ಬಿ ಫಾರಂ ಕೊಡದಿದ್ದಕ್ಕೆ ಜೆಡಿಎಸ್ ಅಭ್ಯರ್ಥಿ ಅಸಮಾಧಾನ, ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡ್ತಾರಾ?
ನಾಮಪತ್ರ ಸಲ್ಲಿಕೆ ಅಂತಿಮ ದಿನಕ್ಕೆ ಕೇವಲ ಮೂರು ದಿನ ಮಾತ್ರ ಬಾಕಿ ಇದ್ದು ಬಿ ಫಾರಂ ಕೊಡದ ಪಕ್ಷದ ವರಿಷ್ಠರ ವಿರುದ್ದ ಶಾಸಕ ಎಂ ಶ್ರೀನಿವಾಸ್ ಅಸಮಾಧಾನ ಹೊರ ಹಾಕಿದ್ದಾರೆ.

ಮಂಡ್ಯ: ಕರ್ನಾಟಕ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ದಿನಗಳು ಹತ್ತಿರವಾಗುತ್ತಿದ್ದು ರಾಜಕೀಯ ನಾಯಕರು ಫುಲ್ ಅಲರ್ಟ್ ಆಗಿದ್ದಾರೆ. ಏಪ್ರಿಲ್ 17ರ ಶುಭ ಸೋಮವಾರದಂದು ಅನೇಕ ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಸಿ ಮುಂದಿನ ಕಾರ್ಯಕ್ಕೆ ತಯಾರಿ ನಡೆಸಿದ್ದಾರೆ. ಇನ್ನು ನಾಮಪತ್ರ ಸಲ್ಲಿಕೆ ಅಂತಿಮ ದಿನಕ್ಕೆ ಕೇವಲ ಮೂರು ದಿನ ಮಾತ್ರ ಬಾಕಿ ಇದ್ದು ಬಿ ಫಾರಂ ಕೊಡದ ಪಕ್ಷದ ವರಿಷ್ಠರ ವಿರುದ್ದ ಶಾಸಕ ಎಂ ಶ್ರೀನಿವಾಸ್(M Srinivas) ಅಸಮಾಧಾನ ಹೊರ ಹಾಕಿದ್ದಾರೆ. ಇದರ ನಡುವೆ ಮಂಡ್ಯದಿಂದ ಹೆಚ್ಡಿ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ.
ಬಿ ಫಾರಂ ನನಗೆ ಕೊಡಿ ಇಲ್ಲವೇ ನೀವೆ ಬಂದು ಕ್ಷೇತ್ರದಲ್ಲಿ ನಿಲ್ಲುವಂತೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಿದ್ದಾರೆ. ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿದ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನನ್ನ ಹೆಸರು ಘೋಷಣೆ ಮಾಡಿದ್ದೀರಿ ಆದರೆ ಬಿ ಫಾರಂ ಇನ್ನು ಕೊಡದೆ ಹಾಗೆ ಇಟ್ಟುಕೊಂಡಿದ್ದೀರಿ. ನನಗೆ ಟಿಕೆಟ್ ಕೊಡದಿದ್ರು ಪರವಾಗಿಲ್ಲ, ಕ್ಷೇತ್ರಕ್ಕೆ ನೀವೆ ಬಂದು ನಿಲ್ಲಿ. ನೀವು ಬಂದು ನಿಂತರೆ ಮಂಡ್ಯ ಕ್ಷೇತ್ರ ಹಾಸನ, ತುಮಕೂರು ರೀತಿ ಅಭಿವೃದ್ಧಿ ಆಗುತ್ತೆ. ನಾವೇ ಎಲ್ಲಾ ನಾಯಕರು ನಾವೇ ಬಂದು ನಿಮಗೆ ಆಹ್ವಾನ ಕೊಟ್ಟಿದ್ದೀವಿ. ನೀವು ನಿಂತುಕೊಂಡ್ರೆ ಪಕ್ಷದ ತತ್ವ ಸಿದ್ದಾಂತಕ್ಕೆ ನಾನು ಬದ್ದನಾಗಿರ್ತಿನಿ. ನೀವು ನಿಂತುಕೊಳ್ಳಿ ಇಲ್ಲ ನನಗೆ ಬಿ ಫಾರಂ ಕೊಡಿ. ನೀವು ನಿಂತ್ರೆ ನಾನು ಹಿಂದೆ ಸುರಿಯುತ್ತೇನೆ, ಬೇರೆಯವರಿಗೆ ಕೊಟ್ರೆ ನಾನೇ ಅಭ್ಯರ್ಥಿ ಆಗ್ತಿನಿ ಎಂದು ಪಕ್ಷದ ವರಿಷ್ಠ ನಾಯಕ ಹೆಚ್ಡಿ ಕುಮಾರಸ್ವಾಮಿ ವಿರುದ್ದ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ಓದಿ: ವರಿಷ್ಠರು ಸೂಚಿಸಿದರೆ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ: ಸುಮಲತಾ ಅಂಬರೀಶ್ ಅಚ್ಚರಿ ಹೇಳಿಕೆ
ಇನ್ನು ಮತ್ತೊಂದೆಡೆ ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20ರ ವರೆಗೆ ಮಾತ್ರ ಅವಕಾಶವಿದ್ದು ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಇಂದ್ರೇಶ್ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಮದ್ದೂರು ಬಿಜೆಪಿ ಅಭ್ಯರ್ಥಿಯಾಗಿ ಎಸ್.ಪಿ.ಸ್ವಾಮಿ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಹಾಗೂ ನಾಗಮಂಗಲ ಜೆಡಿಎಸ್ ಅಭ್ಯರ್ಥಿ ಕೆ.ಸುರೇಶ್ ಗೌಡ ಮಂಡ್ಯ ಜಿಲ್ಲೆ ನಾಗಮಂಗಲದ ಮಿನಿ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಶಾಸಕ ಎಂ ಶ್ರೀನಿವಾಸ್ ಅವರಿಗೆ ಜೆಡಿಎಸ್ ಪಕ್ಷ ಇನ್ನೂ ಕೂಡ ಬಿ ಫಾರಂ ನೀಡಿಲ್ಲ. ಹಾಗಾಗಿ ನಾಮಪತ್ರ ಸಲ್ಲಿಸಲು ತಡವಾಗುತ್ತಿದ್ದು ಶ್ರೀನಿವಾಸ್ ಅವರು ಹೆಚ್ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹೆಚ್ಡಿ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡ್ತಾರಾ?
ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬುವುದು ಖಚಿತವಾಗಿದೆ. ಆದ್ರೆ ಮಂಡ್ಯದಿಂದಲೂ ಚುನಾವಣೆ ಎದುರಿಸಲಿದ್ದಾರೆ ಎಂಬ ಮಾತುಗಳು ಹೇಳಿ ಬರುತ್ತಿವೆ. ಇದರ ನಡುವೆ ಶಾಸಕ ಎಂ ಶ್ರೀನಿವಾಸ್ಗೆ ಬಿ ಫಾರಂ ನೀಡದೆ ಪೆಂಡಿಂಗ್ ಇಟ್ಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಜೊತೆಗೆ ಎಂ ಶ್ರೀನಿವಾಸ್ ಅವರು ಕೂಡ ಮಂಡ್ಯದಿಂದ ನಿಲ್ಲುವಂತೆ ಆಹ್ವಾನ ನೀಡಿದ್ದಾರೆ.
ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:03 pm, Mon, 17 April 23




