ಸಿಎಂ ಆಯ್ಕೆ ಸಂಧಾನ ಯಶಸ್ವಿ; ಸೂತ್ರಕ್ಕೆ ಬಗ್ಗಿದ ಡಿಕೆ ಶಿವಕುಮಾರ್, ಸುರೇಶ್ ಹೇಳಿದ್ದೇನು?

|

Updated on: May 18, 2023 | 10:57 AM

ಕೊನೆಗೂ ಸಿಎಂ ಆಯ್ಕೆ ಸಂಧಾನ ಯಶಸ್ವಿಯಾಗಿದೆ. ಇನ್ನು ಈ ಬಗ್ಗೆ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಂದು ಮಾತನಾಡಿದ್ದಾರೆ. ಹಾಗಾದ್ರೆ ಅಣ್ತಮ್ಮಸ್ ಏನೆಲ್ಲ ಹೇಳಿದ್ದಾರೆ ಎನ್ನುವುದು ಇಲ್ಲಿದೆ ನೋಡಿ.

ಸಿಎಂ ಆಯ್ಕೆ ಸಂಧಾನ ಯಶಸ್ವಿ; ಸೂತ್ರಕ್ಕೆ ಬಗ್ಗಿದ ಡಿಕೆ ಶಿವಕುಮಾರ್, ಸುರೇಶ್ ಹೇಳಿದ್ದೇನು?
ಡಿಕೆ ಶಿವಕುಮಾರ್, ಡಿಕೆ ಸುರೇಶ್
Follow us on

ನವದೆಹಲಿ: ಕರ್ನಾಟಕ ಮುಖ್ಯಮಂತ್ರಿ (Karnataka CM Post)ಆಯ್ಕೆ ಸಂಬಂಧ ಕಳೆದ ನಾಲ್ಕೈದು ದಿನಗಳಿದಂದ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಕೊನೆಗೂ ಕಾಂಗ್ರೆಸ್(Congress) ಹೈಕಮಾಂಡ್ ಬ್ರೇಕ್ ಹಾಕಿದೆ. ಸಿದ್ದರಾಮಯ್ಯ(Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷರ ನಡುವೆ ಅಧಿಕಾರ ಹಂಚಿಕೆ ಮೂಲಕ ಡಿಕೆ ಶಿವಕುಮಾರ್ (DK Shivakumar) ಮನವೊಲಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಯಶಸ್ವಿಯಾಗಿದೆ. ಯಾರು ಏನೇ ಹೇಳಿದರೂ ಬಗ್ಗದ ಡಿಕೆ ಶಿವಕುಮಾರ್ ಅಂತಿಮವಾಗಿ ಸೋನಿಯಾ ಗಾಂಧಿ ಹೆಣೆದಿದ್ದ ಸೂತ್ರಕ್ಕೆ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. ಇನ್ನು ಸಂಧಾನದ ಬಳಿಕ ಮೊದಲ ಬಾರಿಗೆ ಡಿಕೆ ಶಿವಕುಮಾರ್ ಹಾಗೂ ಸಹೋದರ ಡಿಕೆ ಸುರೇಶ್(DK Suresh) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಅಣ್ಣನಿಗೆ ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪಟ್ಟು ಸಡಿಲಿಸಿ ಹೈಕಮಾಂಡ್​ ಸೂತ್ರಕ್ಕೆ ಒಪ್ಪಿದ ಡಿಕೆ ಶಿವಕುಮಾರ್: ಏನದು ಸೂತ್ರ? ತಡರಾತ್ರಿ ಏನೆಲ್ಲ ಆಯ್ತು? ಇಲ್ಲಿದೆ ಡಿಟೇಲ್ಸ್

ನವದೆಹಲಿಯಲ್ಲಿ ಇಂದು(ಮೇ 18) ರಾಷ್ಟ್ರೀಯ ಮಾಧ್ಯಮಗಳೊಂದಿಗೆ ಮಾತನಾಡಿರುವ ಡಿಕೆ ಸುರೇಶ್, ನನಗೆ ಸಂಪೂರ್ಣ ಸಂತೋಷವಿಲ್ಲ. ಆದರೆ ಕರ್ನಾಟಕದ ಹಿತದೃಷ್ಟಿಯಿಂದ ಡಿಕೆ ಶಿವಕುಮಾರ್ ಅವರು ಒಪ್ಪಿದ್ದಾರೆ. ನಾವು ನೀಡಿರುವ ಭರವಸೆಗಳನ್ನು ಮೊದಲು ಈಡೇರಿಸಬೇಕು. ಅದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಪ್ಪಿಕೊಳ್ಳಬೇಕಾಯ್ತು. ಭವಿಷ್ಯದಲ್ಲಿ ಏನಾಗುತ್ತೆ ಎಂಬುವುದನ್ನು ನೋಡುತ್ತೇವೆ. ಮುಂದೇನಾಗುತ್ತೆ ಕಾದು ನೋಡೋಣ ಎಂದು ಬೇಸರ ವ್ಯಕ್ತಪಡಿಸಿದರು.


ಇನ್ನು ಸಿಎಂ ಸ್ಥಾನಕ್ಕೆ ಹಿಡಿದಿದ್ದ ಪಟ್ಟ ಸಡಿಲಿಸಿ ಸೋನಿಯಾ ಗಾಂಧಿ ಅಧಿಕಾರ ಹಂಚಿಕೆ ಸೂತ್ರಕ್ಕೆ ಒಪ್ಪಿರುವ ಡಿಕೆ ಶಿವಕುಮಾರ್​ ಈ ಬಗ್ಗೆ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಹೈಕಮಾಂಡ್​ ಯಾವುದೇ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಇಂದು ಸಂಜೆ 7 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ ಎಂದು ಹೇಳಿದರು. ಈ ಮೂಲಕ ಹೈಕಮಾಂಡ್​ ಸೂತ್ರಕ್ಕೆ ಬದ್ಧ ಎನ್ನುವ ಅರ್ಥದಲ್ಲಿ ಹೇಳಿದರು.

ಅಧಿಕಾರ ಹಂಚಿಕೆ

ಹೌದು…ಮೊದಲಿಗೆ ಎರೆಡುವರೆ ವರ್ಷ ಕಾಲ ಸಿದ್ದರಾಮಯ್ಯ ಅವರು ಸಿಎಂ ಆಗಿ ಆಡಳಿತ ನಡೆಸಲಿದ್ದಾರೆ. ಬಳಿಕ ಎರಡುವರೆ ವರ್ಷ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿದೆ. ಇದೇ ಮೇ.20ರಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಎರಡನೇ ಬಾರಿಗೆ ಸಿಎಂ ಆಗಿ ಸಿದ್ದರಾಮಯ್ಯ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇನ್ನು ಇದೇ ವೇಳೆ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಸಹ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಇನ್ನು ಮುಖ್ಯವಾಗಿ ಇಂದು(ಮೇ 18) ಸಂಜೆ 7 ಗಂಟೆಗೆ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ಈ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಲಿದೆ/.