ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ (Karnataka Assembly Elections 2023 Result) ಮೇ.13 ರಂದು ಬಂದಿದ್ದು, ಅದರಂತೆ ಸಿದ್ದರಾಮಯ್ಯ(Siddaramaiah) 2 ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇನ್ನು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್(Dk Shivakumar) ಎಂದು ಘೋಷಿಸಲಾಗಿದೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್(G Parameshwara) ‘ನನಗೆ ಡಿಸಿಎಂ ಸ್ಥಾನ ಕೊಡಲೇಬೇಕು, ನಾನು ಈ ಹಿಂದೆ ಕೂಡ ಉಪ ಮುಖ್ಯಮಂತ್ರಿಯಾಗಿದ್ದೆ. ಎಲ್ಲ ಸಮುದಾಯಗಳನ್ನು ಪರಿಗಣಿಸಿ ಡಿಸಿಎಂ ಸ್ಥಾನ ಕೊಡಬೇಕಾಗುತ್ತದೆ. ಒಬ್ಬರು ಮಾತ್ರ ಅಧಿಕಾರದಲ್ಲಿ ಇರಬೇಕೆಂಬುದು ಸೂಕ್ತವಲ್ಲ, ಎಲ್ಲರ ನಾಯಕತ್ವದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದರು.
ಮುಖ್ಯಮಂತ್ರಿ ಆಗಲು ಸಿದ್ಧ, ನಾನೂ 50 ಶಾಸಕರನ್ನು ಕರೆದೊಯ್ಯಬಹುದು ಎಂದು ಹೇಳಿದ್ದ ಪರಮೇಶ್ವರ್
ಬೆಂಗಳೂರು: ಮುಖ್ಯಮಂತ್ರಿ ಆಯ್ಕೆ ವಿಚಾರ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಕಗ್ಗಂಟಾಗಿ ಪರಿಣಮಿಸಿತ್ತು, ಇದರ ಬೆನ್ನಲ್ಲೇ, ನಾನೂ ಸಿಎಂ ಆಗಲು ಸಿದ್ಧ ಎಂದು ಜಿ ಪರಮೇಶ್ವರ ಹೇಳಿರುವುದಾಗಿ ವರದಿಯಾಗಿತ್ತು. ಮುಖ್ಯಮಂತ್ರಿ ಆಗಲು ಸಿದ್ಧನಿದ್ದೇನೆ. ನಾನೂ 50 ಶಾಸಕರನ್ನು ಕರೆದೊಯ್ಯಬಹುದು. ಆದರೆ, ಎಂದಿಗೂ ಲಾಬಿ ಮಾಡುವುದಿಲ್ಲ ಎಂದು ಪರಮೇಶ್ವರ ಹೇಳಿದ್ದರು. ಈ ಮೂಲಕ, ತಮ್ಮನ್ನು ಮುಖ್ಯಮಂತ್ರಿ ಮಾಡಿದರೆ ಸರ್ಕಾರ ಮುನ್ನಡೆಸಲು ಸಿದ್ಧ ಎಂದು ಕೊರಟಗೆರೆ ಕ್ಷೇತ್ರದ ಶಾಸಕರಾಗಿರುವ ಅವರು ಹೇಳಿದ್ದರು.
ಇದನ್ನೂ ಓದಿ:ನನ್ನನ್ನು ಮುಂದಿನ ಮುಖ್ಯಮಂತ್ರಿ ಎನ್ನಬೇಡಿ; ಆ ಪದವೇ ನನಗೆ ಡೇಂಜರ್ ಆಗುತ್ತೆ – ಡಾ. ಪರಮೇಶ್ವರ್ ಅಳಲು
ನನಗೆ ಹೈಕಮಾಂಡ್ ಮೇಲೆ ನಂಬಿಕೆ ಇದೆ. ನನಗೆ ಕೆಲವು ತತ್ವಗಳಿವೆ. ನಾನೂ ಸಹ 50 ಶಾಸಕರನ್ನು ಕರೆದುಕೊಂಡು ಹೋಗಿ ಗುಲ್ಲೆಬ್ಬಿಸಬಹುದು. ಆದರೆ ನನಗೆ ಪಕ್ಷದ ಶಿಸ್ತು ಹೆಚ್ಚು ಮುಖ್ಯ ಎಂದು ಪರಮೇಶ್ವರ ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿತ್ತು. ಹೈಕಮಾಂಡ್ ತೀರ್ಮಾನ ಕೈಗೊಂಡು ಸರ್ಕಾರ ಮುನ್ನಡೆಸಲು ಹೇಳಿದರೆ, ನಾನು ಆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧನಿದ್ದೇನೆ. ನಾನು ಅವಕಾಶವನ್ನು ನಿರಾಕರಿಸುತ್ತೇನೆ ಎಂದಲ್ಲ, ನಾನು ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ ಎಂಬುದು ಹೈಕಮಾಂಡ್‌ಗೆ ತಿಳಿದಿದೆ. ನಾನೂ ಸಹ ಪಕ್ಷಕ್ಕೆ ಸಹಾಯ ಮಾಡಿದ್ದೇನೆ. ಅಧಿಕಾರದ ವಿಚಾರದಲ್ಲಿ ಹೇಳುವುದಾದರೆ ನಾನು ಉಪ ಮುಖ್ಯಮಂತ್ರಿಯಾಗಿದ್ದೆ. ಹೀಗಾಗಿ ಲಾಬಿ ಮಾಡುವ ಬದಲು ಸುಮ್ಮನಿದ್ದೇನೆ. ಹೀಗಿದ್ದ ಮಾತ್ರಕ್ಕೆ ನಾನು ಅನರ್ಹ ಎಂದು ಅರ್ಥವಲ್ಲ ಎಂದೂ ಅವರು ಹೇಳಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವುದೇ ಸೂಕ್ತ ಎಂದೂ ಅವರು ಅಭಿಪ್ರಾಯಪಟ್ಟಿದ್ದರು ಎಂದು ವರದಿ ಉಲ್ಲೇಖಿಸಿತ್ತು. ಸಿಎಂ ಹುದ್ದೆಯ ಪೈಪೋಟಿ ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂಬ ಆಶಾವಾದವನ್ನೂ ಅವರು ವ್ಯಕ್ತಪಡಿಸಿದ್ದರು. ಉಪ ಮುಖ್ಯಮಂತ್ರಿಗಳ ನೇಮಕ ಸಾಧ್ಯತೆಯನ್ನು ಅವರು ತಳ್ಳಿ ಹಾಕಿಲ್ಲ. ಆ ಬಗ್ಗೆ ಈಗಲೇ ಏನೂ ಹೇಳಲಾಗದು ಎಂದು ಅವರು ಪ್ರತಿಕ್ರಿಯಿಸಿದ್ದರು.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ