ಜಗದೀಶ್ ಶೆಟ್ಟರ್​ಗೆ ಸೋಲು: ಕ್ಷೇತ್ರ​​ ಬಿಟ್ಟುಕೊಟ್ಟು ಉಸ್ತುವಾರಿ ಹೊತ್ತುಕೊಂಡಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್​ ಅವರು ಸೋಲುಕಂಡಿದ್ದಾರೆ. ಇದರಿಂದ ಜಗದೀಶ್ ಶೆಟ್ಟರ್​ಗೆ ಕ್ಷೇತ್ರ ತ್ಯಾಗ ಮಾಡಿ ಶೆಟ್ಟರ್ ಗೆಲುವಿನ ​ ಉಸ್ತುವಾರಿ ಹೊತ್ತುಕೊಂಡಿದ್ದ ರಜತ್ ಬ್ಲಾಕ್​ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಜಗದೀಶ್ ಶೆಟ್ಟರ್​ಗೆ ಸೋಲು: ಕ್ಷೇತ್ರ​​ ಬಿಟ್ಟುಕೊಟ್ಟು ಉಸ್ತುವಾರಿ ಹೊತ್ತುಕೊಂಡಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ
ರಜತ್ ಉಳ್ಳಾಗಡ್ಡಿಮಠ-ಜಗದೀಶ್ ಶೆಟ್ಟರ್

Updated on: May 13, 2023 | 3:57 PM

ಹುಬ್ಬಳ್ಳಿ: ಟಿಕೆಟ್ ನೀಡದ ಕಾರಣಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೀನಾಯ ಸೋಲು ಅನುಭವಿಸಿದ್ದಾರೆ. ಸತತ ಎಂಟು ಭಾರಿ ಗೆಲ್ಲುವ ಮೂಲಕ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಜಗದೀಶ ಶೆಟ್ಟರ್​ ಅವರು ಈ ಬಾರಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್​ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ವಿರುದ್ಧ 35 ಸಾವಿರ ಮತಗಳ ಅಂತರದಿಂದ ಹೀನಾಯ ಸೋಲು ಕಂಡಿದ್ದಾರೆ. ಇದರಿಂದ ಜಗದೀಶ್ ಶೆಟ್ಟರ್​ಗೆ ಕ್ಷೇತ್ರ ತ್ಯಾಗ ಮಾಡಿ ಶೆಟ್ಟರ್ ಗೆಲುವಿನ ​ ಉಸ್ತುವಾರಿ ಹೊತ್ತುಕೊಂಡಿದ್ದ ರಜತ್ ಉಳ್ಳಾಗಡ್ಡಿ ಮಠ ಅವರು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ: ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ರಾಜೀನಾಮೆ

ಜಗದೀಶ್ ಶೆಟ್ಟರ್​ ಸೋಲುತ್ತಿದ್ದಂತೆಯೇ ಸುದ್ದಿಗಾರರೊಂದಿಗೆ ಮಾತನಾಡಿದ ರಜತ್, ಕಳೆದ ಮೂರ್ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದೆವು. ಕಾರ್ಯಕರ್ತರು ಹಗಲಿರುಳು ಶೆಟ್ಟರ್ ಪರವಾಗಿ ಕೆಲಸ ಮಾಡಿದ್ದರು. ಸೆಂಟ್ರಲ್ ಕ್ಷೇತ್ರದಲ್ಲಿ ಜನಾದೇಶ ನಮ್ಮ ವಿರುದ್ಧವಾಗಿ ಬಂದಿದೆ. ಇದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದು ಘೋಷಣೆ ಮಾಡಿದರು.

ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕ್ಷೇತ್ರದಲ್ಲಿ ಜನರ ಪರವಾಗಿ ಕೆಲಸ ಮಾಡಿ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ನಿಟ್ಟಿನಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಹೇಳಿದರು. ಬೂತ್ ಮಟ್ಟಲದಲ್ಲಿ ಎಲ್ಲಿ ಹಿನ್ನಡೆ ಆಗಿದೆ. ಸೋಲಿಗೆ ಕಾರಣಗಳೇನು ಎನ್ನುವುದನ್ನು ಆತ್ಮವಲೋಕನ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ತೀವ್ರ ಜಿದ್ದಾಜಿದ್ದಿಗೆ ಹೆಸರಾಗಿದ್ದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಮತಕ್ಷೇತ್ರ ರಾಜ್ಯದ ಗಮನ ಸೆಳೆದಿತ್ತು. ರಾಷ್ಟ್ರ ನಾಯಕರು ಆದಿಯಾಗಿ ರಾಜ್ಯದ ಎಲ್ಲ ಪ್ರಮುಖ ಮುಂಡರು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದರು. ಗೃಹ ಸಚಿವ ಅಮೀತ ಶಾ ಅವರು ಜಗದೀಶ್ ಶೆಟ್ಟರ ಯಾವುದೇ ಕಾರಣಕ್ಕೂ ಗೆಲ್ಲಬಾರದು ಎಂದು ಕಾರ್ಯಕರ್ತರಿಗೆ ಬಹಿರಂಗವಾಗಿಯೇ ಕರೆ ನೀಡಿದ್ದರು.