ಹುಬ್ಬಳ್ಳಿ: ಗೂಂಡಾ ಕಾಯ್ದೆಯಡಿ ಬಂಧಿತನಾಗಿರುವ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಪಕ್ಷೇತರ ಸದಸ್ಯ ಹಾಗೂ ರೌಡಿಶೀಟರ್ ಚೇತನ್ ಹಿರೇಕೆರೂರು (Chetan Hirekerur) ಮನೆಗೆ ಹುಬ್ಬಳ್ಳಿ-ಧಾರವಾಡ ಕೇಂದ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ (Jagadish Shettar) ಭೇಟಿ ನೀಡಿದರು. ಕೋಟೆಲಿಂಗೇಶ್ವರ ನಗರದಲ್ಲಿರುವ ಚೇತನ್ ಮನೆಯಲ್ಲಿ ಕುಟುಂಬಸ್ಥರೊಂದಿಗೆ ಶೆಟ್ಟರ್ ಕೆಲ ಕಾಲ ಮಾತುಕತೆ ನಡೆಸಿದರು. ನಂತರ ಹುಬ್ಬಳ್ಳಿಯ ವಕೀಲರ ಸಂಘದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಚೇತನ ಹಿರೇಕೆರೂರ್ ಗೆ ಒಳ್ಳೆ ನಾಗರಿಕನಾಗಿ ಬದುಕು ಎಂದಿದ್ದೆ. ಮೊದಲು ಚೇತನ ಎಲ್ಲ ಮಾಡುತ್ತಿದೆ. ಇತ್ತೀಚೆಗೆ ಅವನ ಮೇಲೆ ಯಾವದೇ ಕೇಸ್ ಇರಲಿಲ್ಲ, ರಾಜಕೀಯ ಗುಂಡಾಗಿರಿ ಎಲ್ಲ ಬಿಟ್ಟಿದ್ದ. ನಾನೇನು ಅವನನ್ನು ಕರೆದರಿಲ್ಲ, ಅವನೇ ನಾಮಪತ್ರ ಸಲ್ಲಿಸುವ ಮೆರವಣಿಗೆಯಲ್ಲಿ ಬಂದಿದ್ದ. ಮರುದಿನ ಆತನನ್ನು ಗುಂಡಾ ಕಾಯ್ದೆ ಅಡಿ ಅರೆಸ್ಟ್ ಮಾಡಿದ್ದಾರೆ. ಶೆಟ್ಟರ್ ಎಲ್ಲಿ ಗೆಲ್ಲುತ್ತಾರೋ ಎಂದು ಅರೆಸ್ಟ್ ಮಾಡಿದ್ದಾರೆ. ಇಂತಹ ಧಮನಕಾರಿ ನೀತಿ ನಡೆಯುವುದಿಲ್ಲ ಎಂದರು.
ಚೇತನ್ನನ್ನು ಅರೆಸ್ಟ್ ಮಾಡುವ ಹಾಗಿದ್ದರೆ ಆರು ತಿಂಗಳ ಮೊದಲೇ ಮಾಡಬೇಕಿತ್ತು. ಇದಕ್ಕೆಲ್ಲ ಕಾರಣ ಸಂಸದರು ಎಂದು ಹೇಳುವ ಮೂಲಕ ಪರೋಕ್ಷವಾಗಿ ಪ್ರಲ್ಹಾದ್ ಜೋಶಿ ವಿರುದ್ದ ಶೆಟ್ಟರ್ ಟೀಕಿಸಿದರು. ಗುಂಡಾ ಕಾಯ್ದೆ ಹಾಕಿರುವುದನ್ನ ನಾನು ಪ್ರಶ್ನೆ ಮಾಡುತ್ತೇನೆ. ನಾಲ್ಕೈದು ಜನ ರೌಡಿಗಳಿಗೆ ಟಿಕೆಟ್ ಕೊಟ್ಟಿದೀರಿ. ರೌಡಿಗಳ ಬಗ್ಗೆ ಬಿಜೆಪಿಗೆ ಮಾತಾಡಲು ನೈತಿಕತೆ ಇಲ್ಲ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.
ಜಗದೀಶ್ ಶೆಟ್ಟರ್ ಅವರ ನಾಮಪತ್ರ ಸಲ್ಲಿಕೆ ರ‍್ಯಾಯಲ್ಲಿ ಭಾಗಿಯಾಗಿದ್ದ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಪಕ್ಷೇತರ ಸದಸ್ಯ ಚೇತನ್ ಹಿರೇಕೆರೂರು ಅವರನ್ನು ಗೂಂಡಾ ಕಾಯ್ದೆಯಡಿ ಗುರುವಾರ ಬಂಧಿಸಲಾಗಿದೆ. ವಿವಿಧ ಪೊಲೀಸ್ ಠಾಣೆಗಳಲ್ಲಿ ರೌಡಿಶೀಟರ್ ಆಗಿದ್ದ ಚೇತನ್ ಅನ್ನು ಹುಬ್ಬಳ್ಳಿಯ ಗೋಕುಲ್ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸದ್ಯ ಚೇತನ್ ಹಿರೇಕೆರೂರು ಅನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ ಎಂದು ಟಿವಿ9ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ರಮಣಗುಪ್ತಾ ಮಾಹಿತಿ ನೀಡಿದ್ದರು.
ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಜಗದೀಶ್ ಶೆಟ್ಟರ್, ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಜೆಪಿ ತೊರೆದು ತದ್ವಿರುದ್ಧ ಸಿದ್ಧಾಂತ ಹೊಂದಿರುವ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದು ಬಿಜೆಪಿ ನಾಯಕರ ಕಣ್ಣುಗಳನ್ನು ಕೆಂಪಗಾಗಿಸಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶೆಟ್ಟರ್ ಸೋಲಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಹಾಕಿಕೊಂಡಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಸೋಲಿಸಲು ಬಿಜೆಪಿ, ಆರ್ಎಸ್ಎಸ್ ಮಾಸ್ಟರ್ ಪ್ಲ್ಯಾನ್; ಹೀಗಿದೆ ರಣತಂತ್ರ
ಶೆಟ್ಟರ್ ಹಣಿಯಲು ಬಿಜೆಪಿ-ಆರ್ಎಸ್ಎಸ್ ಜಂಟಿ ಆಪರೇಷನ್
ಹೌದು, ಕ್ಷೇತ್ರದಲ್ಲಿ ಮಹೇಶ ಟೆಂಗಿನಕಾಯಿ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿರುವ ಬಿಜೆಪಿ, ಶೆಟ್ಟರ್ ಅವರನ್ನು ಸೋಲಿಸಲು ಹಾಗೂ ತಮ್ಮ ಮತಬ್ಯಾಂಕ್ ಅನ್ನು ಭದ್ರವಾಗಿರಿಸಿಕೊಳ್ಳಲು ಆರ್ಎಸ್ಎಸ್ ಅನ್ನು ಬಳಸಿಕೊಳ್ಳಲು ಮುಂದಾಗಿದೆ. ಅಲ್ಲದೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹುಬ್ಬಳ್ಳಿಗೆ ಭೇಟಿ ನೀಡಿ ಪಕ್ಷದ ಸ್ಥಳೀಯ ಮುಖಂಡರೊಂದಿಗೆ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ನಾಗ್ಪುರದಿಂದ ಸುಮಾರು 50 ಆರೆಸ್ಸೆಸ್ ಕಾರ್ಯಕರ್ತರನ್ನು ಹುಬ್ಬಳ್ಳಿಗೆ ಕರೆಸಿಕೊಳ್ಳಲಾಗಿದ್ದು, ಅವರಿಗೆ ವಿವಿಧ ಸಂಘಟನಾ ಜವಾಬ್ದಾರಿಗಳನ್ನು ವಹಿಸಲಾಗಿದೆ ಎಂದು ಹೇಳಲಾಗಿದೆ.
ಲಿಂಗಾಯತ ಸಮುದಾಯಕ್ಕೆ ಸೇರಿದ ನಾಯಕರನ್ನು ಪಕ್ಷದಿಂದ ದೂರವಿಡುವ ಪ್ರತಿಪಕ್ಷ ಕಾಂಗ್ರೆಸ್‌ನ ತಂತ್ರಕ್ಕೆ ಪ್ರತಿ ತಂತ್ರ ಹೆಣೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಹುಬ್ಬಳ್ಳಿಯಲ್ಲಿ ಶೆಟ್ಟರ್ ಚಲನವಲನದ ಮೇಲೆ ರಹಸ್ಯವಾಗಿ ಕಣ್ಣಿಟ್ಟಿರುವ ಆರ್ಎಸ್ಎಸ್ ಕಾರ್ಯಕರ್ತರ ತಂಡ, ಈ ಬಾರಿ ಹೇಗಾದರೂ ಮಾಡಿ ಅವರನ್ನು ಮಣಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬ ಶಪಥ ತೊಟ್ಟಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:21 pm, Fri, 21 April 23