ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಗೆ ಬಗ್ಗೆ ಯಾರು ಏನು ಹೇಳಿದ್ರು? ಇಲ್ಲಿದೆ ನೋಡಿ
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಬಾವುಟ ಹಾರಿಸುತ್ತಿದ್ದಂತೆ ಕೇಸರಿ ಪಡೆಯಲ್ಲಿ ಆಕ್ರೋಶ ಭುಗಿಲೆದ್ದಿದೆ. ಶೆಟ್ಟರ್ರ ನಡೆಗೆ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ.
ಬೆಂಗಳೂರು: ನಾಲ್ಕು ದಶಕಗಳಿಂದ ಬಿಜೆಪಿ ಜೊತೆ ರಾಜಕಾರಣ ಮಾಡಿದ್ದ ಜಗದೀಶ್ ಶೆಟ್ಟರ್(Jagadish Shettar) ಅವರು ಬಿಜೆಪಿ(BJP) ತೊರೆದು ಕಾಂಗ್ರೆಸ್ಗೆ ಸೇರಿದ್ದಾರೆ. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಬಾವುಟ ಹಾರಿಸುತ್ತಿದ್ದಂತೆ ಕೇಸರಿ ಪಡೆಯಲ್ಲಿ ಆಕ್ರೋಶ ಭುಗಿಲೆದ್ದಿದೆ. ಶೆಟ್ಟರ್ರ ನಡೆಗೆ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ. ಬಿಜೆಪಿ ಜಗದೀಶ್ ಶೆಟ್ಟರ್ರನ್ನು ಗೌರವಯುತವಾಗಿ ಕಂಡಿದೆ. ಅವರನ್ನು ಕಡೆಗಣಿಸಿರುವ ಪ್ರಶ್ನೆಯೇ ಇಲ್ಲ. ಶೆಟ್ಟರ್ ಯಾಕೆ ಕಾಂಗ್ರೆಸ್ಗೆ ಹೋದ್ರೋ ಗೊತ್ತಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಬೇಸರ ಹೊರ ಹಾಕಿದ್ದಾರೆ.
ಎಲ್ಲಾ ಕಡೆಯೂ ಬಿಜೆಪಿಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಬಿಜೆಪಿ ಜಗದೀಶ್ ಶೆಟ್ಟರ್ರನ್ನು ಗೌರವಯುತವಾಗಿ ಕಂಡಿದೆ. ಅವರನ್ನು ಕಡೆಗಣಿಸಿರುವ ಪ್ರಶ್ನೆಯೇ ಇಲ್ಲ. ಎಲ್ಲಾ ಬೆಳವಣಿಗೆ ಹೈಕಮಾಂಡ್ ನಾಯಕರ ಗಮನಕ್ಕೆ ಬಂದಿದೆ. ಕಾಂಗ್ರೆಸ್ನ ಸಂಸ್ಕೃತಿ ಯೂಸ್ ಆ್ಯಂಡ್ ಥ್ರೋ ಸಂಸ್ಕೃತಿ. ಮೊದಲು ಸನ್ಮಾನ, ಚುನಾವಣಾ ಬಳಿಕ ಅವಮಾನ ಮಾಡುತ್ತಾರೆ. ಅರಸು, ವೀರೇಂದ್ರ ಪಾಟೀಲ್ಗೆ ಅವಮಾನ ಮಾಡಿದ್ದು ಕಾಂಗ್ರೆಸ್. ಎಲ್ಲಾ ಗೊತ್ತಿದ್ರೂ ಶೆಟ್ಟರ್ ಯಾಕೆ ಕಾಂಗ್ರೆಸ್ಗೆ ಹೋದ್ರೋ ಗೊತ್ತಿಲ್ಲ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ನೋವು ತೋಡಿಕೊಂಡ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್
ಜಗದೀಶ್ ಶೆಟ್ಟರ್ ಕಾಂಗ್ರೆಸ್ಗೆ ಹೋಗಿದ್ದರಿಂದ ಮನಸ್ಸಿಗೆ ನೋವಾಗಿದೆ. ನಾನು ಬಿಜೆಪಿಯಲ್ಲೇ ಇರುತ್ತೇನೆ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ನಾನು ಕೆಲಸ ಮಾಡುತ್ತೇನೆ.ಶೆಟ್ಟರ್ರನ್ನು ಹೈಕಮಾಂಡ್ ನಡೆಸಿಕೊಂಡ ರೀತಿ ಬಗ್ಗೆ ಅವರನ್ನೇ ಕೇಳಿ ಎಂದು ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಸಹೋದರ ಎಂಎಲ್ಸಿ ಪ್ರದೀಪ್ ಶೆಟ್ಟರ್ ನೋವು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಬಿ ಫಾರಂ ಪಡೆದ ಜಗದೀಶ್ ಶೆಟ್ಟರ್, ಖಾದಿಯಲ್ಲಿ ಕೈ ನಾಯಕರೊಂದಿಗೆ ಮಿಂಚಿದ ಫೋಟೋಗಳು ಇಲ್ಲಿವೆ
ಜಗದೀಶ್ ಶೆಟ್ಟರ್ ರಾಜಕೀಯವಾಗಿ ಆತ್ಮಹತ್ಯೆ ಮಾಡಿಕೊಂಡಂತೆ
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜನಸಂಘದ ಮೂಲಕ ರಾಜಕೀಯಕ್ಕೆ ಬಂದವರು ಬಿಜೆಪಿಯಲ್ಲಿ ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿದ್ದವರು. ಕಾಂಗ್ರೆಸ್ ತತ್ವ ಸಿದ್ದಾಂತಗಳಿಗೆ ವಿರೋಧವಾಗಿದ್ದ ಜಗದೀಶ ಶೆಟ್ಟರ್ ಈಗ ಕಾಂಗ್ರೆಸ್ ಸೇರ್ಪಡೆಯಾಗುವುದರ ಮೂಲಕ ರಾಜಕೀಯವಾಗಿ ಆತ್ಮಹತ್ಯೆ ಮಾಡಿಕೊಂಡಂತೆ ಆಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕಿಡಿಕಾರಿದ್ದಾರೆ. ನಾಮಪತ್ರ ಸಲ್ಲಿಸುವ ಕಾರ್ಯಕ್ರಮದ ಅಂಗವಾಗಿ ಇಂದು ಚಿಕ್ಕಬಳ್ಳಾಪುರ ನಗರದಲ್ಲಿ ಟೆಂಪಲ್ ರನ್ ಮಾಡಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸುಧಾಕರ್, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಪಕ್ಷ ತೊರೆಯುತ್ತಿರುವುದು ದುರಾದೃಷ್ಟಕರ. ಬಿಜೆಪಿ ಹೈಕಮಾಂಡ್ ಶೆಟ್ಟರ್ ಗೆ ಕೇಂದ್ರದಲ್ಲಿ ಒಳ್ಳೆ ಹುದ್ದೆ ನೀಡುವ ಕುರಿತು ಯೋಚನೆ ಮಾಡಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:22 pm, Mon, 17 April 23