆಸ್‌ನ ಧರ್ಮಸಿಂಗ್ ಮುಖ್ಯಮಂತ್ರಿಯಾದರೆ, ಜೆಡಿಎಸ್‌ನ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಈ ಸರ್ಕಾರ ಹೆಚ್ಚು ಕಾಲ ಉಳಿಯಲಿಲ್ಲ. ಒಂದು ಕಡೆ ಜೆಡಿಎಸ್‌ನಲ್ಲಿ ಹೆಚ್‌.ಡಿ.ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವೆ ಇದ್ದ ಬಾಂಧವ್ಯ ಬಿರುಕು ಬಿಟ್ಟಿತು. ದೇವೇಗೌಡರ ಪುತ್ರ ಹೆಚ್‌.ಡಿ.ಕುಮಾರಸ್ವಾಮಿ 42 ಶಾಸಕರೊಂದಿಗೆ ಸೇರಿ ಸಮ್ಮಿಶ್ರ ಸರ್ಕಾರದಿಂದ ಹೊರ ನಡೆದರು. ಹೀಗಾಗಿ ಜೆಡಿಎಸ್‌-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಂಡಿತು.

2006ರಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರ

2006ರ ಜನವರಿ 28 ರಂದು ಹೆಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಮತ್ತು ಬಿಜೆಪಿ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದವು. ತಲಾ 20 ತಿಂಗಳುಗಳಂತೆ ಕುಮಾರಸ್ವಾಮಿ ಮತ್ತು ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವ ಒಪ್ಪಂದಕ್ಕೆ ಬರಲಾಗಿತ್ತು. ಆದರೆ, 20 ತಿಂಗಳು ಮುಗಿಯುತ್ತಿದ್ದಂತೆ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಒಪ್ಪಲಿಲ್ಲ. ಎರಡೂ ಪಕ್ಷಗಳ ಮಧ್ಯೆ ಮತ್ತೆ ಮಾತುಕತೆ ನಡೆದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ, ಜೆಡಿಎಸ್‌ ಬೆಂಬಲ ಹಿಂದಕ್ಕೆ ಪಡೆದ ಕಾರಣ ಸರ್ಕಾರ ಪತನವಾಯಿತು. ರಾಷ್ಟ್ರಪತಿ ಆಡಳಿತ ಹೇರಲಾಯಿತು.

2008ರಲ್ಲಿ ಆಪರೇಷನ್ ಕಮಲ

110 ಸ್ಥಾನಗಳನ್ನು ಗೆದ್ದುಕೊಂಡ ಬಿಜೆಪಿ ಏಕೈಕ ದೊಡ್ಡಪಕ್ಷವಾಗಿ ಹೊರ ಹೊಮ್ಮಿತು. ಆದರೆ, ಅಧಿಕಾರ ರಚಿಸುವ ಬಲ ಇರಲಿಲ್ಲ. ಕಾಂಗ್ರೆಸ್‌ 80, ಜೆಡಿಎಸ್‌ 28 ಮತ್ತು ಪಕ್ಷೇತರರು 6 ಸ್ಥಾನಗಳನ್ನು ಗೆದ್ದರು. ಪಕ್ಷೇತರರ ನೆರವು ಪಡೆದುಕೊಂಡು ಬಿ.ಎಸ್‌.ಯಡಿಯೂರಪ್ಪ ಸರ್ಕಾರ ರಚಿಸಿದರು. ಪಕ್ಷೇತರರ ಊರುಗೋಲಿನಲ್ಲಿ ಅಸ್ಥಿರ ಸರ್ಕಾರ ನಡೆಸಿದ್ದ ಯಡಿಯೂರಪ್ಪ, ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್‌ ಶಾಸಕರಿಗೆ ಗಾಳ ಹಾಕಿ ಆಪರೇಷನ್ ಕಮಲ ಮಾಡಿದರು. ಈ ಅವಧಿಯಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾದ ಯಡಿಯೂರಪ್ಪ ರಾಜೀನಾಮೆ ಕೊಟ್ಟರು. ಇನ್ನು ಡಿ.ವಿ.ಸದಾನಂದಗೌಡ ಅವರನ್ನು ಮುಖ್ಯಮಂತ್ರಿ ಮಾಡಿದರು. ಅದಾದ ಕೆಲವೇ ದಿನಗಳಲ್ಲಿ ಯಡಿಯೂರಪ್ಪ ಜೈಲಿಗೆ ಹೋದರು. ನಂತರ ಜಗದೀಶ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿಲಾಯಿತು. 2013ರ ಚುನಾವಣೆಗೆ ಮೊದಲು ಯಡಿಯೂರಪ್ಪ ಕೆಜೆಪಿ ಕಟ್ಟಿದರೆ, ಶ್ರೀರಾಮುಲು ಬಿಎಸ್ಆರ್ ಕಾಂಗ್ರೆಸ್ ಸ್ಥಾಪಿಸಿದರು. ಇದರ ಫಲ ಕಾಂಗ್ರೆಸ್ ಅಧಿಕಾರದ ಗದ್ದುಗೆಗೆ ಏರಿತು.

ಇದನ್ನೂ ಓದಿ: Karnataka Assembly Polls 2023: 1972 ರಿಂದ 2018 ರವರೆಗೆ ಕರ್ನಾಟಕ ವಿಧಾನಸಭಾ ಚುನಾವಣೆಯ ಇತಿಹಾಸ

2018 ರ ಸಮ್ಮಿಶ್ರ ಸರ್ಕಾರ

2018 ರ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ 104 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು. ಕಾಂಗ್ರೆಸ್‌ 40 ಸ್ಥಾನಗಳನ್ನು ಗೆದ್ದುಕೊಂಡರೆ, ಜೆಡಿಎಸ್‌ 37 ಸ್ಥಾನಗಳನ್ನು ಗೆದ್ದುಕೊಂಡಿತು. ಬಿಜೆಪಿಗೆ ಬಹುಮತ ಇಲ್ಲದೇ ಹೋದರೂ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದರು. ಆದರೆ, ಬಹುಮತ ಸಾಬೀತು ಮಾಡಲಾಗದೇ, ರಾಜೀನಾಮೆ ಕೊಡಬೇಕಾಯಿತು. ಈ ಮಧ್ಯೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚಿಸಲು ಒಪ್ಪಂದ ಮಾಡಿಕೊಂಡವು. ಹೆಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ, ಜಿ.ಪರಮೇಶ್ವರ ಅವರು ಉಪಮುಖ್ಯಮಂತ್ರಿಯಾದರು. ಮುಖ್ಯಮಂತ್ರಿಯಾಗಲೇ ಬೇಕು ಎಂಬ ಹಟಕ್ಕೆ ಬಿದ್ದಿದ್ದ ಯಡಿಯೂರಪ್ಪ ಮತ್ತೆ ಆಪರೇಷನ್ ಕಮಲ ಮಾಡಿದರು. ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ, ಕಾಂಗ್ರೆಸ್‌, ಜೆಡಿಎಸ್‌ ಮತ್ತು ಪಕ್ಷೇತರರು ಸೇರಿ 17 ಶಾಸಕರು ಮೈತ್ರಿ ಸರ್ಕಾರದಿಂದ ಹೊರಬಂದರು. ಸರ್ಕಾರ ಪತನಗೊಂಡಿತು. ಬಳಿಕ ಆ ಶಾಸಕರು ಬಿಜೆಪಿಯನ್ನು ಸೇರಿದರು. ಈ ಆಪರೇಷನ್ ಕಮಲದಿಂದ ಪುನಃ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಒಂದೂವರೆ ವರ್ಷ ಕಳೆಯುತ್ತಿದ್ದಂತೆ ಯಡಿಯೂರಪ್ಪ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಅಧಿಕಾರದಿಂದ ನಿರ್ಗಮಿಸಿದರು. ಬಳಿಕ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 10:49 am, Sat, 13 May 23