ಹಾವೇರಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election) ದಿನಾಂಕ ಘೋಷಣೆಯಾಗಿದ್ದು, ನಿನ್ನೆ (ಏ.13) ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಮೊದಲ ದಿನವೇ 221 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ (CM Basavaraj Bommai) ವಿರುದ್ಧ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ (Shiggaon Assembly Constituency) ಪಕ್ಷೇತರವಾಗಿ ಕೆ ಪದ್ಮರಾಜನ್ ಎಂಬುವರು ಸ್ಪರ್ಧಿಸುತ್ತಿದ್ದಾರೆ. ಗುರುವಾರ (ಏ.13) ಬೆಂಗಳೂರಿನಲ್ಲಿ ನಾಪತ್ರ ಸಲ್ಲಿಸುವ ಮೂಲಕ ಕೆ. ಪದ್ಮರಾಜನ್ ಅವರು ಎದುರಿಸುತ್ತಿರುವ 234ನೇ ಚುನಾವಣೆ ಇದಾಗಿದೆ. ಇವರ ಈ ಸಾಧನೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ.
ಕೆ. ಪದ್ಮರಾಜನ್ ತಮಿಳುನಾಡಿನ ಸೇಲಂನ ಮೆಟ್ಟೂರು ಮೂಲದವರಾಗಿದ್ದು, ಎಂಬಿಎ ಪದವೀಧರರಾಗಿದ್ದಾರೆ. ಇವರಿಗೆ ಪತ್ನಿ ಮತ್ತು ಪುತ್ರ ಇದ್ದಾರೆ. ಕೆ. ಪದ್ಮರಾಜನ್ ಅವರು ಮೆಟ್ಟೂರಿನಲ್ಲಿ ಸ್ವಂತ ಉದ್ಯೋಗ ಮಾಡಿಕೊಂಡಿದ್ದಾರೆ. ಆದರೂ ಅವರು ನಾನು ಒಬ್ಬ ಹೋಮಿಯೋಪತಿ ವೈದ್ಯ ಎಂದು ಹೇಳಿಕೊಳ್ಳುತ್ತಾರೆ.
ಇದನ್ನೂ ಓದಿ: ಮೊದಲ ದಿನವೇ 221 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ
ಇವರು 1988ರಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರು ಬಹುತೇಕ ಎಲ್ಲಾ ಸಾರ್ವತ್ರಿಕ ಚುನಾವಣೆಗಳಲ್ಲಿ ವಿಧಾನಸಭೆ, ಲೋಕಸಭೆ ಮತ್ತು ರಾಜ್ಯಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಮತ್ತು ತಮಿಳುನಾಡು ಮಾಜಿ ಸಿಎಂಗಳಾದ ಕರುಣಾನಿಧಿ ಮತ್ತು ಜೆ ಜಯಲಲಿತಾ ಸೇರಿದಂತೆ ಉನ್ನತ ನಾಯಕರ ವಿರುದ್ಧ ಸ್ಪರ್ಧಿಸಿದ್ದಾರೆ.
ಮೆಟ್ಟೂರಿನಲ್ಲಿ ನೆಲೆಸಿರುವ ಮಲಯಾಳಿ ಪದ್ಮರಾಜನ್ ಅವರು ಈಗ ಅನರ್ಹಗೊಂಡಿರುವ ವೈನಾಡ್ ಸಂಸದ ಮತ್ತು ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ 2019 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ನಾನು ಅತ್ಯಂತ ವಿಫಲ ಅಭ್ಯರ್ಥಿಯಾದರು ಇಲ್ಲಿಯವರೆಗೆ ಚುನಾವಣೆಯಲ್ಲಿ 1890 ಮತಗಳನ್ನು ಪಡೆದಿದ್ದೇನೆ. ನಾಮಪತ್ರ ಸಲ್ಲಿಸುವಾಗ ಪ್ರತಿ ಚುನಾವಣಾ ಸ್ಪರ್ಧೆಯ ಠೇವಣಿಗೆ 5,000 ರೂ. ಮತ್ತು 10,000 ರೂ. ಪಾವತಿಸುತ್ತೇನೆ. ಹೀಗೆ ಇಲ್ಲಿಯವರೆಗೆ 1 ಕೋಟಿ ರೂ. ಹಣವನ್ನು ಪಾವತಿಸಿದ್ದೇನೆ ಎಂದು ಪದ್ಮರಾಜನ್ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ