ನನಗೆ ಮಾತ್ರವಲ್ಲ ರಾಮದಾಸ್​ಗೂ ಟಿಕೆಟ್​ ತಪ್ಪಿಸಿದ್ದು ಬಿಎಲ್​ ಸಂತೋಷ್​: ಸಾಲು ಸಾಲು ಆರೋಪಗಳನ್ನು ಮಾಡಿದ ಜಗದೀಶ್ ಶೆಟ್ಟರ್

|

Updated on: Apr 18, 2023 | 12:38 PM

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಮುಖ್ಯಮಂತ್ರಿ ಜಗದಿಶ್ ಶೆಟ್ಟರ್ ಅವರು ತಮ್ಮ ಮನಸ್ಸಿನಲ್ಲಿದ್ದ ವೇದನೆಯನ್ನು ಹೊರಹಾಕಿದರು. ಅಲ್ಲದೇ ಬಿಎಲ್ ಸಂತೋಷ್​ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ.

ಹುಬ್ಬಳ್ಳಿ: ಮೊನ್ನೇ ಅಷ್ಟೇ ಬಿಜೆಪಿ(BJP) ತೊರೆದು ಕಾಂಗ್ರೆಸ್(Congress) ಸೇರ್ಪಡೆಯಾಗಿರುವ ಮಾಜಿ ಮುಖ್ಯಮಂತ್ರಿ ಜಗದಿಶ್ ಶೆಟ್ಟರ್(jagadish shettar)​ ತುರ್ತು ಸುದ್ದಿಗೋಷ್ಠಿ ನಡೆಸಿದ್ದು, ತಮಗೆ ಟಿಕೆಟ್​ ಕೈತಪ್ಪಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್​ ಸಂತೋಷ್​ ಕಾರಣ ಎಂದು ನೇರವಾಗಿ ಬಹಿರಂಗವಾಗಿಯೇ ಗಂಭೀರ ಆರೋಪ ಮಾಡಿದ ಅವರು, ನನ್ನ ವಿರುದ್ದ ಬಿಎಲ್ ಸಂತೋಷ್(bl santhosh) ಅವರು ಹೈಕಮಾಂಡ್ ಬಳಿ ಅಪಪ್ರಚಾರ ಮಾಡಿದರು. ಅವರ ಟೀಂ ಕೂಡ ನನ್ನ ವಿರುದ್ಧ ತಂತ್ರಗಾರಿಕೆ ಮಾಡಿದರು. ಅವರಿಂದಲೇ ನನಗೆ ಟಿಕೆಟ್ ತಪ್ಪಿತ್ತು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್​ ಟಿಕೆಟ್ ಘೋಷಣೆ ಆಗುವವರೆಗೆ ಸುಮ್ಮನಿದ್ದೆ ಎಂದು ಹೊಸ ಬಾಂಬ್ ಸಿಡಿಸಿದರು.

ಇದನ್ನೂ ಓದಿ: Karnataka Election Live: ಬಿಜೆಪಿ ಟಿಕೆಟ್​ ಕೈ ತಪ್ಪಲು ಬಿಎಲ್ ಸಂತೋಷ್​ ಕಾರಣ: ಜಗದೀಶ್​ ಶೆಟ್ಟರ್​ ಗಂಭೀರ ಆರೋಪ

ಕೋರ್​ ಕಮಿಟಿ ಸಭೆಯಲ್ಲಿ ನನ್ನ ಹೆಸರು ಜೊತೆ ಒಟ್ಟು ಮೂವರ ಆಕಾಂಕ್ಷಿಗಳ ಹೆಸರುಗಳನ್ನು ಕಳುಹಿಸಲಾಗಿತ್ತು. ಸ್ಕ್ರೀನಿಂಗ್ ಕಮಿಟಿಯಲ್ಲಿ ನನ್ನ ಹೆಸರಿತ್ತು. ಆದ್ರೆ, ಕೊನೆಗೆ ಟಿಕೆಟ್​ ಕೈತಪ್ಪುವುದಕ್ಕೆ ಸಂತೋಷ್ ಕಾರಣ. ರಾಮದಾಸ್ ಕ್ಷೇತ್ರಕ್ಕೂ ನಾನು ಹೋಗಿದ್ದೆ. ರಾಮದಾಸ್ ನಿಂತರೆ ಗೆಲ್ಲುತ್ತಾರೆ. ರಾಮದಾಸ್ ಸಂತೋಷ್ ಆಪ್ತ ಅಲ್ಲ. ಶ್ರೀವತ್ಸ ಸಂತೋಷ್ ಅವರ ಆಪ್ತ.ಹಾಗಾಗಿ ರಾಮದಾಸ್​ಗೆ ಟಿಕೆಟ್​ ಕೈತಪ್ಪಿದ್ದು, ಶ್ರೀವತ್ಸಗೆ ಟಿಕೆಟ್ ಸಿಕ್ಕಿದೆ. ರಾಮದಾಸ್ ಬಂಡಾಯ ಎದ್ದರೆ ಗೆಲ್ಲುವುದಕ್ಕೆ ಆಗಲ್ಲ. ಬಿಎಲ್ ಸಂತೋಷ್ ಕೇರಳದಲ್ಲಿ ಇನ್ ಚಾರ್ಜ್ ಮಾಡಿದ್ರು ಒಂದು ಸೀಟ್ ಬರಲಿಲ್ಲ. ತಮಿಳುನಾಡಿಲ್ಲಿ ಎರಡು ಮೂರು ಸೀಟ್ ಬಂತು. ಇವತ್ತು ಕರ್ನಾಟಕದಲ್ಲಿ ಕಾರಬಾರು ಮಾಡುತ್ತಿದ್ದಾರೆ ಎಂದು ಸಂತೋಷ್​ ವಿರುದ್ಧ ಸಾಲು ಸಾಲು ಗಂಭೀರ ಆರೋಪಗಳನ್ನು ಮಾಡಿದರು.

ಕೋರ್​ ಕಮಿಟಿಯಲ್ಲಿ ನಳಿನ್ ಕುಮಾರ್ ಕಟೀಲು ಹೆಸರು ಸೇರಿಸಿದ್ದೇ ಸಂತೋಷ್​. ಕಟೀಲ್ ಅವರ ರಾಜಾಧ್ಯಕ್ಷ ಅವಧಿ ಮುಗಿದಿದ್ದರೂ ರಾಜ್ಯ ಬಿಜೆಪಿಗೆ ಅಧ್ಯಕ್ಷರ ನೇಮಕ ಆಗಿಲ್ಲ. ಬಿ.ಎಲ್​.ಸಂತೋಷ್​ ಹೇಳಿದಂತೆ ನಳಿನ್​ ಕುಮಾರ್​​ ಕೇಳುತ್ತಾರೆ. ಕಟೀಲು ಕೆಲ ದಿನಗಳ ಹಿಂದೆ ಮಾತಾಡಿದ್ದ ಆಡಿಯೋ ವೈರಲ್​ ಆಗಿತ್ತು. ಯಡಿಯೂರಪ್ಪನವರ ಕಾಲ ಮುಗಿತು, ಈಶ್ವರಪ್ಪ, ಶೆಟ್ಟರ್​​ ಮುಗಿಸುತ್ತೇವೆ ಎಂದಿದ್ದರು ಎಂದು ಜಗದೀಶ್​ ಶೆಟ್ಟರ್ ಸ್ಫೋಟ ಅಂಶಗಳನ್ನು ಬಹಿರಂಗಪಡಿಸಿದರು.

ಅವರು ಯಾಕೆ ಗ್ರೌಂಡ್ ರಿಪೋರ್ಟ್ ಕೊಡಲಿಲ್ಲ. ಅರುಣ್ ಸಿಂಗ್ ಧರ್ಮೆಂದ್ರ ಪ್ರದಾನ ನಮ್ಮ ಕರೆದು ಮಾತಾಡಿಲ್ಲ. ಕೆಲವರ ಕಪಿ ಮುಷ್ಟಿಯಲ್ಲಿ ಬಿಜೆಪಿ ಇದೆ. ಹೀಗಾಗಿ ಅನಾಹುತ ಆಗುತ್ತಿದೆ. ಒಂದು ಚುನಾವಣೆ ಗೆಲ್ಲಲು ಆಗದವರನ್ನು ರಾಜ್ಯ ಚುನಾವಣೆ ಸಹ ಉಸ್ತುವಾರಿ. ಅವರಿಗೆ ಒಂದು ಕ್ಷೇತ್ರದ ಮಾಹಿತಿ ಇಲ್ಲ. ಕೋರ್ ಕಮಿಟಿಯಲ್ಲಿ ನಾವು ಅವರ ಹಿಂದೆ ಕೂಡಬೇಕು. ನಮ್ಮ ಕೆಳಗೆ ಕೆಲಸ ಮಾಡಿದ ಆಪೀಸರ್ ಹಿಂದೆ ಕೂಡಬೇಕು. ನಾನು ಸದಾನಂದಗೌಡ ಹಿಂದೆ ಕೂತಿದ್ದೆವು ಎಂದು ಅಣ್ಣಾಮಲೈ ಅವರನ್ನು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯ್ನನಾಗಿ ಮಾಡಿದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ನನಗೆ ಟಿಕೆಟ್ ಕೈತಪ್ಪಲು ಮೂಲಭೂತವಾಗಿ ಬಿ ಎಲ್ ಸಂತೋಷ್ ಅವರೇ ಕಾರಣ, ಪಕ್ಷದ ಸ್ಕ್ರೀನಿಂಗ್ ಕಮಿಟಿಯಲ್ಲಿ ನನ್ನ ಹೆಸರಿತ್ತು. ಹುಬ್ಬಳ್ಳಿ -ಧಾರವಾಡ ಸೆಂಟ್ರಲ್ ಟಿಕೆಟ್ ಘೋಷಣೆಯಾಗುವವರೆಗೆ ಸುಮ್ಮನಿದ್ದೆ. ಮೊದಲ ಪಟ್ಟಿ ಎರಡನೇ ಪಟ್ಟಿಯಲ್ಲಿ ನನ್ನ ಹೆಸರು ಘೋಷಣೆಯಾಗಲಿಲ್ಲ. ಚಿಕ್ಕ ಮಕ್ಕಳಿಗೆ ಹೇಳುವ ರೀತಿಯಲ್ಲಿ ಫೋನ್ ಮಾಡಿ ನಿಮಗೆ ಟಿಕೆಟ್ ಇಲ್ಲ ಎಂದು ಕೊನೆಗೆ ಹೇಳಿಬಿಟ್ಟರು. ನಾನು ಬಂಡಾಯವೆದ್ದಾಗ ಆ ಮೇಲೆ ಆ ಹುದ್ದೆ ನೀಡುತ್ತೇವೆ, ಈ ಹುದ್ದೆ ನೀಡುತ್ತೇವೆ. ನಿಮಗೆ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಭವಿಷ್ಯವಿದೆ ಉತ್ತಮ ಸ್ಥಾನಮಾನ ನೀಡಲಾಗುವುದು ಎಂದೆಲ್ಲ ಹೇಳಿದರು. ಅದನ್ನೇ ಆರಂಭದಲ್ಲಿಯೇ ಹೇಳಿ ಗೌರವಯುತವಾಗಿ ನನ್ನನ್ನು ಚುನಾವಣಾ ರಾಜಕೀಯದಿಂದ ಕಳುಹಿಸಿಕೊಡಬಹುದಾಗಿತ್ತಲ್ಲವೇ ಎಂದು ಜಗದೀಶ್ ಶೆಟ್ಟರ್ ಪ್ರಶ್ನಿಸಿದರು.

ಕರ್ನಾಟಕ ವಿಧಾನಸಭೆ ಚುನಾವಣೆಯ ಸದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 12:03 pm, Tue, 18 April 23