ಮತದಾನ ಮಾಡಿದವರಿಗೆ ಉಚಿತ ಉಪಾಹಾರಕ್ಕೆ ನಿರ್ಬಂಧ ಹೇರಿದ ಬಿಬಿಎಂಪಿ ಕ್ರಮಕ್ಕೆ ಹೈಕೋರ್ಟ್ ತಡೆ
ವಿಧಾಸನಭೆ ಚುನಾವಣೆಯಲ್ಲಿ ಮತದಾನ ಮಾಡಿ ಬಂದವರಿಗೆ ಉಚಿತವಾಗಿ ಉಪಾಹಾರ ನೀಡಲು ಮುಂದಾಗಿದ್ದ ಬೆಂಗಳೂರಿನ ಎರಡು ಹೋಟೆಲ್ಗಳ ನಿರ್ಧಾರಕ್ಕೆ ಬಿಬಿಎಂಪಿ ನಿರ್ಬಂಧ ವಿಧಿಸಿದ್ದಕ್ಕೆ ಹೈಕೋರ್ಟ್ ತಡೆ ನೀಡಿದೆ.
ಬೆಂಗಳೂರು: ವಿಧಾಸನಭೆ ಚುನಾವಣೆಯಲ್ಲಿ (Karnataka Assembly Election 2023) ಮತದಾನ (Voting) ಮಾಡಿ ಬಂದವರಿಗೆ ಉಚಿತವಾಗಿ ಉಪಾಹಾರ ನೀಡಲು ಮುಂದಾಗಿದ್ದ ಬೆಂಗಳೂರಿನ ಎರಡು ಹೋಟೆಲ್ಗಳ ನಿರ್ಧಾರಕ್ಕೆ ಬಿಬಿಎಂಪಿ ನಿರ್ಬಂಧ ವಿಧಿಸಿದ್ದಕ್ಕೆ ಹೈಕೋರ್ಟ್ ತಡೆ ನೀಡಿದೆ. ಬಿಬಿಎಂಪಿ ಕ್ರಮದ ವಿರುದ್ಧ ಹೋಟೆಲ್ ಮಾಲೀಕರ ಸಂಘಟನೆ ಹೈಕೋರ್ಟ್ ಮೊರೆ ಹೋಗಿತ್ತು. ಈ ಕುರಿತು ಮಂಗಳವಾರ ಸಂಜೆ ವಿಚಾರಣೆ ನಡೆಯಿತು. ಮತದಾನ ಪ್ರಮಾಣ ಹೆಚ್ಚಿಸುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೆವು. ಇದಕ್ಕೆ ನಿರ್ಬಂಧ ಹೇರುವುದು ಸರಿಯಲ್ಲ ಎಂದು ಹೋಟೆಲ್ ಮಾಲೀಕರ ಸಂಘಟನೆ ಮನವಿ ಮಾಡಿತು. ಇದನ್ನು ಹೈಕೋರ್ಟ್ ಪುರಸ್ಕರಿಸಿದೆ.
ಮತದಾನ ಮಾಡಿದ ಬಂದವರಿಗೆ ಉಚಿತವಾಗಿ ಬೆಣ್ಣೆ ದೋಸೆ, ಮೈಸೂರು ಪಾಕ್ ಮತ್ತು ತಂಪು ಪಾನೀಯಗಳನ್ನು ನೀಡುವುದಾಗಿ ನಗರದ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಮತ್ತು ಚಾಲುಕ್ಯ ಸಾಮ್ರಾಟ್ ಹೋಟೆಲ್ಗಳು ಪ್ರಕಟಣೆ ನೀಡಿದ್ದವು. ಆದರೆ, ಇದಕ್ಕೆ ಬಿಬಿಎಂಪಿ ಆಕ್ಷೇಪ ವ್ಯಕ್ತಪಡಿಸಿತ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಇಂತಹ ಆಫರ್ಗಳನ್ನು ಹೋಟೆಲ್ ಮಾಲೀಕರು ನೀಡಬಾರದು. ಇದಕ್ಕೆ ನಾವು ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದರು. ನಂತರ, ಇಂತಹ ಆಫರ್ಗಳನ್ನು ಹೋಟೆಲ್ ಮಾಲೀಕರು ನೀಡಬಾರದು ಎಂದು ಸೂಚನೆಯನ್ನೂ ನೀಡಿದ್ದರು.
ಇದನ್ನೂ ಓದಿ: ಮತದಾನ ಮಾಡಿದವರಿಗೆ ಈ ಎರಡು ಹೊಟೇಲ್ಗಳಲ್ಲಿ ಉಪಹಾರ ಉಚಿತ: ಬಿಬಿಎಂಪಿ ಗರಂ
ಬಿಬಿಎಂಪಿಯ ನಿರ್ಧಾರಕ್ಕೆ ಹೋಟೆಲ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಆಫರ್ ರಾಜಕೀಯ ಹೊರತಾಗಿದೆ. 2018 ರಲ್ಲಿ, ಬೆಂಗಳೂರಿನಲ್ಲಿ ಶೇ 54.7 ರಷ್ಟು ನೀರಸ ಮತದಾನವಾಗಿತ್ತು. ಹೀಗಾಗಿ ಮತದಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ರೀತಿ ನಾವು ಆಫರ್ ನೀಡಿದ್ದೇವೆ ಎಂದು ಹೇಳಿದ್ದರು. 2018 ಮತ್ತು 2019 ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ಸಮಯದಲ್ಲೂ ಕೂಡಾ ನಾವು ಈ ಆಫರ್ ನೀಡಿದ್ದೇವೆ. 2018 ರಲ್ಲಿ ಸುಮಾರು 3,900 ಮತದಾರರ-ಗ್ರಾಹಕರು ನಮ್ಮ ಕೊಡುಗೆಯನ್ನು ಪಡೆದುಕೊಂಡಿದ್ದಾರೆ. 2019 ರಲ್ಲಿ ಈ ಸಂಖ್ಯೆ 5,100 ಕ್ಕೆ ಏರಿದೆ. ನಾವು ಈ ಬಾರಿಯು ಆಫರ್ ನೀಡಲು ನಿರ್ಧರಿಸಿದ್ದೇವೆ ಎಂದು ಹೋಟೆಲ್ ಮಾಲೀಕ ಕೃಷ್ಣ ರಾಜ್ ಹೇಳಿದ್ದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ