ಬೆಂಗಳೂರು: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ(Kanteerava Stadium) ಇಂದು ರಾಜ್ಯದ ಸಿಎಂ ಆಗಿ ಸಿದ್ದರಾಮಯ್ಯ(Siddaramaiah) ಹಾಗೂ ಡಿಸಿಎಂ ಆಗಿ ಡಿಕೆ ಶಿವಕುಮಾರ್(DK Shivakumar) ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ(Oath taking Ceremony). ಸಮಾರಂಭಕ್ಕಾಗಿ ಭರ್ಜರಿ ಸಿದ್ಧತೆಗಳಾಗಿದ್ದು ಇದ್ರಿಂದ ಬೆಂಗಳೂರಿಗರಿಗೆ ಟ್ರಾಫಿಕ್ ಜಾಮ್(Traffic Jam) ಬಿಸಿ ತಟ್ಟುವ ಸಾಧ್ಯತೆಯಿದೆ. ಈ ಹಿನ್ನೆಲೆ ನಗರದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಕೆಲವು ರಸ್ತೆಗಳು ಬಂದ್ ಆಗಿರಲಿವೆ. ಕ್ವೀನ್ಸ್ ವೃತ್ತದಿಂದ ಸಿದ್ದಲಿಂಗಯ್ಯ ವೃತ್ತದವರೆಗೆ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಇದರ ಜೊತೆಗೆ ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಮೇ 20 ಮತ್ತು 21ರಂದು ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ತೊಂದರೆಯಾಗಲಿದೆ.
ಸಿಇಟಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಬೆಳಗ್ಗೆ 9ಗಂಟೆಯೊಳಗೆ ಪರೀಕ್ಷಾ ಕೇಂದ್ರ ತಲುಪುವಂತೆ ದೆಹಲಿಯಲ್ಲಿ ನಿಯೋಜಿತ ಡಿಸಿಎಂ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ. ಕಂಠೀರವ ಕ್ರೀಡಾಂಗಣ ಬಳಿಯ ಪರೀಕ್ಷಾ ಕೇಂದ್ರಗಳಲ್ಲಿಯೇ ಮಧ್ಯಾಹ್ನದ ಊಟದ ವ್ಯವಸ್ಥೆಗೆ ಕಾಲೇಜು ಆಡಳಿತ ಮಂಡಳಿಗಳಿಗೆ ಸೂಚನೆ ನೀಡಲಾಗಿದೆ ಅಂತ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಸಿಇಟಿ ಬರೆಯುವ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ಕ್ರಮಕ್ಕೆ ಸೂಚನೆ ನೀಡಿದ್ದು ಪರೀಕ್ಷಾ ಕೇಂದ್ರಗಳಿಗೆ ತೆರಳುವವರು ಮುಂಚಿತವಾಗಿ ತೆರಳಲು ಟ್ವೀಟ್ ಮೂಲಕ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಸಹಾಯ ಬೇಕಿದ್ದಲ್ಲಿ ಪೊಲೀಸರನ್ನು ಸಂಪರ್ಕಿಸಲು ಮನವಿ ಮಾಡಿದ್ದಾರೆ.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಖ್ಯಮಂತ್ರಿಗಳು ಮತ್ತು ಸಚಿವರ ಪ್ರಮಾಣ ವಚನ ಸಮಾರಂಭದಿಂದಾಗಿ ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನಾನೂಕೂಲ ಆಗದಂತೆ ಪೊಲೀಸರು ಎಚ್ಚರಿಕೆಯಿಂದ ಕ್ರಮಕೈಗೊಳ್ಳಬೇಕು.
ಪ್ರಮಾಣ ವಚನ ಸಮಾರಂಭದ ಕಾರಣದಿಂದಾಗಿ ಕಂಠೀರವ ಕ್ರೀಡಾಂಗಣದ ಸುತ್ತಮುತ್ತ ವಾಹಣ ದಟ್ಟಣೆ ಸಂಭವಿಸುವ ಸಾಧ್ಯತೆ ಇದೆ.…
— Siddaramaiah (@siddaramaiah) May 19, 2023
ಲ್ಯಾವೆಲ್ಲೆ ರಸ್ತೆ ಅಥವಾ ಕ್ವೀನ್ಸ್ ರಸ್ತೆಯ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದ ಕಡೆಗೆ ತೆರಳುವ ವಾಹನಗಳು ತಿಮ್ಮಯ್ಯ ವೃತ್ತದಲ್ಲಿ ತಿರುವು ಪಡೆದು ಕೆ.ಆರ್.ವೃತ್ತ ಮೂಲಕ ಸಂಚರಿಸಬೇಕಿದೆ. ಸಿಟಿಒ ಸರ್ಕಲ್ನಿಂದ ಕ್ವೀನ್ಸ್ ವೃತ್ತದ ಕಡೆಗೆ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ. ಕಬ್ಬನ್ ರಸ್ತೆಯ ಮೂಲಕ ಅನಿಲ್ ಕುಂಬ್ಳೆ ಸರ್ಕಲ್ ಕಡೆಗೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹಲಸೂರು ಗೇಟ್ನಿಂದ ಸಿದ್ದಲಿಂಗಯ್ಯ ವೃತ್ತದ ಕಡೆ ತೆರಳುವ ವಾಹನಗಳು ದೇವಾಂಗ ಜಂಕ್ಷನ್ ಹಾಗೂ ಮಿಷನ್ ರಸ್ತೆ ಕಡೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ.
ಕಸ್ತೂರಬಾ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆಯಲ್ಲಿ ವಾಹನ ನಿಲುಗಡೆ ನಿರ್ಬಂಧ ಹೇರಲಾಗಿದ್ದು, ಸೇಂಟ್ ಜೋಸೆಫ್ ಕಾಲೇಜು ಮೈದಾನದಲ್ಲಿ ಗಣ್ಯರ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಬಿಬಿಎಂಪಿ ಮುಖ್ಯ ಕಚೇರಿ ಆವರಣ, ಬಾದಾಮಿ ಹೌಸ್, ಯುನೈಟೆಡ್ ಮಿಷನ್ ಕಾಲೇಜು ಮೈದಾನ, ಅರಮನೆ ಮೈದಾನದಲ್ಲಿ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಸೂಚನೆ ನೀಡಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ