Yadgir: ಯಾದಗಿರಿಯಲ್ಲಿ ಬಿಜೆಪಿ ಕಾಂಗ್ರೆಸ್ ಮುಖಂಡರ ನಡುವೆ ದೊಣ್ಣೆ ಫೈಟ್

|

Updated on: May 10, 2023 | 9:52 PM

ಕರ್ನಾಟಕ ವಿಧಾನಸಭೆಗೆ ಇಂದು ಮತದಾನ ನಡೆದಿದ್ದು, ಕೆಲವೆಡೆ ಅಹಿತಕರ ಘಟನೆಗಳು ನಡೆದಿವೆ. ಯಾದಗಿರಿ ಜಿಲ್ಲೆಯ ಶಹಾಪುರ‌ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಗಲಾಟೆಯಾಗಿದೆ.

Yadgir: ಯಾದಗಿರಿಯಲ್ಲಿ ಬಿಜೆಪಿ ಕಾಂಗ್ರೆಸ್ ಮುಖಂಡರ ನಡುವೆ ದೊಣ್ಣೆ ಫೈಟ್
ಯಾದಗಿರಿ ಜಿಲ್ಲೆಯ ಶಹಾಪುರ‌ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಗಲಾಟೆ
Follow us on

ಯಾದಗಿರಿ: ಕರ್ನಾಟಕ ವಿಧಾನಸಭೆಗೆ (Karnataka Assembly Elections) ಇಂದು ಮತದಾನ (Voting) ನಡೆದಿದ್ದು, ಕೆಲವೆಡೆ ಅಹಿತಕರ ಘಟನೆಗಳು ನಡೆದಿವೆ. ಯಾದಗಿರಿ (Yadgir) ಜಿಲ್ಲೆಯ ಶಹಾಪುರ‌ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಗಲಾಟೆಯಾಗಿದೆ (BJP Congress Fight). ಇನ್ನೇನು ಮತದಾನ ಪ್ರಕ್ರಿಯೆ ಮುಗಿಯುವ ಹಂತಕ್ಕೆ ತಲುಪಿತು ಎಂದಾದಾಗ ಶಹಾಪುರ‌ ಕ್ಷೇತ್ರದ ಕೆಂಭಾವಿಯಲ್ಲಿ ಬಿಜೆಪಿ ಮುಖಂಡರಿಂದ ಕಾಂಗ್ರೆಸ್ ಮುಖಂಡರ‌‌ ಮೇಲೆ‌ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೈಯಲ್ಲಿ ದೊಣ್ಣೆಗಳನ್ನ ಹಿಡಿದುಕೊಂಡು‌ ಬಂದು ಬಿಜೆಪಿ ಮುಖಂಡರು ಹಲ್ಲೆ ಮಾಡಿದ್ದಾಗಿ ಆರೋಪಿಸಲಾಗಿದ್ದು, ಘಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಆದಿತ್ಯ ಪಾಟೀಲ್, ರಾಘವೇಂದ್ರ ಹಾಗೂ ವಿನೋಧ ಎಂಬವರು ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ.

ಮತಗಟ್ಟೆ ಸಮೀಪದಲ್ಲೇ ಬಿಜೆಪಿ ಮುಖಂಡರು ಮತದಾರರ ಬಳಿ ಬಿಜೆಪಿಗೆ ಮತ ಹಾಕುವಂತೆ ಹೇಳಿದ್ದಾರೆ. ಈ ವಿಚಾರ ತಿಳಿದ ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದ್ದಾರೆ. ಇದೇ ಕಾರಣಕ್ಕೆ ಶಹಾಪುರ‌ ಬಿಜೆಪಿ ಅಭ್ಯರ್ಥಿ ಅಮೀನರೆಡ್ಡಿ ಯಾಳಗಿ ಬೆಂಬಲಿಗರು ಶಹಾಪುರ‌ ಕಾಂಗ್ರೆಸ್ ಅಭ್ಯರ್ಥಿ ಶರಣಬಸಪ್ಪಗೌಡ ದರ್ಶನಾಪುರ ಬೆಂಬಲಿಗರ‌ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಮತದಾನಕ್ಕೆ ಹೋಗುತ್ತಿದ್ದಾಗ ಆನೆ ದಾಳಿ, ವ್ಯಕ್ತಿ ಸಾವು; ಇಂದು ಮತದಾನದ ನಂತರ ಸಾವನ್ನಪ್ಪಿದವರು ಎಷ್ಟು ಗೊತ್ತಾ?

ಹಲ್ಲೆ ವೇಳೆ ಬಿಜೆಪಿ ಕಾರ್ಯಕರ್ತರು ಕೈಯಲ್ಲಿ ‌ದೊಣ್ಣೆಗಳನ್ನ ಹಿಡಿದು ಜೋರಾಗಿ ಕೂಗು ಹಾಕಿದ್ದು, ಈ ವೇಳೆ ಪ್ಯಾರಾ ಮಿಲಿಟರಿ ಫೋರ್ಸ್ ಸ್ಥಳಕ್ಕೆ ಆಗಮಿಸಿ ವಾತವರಣ ತಿಳಿಗೊಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಯಾದಗಿರಿ ಎಸ್​ಪಿ ಡಾ.ಸಿ.ಬಿ.ವೇದಮೂರ್ತಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಸದ್ಯ ಇಂದು ಮತ್ತು ನಾಳೆ ಕೆಂಭಾವಿ ಹಾಗೂ ಸುರಪುರ ಪಟ್ಟಣದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಇಂದು ಸಂಜೆ 6 ಗಂಟೆಯಿಂದ ನಾಡಿದ್ದು ಬೆಳಿಗ್ಗೆ 6 ಗಂಟೆಯವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಘಟನೆ ಬಗ್ಗೆ ಮಾಹಿತಿ ನೀಡಿದ ಎಸ್​ಪಿ ಡಾ.ಸಿ.ಬಿ.ವೇದಮೂರ್ತಿ, ಇಂದು ದಿನ ರಾತ್ರಿ ಪಟ್ರೋಲಿಂಗ್ ಹಾಗೂ ಗಸ್ತು ಮಾಡಲಾಗುವುದು. 5 ಕ್ಕಿಂತ ಹೆಚ್ಚು ಜನ ಜನರು ಸೇರಬಾರದು. ಎಲ್ಲರೂ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ