ಮತದಾನ ಮಾಡಿದವರಿಗೆ ಈ ಎರಡು ಹೊಟೇಲ್​​ಗಳಲ್ಲಿ ಉಪಹಾರ ಉಚಿತ: ಬಿಬಿಎಂಪಿ ಗರಂ

ಮತದಾನ ಮಾಡಿದ ಗ್ರಾಹಕರಿಗೆ ಬೆಳಗಿನ ಉಪಹಾರವನ್ನು ಉಚಿತವಾಗಿ ನೀಡಲು ನಗರದ ಎರಡು ಪ್ರತಿಷ್ಠಿತ ಹೋಟೆಲ್​ಗಳು ನಿರ್ಧರಿಸಿವೆ. ಆದರೆ ಇದು ಬಿಬಿಎಂಪಿ ಕೆಂಗಣ್ಣಿಗೆ ಗುರಿಯಾಗಿದೆ.

ಮತದಾನ ಮಾಡಿದವರಿಗೆ ಈ ಎರಡು ಹೊಟೇಲ್​​ಗಳಲ್ಲಿ ಉಪಹಾರ ಉಚಿತ: ಬಿಬಿಎಂಪಿ ಗರಂ
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on:May 09, 2023 | 3:09 PM

ಬೆಂಗಳೂರು: ಕರ್ನಾಟಕ ವಿಧಾಸನಭೆ ಚುನಾವಣೆಯ (Karnataka Assembly Election 2023) ಮತದಾನ (Voting) ನಾಳೆ (ಮೇ.10) ರಂದು ನಡೆಯಲಿದ್ದು, ಈ ಸಂಬಂಧ ಚುನಾವಣಾ ಆಯೋಗ (Election Commission) ಅನೇಕ ಸಿದ್ದತೆಗಳನ್ನು ಮಾಡಿಕೊಂಡಿದೆ. ಮತದಾನ ಮಾಡಿದ ಗ್ರಾಹಕರಿಗೆ ಬೆಳಗಿನ ಉಪಹಾರವನ್ನು ಉಚಿತವಾಗಿ ನೀಡಲು ನಗರದ ಎರಡು ಪ್ರತಿಷ್ಠಿತ ಹೋಟೆಲ್​ಗಳು ನಿರ್ಧರಿಸಿವೆ. ಆದರೆ ಇದು  ಬಿಬಿಎಂಪಿಯ ಕೆಂಗಣ್ಣಿಗೆ ಗುರಿಯಾಗಿದೆ. ಉಚಿತ ಆಹಾರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​ ಮಾತನಾಡಿ​ ಇದಕ್ಕೆ ನಾವು ಅನುಮತಿ ನೀಡುವುದಿಲ್ಲ. ಇಂತಹ ಆಫರ್​​ಗಳನ್ನು ಹೋಟೆಲ್​​ ಮಾಲಿಕರು ನೀಡಬಾರದು ಎಂದು ಸೂಚನೆ ನೀಡಿದ್ದಾರೆ.

ಈ ಕುರಿತು ಸುತ್ತೋಲೆ ಹೊರಡಿಸಿದ ಚುನಾವಣಾ ಆಯೋಗ “ಈಗಾಗಲೇ ಕೆಲವು ಪತ್ರಕೆಗಳಲ್ಲಿ ಕೆಲವೊಂದು ಹೋಟೆಲ್​​ಗಳ ಮುಂಭಾಗದಲ್ಲಿ 10/05/2023 ರಂದು ಮತದಾನ ಮಾಡಿ ಬರುವ ಮತದಾರರು ಗುರುತು ತೋರಿಸಿದಲ್ಲಿ ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ತಿಂಡಿ, ಪಾನಿಯ ಹಾಗೂ ಊಟದ ವ್ಯವಸ್ಥೆ ಕಲ್ಪಿಸುವುದಾಗಿ ಬೋರ್ಡ್​​​ಗಳನ್ನು ಅಳವಡಿಸಿರುವುದು ಕಂಡುಬಂದಿದ್ದು, ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಈ ರೀತಿಯ ಪ್ರಕಟಣೆಗಳಿಗೆ ಸಂಬಂಧಿಸಿದ ಹೋಟೆಲ್​​ ಮಾಲೀಕರನ್ನೇ ನೇರ ಹೊಣೆಗಾರರನ್ನಾಗಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದೆ.

ಈ ಬಗ್ಗೆ ನಗರದ ಎರಡು ಪ್ರತಿಷ್ಠಿತ ರೆಸ್ಟೋರೆಂಟ್‌ಗಳಾದ ನಿಸರ್ಗ ಗ್ರ್ಯಾಂಡ್ ಮತ್ತು ಚಾಲುಕ್ಯ ಸಾಮ್ರಾಟ್ ಮಾಲೀಕರು ಮಾತನಾಡಿ ಈ ಆಫರ್​​ ರಾಜಕೀಯ ಹೊರತಾಗಿದೆ. 2018 ರಲ್ಲಿ, ಬೆಂಗಳೂರಿನಲ್ಲಿ ಶೇ 54.7 ರಷ್ಟು ನೀರಸ ಮತದಾನವಾಗಿತ್ತು. ಹೀಗಾಗಿ ಮತದಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ರೀತಿ ನಾವು ಆಫರ್​ ನೀಡಿದ್ದೇವೆ ಎಂದು ಹೇಳಿದ್ದಾರೆ.

ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೋಟೆಲ್, ಮತದಾನ ಮಾಡಿದವರಿಗೆ ಉಚಿತವಾಗಿ ಬೆಣ್ಣೆ ದೋಸೆ, ಮೈಸೂರು ಪಾಕ್ ಮತ್ತು ತಂಪು ಪಾನೀಯಗಳನ್ನು ನೀಡುವುದಾಗಿ ನಿರ್ಧರಿಸಿದೆ. ಈ ಸಂಬಂಧ ನಾವು ಅನುಮತಿ ಪಡೆದಿದ್ದೇವೆ. 2018 ಮತ್ತು 2019 ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ಸಮಯದಲ್ಲೂ ಕೂಡಾ ನಾವು ಈ ಆಫರ್​​ ನೀಡಿದ್ದೇವೆ. 2018 ರಲ್ಲಿ ಸುಮಾರು 3,900 ಮತದಾರರ-ಗ್ರಾಹಕರು ನಮ್ಮ ಕೊಡುಗೆಯನ್ನು ಪಡೆದುಕೊಂಡಿದ್ದಾರೆ. 2019 ರಲ್ಲಿ ಈ ಸಂಖ್ಯೆ 5,100 ಕ್ಕೆ ಏರಿದೆ. ನಾವು ಈ ಬಾರಿಯು ಆಫರ್​​ ನೀಡಲು ನಿರ್ಧರಿಸಿದ್ದೇವೆ ಎಂದು ಹೋಟೆಲ್‌ ಮಾಲೀಕ ಕೃಷ್ಣ ರಾಜ್ ಹೇಳಿದರು.

ಇದನ್ನೂ ಓದಿ: ಅಭ್ಯರ್ಥಿಗಳ ಸೋಲು ಗೆಲುವಿನ ಮೇಲೆ ಬೆಟ್ಟಿಂಗ್ ಕಟ್ಟುವವರೇ ಹುಷಾರ್

ಚರ್ಚ್ ಸ್ಟ್ರೀಟ್‌ನಲ್ಲಿರುವ ಚಾಲುಕ್ಯ ಸಾಮ್ರಾಟ್ ಕೆಫೆಯು ಮತದಾರರಿಗೆ ಬೆಳಿಗ್ಗೆ 7:30 ರಿಂದ 11:30 ರವರೆಗೆ ಉಚಿತ ಉಪಹಾರವನ್ನು ನೀಡಲು ನಿರ್ಧರಿಸಿದೆ.

ಇದರೊಂದಿಗೆ 100 ಹೊಸ ಮತದಾರರಿಗೆ ಉಚಿತವಾಗಿ ಸಿನಿಮಾ ಟಿಕೆಟ್ ನೀಡಲು ಹೋರ್ಡಿಂಗ್ ರೆಸ್ಟೋರೆಂಟ್ ನಿರ್ಧರಿಸಿದೆ. ಮೊದಲ 100 ಯುವ ಮತದಾರರಿಗೆ ಉಚಿತವಾಗಿ ಕನ್ನಡ ಚಲನಚಿತ್ರ ಟಿಕೆಟ್ ನೀಡಲಾಗುವುದು. ಸಿನಿಮಾ ಇನ್ನೂ ನಿರ್ಧಾರವಾಗಿಲ್ಲ. ಈ ಬಗ್ಗೆ ಕನ್ನಡ ಫಿಲಂ ಚೇಂಬರ್ ಜೊತೆ ಚರ್ಚೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:56 am, Tue, 9 May 23