38 year old Jinx: ಇಂದು ಮತದಾನ -38 ವರ್ಷಗಳ ಶಾಪದಿಂದ ಕರ್ನಾಟಕಕ್ಕೆ ವಿಮೋಚನೆ ಸಿಗುತ್ತದಾ? ಚುನಾವಣಾ ವೇಳೆ ಇಲ್ಲಿದೆ ಆ ಇಂಟರೆಸ್ಟಿಂಗ್ ಸ್ಟೋರಿ ನಿಮಗಾಗಿ
Karnataka Election Updates: 38 ವರ್ಷಗಳ ಶಾಪದಿಂದ ಕರ್ನಾಟಕ ಹೊರಬರುವುದೇ? ಪ್ರಮುಖವಾಗಿ ತ್ರಿಕೋನ ಸ್ಪರ್ಧೆಯಲ್ಲಿ ಪಕ್ಷಗಳಿಗೆ ಸಂಪೂರ್ಣ ಬಹುಮತ ಪಡೆಯಲು ಸಾಧ್ಯವಾಗುತ್ತಿಲ್ಲವೇ? ಕನ್ನಡ ಮತದಾರರಿಗೆ ಯಾಕೆ ಈ ಆತಂಕ?
ಇಂದು ಕರ್ನಾಟಕದಲ್ಲಿ ಮಹತ್ವದ ಅಸೆಂಬ್ಲಿ ಚುನಾವಣೆ (Karnataka Assembly Elections 2023) ಮತದಾನದ ದಿನ. 38 ವರ್ಷಗಳ ಶಾಪದಿಂದ ಕರ್ನಾಟಕ ಹೊರಬರುವುದೇ? ಪ್ರಮುಖವಾಗಿ ತ್ರಿಕೋನ ಸ್ಪರ್ಧೆಯಲ್ಲಿ ಆ ಮೂರು ಪಕ್ಷಗಳಿಗೆ (BJP, JDS, Congress) ಸ್ಪಷ್ಟ, ಸಂಪೂರ್ಣ ಬಹುಮತ ಪಡೆಯಲು ಸಾಧ್ಯವಾಗುತ್ತಿಲ್ಲವೇ? ಕರ್ನಾಟಕದಲ್ಲಿ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸುವುದು ಯಾವುದೇ ಮುಖ್ಯಮಂತ್ರಿಗೆ ನಿಜವಾಗಿಯೂ ಕಷ್ಟವಾಗಿದೆಯೇ? ಕನ್ನಡ ಮತದಾರರಿಗೆ ಯಾಕೆ ಈ ಆತಂಕ? ಹೌದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಆ ಒಂದು ವಿಶೇಷತೆ ಇದೆ. ಇಂದು ಈ ರಾಜ್ಯ ಬಿಟ್ಟರೆ ಬೇರೆಲ್ಲೂ ಚುನಾವಣೆ ನಡೆಯುತ್ತಿಲ್ಲವಾದ್ದರಿಂದ ಎಲ್ಲರ ಕಣ್ಣು ಆ ರಾಜ್ಯದತ್ತ ನೆಟ್ಟಿದೆ. ಅದೇ ಸಮಯದಲ್ಲಿ ಕನ್ನಡ ಮತದಾರರು ಒಂದು ವಿಶಿಷ್ಟ ಲಕ್ಷಣವನ್ನು ಹೊಂದಿದ್ದಾರೆ. ಕಳೆದ 38 ವರ್ಷಗಳಲ್ಲಿ ಕರ್ನಾಟಕದ ಮತದಾರ ಪ್ರಭು ಯಾವುದೇ ಸರ್ಕಾರವನ್ನು ಮರು ಆಯ್ಕೆ ಮಾಡಿಲ್ಲ! ಉತ್ತಮವಾಗಿ ಆಡಳಿತ ನಡೆಸಿದ್ದೇವೆ ಎಂದು ಹೇಳಿಕೊಂಡ ಪಕ್ಷಗಳನ್ನೂ ಕನ್ನಡ ಮತದಾರರು ತಿರಸ್ಕರಿಸಿದ್ದಾರೆ! 1985ರ ನಂತರ ಇಲ್ಲಿಯವರೆಗೂ ರಾಜ್ಯದಲ್ಲಿ ಯಾವುದೇ ಪಕ್ಷ ಸರ್ಕಾರ ರಚಿಸಿಲ್ಲವೆಂದರೆ ಕನ್ನಡ ಮತದಾರರ ಮನಃಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಹುದು. ಅಷ್ಟಕ್ಕೂ ಕನ್ನಡ ಮತದಾರರಿಗೆ ಯಾಕೆ ಈ ಆತಂಕ? ಎಂಬುದೇ ಸದ್ಯದ ಬಿಲಿಯನ್ ಡಾಲರ್ ಪ್ರಶ್ನೆ.
ಕರ್ನಾಟಕದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ರಚಿಸಿದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು 1983 ರಿಂದ 1985 ರವರೆಗೆ ಅಲ್ಪಸಂಖ್ಯಾತ ಸರ್ಕಾರವನ್ನು ಮುನ್ನಡೆಸಿದರು. 1984 ರ ಲೋಕಸಭೆ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಆಡಳಿತಾರೂಢ ಸರ್ಕಾರ ಅಪಜಯ ಅನುಭವಿಸಿದಾಗ ಅವರು ರಾಜ್ಯ ಸರ್ಕಾರವನ್ನು ವಿಸರ್ಜಿಸಿದ್ದರು. 1985ರಲ್ಲಿ ಮಾತ್ರವೇ ಮತದಾರರು ಆಡಳಿತ ನಡೆಸುವ ಸರ್ಕಾರವನ್ನು ಪುರಸ್ಕರಿಸಿದ್ದು. ಅಂದು ಕರ್ನಾಟಕ ವಿಧಾನಸಭೆಗೆ ನಡೆದ ಮರು ಚುನಾವಣೆಯಲ್ಲಿ ಕನ್ನಡ ಮತದಾರರು ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರಕ್ಕೇ ಮತ ಹಾಕಿದರು (Ramakrishna Hegde-led Janata Party). ಆ ನಂತರ ನಡೆದ ಯಾವುದೇ ಚುನಾವಣೆಯಲ್ಲೂ ಅಧಿಕಾರದಲ್ಲಿರುವ ಸರ್ಕಾರ ಆರಿಸಿಬಂದಿಲ್ಲ.
ಅದಕ್ಕೆ ಬೇರೆ ಕಾರಣ ಅಂತೇನೂ ಇಲ್ಲ. 1990ರ ನಂತರ ಮೂರು ಪಕ್ಷಗಳು ಚುನಾವಣೆಗೆ ಸ್ಪರ್ಧಿಸುವುದು ರೂಢಿಯಾಗತೊಡಗಿತು. ಅದರಿಂದ ಒಂದೇ ಪಕ್ಷ ಅಧಿಕಾರಕ್ಕೆ ಬರುವುದು ಕಷ್ಟವಾಯಿತು. ಇದಕ್ಕೆ ಪ್ರಜ್ಞಾವಂತ ಕನ್ನಡ ಮತದಾರರೇ ಕಾರಣೀಭೂತರು ಎಂಬುದು ಆತಂಕದ, ಅಪವಾದದ ವಿಚಾರವಾಗಿದೆ. ಚುನಾವಣಾ ವಿಶ್ಲೇಷಕರ ಅಭಿಪ್ರಾಯದ ಪ್ರಕಾರ ಇಲ್ಲಿನ ಮತದಾರರ ಬೇಡಿಕೆಗಳು, ಆದ್ಯತೆಗಳು, ಆತಂಕಗಳು ಅಧಿಕವಾಗುತ್ತಲೇ ಸಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಭೌಗೋಳಿಕವಾಗಿಯೂ ವಿಶಾಲ ಕರ್ನಾಟಕದಲ್ಲಿ ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸವಿಸ್ತಾವರವಾಗಿ ಹರಡಿಕೊಂಡಿವೆ. ಕಾಂಗ್ರೆಸ್ ಪಕ್ಷ ರಾಜ್ಯದಾದ್ಯಂತ ಹರಡಿಕೊಂಡಿದೆ. ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚು. ಈ ಪ್ರದೇಶಗಳಲ್ಲಿ ಲಿಂಗಾಯತರ ಸಂಖ್ಯೆ ಹೆಚ್ಚು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಲಿಂಗಾಯತ ಮತಗಳು ಪ್ರಮುಖ ಪಾತ್ರವಹಿಸಿವೆ. ಮತ್ತು ಹಳೇ ಮೈಸೂರು ಭಾಗದಲ್ಲಿ ಜಿಡಿಎಸ್ ಪಕ್ಷಕ್ಕೆ ಪ್ರಬಲ ಹಿಡಿತವಿದೆ. ಆ ಪಕ್ಷದ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ರಾಜ್ಯದೆಲ್ಲೆಡೆ ವ್ಯಾಪಿಸಿರುವ ಕಾಂಗ್ರೆಸ್ ಹೆಚ್ಚು ಮತಗಳನ್ನು ಪಡೆಯುತ್ತಿದೆಯಾದರೂ ಉಳಿದ ಪಕ್ಷಗಳು ಒಂದಷ್ಟು ಹೆಚ್ಚು ಸ್ಥಾನಗಳನ್ನು ಗೆಲ್ಲುವುದೇ ವಾಡಿಕೆಯಾಗಿದೆ.
ಇಂದಿನ ಆಡಳಿತಾರೂಢ ಬಿಜೆಪಿ ಸರ್ಕಾರ ಮರು ಆಯ್ಕೆ ಆಗುತ್ತದಾ? ಮತದಾರ ಪ್ರಭುಗಳು ಏನನ್ನುತ್ತಾರೆ?
ಮತ್ತೊಂದೆಡೆ, ಇಡೀ ಕರ್ನಾಟಕದ ಇತಿಹಾಸದಲ್ಲಿ ಇದುವರೆಗೆ ಕೇವಲ ಮೂವರು ಮುಖ್ಯಮಂತ್ರಿಗಳು ತಮ್ಮ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ. ಆ ಮೂವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. ಮೊದಲನೆಯವರು ನಿಜಲಿಂಗಪ್ಪ ಮತ್ತು ಎರಡನೇ ಸಿಎಂ ದೇವರಾಜ್ ಅರಸ್ ಕೊನೆಗೆ ಆ ಸಾಧನೆ ಮಾಡಿದ ಮೂರನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದು ದಾಖಲಾರ್ಹ. ಅಂದಹಾಗೆ ಯಾವುದೆ ಪಕ್ಷಬ ಕರ್ನಾಟಕದಲ್ಲಿ ಒಂಟಿಯಾಗಿ ಅಧಿಕಾರ ಹಿಡಿಯಬೇಕು ಅಂದರೆ 113 ಸರಳ ಸ್ಪಷ್ಟ ಬಹುಮತದ ಅಗತ್ಯವಿದೆ. ಇಂದು ಆ ಮ್ಯಾಜಿಕ್ ಸಂಖ್ಯೆಯನ್ನು ಕರ್ನಾಟಕದ ಮತದಾರ ಪ್ರಭುಗಳು ಒಂದೇ ಪಕ್ಷಕ್ಕೆ ಕರುಣಿಸುತ್ತಾರಾ? ಇಂದಿನ ಆಡಳಿತಾರೂಢ ಬಿಜೆಪಿ ಸರ್ಕಾರ ಮರು ಆಯ್ಕೆ ಆಗುತ್ತದಾ? ಮತದಾರ ಪ್ರಭುಗಳು ಏನನ್ನುತ್ತಾರೆ?ಶನಿವಾರದ ಫಲಿತಾಂಶ ಇದಕ್ಕೆ ಉತ್ತರ ನೀಡಲಿದೆ. ಅದಕ್ಕೂ ಮುನ್ನ ಇಂದು ಅಷ್ಟೂ ಮತದಾರ ಪ್ರಭುಗಳು ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:37 am, Wed, 10 May 23