Hiriyuru Assembly Election Results 2023, ಚಿತ್ರದುರ್ಗ: ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ (Karnataka Assembly Election Results 2023) ಬಹಿರಂಗಗೊಂಡಿದ್ದು, ಹಿರಿಯೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ ಸುಧಾಕರ್ (D Sudhakar) ಅವರು ಗೆಲುವು ಸಾಧಿಸಿದ್ದಾರೆ. ಸುಧಾಕರ್ ಅವರು 2018ರಲ್ಲಿ ಮೊದಲಬಾರಿ ಬಿಜೆಪಿಯಿಂದ ಸ್ಪರ್ಧಿಸಿ 12,857 ಮತಗಳ ಅಂತರದಿಂದ ಗೆದ್ದಿರುವ ಕೆ ಪೂರ್ಣಿಮಾ ಶ್ರೀನಿವಾಸ್ (K Poornima Srinivas) ಅವರ ವಿರುದ್ಧ 30322 ಮತಗಳ ಅಂತದಿಂದ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ನ ಸುಧಾಕರ್ ಅವರು ಒಟ್ಟು ಮತದಾನದಲ್ಲಿ ಶೇ 46ರಷ್ಟು ಮತ ಪಡೆದುಕೊಂಡರೆ, ಬಿಜೆಪಿಯ ಪೂರ್ಣಿಮಾ ಅವರು ಶೇ 30.9ರಷ್ಟು ಮತ ಪಡೆದಿದ್ದಾರೆ. ಜೆಡಿಎಸ್ನ ಎಂ ರವೀಂದ್ರಪ್ಪ ಅವರು ಶೇ 19.3ರಷ್ಟು ಮತ ಪಡೆದಿದ್ದಾರೆ. ಗೊಲ್ಲರು, ಒಕ್ಕಲಿಗರು ಮತ್ತು ಇತರೆ ಪ್ರಮುಖ ಸಮುದಾಯದ ಜನರು ಇಲ್ಲಿ ನಿರ್ಣಾಯಕವಾಗಿದ್ದಾರೆ.
ಇದನ್ನೂ ಓದಿ: Chitradurga Election 2023 Winner: ತಿಪ್ಪಾರೆಡ್ಡಿ ಗೆಲುವಿಗೆ ಬ್ರೇಕ್, ಚಿತ್ರದುರ್ಗದಲ್ಲಿ ಕಾಂಗ್ರೆಸ್ ಗೆಲುವು
2008ರಲ್ಲಿ ಪಕ್ಕದ ಚಳ್ಳಕೆರೆ ಎಸ್ಟಿ ಮೀಸಲು ಕ್ಷೇತ್ರವಾದ ಬಳಿಕ ಚಳ್ಳಕೆರೆ ಕಾಂಗ್ರೆಸ್ ಶಾಸಕರಾಗಿದ್ದ ಡಿ.ಸುಧಾಕರ್ ಹಿರಿಯೂರಿಗೆ ಲಗ್ಗೆಯಿಟ್ಟಿದ್ದರು. ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಪಕ್ಷೇತರವಾಗಿ ಗೆದ್ದು ಬಿಜೆಪಿ ಬೆಂಬಲಿಸಿ ಸಚಿವರಾಗಿದ್ದರು. 2013ರಲ್ಲಿ ಕಾಂಗ್ರೆಸ್ ಶಾಸಕರಾಗಿ ಗೆದ್ದಿದ್ದರು. ಆದರೆ, ಜೆಡಿಎಸ್ ಅಬ್ಯರ್ಥಿಯಾಗಿ ಸ್ಪರ್ಧೆಯೊಡ್ಡಿದ್ದ ಮಾಜಿ ಸಚಿವ ಎ.ಕೃಷ್ಣಪ್ಪ ಅಲ್ಪ ಮತಗಳಿಂದ ಸೋಲುಂಡಿದ್ದರು. ಬಳಿಕ ಕೆಲ ವರ್ಷದಲ್ಲೇ ಎ.ಕೃಷ್ಣಪ್ಪ ವಿಧಿವಶರಾಗಿದ್ದರು.
ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಆಗಿದ್ದ ಮಾಜಿ ಸಚಿವ ಎ.ಕೃಷ್ಣಪ್ಪ ಪುತ್ರಿ ಪೂರ್ಣಿಮಾ ಶ್ರೀನಿವಾಸ್ 2018ರಲ್ಲಿ ಹಿರಿಯೂರಿನಿಂದ ಬಿಜೆಪಿ ಅಬ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಎರಡು ಪ್ರಬಲ ಸಮುದಾಯಗಳಾದ ಗೊಲ್ಲ ಮತ್ತು ಒಕ್ಕಲಿಗ ಸಮುದಾಯ ದೂರವಿಟ್ಟು ಜೈನ ಸಮುದಾಯದ ಡಿ.ಸುಧಾಕರ್ ಅವರನ್ನು 2008 ಮತ್ತು 2013ರಲ್ಲಿ ಗೆಲ್ಲಿಸಿದ್ದ ಜನ 2018ರಲ್ಲಿ ಗೊಲ್ಲ ಸಮುದಾಯದ ಪೂರ್ಣಿಮಾ ಗೆಲ್ಲಿಸಿದ್ದರು. ಇದೀಗ ಕ್ಷೇತ್ರದ ಜನತೆ ಮತ್ತೆ ಸುಧಾಕರ್ ಅವರ ಕೈ ಹಿಡಿದಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:02 pm, Sat, 13 May 23