ಹುಬ್ಬಳ್ಳಿ: ಕ್ಷೇತ್ರ ಬಿಟ್ಟುಕೊಡುವಂತೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಅವರಿಗೆ ಬಿಜೆಪಿ ಹೈಕಮಾಂಡ್ ಸೂಚನೆ ಬೆನ್ನಲ್ಲೇ ಅವರ ಹೆಸರಿನಲ್ಲಿ ರಾಜೀನಾಮೆ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಜಗದೀಶ್ ಶೆಟ್ಟರ್, ನನ್ನ ಹೆಸರಿನಲ್ಲಿ ವೈರಲ್ ಆಗುತ್ತಿರುವ ರಾಜೀನಾಮೆ ಪತ್ರ ನಕಲಿಯಾಗಿದೆ ಎಂದಿದ್ದಾರೆ. ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂಬುದು ಶುದ್ಧ ಸುಳ್ಳು. ನನ್ನ ಲೆಟರ್ ಹೆಡ್ನಲ್ಲಿ ಯಾರೋ ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾಗೆ (JP Nadda) ನಾನು ಯಾವುದೇ ಪತ್ರ ಬರೆದಿಲ್ಲ ಎಂದು ಹೇಳಿದ್ದಾರೆ.
ನಾನು ಪತ್ರ ಬರೆಯುವ ಕೆಲಸ ಮಾಡಿಲ್ಲ. ಮೇಲಿನ ನಾಯಕರಿಗೆ ಪತ್ರ ಬರೆದಿರುವುದಾದರೆ ಇಂಗ್ಲಿಷ್ನಲ್ಲಿ ಬರೆಯುತ್ತಾರೆ. ಅದು ಕನ್ನಡದಲ್ಲಿ ಇದೆ ಅಂದರೆ ಅರ್ಥ ಮಾಡಕೋಳ್ಳಿ. ಮೊನ್ನೆ ನಕಲಿ ಅಭ್ಯರ್ಥಿಗಳ ಹೆಸರು ಹಾಕಿ ವೈರಲ್ ಮಾಡಿದ್ದರು. ಇದೀಗ ಪತ್ರ ವೈರಲ್ ಆಗಿದೆ, ಇದೆಲ್ಲ ಸುಳ್ಳು ಎಂದು ಶೆಟ್ಟರ್ ಸ್ಪಷ್ಟನೆ ನೀಡಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಹಲವಾರು ಬೆಳವಣಿಗೆಗಳಿಂದ ನನ್ನ ಮನಸ್ಸಿಗೆ ತೀವ್ರ ನೋವಾಗಿದ್ದು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಕಳೆದ ನಾಲ್ಕು ದಶಕಗಳಿಂದ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ, ಒಬ್ಬ ಸಾಮಾನ್ಯ ಕಾರ್ಯಕರ್ತನಿಂದ ಮುಖ್ಯಮಂತ್ರಿಯವರೆಗೆ ನನ್ನ ಪ್ರಾಮಾಣಿಕ ಶ್ರಮದ ಬಗ್ಗೆ ತೃಪ್ತಿ ಇದೆ ಎಂದು ವೈರಲ್ ಪತ್ರದಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: KS Eshwarappa: ಚುನಾವಣಾ ರಾಜಕೀಯಕ್ಕೆ ಹಿಂದೂ ಫೈರ್ ಬ್ರಾಂಡ್ ಗುಡ್ ಬೈ: ಕೆಎಸ್ ಈಶ್ವರಪ್ಪ ರಿಯಾಕ್ಷನ್ ಹೀಗಿದೆ
ಚುನಾವಣಾ ರಾಜಕೀಯದಿಂದ ಹಿಂದೆಸರಿಯುವಂತೆ ಹಾಗೂ ಕ್ಷೇತ್ರವನ್ನು ಹೊಸ ಮುಖಗಳಿಗೆ ಅವಕಾಶ ನೀಡುವಂತೆ ಬಿಜೆಪಿ ಹೈಕಮಾಂಡ್ ಜಗದೀಶ್ ಶೆಟ್ಟರ್ ಅವರಿಗೆ ಇಂದು ದೂರವಾಣಿ ಕರೆ ಮಾಡಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಬೇಸರ ವ್ಯಕ್ತಪಡಿಸಿದ ಶೆಟ್ಟರ್, ನಾನು ಸ್ಪರ್ಧೆ ಮಾಡಬಾರದು ಎಂಬುದಾಗಿದ್ದ ಎರಡು-ಮೂರು ತಿಂಗಳ ಹಿಂದೆ ನನಗೆ ಹೇಳಬೇಕಿತ್ತು. ಆದರೆ, ಇವತ್ತು ನನಗೆ ಹೇಳುತ್ತಾರೆ ಎಂಬುದು ಬಹಳ ಬೇಸರ ಉಂಟುಮಾಡಿತು. 30 ವರ್ಷ ಪಕ್ಷ ಕಟ್ಟಿದವರಿಗೆ ಹೀಗೆ ಹೇಳಿದ್ದು ಬೇಸರ ಉಂಟುಮಾಡಿತು ಎಂದಿದ್ದಾರೆ.
ಹಿರಿಯ ನಾಯಕರಿಗೆ ಗೌರವ ಕೊಡುವ ಕೆಲಸ ಆಗಬೇಕಿದೆ. ನೀವು ಹೇಳಿರುವುದು ನನಗೆ ಒಪ್ಪಿಗೆ ಇಲ್ಲ ಎಂದಿದ್ದೇನೆ. ನಿಮ್ಮ ಸಮೀಕ್ಷೆ ಪಾಸಿಟಿವ್ ಇದೆ ಎಂದು ಹಿರಿಯರು ಹೇಳಿದ್ದಾರೆ. ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಇಲ್ಲ. ಪಕ್ಷ ನಿಷ್ಠನಾಗಿ ಕೆಲಸ ಮಾಡಿದ್ದೇನೆ. ನಿಷ್ಠರಾದವರಿಗೆ ಗೌರವ ಇಲ್ಲ ಅಂತಾ ಬೇಸರವಾಗಿದೆ. ವರಿಷ್ಟರು ಚರ್ಚೆ ಮಾಡುತ್ತೇವೆ ಎಂದಿದ್ದಾರೆ ಎಂದು ತಿಳಿಸಿದರು. ಅಲ್ಲದೆ, ನಾನು ಇನ್ನೂ ಆರೋಗ್ಯವಾಗಿ ಇದ್ದೇನೆ. ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ. ಜನ ನನ್ನ ಬಯಸುತ್ತಿದ್ದಾರೆ. ರಾಜಕಾರಣದಲ್ಲಿ ನಾನು ಮುಂದುವರೆಯುತ್ತೇನೆ. ವರಿಷ್ಠರ ತೀರ್ಮಾನಕ್ಕೆ ಎರಡು ದಿನ ಕಾಯುತ್ತೇನೆ. ವ್ಯತಿರಿಕ್ತ ತೀರ್ಮಾನ ಬಂದರೆ ಮಾದ್ಯಮಗಳ ಎದುರು ಬರುತ್ತೇನೆ. ಇನ್ನೂ 15 ವರ್ಷ ನಾನು ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಹೈಕಮಾಂಡ್ ತೀರ್ಮಾನ ಏನೇ ಇದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಿಯೇ ಸಿದ್ಧ ಎಂದಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:57 pm, Tue, 11 April 23