ಮಂಡ್ಯದಲ್ಲಿ ಕುಮಾರಸ್ವಾಮಿ ಕಣಕ್ಕಿಳಿದ್ರೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ರೆಡಿ
ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಚನ್ನಪಟ್ಟಣದ ಜೊತೆಗೆ ಮಂಡ್ಯ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಮತ್ತೆ ಮುನ್ನೆಗೆ ಬಂದಿದೆ. ಇದಕ್ಕೆ ಬಿಜೆಪಿ ಸಹ ಬೇರೆ ರಣತಂತ್ರ ರೂಪಿಸಿದೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumarasway) ಅವರು ಮಂಡ್ಯ(Mandya) ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ದಟ್ಟವಾಗಿವಾಗಿದೆ. ಚನ್ನಪಟ್ಟಣದ ಜೊತೆಗೆ ಎರಡನೇ ಕ್ಷೇತ್ರವಾಗಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸ್ಥಳೀಯ ನಾಯಕರೇ ಒತ್ತಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ತಿಂಗಳ ಹಿಂದೆಯೇ ಚರ್ಚೆಯಾಗಿತ್ತು. ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧಿಸಿದರೆ, ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸಂಸದೆ ಸುಮಲತಾ ಅಂಬರೀಶ್ ಕಣಕ್ಕಿಳಿಯುತ್ತಾರೆ ಎನ್ನುವ ಚರ್ಚೆಗಳು ನಡೆದಿದ್ದವು. ಇದೀಗ ಮತ್ತೆ ಈ ಸುದ್ದಿ ಮುನ್ನೆಲೆಗೆ ಬಂದಿದೆ. ಇದಕ್ಕೆ ಪುಷ್ಠಿ ನಿಡುವಂತೆ ಮಂಡ್ಯಕ್ಕೆ ಜೆಡಿಎಸ್ ಅಭ್ಯರ್ಥಿಯನ್ನಾಗಿ ಹಾಲಿ ಶಾಸಕ ಎಂ. ಶ್ರೀನಿವಾಸ್ ಅವರನ್ನು ಘೋಷಣೆ ಮಾಡಲಾಗಿದೆ. ಆದ್ರೆ ಇದುವರೆಗೂ ಬಿ ಫಾರಂ ನೀಡದಿರುವುದು ಇದಕ್ಕೆ ಹಿಂಬು ನೀಡಿದಂತಿದೆ.
ಇದನ್ನೂ ಓದಿ: ಬಿ ಫಾರಂ ಕೊಡದಿದ್ದಕ್ಕೆ ಜೆಡಿಎಸ್ ಅಭ್ಯರ್ಥಿ ಅಸಮಾಧಾನ, ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡ್ತಾರಾ?
ಮಂಡ್ಯ ಜೆಡಿಎಸ್ನಲ್ಲಿನ ಗೊಂದಲ ನಿವಾರಣೆಗೆ ಕುಮಾರಸ್ವಾಮಿ ಅವರನ್ನು ಸ್ಪರ್ಧಿಸುವಂತೆ ಮುಖಂಡರು ಒತ್ತಾಯಿಸಿದ್ದು, ಇದಕ್ಕೆ ಕುಮಾರಸ್ವಾಮಿ ಹ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ. ಒಂದು ವೇಳೆ ಕೊನೆ ಕ್ಷಣದಲ್ಲಿ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿದರೆ ಬಿಜೆಪಿಯೂ ಸಹ ಸುಮಲತಾ ಅಂಬರೀಶ್ ಅವರನ್ನು ನಿಲ್ಲಿಸುವ ಮಾತುಕತೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.
ಚನ್ನಪಟ್ಟಣ ಜೊತೆ ಮಂಡ್ಯ ವಿಧಾನಸಭಾ ಕ್ಷೇತ್ರದ ಮೇಲೆಯೂ ಮಾಜಿ ಸಿಎಂ ಕುಮಾರಸ್ವಾಮಿ ಕಣ್ಣಿಟ್ಟಿಟ್ಟಿದ್ದಾರೆ. ಈ ಹಿನ್ನಲೆ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಖಾಡಕ್ಕೆ ಇಳಿಯುವುದು ಪಕ್ಕಾ ಎಂದು ಟಿವಿ9 ಗೆ ಸುಮಲತಾ ಅಂಬರಿಷ್ ಆಪ್ತ ಅನಕೆರೆ ಶಶಿಕುಮಾರ್ ಮಾಹಿತಿ ನೀಡಿದ್ದು, ಆಪ್ತ ಬಳಗ ಈಗಾಗಲೇ ನಾಮಪತ್ರ ಸಲ್ಲಿಸಲು ತಯಾರಿ ಮಾಡಿಕೊಂಡಿದೆ. ಕುಮಾರಸ್ವಾಮಿ ಉಮೇದುವಾರಿಕೆ ಸಲ್ಲಿಸುತ್ತಿದ್ದಂತೆ ಇತ್ತ ಸುಮಲತಾ ಅಂಬರೀಷ್ ಅಖಾಡಕ್ಕೆ ಇಳಿಯುವುದು ಖಚಿತ ಎಂದು ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ವರಿಷ್ಠರು ಸೂಚಿಸಿದರೆ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ: ಸುಮಲತಾ ಅಂಬರೀಶ್ ಅಚ್ಚರಿ ಹೇಳಿಕೆ
ಚನ್ನಪಟ್ಟಣ ಹೊರತುಪಡಿಸಿ ಮಂಡ್ಯದಿಂದ ಜೆಡಿಎಸ್‌ನ ಹಿರಿಯ ನಾಯಕ ಸ್ಪರ್ಧಿಸಲಿದ್ದಾರೆ ಎಂಬ ಗುಸುಗುಸು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದು, ಮಾಜಿ ಮುಖ್ಯಮಂತ್ರಿ ಎದುರು ಮಂಡ್ಯದಿಂದ ಕಣಕ್ಕಿಳಿಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಒಟ್ಟಿನಲ್ಲಿ ಮಂಡ್ಯ ಕ್ಷೇತ್ರದ ಬಗ್ಗೆ ಕುಮಾರಸ್ವಾಮಿ ನಡೆ ತೀವ್ರ ಕುತೂಹಲ ಮೂಡಿಸಿದ್ದು, ಸಕ್ಕರೆ ನಗರಿ ಮಂಡ್ಯ ಮತ್ತೊಂದು ಮಹಾಯುದ್ದಕ್ಕೆ ಸಾಕ್ಷಿಯಾಗಲಿದ್ಯಾ ಎನ್ನುವುದನ್ನು ಕಾದುನೋಡಬೇಕಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಯ ಸದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ