ಧಾರವಾಡ: ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿನಯ್ ಕುಲಕರ್ಣಿ ಗೆಲುವಿನ ನಗೆ ಬೀರಿದ್ದಾರೆ. ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಕುಲಕರ್ಣಿಗೆ ಕ್ಷೇತ್ರ ಪ್ರವೇಶಕ್ಕೆ ಹೈಕೋರ್ಟ್ನಿಂದ ನಿರ್ಬಂಧವಿದ್ದರೂ, ಕ್ಷೇತ್ರಕ್ಕೆ ತೆರಳಿ ಪ್ರಚಾರ ಕೈಗೊಳ್ಳದಿದ್ದರೂ ಅವರು ಬಿಜೆಪಿಯ ಅಮೃತ್ ದೇಸಾಯಿ ವಿರುದ್ಧ ಗೆಲುವು ಸಾಧಿಸಿದ್ದಾರೆ.
ವಿನಯ್ ಕುಲಕರ್ಣಿ ಪರ ಅವರ ಕುಟುಂಬದವರು ನಿರಂತರ ಪ್ರಚಾರ ನಡೆಸಿದ್ದರು. ನಾಮಪತ್ರ ಕೂಡ ಅವರ ಪರವಾಗಿ ಅವರ ಪತ್ನಿ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಕೆ ದಿನ ವಿಡಿಯೋ ಕಾಲ್ ಮೂಲಕ ಕಾರ್ಯಕರ್ತರ ಜೊತೆ ವಿನಯ್ ಕುಲಕರ್ಣಿ ಮಾತನಾಡಿದ್ದರು.
ಯೋಗೇಶಗೌಡ ಕೊಲೆ ಕೇಸ್ನಲ್ಲಿ ಆರೋಪಿಯಾಗಿರುವ ವಿನಯ್ ಕುಲಕರ್ಣಿಗೆ ಕ್ಷೇತ್ರ ಪ್ರವೇಶಕ್ಕೆ ನಿರ್ಬಂಧ ಇದ್ದರೂ ಕಾಂಗ್ರೆಸ್ ಟಿಕೆಟ್ ನೀಡಿತ್ತು. 2018 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿನಯ್ ಕುಲಕರ್ಣಿ ಅವರನ್ನು 20 ಸಾವಿರ ಮತಗಳ ಅಂತರದಿಂದ ಸೋಲಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಅಮೃತ್ ದೇಸಾಯಿ ಭರ್ಜರಿ ಜಯ ಗಳಿಸಿದ್ದರು. ಈ ಬಾರಿ ಫಲಿತಾಂಶ ಉಲ್ಟಾ ಆಗಿದೆ.
Published On - 12:28 pm, Sat, 13 May 23