ಮಂಗಳೂರು: ಹಿಂದುತ್ವ (Hindutva) ನಮ್ಮ ಅಜೆಂಡಾಗಳಲ್ಲಿ ಒಂದು, ಅದನ್ನ ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರಾವಳಿಯ 19 ಸೀಟ್ ಕೂಡ ಬಿಜೆಪಿ ಗೆಲ್ಲುತ್ತೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟೂ ಕ್ಷೇತ್ರ ನಾವು ಗೆಲ್ಲುತ್ತೇವೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳುವ ಕರಾವಳಿಯ ಗೆಲ್ಲುವ ಹತ್ತು ಕ್ಷೇತ್ರ ಯಾವುದು ನಮಗೆ ಗೊತ್ತಿಲ್ಲ. ಪಕ್ಷದ ವಿರುದ್ದ ಬಂಡಾಯ ಹೋದವರು ನಮ್ಮ ಜೊತೆ ಬರುತ್ತಾರೆ ಅನ್ನುವ ವಿಶ್ವಾಸ ಇದೆ. ಪುತ್ತೂರು ಸೇರಿದಂತೆ ಎಲ್ಲವನ್ನೂ ಬಿಜೆಪಿಯೇ ಗೆಲ್ಲಲಿದೆ. ಬಿಜೆಪಿ ಗೆಲ್ಲುತ್ತೆ ಅಂದಾಗ ಉಳಿದವರು ಸೋಲುತ್ತಾರೆ ಅಂತಾನೇ ಅರ್ಥ ಎಂದು ಹೇಳಿದರು.
ಬಂಡಾಯ ಹೋದವರು ನಮ್ಮ ಜೊತೆ ಬರುವ ವಿಶ್ವಾಸ ಇದೆ. ರಾಜಕಾರಣದಲ್ಲಿ ಯಾರ ಯಾರ ಮೇಲೂ ಏನು ಬೇಕಾದರೂ ಮಾಡಬಹುದು. ಹಾಗಾಗಿ ಕೆಲವು ನಾಯಕರು ನ್ಯಾಯಾಲಯದ ತಡೆಯಾಜ್ಞೆ ತಂದಿದ್ದಾರೆ. ಅದು ಅವರವರ ಖಾಸಗಿ ಬದುಕು, ಹೀಗಾಗಿ ನಾವು ಏನೂ ಮಾಡಲು ಆಗಲ್ಲ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಗೆ ಹಲವು ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬರುತ್ತಾರೆ. ಮೇ.3ರಂದು ಮುಲ್ಕಿಗೆ ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ. ಬಹುತೇಕ ಅವರ ಆಗಮನ ಖಚಿತವಾಗಿದೆ, ಅಂತಿಮ ಮಾಹಿತಿ ಬರಬೇಕು. ಮೇ 6ರಂದು ಜಿಲ್ಲೆಗೆ ಯೋಗಿ ಆದಿತ್ಯನಾಥ್ ಬರುತ್ತಾರೆ. ಆದರೆ ಯೋಗಿಯವರ ಕಾರ್ಯಕ್ರಮದ ಜಾಗ ನಿಗದಿಯಾಗಿಲ್ಲ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಕೇಂದ್ರೀಕರಿಸಿ ಸಮಾವೇಶಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ವಿಚಾರಣಾಧೀನ ಕೈದಿ ನಾಮಪತ್ರ ಸಲ್ಲಿಸಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿಯಾಗಿರುವ ಶಾಫಿ ಬೆಳ್ಳಾರೆ ಅವರು ತಮ್ಮ ಏಜೆಂಟ್ ಮೂಲಕ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಶಾಫಿ ಬೆಳ್ಳಾರೆ ಅವರನ್ನು ಯುಎಪಿಎ ಕಾಯ್ದೆಯಡಿ ಎನ್ಐಎ ತಂಡ ಬಂಧಿಸಿತ್ತು.
ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ: ಸಿಎಂ ಬೊಮ್ಮಾಯಿ
ಪಕ್ಷದ ಸಭೆ ನಡೆಸಿ ಪುತ್ತೂರು ವಿಧಾನಸಭಾ ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿಯಾಗಿ ಶಾಫಿ ಬೆಳ್ಳಾರೆ ಅವರನ್ನು ಆಯ್ಕೆ ಮಾಡಲಾಗಿತ್ತು. ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಶಾಫಿ ಬೆಳ್ಳಾರೆ ಸದ್ಯ ಜೈಲಿನಲ್ಲಿದ್ದಾರೆ. ಶಾಫಿ ಬೆಳ್ಳಾರೆ ಜೈಲಿನಿಂದಲೇ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಜೈಲಿನಿಂದಲೇ ನಾಮಪತ್ರ ಸಲ್ಲಿಸಲು ಅವಕಾಶವಿರುವುದರಿಂದ ತಮ್ಮ ಏಜೆಂಟರ ಮೂಲಕ ನಾಮಪತ್ರ ಸಲ್ಲಿಸಿದ್ದಾರೆ. ಶಾಫಿ ಬಂಧನದ ನಂತರ ಎಸ್‌ಡಿಪಿಐಗೆ ಭಾರೀ ಹೊಡೆತ ಬಿದ್ದಿತ್ತು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:24 pm, Mon, 24 April 23