ಮತದಾರರ ಖಾಸಗಿ ವಿಷಯ ಸಂಗ್ರಹಿಸಲು ಚಿಲುಮೆ ಸಂಸ್ಥೆಗೆ ಅವಕಾಶ; ತುಷಾರ್ ಗಿರಿನಾಥ್​ ವಿರುದ್ಧ ತನಿಖೆಗೆ ಆಗ್ರಹ

ಮತದಾರರ ಖಾಸಗಿ ವಿಷಯ ಸಂಗ್ರಹಿಸಲು ಚಿಲುಮೆ ಸಂಸ್ಥೆಗೆ ಅವಕಾಶ ನೀಡಿದ ಆರೋಪದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್​ ವಿರುದ್ಧ ತನಿಖೆ ನಡೆಸುವಂತೆ ಎಂಎಲ್​ಸಿ ರಮೇಶ್ ಬಾಬು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಮತದಾರರ ಖಾಸಗಿ ವಿಷಯ ಸಂಗ್ರಹಿಸಲು ಚಿಲುಮೆ ಸಂಸ್ಥೆಗೆ ಅವಕಾಶ; ತುಷಾರ್ ಗಿರಿನಾಥ್​ ವಿರುದ್ಧ ತನಿಖೆಗೆ ಆಗ್ರಹ
ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌
Image Credit source: newindianexpress.com

Updated on: May 22, 2023 | 7:01 PM

ಬೆಂಗಳೂರು: ಮತದಾರರ ಖಾಸಗಿ ವಿಷಯ ಸಂಗ್ರಹಿಸಲು ಚಿಲುಮೆ ಸಂಸ್ಥೆಗೆ ಅವಕಾಶ ನೀಡಿದ ಆರೋಪದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್​ ವಿರುದ್ಧ ತನಿಖೆ ನಡೆಸುವಂತೆ ಎಂಎಲ್​ಸಿ ರಮೇಶ್ ಬಾಬು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುವಾಗ ಲೋಪ ಎಸಗಿದ, ಮತದಾರರ ಖಾಸಗಿ ವಿಷಯ ಸಂಗ್ರಹಿಸಲು ಚಿಲುಮೆ ಸಂಸ್ಥೆಗೆ ಅವಕಾಶ ನೀಡಿದ ಆರೋಪ ತುಷಾರ್ ಗಿರಿನಾಥ್ ಮೇಲಿದೆ.

ಚಿಲುಮೆ ಸಂಸ್ಥೆಗೆ ಅವಕಾಶ ನೀಡಿ ತುಷಾರ್ ಗಿರಿನಾಥ್ ಲೋಪವೆಸಗಿದ್ದಾರೆ. ಈ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಲಿಗೆ ಕಾರಣವಾಗಿದ್ದಾರೆ. 2ರಿಂದ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿದ್ದಾರೆ. ಚಿಲುಮೆ ಸಂಸ್ಥೆ ಲೋಪದ ಬಗ್ಗೆ ಚುನಾವಣಾ ಆಯೋಗ ತನಿಖೆಗೆ ಆದೇಶಿಸಿತ್ತು. ವರದಿ ಪಡೆದುಕೊಂಡಿದ್ದರೂ ಪೂರ್ಣ ಪ್ರಮಾಣದಲ್ಲಿ ತನಿಖೆ ಆಗಿರುವುದಿಲ್ಲ. ತುಷಾರ್ ಗಿರಿನಾಥ್​ ಮಾಡಿರುವ ತಪ್ಪಿನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗಲ್ಲ ಎಂದು ಸಿದ್ದರಾಮಯ್ಯಗೆ ಬರೆದ ಪತ್ರದಲ್ಲಿ ರಮೇಶ್ ಬಾಬು ಉಲ್ಲೇಖಿಸಿದ್ದಾರೆ.

ಚುನಾವಣಾ ಅಧಿಕಾರಿಯಾಗಿ ಇವರ ಕರ್ತವ್ಯಲೋಪವನ್ನು ಬೇರೆ ಅಧಿಕಾರಿಗಳ ಮೇಲೆ ವರ್ಗಾಯಿಸಲೂ ಸಾಧ್ಯವಿಲ್ಲ. ಉನ್ನತ ಮಟ್ಟದ ತನಿಖೆಯ ಮೂಲಕ ಇವರ ಅಕ್ರಮ ಬಯಲುಗೊಳಿಸಬೇಕು. ಜೊತೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತ್ತೆ ಮತ್ತೆ ಇಂತಹ ಲೋಪಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿರುತ್ತದೆ. ರಾಜ್ಯ ಸರ್ಕಾರವು ಯಾವುದೇ ಪ್ರಭಾವಕ್ಕೆ ಒಳಗಾಗದೆ ಇವರ ಮೇಲೆ ಪೂರ್ಣ ಮಟ್ಟದ ತನಿಖೆಯನ್ನು ನಡೆಸಬೇಕಾಗಿರುತ್ತದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್‌ರವರ ಮೂಲಕ ಆಗಿರುವ ಮತದಾರರ ಪಟ್ಟಿಯ ಲೋಪವನ್ನು ತನಿಖೆ ಮಾಡಲು ನಿರ್ದೇಶನ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ