ಚುನಾವಣೆ ಸಮಯದಲ್ಲಿ ಕಂತೆ ಕಂತೆ ಹಣ ಬ್ಯಾಗ್ಗೆ ತುಂಬಿಸುವ ಸಾಗರ ಬಿಜೆಪಿ ಮುಖಂಡನ ಹಳೇ ವಿಡಿಯೋ ವೈರಲ್
ಶಿವಮೊಗ್ಗ ಜಿಲ್ಲೆಯ ಸಾಗಾರ ನಗರಸಭೆ ಉಪಾಧ್ಯಕ್ಷ ಮಹೇಶ್ ಬ್ಯಾಗ್ಗೆ ಕಂತೆಕಂತೆ ನೋಟುಗಳನ್ನು ತುಂಬಿಸುವ ಹಳೆಯ ವಿಡಿಯೋವೊಂದು ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ವೈರಲ್ ಆಗುತ್ತಿದೆ.
ಶಿವಮೊಗ್ಗ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಹಿನ್ನೆಲೆ ರಾಜ್ಯಾದ್ಯಂತ ನೀತಿ ಸಂಹಿತಿ ಜಾರಿಯಲ್ಲಿದ್ದು, ಪೊಲೀಸ್ ಇಲಾಖೆ ಮತ್ತು ಚುನಾವಣಾಧಿಕಾರಿಗಳು ರಾಜಕೀಯ ಮುಖಂಡರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಮಾತ್ರವಲ್ಲದೆ, ಅಲ್ಲಲ್ಲಿ ಚೆಕ್ಪೋಸ್ಟ್ಗಳನ್ನು ಹಾಕಿ ವಾಹನಗಳ ಮೇಲೆ ನಿಗಾ ಇರಿಸಿದ್ದು, ಈಗಾಗಲೇ ಕೋಟ್ಯಾಂತರ ರೂಪಾಯಿ ನಗದು ಹಾಗೂ ಚಿನ್ನಾಭರಣ, ಸೀರೆ ಇತ್ಯಾದಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ನಡುವೆ ಶಿವಮೊಗ್ಗ ಜಿಲ್ಲೆಯ ಸಾಗಾರ ನಗರಸಭೆ ಉಪಾಧ್ಯಕ್ಷ ಮಹೇಶ್ ಬ್ಯಾಗ್ಗೆ ಕಂತೆಕಂತೆ ನೋಟುಗಳನ್ನು ತುಂಬಿಸುವ ವಿಡಿಯೋವೊಂದು ಭಾರೀ ವೈರಲ್ (Viral Video) ಆಗುತ್ತಿದೆ.
ಬಿಜೆಪಿ ಮುಖಂಡರೂ ಆಗಿರುವ ಸಾಗಾರ ನಗರಸಭೆ ಉಪಾಧ್ಯಕ್ಷ ಮಹೇಶ್ ಮನೆಯಲ್ಲಿ ಕೆಂಪು ಬಣ್ಣದ ದೊಡ್ಡ ಬ್ಯಾಗ್ನಲ್ಲಿ ಕಂತೆ ಕಂತೆ ನೋಟುಗಳನ್ನು ತುಂಬಿಸುತ್ತಿರುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ನಿನ್ನೆ ರಾತ್ರಿ (ಏಪ್ರಿಲ್ 20) ಮಹೇಶ್ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಯಾವುದೇ ಹಣ ಪತ್ತೆಯಾಗದ ಹಿನ್ನೆಲೆ ವಾಪಸ್ ಆಗಿದ್ದರು.
ಇದನ್ನೂ ಓದಿ: Viral Video: ಪ್ಲೀಸ್ ಮೋದಿ ಜೀ: ಮುದ್ದು ಮುದ್ದಾಗಿ ಮಾತನಾಡುತ್ತಲೇ ಪ್ರಧಾನಿ ಮೋದಿಯವರ ಬಳಿ ಬೇಡಿಕೆ ಇಟ್ಟ ಜಮ್ಮುವಿನ ಪೋರಿ
ದಾಳಿ ವೇಳೆ ಹಣ ಪತ್ತೆಯಾಗದಿದ್ದರೂ ಹಣ ಸಾಗಾಟ ಆಗಿರುವ ಸಾಧ್ಯತೆ ಹಿನ್ನೆಲೆ ವೈರಲ್ ವಿಡಿಯೋ ಆಧರಿಸಿ ಇಂದು ಬೆಳಗ್ಗೆ ಸಾಗರ ಸ್ಕ್ವಾಡ್ ಅಧಿಕಾರಿ ದಾನಪ್ಪ ಅವರು ಸಾಗರ ಕ್ಷೇತ್ರದ ಹಾಲಿ ಶಾಸಕರೂ ಆಗಿರುವ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಅವರ ಆಪ್ತರಾಗಿರುವ ಮಹೇಶ್ ವಿರುದ್ಧ ದೂರು ನೀಡಿದ್ದಾರೆ. ದೂರಿನ ಅನ್ವಯ ಸಾಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅದಾಗ್ಯೂ, ಈ ವಿಡಿಯೋದ ಸತ್ಯಾಸತ್ಯತೆ ಪರಿಶೀಲಿಸಿದಾಗ ತಿಳಿದುಬಂದ ಮಾಹಿತಿಯೇ ಬೇರೆಯದ್ದಾಗಿದೆ. ಮನೆ ಮಾರಾಟದ ಸಂದರ್ಭದಲ್ಲಿ ಸಿಕ್ಕ ಹಣವನ್ನು ಮಹೇಶ್ ಅವರು ತುಂಬಿಸುತ್ತಿದ್ದಾಗ ತೆಗೆದಿದ್ದ ಹಳೇಯ ವಿಡಿಯೋ ಇದಾಗಿದೆ. ಸದ್ಯ ಚುನಾವಣೆ ಸಮಯದಲ್ಲಿ ಈ ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:39 pm, Fri, 21 April 23