
Karnataka Assembly Election 2023 Highlights News Updates: ಕರ್ನಾಟಕ ವಿಧಾನಸಭೆ ಚುನಾವಣೆ ಅಖಾಡ ರಂಗೇರಿದೆ. ಎಲ್ಲಾ ಪಕ್ಷಗಳ ಘಟಾನುಘಟಿ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಸಮಾವೇಶ, ರೋಡ್ ಶೋ ನಡೆಸಿದರು. ಮತಾದನಾಕ್ಕೆ ಇನ್ನು 2 ದಿನ ಬಾಕಿ ಉಳಿದಿದ್ದು ಮೇ.10 ರಂದು ಮತದಾನ ನಡೆಯಲಿದ್ದು, 13ರಂದು ಮತ ಎಣಿಕೆ ನಡೆಯಲಿದೆ. ಇಂದು ಸಂಜೆ 6 ಗಂಟೆಯಿಂದ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಇನ್ನು ಎಲ್ಲಾ ಪಕ್ಷಗಳ ನಾಯಕರು ಕೊನೆ ಹಂತದ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ಅಲ್ಲದೇ ಅಭ್ಯರ್ಥಿ ಹೊರತುಪಡಿಸಿ ಸ್ಟಾರ್ ಪ್ರಚಾರಕರು ಕ್ಷೇತ್ರದಿಂದ ಹೊರ ನಡೆಯಲಿದ್ದಾರೆ. ಈ ಹಿನ್ನೆಲೆ ರಾಜ್ಯದಲ್ಲಿ ಅನೇಕ ಬೆಳವಣಿಗೆಗಳು ನಡೆಯುತ್ತಿದೆ. ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ.
ಚಿಕ್ಕಮಗಳೂರು: ಮೇ 10ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಹಿನ್ನೆಲೆ ಜಿಲ್ಲೆಯಾದ್ಯಂತ ಡಿಸಿ ರಮೇಶ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಇಂದಿನಿಂದ ಮೇ 10ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ.
ಮೈಸೂರು: ಚುನಾವಣೆಯ ಮತದಾನಕ್ಕೆ ಮೈಸೂರಿನಿಂದ ಅಳಿಸಲಾಗದ ಶಾಯಿ ಪೂರೈಕೆ ಮಾಡಲಾಗಿದೆ. ಮೈಸೂರು ಪೈಂಟ್ಸ್ ಮತ್ತು ವಾರ್ನಿಸ್ ಸಂಸ್ಥೆಯಿಂದ ಶಾಯಿ ಪೂರೈಕೆ ಮಾಡಲಾಗಿದೆ ಎಂದು ಟಿವಿ9ಗೆ ಮೈಲ್ಯಾಕ್ ಸಂಸ್ಥೆಯ ಎಂ.ಡಿ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. 1937ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಸಂಸ್ಥೆ ಸ್ಥಾಪಿಸಿದ್ದಾರೆ. ಚುನಾವಣಾ ಆಯೋಗದ ಬೇಡಿಕೆ ಹಿನ್ನೆಲೆ 1 ಲಕ್ಷದ 20 ಸಾವಿರ ರೂ. ಬಾಟಲ್ ಪೂರೈಕೆ ಮಾಡಲಾಗಿದೆ ಎಂದರು.
ಯಾದಗಿರಿ: ಮೇ 10ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಜಿಲ್ಲೆಯ 4 ಕ್ಷೇತ್ರಗಳಲ್ಲಿ ಮತದಾನಕ್ಕೆ ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಯಾದಗಿರಿ ಡಿಸಿ, ಜಿಲ್ಲಾ ಚುನಾವಣಾಧಿಕಾರಿ ಆರ್.ಸ್ನೇಹಲ್ ಹೇಳಿದರು.
ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ: 9,99,954
ಪುರುಷ ಮತದಾರರು: 5,01,254
ಮಹಿಳಾ ಮತದಾರರು: 4,98,648
4 ಕ್ಷೇತ್ರಗಳಲ್ಲಿ 1,135 ಮತಗಟ್ಟೆಗಳ ಸ್ಥಾಪನೆ
ಪ್ರತಿ ಕ್ಷೇತ್ರದಲ್ಲಿ 5 ಸಖಿ ಮತಗಟ್ಟೆಗಳ ಸ್ಥಾಪನೆ
1,501 ಪೊಲೀಸರು, ಅರೆಸೇನಾ ಪಡೆ ನಿಯೋಜನೆ
ಬೆಂಗಳೂರು: ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಜಾಹೀರಾತು ಹಿನ್ನೆಲೆ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಆಯೋಗಕ್ಕೆ ದೂರು ಹಿನ್ನೆಲೆ ಕಾರಣ ಕೇಳಿ ಬಿಜೆಪಿಗೆ ನೋಟಿಸ್ ನೀಡಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪವಿದ್ದು, ನಾಳೆ ರಾತ್ರಿ 8 ಗಂಟೆಯೊಳಗೆ ಉತ್ತರಿಸುವಂತೆ ನೋಟಿಸ್ ನೀಡಲಾಗಿದೆ.
ಬೆಂಗಳೂರು: ಚುನಾವಣಾ ಆಯೋಗದ ನಿರ್ದೇಶನದಂತೆ ಬುಡಕಟ್ಟು ಸಮುದಾಯಕ್ಕೆ ಪ್ರತ್ಯೇಕ 40 ಸಾಂಪ್ರದಾಯಿಕ ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. 9 ಜಿಲ್ಲೆಗಳಲ್ಲಿ ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಆದಿವಾಸಿ ಜನಾಂಗದವರಾದ ಎರವ, ಪಣಿಯ, ಹಕ್ಕಿ-ಪಿಕ್ಕಿ, ಗೌಡಲು, ಹಸಲರು, ಕಾಡುಕುರುಬ , ಜೇನುಕುರುಬ, ಕೊರಗ, ಮಲೈಕುಡಿ, ಸಿದ್ದಿ ಜನಾಂಗದ ಮತದಾರರಿಗಾಗಿ ಸಾಂಪ್ರದಾಯಿಕ ಮತಗಟ್ಟೆ ಸ್ಥಾಪಿಸಲಾಗಿದೆ.
Karnataka Polls: ವಿನೂತನ ಥೀಮ್ ಬೇಸ್ಡ್ ಮತಗಟ್ಟೆಗಳ ಸ್ಥಾಪನೆ, ಇನ್ನು ಕೆಲವು ಚುನಾವಣಾ ಸ್ವಾರಸ್ಯಕರ ಮಾಹಿತಿ
ಮಂಡ್ಯ: ಮೇ 10ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಜಿಲ್ಲೆಯ 7 ವಿಧಾನಸಭೆ ಕ್ಷೇತ್ರಗಳಲ್ಲಿ 1,798 ಮತಗಟ್ಟೆಗಳಿವೆ. ಚುನಾವಣಾ ಕಾರ್ಯಕ್ಕೆ 8 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮೇ 9ರ ಸಂಜೆಯೇ ಮತದಾನ ಕೇಂದ್ರಕ್ಕೆ ಅಧಿಕಾರಿಗಳು ತೆರಳಲಿದ್ದಾರೆ. ಮೇ 10ರ ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಪ್ರತಿ 2 ಗಂಟೆಗೊಮ್ಮೆ ಆಯೋಗಕ್ಕೆ ಮಾಹಿತಿ ನೀಡಲು ಸೂಚಿಸಿದ್ದೇವೆ. ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಎರಡು ಸಖಿ ಮತಗಟ್ಟೆ ನಿರ್ಮಾಣ ಮಾಡಲಾಗಿದೆ. ಜಿಲ್ಲೆಗಳ 7 ಕ್ಷೇತ್ರಗಳಲ್ಲಿ 35 ಸಾಂಪ್ರದಾಯಿಕ ಮತಗಟ್ಟೆ ನಿರ್ಮಾಣ ಮಾಡಲಾಗಿದೆ ಎಂದು ಮಂಡ್ಯದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಗೋಪಾಲಕೃಷ್ಣ ಹೇಳಿದರು.
ಬೆಂಗಳೂರಿನಲ್ಲಿ ವಿಶೇಷ ವಿನ್ಯಾಸವುಳ್ಳ ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯಲ್ಲಿ ವಿನೂತನ ಥೀಮ್ ಬೇಸ್ಡ್ ಮತಗಟ್ಟೆಗಳು ಕಂಡುಬಂದಿವೆ. ಪಿಂಕ್ ಮತಗಟ್ಟೆ, ಯುವ ಮತದಾರರ ಮತಗಟ್ಟೆ, ಸಿರಿಧಾನ್ಯ ಮತಗಟ್ಟೆ, ವಿಶೇಷ ಚೇತನ ಮತಗಟ್ಟೆ, ಸಂಸ್ಕೃತಿ ಮತಗಟ್ಟೆ, ಪರಿಸರ ಮತಗಟ್ಟೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತಗಟ್ಟೆ, ಮಾಜಿ ಸೈನಿಕ ಮತಗಟ್ಟೆ, ತೃತೀಯ ಲಿಂಗಿ ಮತಗಟ್ಟೆ, ಕ್ರೀಡಾ ಮತಗಟ್ಟೆಗಳೆಂಬ ವಿಶೇಷ ವಿನ್ಯಾಸದ ಮತಗಟ್ಟೆಗಳು.
ಬೆಂಗಳೂರು: ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರ ಅಂತ್ಯವಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಹೇಳಿದರು. ಅಭ್ಯರ್ಥಿ ಸೇರಿ 6 ಜನ ಮಾತ್ರ ಮನೆಮನೆಗೆ ತೆರಳಿ ಪ್ರಚಾರಕ್ಕೆ ಅವಕಾಶವಿದೆ. ಮೇ 10ರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟಕ್ಕೆ ನಿರ್ಬಂಧ. ಅಭ್ಯರ್ಥಿ ಹೊರತುಪಡಿಸಿ ಹೊರಗಿನವರು ಕ್ಷೇತ್ರದಲ್ಲಿ ಇರುವಂತಿಲ್ಲ. ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಮತದಾನ, ಮತ ಎಣಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಬೆಂಗಳೂರು: ರಾಜ್ಯಾದ್ಯಂತ ಮೇ 10ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಮತ ಎಣಿಕೆ ಹಿನ್ನೆಲೆ ಶನಿವಾರ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ ಮಾಡಿದ್ದು, ಮೇ 13ರ ಬೆಳಗ್ಗೆ 6ರಿಂದ ರಾತ್ರಿ 12ರವರೆಗೆ ಮದ್ಯ ಮಾರಾಟಕ್ಕೆ
ಬೆಂಗಳೂರು: ಮೇ 10ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ರಾಜ್ಯದಲ್ಲಿ ಸೋಮವಾರ ಬಹಿರಂಗ ಚುನಾವಣಾ ಪ್ರಚಾರಕ್ಕೆ ಅಧಿಕೃತ ತೆರೆ ಹಾಡಲಾಗಿದೆ. ರಾಜ್ಯದಲ್ಲಿ ಸಭೆ, ಸಮಾರಂಭ, ಉತ್ಸವ, ರ‍್ಯಾಲಿಗಳಿಗೆ ನಿರ್ಬಂಧ ಹೇರಲಾಗಿದೆ. ಅಭ್ಯರ್ಥಿ ಹೊರತುಪಡಿಸಿ ಬೇರೆ ಕ್ಷೇತ್ರದ ವ್ಯಕ್ತಿಗಳು ಇರುವಂತಿಲ್ಲ. ಯಾವುದೇ ಧ್ವನಿ ವರ್ಧಕಗಳ ಬಳಕೆಗೆ ಅವಕಾಶವಿಲ್ಲ. ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಅಭ್ಯರ್ಥಿ ಸೇರಿ 6 ಜನರಿಗೆ ಮಾತ್ರ ಮನೆಮನೆ ಪ್ರಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಹುಬ್ಬಳ್ಳಿ: ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಜಗದೀಶ್ ಶೆಟ್ಟರ್ನ್ನು ಮಂತ್ರಿ ಮಾಡಿದ್ದು ನಾನೇ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಗಣಿ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಕಾಲ ಬದಲಾಗಿದೆ, ವಾತಾವರಣ ಬದಲಾಗಿದೆ. ಇವಾಗ ಟಿಕೆಟ್ ಕೊಟ್ಟಿಲ್ಲ ಅದಕ್ಕೆ ಮಾತಾಡುತ್ತಿದ್ದಾರೆ ಎಂದು ಹೇಳಿದರು.
ಮಂಡ್ಯ: ಕಾಂಗ್ರೆಸ್ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವುದು ಅಸಾಧ್ಯ ಎಂದು ಮಂಡ್ಯದ ಬಿಜೆಪಿ ಕಚೇರಿಯಲ್ಲಿ ಸಂಸದೆ ಸುಮಲತಾ ಹೇಳಿದರು. ಅಭಿವೃದ್ಧಿಯೇ ನನ್ನ ಮಂತ್ರಿ ಅಂತಾ ನಂಬಿರುವವರು ಮೋದಿ. ಅಕ್ಕಪಕ್ಕದ ದೇಶ ಪಾಕಿಸ್ತಾನ, ಶ್ರೀಲಂಕಾ ಸಂಕಷ್ಟಕ್ಕೆ ಸಿಲುಕಿದೆ. ಕೆಲಸ ಮಾಡದೆ ಭ್ರಷ್ಟಾಚಾರ, ಉಚಿತ ಕೊಟ್ಟು ಹಾಳುಮಾಡಿದ್ದಾರೆ. ಕಾಂಗ್ರೆಸ್ನವರು ಸುಳ್ಳು ಭರವಸೆ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.
ಹಾವೇರಿ: ಯಾರೂ ಕೂಡ ನಿಮ್ಮಮತವನ್ನ ವೆಸ್ಟ್ ಮಾಡಬೇಡಿ. ಈ ಬಾರಿ ನಿಮ್ಮ ಮತ ನಂದು. ನನಗೆ ನಿಮ್ಮ ಮತ ಹಾಕಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು. ಈ ಭಾರಿ ಚುನಾವಣೆಯಲ್ಲಿ ಈಡೀ ಕ್ಷೇತ್ರದ ಅಲ್ಪಸಂಖ್ಯಾತ ಜನರು, ಖುಲ್ಲಾ ಖುಲ್ಲಾ ಹೊರಗೆ ಬಂದು ಸಾಹೇಬರ ನಿಮ್ಮ ಜೊತೆಗೆ ಇದ್ದೇನೆ ಅಂದಿದ್ದೀರಿ. ನಾನು ಯಾವತ್ತು ನಿಮ್ಮನ್ನು ಮರೆಯಲ್ಲ ಎಂದರು.
ಬೆಂಗಳೂರಿನಲ್ಲಿ ನಟ ಶಿವರಾಜ್ಕುಮಾರ್ ಪ್ರಚಾರಕ್ಕೆ ಮಳೆ ಅಡ್ಡಿ ಆಗಿದೆ. ಗಾಂಧಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ ಪರ ನಟ ಶಿವರಾಜ್ಕುಮಾರ್ ಪ್ರಚಾರ ಮಾಡಬೇಕಿತ್ತು. ಮಳೆ ಹಿನ್ನೆಲೆ ಶಿವರಾಜ್ಕುಮಾರ್ ರೋಡ್ಶೋ ವಿಳಂಬವಾಗಿದೆ.
ಬೆಂಗಳೂರು: ಕಾಂಗ್ರೆಸ್ನಿಂದ ಕೊನೆ ಕಸರತ್ತು ಮಾಡಲಾಗುತ್ತಿದ್ದು, ಕಾಂಗ್ರೆಸ್ ಭವನದ ಮುಂಭಾಗ ಪೇಸಿಎಂ ಹೋಮ ಮಾಡಲಾಗುತ್ತಿದೆ. ಭ್ರಷ್ಟಾಚಾರ ಸುಡಲು ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ಹೋಮ ಮಾಡುತ್ತಿದ್ದಾರೆ. ಮನೋಹರ್ ನೇತೃತ್ವದಲ್ಲಿ ವಿಶಿಷ್ಟ ಹೋಮ ಮಾಡಿ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾಗಿದ್ದು, ಭ್ರಷ್ಟ ಸರ್ಕಾರ ತೊಲಗಲಿ ಎಂದು ಮಂತ್ರ ಪಠಣ ಮಾಡಿದ್ದಾರೆ.
ಉಡುಪಿ: ಇದು ಕೇವಲ ಕರ್ನಾಟಕ ಚುನಾವಣೆಯಲ್ಲ, ದೇಶದ ಚುನಾವಣೆ ಎಂದು ಉಡುಪಿಯಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿದರು. ಮಂಗಳೂರಿನಲ್ಲಿ ಮಹಾರಾಷ್ಟ್ರ ಮೂಲದ ಜನರು ನೆಲೆಸಿದ್ದಾರೆ. ಮೋದಿ ಭೇಟಿ ಲಕ್ಷಾಂತರ ಜನರ ಮೇಲೆ ಪ್ರಭಾವ ಬೀರಿದೆ. ಬಿಜೆಪಿಗೆ ಬಹುಮತ ಬರುವ ವಿಶ್ವಾಸವಿದೆ ಎಂದು ಹೇಳಿದರು.
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮದ್ಯ ಮಾರಟಕ್ಕೆ ಕರ್ನಾಟಕ ಚುನಾವಣಾ ಆಯೋಗ ನಿರ್ಬಂಧ ಹೇರಿದ್ದರು, ಕಾನೂನು ಉಲ್ಲಂಘಿಸಿದ 200 ಮದ್ಯದಂಗಡಿಗಳ ವಿರುದ್ಧ ಬೆಂಗಳೂರು ಜಿಲ್ಲಾಡಳಿತ ಸೋಮವಾರ ಕ್ರಮಕೈಗೊಂಡಿದೆ. ಕಾನೂನು ಉಲ್ಲಂಘಿಸಿರುವ ನಗರದ ಮದ್ಯದಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಹುಬ್ಬಳ್ಳಿ: ನನ್ನ ಗುರಿ ಇರುವುದು ಈ ಬಾರಿ ಶಾಸಕನಾಗಿ 24X7 ಕುಡಿಯುವ ನೀರಿನ ಯೋಜನೆ ಜಾರಿ ಮಾಡುತ್ತೇನೆ. ಅತೀ ಹೆಚ್ಚು ಮತಗಳ ಅಂತರದಿಂದ ನಾನು ಗೆಲ್ಲುತ್ತೇನೆ. ಬಹಳ ಜನ ನಾನು ಸೋಲಬೇಕು ಎಂದು ಕನಸು ಕಾಣುತ್ತಿದ್ದಾರೆ. ವಿಜಯ ಸಂಕೇಶ್ವರ ಅವರು ಬೇರೆ ಬೇರೆ ಒತ್ತಡಕ್ಕೆ ಮಾತನಾಡಿದ್ದಾರೆ. ಅವರ ಬಗ್ಗೆ ಹೆಚ್ಚು ನಾನು ಮಾತನಾಡುವುದಿಲ್ಲ. ಸುನಾಮಿಯ ಗೇಟ್ ತೆರೆದಿದೆ. ಅದರಲ್ಲಿ ಇವರು ಕೊಚ್ಚಿ ಹೋಗುತ್ತಾರೆ. ಅದನ್ನು ತಡೆದುಕೊಳ್ಳುವ ಶಕ್ತಿ ಬಿಜೆಪಿಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬೆಂಗಳೂರು: ರೈತರು, ಮಹಿಳೆರು, ಅಭಿವೃದ್ಧಿಗೆ ಮುಂದಿನ ಪೀಳಿಗೆಗೆ ನಮ್ಮ ಸರ್ಕಾರ ಬೇಕಾಗಿದೆ. ಮನೆ ಮನೆಗೆ ನೀರು, ಶೌಚಾಲಯ ನಿರ್ಮಾಣ ಮಾಡಿದ್ದೇವೆ. ಪ್ರಧಾನಿ ಮೋದಿಯವರು ಕೊರೋನ ಸಂದರ್ಭದಲ್ಲಿ ನಮ್ಮ ದೇಶ ಕಾಪಾಡಿದ್ದಾರೆ. ಆರ್ಥಿಕವಾಗಿ ಸದೃಢವಾಗಿರುವ ದೇಶಗಳಲ್ಲಿ 5 ನೇ ಸ್ಥಾನಕ್ಕೆ ಬಂದಿದ್ದೇವೆ. ಪ್ರಧಾನಿ ಮೋದಿ, ಅಮಿತ್ ಷಾ ಕರ್ನಾಟಕದ ಬೆಂಬಲ ಕೇಳಿದ್ದಾರೆ ಎಂದು ಹೇಳುದರು.
ಬೆಂಗಳೂರು: ವೀರಶೈವ ಲಿಂಗಾಯತವನ್ನು ಸಮಾಜವನ್ನು ಎತ್ತುಕಟ್ಟುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ. ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಪ್ರಯತ್ನ ಪಟ್ಟವರು ಇಂದು ಲಿಂಗಾಯತ ಸಮಾಜದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ವೀರಶೈವ ಲಿಂಗಾಯತ ಸಮಾಜ ನಮ್ಮ ಜೊತೆ ಇದೆ ಎಂದರು.
ಬೆಂಗಳೂರು: ಕಾಂಗ್ರೆಸ್ ಪಕ್ಷ ದೇಶದಲ್ಲಿ ಮುಳಗುವ ಹಡಗು. ಪ್ರಧಾನಿ ಮೋದಿಯವರ ಎದರು ರಾಹುಲ್ ಗಾಂಧಿ ಸರಿಸಮಾನ ಆಗಲು ಸಾಧ್ಯವಿಲ್ಲ. ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಒಂದು ಭ್ರಷ್ಟಾಚಾರದ ಆರೋಪವಿಲ್ಲ. ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹ ಧನ 5ರಿಂದ 7 ರೂ.ಗೆ ಹೆಚ್ಚಳ ಮಾಡುತ್ತೇವೆ. ರೈತಸಿರಿ ಯೋಜನೆ ಅಡಿ ಪ್ರತಿ ಹೆಕ್ಟರ್ಗೆ 10 ಸಾವಿರ ಹಣ ನೀಡಲು ಯೋಜನೆ ರೂಪಿಸಿದ್ದೇವೆ ಎಂದು ಹೇಳಿದರು.
ಬೆಂಗಳೂರು: ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅನೇಕ ರೋಡ್ಶೋ ಮಾಡಿದ್ದಾರೆ. ಈ ಬಾರಿ 130ರಿಂದ 135 ಸ್ಥಾನ ಗೆಲ್ಲುವ ವಿಶ್ವಾಸವಿದೆ. ರಾಜ್ಯದಲ್ಲಿ ಸ್ವಂತ ಬಲದಲ್ಲಿ ಸರ್ಕಾರ ರಚನೆ ಮಾಡುವುದು ನಿಶ್ಚಿತ. SC, ST ಮೀಸಲಾತಿ ಹೆಚ್ಚಳ ಮಾಡಿ ಇತಿಹಾಸ ಸೃಷ್ಟಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ಧಾರೆ.
ವಿಜಯಪುರ: ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ನೀವು ನಾಟಕ ಮಾಡಿ. ವಿಜಯಪುರ ನಗರದಲ್ಲಿ ನಿಮ್ಮ ನಾಟಕ ಮಾಡಬೇಡಿ. ಎಂ.ಬಿ.ಪಾಟೀಲ್ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿರಬಹುದು, ನಾನು ರಾಜ್ಯ ಬಿಜೆಪಿಯ ಸ್ಟಾರ್ ಪ್ರಚಾರಕ. ನನ್ನ ಸಲುವಾಗಿಯೇ 4 ದಿನಗಳ ಕಾಲ ಹೆಲಿಕಾಪ್ಟರ್ಗಳು ನಿಂತಿದ್ದವು. ಬಿಜೆಪಿಯ 30 ಸ್ಟಾರ್ ಪ್ರಚಾರಕರಲ್ಲಿ ನಾನೂ ಒಬ್ಬ ಅನ್ನೋದು ತಿಳಿದುಕೊಳ್ಳಿ ಎಂದು ವಿಜಯಪುರದಲ್ಲಿ ಎಂ.ಬಿ.ಪಾಟೀಲ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ಮಾಡಿದ್ದಾರೆ.
ಹುಬ್ಬಳ್ಳಿ: ಬಿಜೆಪಿಯಿಂದ ಬಂಡಾಯವೆದ್ದು ಕಾಂಗ್ರೆಸ್ಗೆ ಸೇರಿರುವ ಜಗದೀಶ್ ಶೆಟ್ಟರ್ ಅವರು ಇಂದು(ಮೇ.08) ಮಧ್ಯಾಹ್ನ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಕಾಂಗ್ರೆಸ್ನಿಂದ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಈ ಬಾರಿಯ ಚುನಾವಣೆಯನ್ನು ಸ್ವಾಭಿಮಾನವಾಗಿ ತೆಗೆದುಕೊಂಡಿದ್ದು ಶತಾಯಗತಾಯ ಗೆಲ್ಲಲೇಬೇಕೆಂದು ಕಂಕಣ ಕಟ್ಟಿಕೊಂಡಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ದೂರು ನೀಡಿದ್ದಾರೆ . ಸೋನಿಯಾ ಗಾಂಧಿಯವರು ಕನ್ನಡಿಗರ ಬಗ್ಗೆ ಸಂಶಯ ಬರುವ ರೀತಿ ಮಾತನಾಡಿದ್ದಾರೆ. ಭಾರತದ ಸಾರ್ವಭೌಮತ್ವದ ವಿರುದ್ಧ ಸೋನಿಯಾ ಗಾಂಧಿಯವರು ಮಾತನಾಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ
ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ಬೆದರಿಕೆ ರಾಜಕೀಯ ಮಾಡುತ್ತಿದ್ದಾರೆ. ಇದರಿಂದಾಗಿ ಕಾರ್ಪೋಟರ್ಗಳು ಮತ್ತು ಕೆಲ ನಾಯಕರು ಬಿಜೆಪಿ ಬಿಟ್ಟು ಹೋಗುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಸೋಮಶೇಖರ್ ರೆಡ್ಡಿ ಆರೋಪ ಮಾಡಿದ್ದಾರೆ.
ಶಿವಮೊಗ್ಗ: ಶಿಕಾರಿಪುರ ಕ್ಷೇತ್ರದಲ್ಲಿ ಬಿಜೆಪಿ ಪರ ಉತ್ತಮ ವಾತಾವರಣ ಇದೆ. ರಾಜ್ಯದಲ್ಲೂ ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. 60 ವರ್ಷಗಳಿಂದ ದೇಶದ ಮತ್ತು ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. 2014 ರಿಂದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿಯನ್ನು ಹೇಗೆಲ್ಲಾ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಪ್ರಪಂಚಕ್ಕೆ ಆರ್ಥಿಕ ಸಂಕಷ್ಟ ಬಂದ ಸಂದರ್ಭದಲ್ಲಿ ರಾಹುಲ್ ಗಾಂಧಿ ಏನಾದರೂ ಭಾರತದ ಪ್ರಧಾನಿಯಾಗಿದ್ದರೆ ಪಾಕಿಸ್ತಾನ ಮತ್ತು ಶ್ರೀಲಂಕಾಗಳಿಗಿಂತ ಮೊದಲು ಭಾರತ ದಿವಾಳಿ ಆಗುತ್ತಿತ್ತು ಎಂದು ಬಿವೈ ವಿಜಯೇಂದ್ರ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿ: ಲಿಂಗಾಯತ ವೇದಿಕೆ ಎನ್ನುವುದು ಒಂದು ಕಾಲ್ಪನಿಕ ಸಂಘಟನೆ. ನಾಲ್ಕು ಜನ ಸೇರಿ ಏನೋ ಹೇಳಿದರೇ ಲಿಂಗಾಯತರ ಧ್ವನಿ ಆಗುತ್ತಾ? ಲಿಂಗಾಯತ ಸಮುದಾಯ ಸಮುದ್ರವಿದ್ದಂತೆ. ಲಿಂಗಾಯತ ವೇದಿಕೆ ಚುನಾವಣೆ ವೇಳೆ ಹುಟ್ಟಿಕೊಂಡ ಸಂಘಟನೆ ಎಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಮತಯಾಚನೆಗೆಂದು ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿನ್ನೆ (ಮೇ.07) ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿದ್ದರು. ಇಂದು (ಮೇ.08) ಬೆಳಿಗ್ಗೆ ಕನ್ನಿಂಗ್ಹ್ಯಾಮ್ ರಸ್ತೆಯ ಕೆಫೆಯಲ್ಲಿ ಗ್ರಾಹಕರ ಜೊತೆ ಕಾಫಿ ಕುಡಿದಿದ್ದಾರೆ. ಬಳಿಕ ಬಿಎಂಟಿಸಿ ಬಸ್ನಲ್ಲಿ ಪ್ರಯಾಣ ಮಾಡಿದ್ದಾರೆ.
ಮೈಸೂರು: ವರುಣಾ ರಣಕಣ ಈ ಬಾರಿ ಹೈ ವೋಲ್ಟೇಜ್ನಿಂದ ಕೂಡಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಲಿಂಗಾಯತ ಸಮುದಾಯದ ನಾಯಕ, ವಿ.ಸೋಮಣ್ಣ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಅಲ್ಲದೇ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವರುಣಾವನ್ನು ಗೆಲ್ಲಲು ತಂತ್ರ ರೂಪಿಸಿದ್ದಾರೆ. ಇದರಿಂದ ತೆಲೆ ಕೆಡೆಸಿಕೊಂಡ ಸಿದ್ದರಾಮಯ್ಯ ಪ್ರತಿತಂತ್ರ ಹೆಣೆಯುತ್ತಿದ್ದಾರೆ.
ಸಿದ್ದರಾಮಯ್ಯ ಮನೆಯಲ್ಲಿ ಉಳಿಯದೇ ಹೋಟೆಲ್‌ನಲ್ಲಿ ಖಾಸಗಿ ಹೋಟೆಲ್‌ನಲ್ಲಿ ಕುಳಿತು ಕ್ಷೇತ್ರದ ಗೆಲುವಿಗೆ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಮೈಸೂರಿನಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ
ಮೈಸೂರಿನಲ್ಲಿದ್ದರು ಟಿ ಕೆ ಬಡಾವಣೆ ಮನೆಗೆ ತೆರಳಿಲ್ಲ. ವರುಣಾ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರನ್ನು ಹೋಟೆಲ್‌ಗೆ ಕರೆಸಿಕೊಂಡು ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು, ವರುಣ ಕ್ಷೇತ್ರದ ಪ್ರಮುಖ ಮುಖಂಡರ ಜೊತೆ ಸಮಾಲೋಚನೆ ಮಾಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆದ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿದ್ದಾರೆ.
ಬೆಂಗಳೂರು: ಇಂದು ಸಂಜೆ 6ರಿಂದ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಈ ಹಿನ್ನೆಲೆ ಎಲ್ಲಾ ಪಕ್ಷಗಳ ನಾಯಕರು ಅಂತಿಮ ಹಂತದ ಕಸರತ್ತು ನಡೆಸಿವೆ. ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಬಿಜೆಪಿಯ ಸ್ಟಾರ್ ಪ್ರಚಾರಕರು ರಾಜ್ಯ ಪ್ರವಾಸದಲ್ಲಿದ್ದು ಅಬ್ಬರ ಪ್ರಚಾರ ನಡೆಸಿದ್ದಾರೆ. ಇಂದು ಕೂಡ ಹಲವು ಬಿಜೆಪಿ ನಾಯಕರು ಪ್ರಚಾರ ನಡೆಸಲಿದ್ದಾರೆ. ಇಲ್ಲಿದೆ ನಾಯಕರ ಪ್ರವಾಸ
ರಾಮನಗರ: ಹೆಚ್ಡಿ ಕುಮಾರಸ್ವಾಮಿ ಅವರು ಇಂದು ಸ್ವಕ್ಷೇತ್ರ ಚನ್ನಪಟ್ಟಣ ಕ್ಷೇತ್ರದಲ್ಲಿ ಮತಬೇಟೆಯಾಡಲಿದ್ದಾರೆ. ಚನ್ನಪಟ್ಟಣದಲ್ಲಿ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಚನ್ನಪಟ್ಟಣದ ಶೇರ್ವಾ ಸರ್ಕಲ್ ನಿಂದ ಮಂಗಳವಾರಪೇಟೆವರೆಗೂ ಬೃಹತ್ ಬೈಕ್ ರ್ಯಾಲಿ ನಡೆಯಲಿದೆ. ಹೆಚ್ಡಿ ಕುಮಾರಸ್ವಾಮಿಗೆ ತಂದೆ ಹೆಚ್ಡಿ ದೇವೇಗೌಡ, ಪುತ್ರ ನಿಖಿಲ್ ಸಾಥ್ ನೀಡಲಿದ್ದಾರೆ. ಸಾವಿರಾರು ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. ನಂತರ ಮಧ್ಯಾಹ್ನ 1 ಗಂಟೆಗೆ ಕನಕಪುರ ಜೆಡಿಎಸ್ ಅಭ್ಯರ್ಥಿ ಪರ ಹೆಚ್ಡಿ ಕುಮಾರಸ್ವಾಮಿ ಪ್ರಚಾರ ಮಾಡಲಿದ್ದಾರೆ. ಬಳಿಕ ಮಧ್ಯಾಹ್ನ 3 ಗಂಟೆಗೆ ರಾಮನಗರ ಜೆಡಿಎಸ್ ಅಭ್ಯರ್ಥಿ ನಿಖಿಲ್ ಪರ ಪ್ರಚಾರ ನಡೆಸಲಿದ್ದಾರೆ. ಇನ್ನು ಇಂದು ರಾಮನಗರ, ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಮತಯಾಚನೆ ಮಾಡಲಿದ್ದಾರೆ.
ಹಾವೇರಿ: ಇಂದು ಬಹಿರಂಗ ಚುನಾವಣಾ ಪ್ರಚಾರಕ್ಕೆ ಕೊನೆಯ ದಿನವಾದ ಹಿನ್ನೆಲೆ ತವರು ಕ್ಷೇತ್ರ ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಚಾರ ನಡೆಸಲಿದ್ದಾರೆ. ಕ್ಷೇತ್ರದ ಹನುಮರಹಳ್ಳಿ, ಹಿರೇಮಲ್ಲೂರ ಗ್ರಾಮ, ಜಕೀನಕಟ್ಟಿ, ಮಂತ್ರೋಡಿ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಲವು ಸಿಎಂ ಬೊಮ್ಮಾಯಿ ಮತಯಾಚಿಸಲಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಅಖಾಡ ರಂಗೇರಿದೆ. ಎಲ್ಲಾ ಪಕ್ಷಗಳ ಘಟಾನುಘಟಿ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಸಮಾವೇಶ, ರೋಡ್ ಶೋ ನಡೆಸಿದರು. ಇಂದು (ಮೇ.08) ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಈ ಹಿನ್ನೆಲೆ ಸಂಜೆ 5ರ ಬಳಿಕ ಸಭೆ, ಸಮಾರಂಭ, ಉತ್ಸವ, ಱಲಿ ಮತ್ತು ಧ್ವನಿ ವರ್ಧಕಗಳ ಬಳಕೆಗೆ ನಿರ್ಬಂಧ ಹೇರಲಾಗಿದೆ. ಅಲ್ಲದೇ ಕ್ಷೇತ್ರದಲ್ಲಿ ಅಭ್ಯರ್ಥಿ ಹೊರತುಪಡಿಸಿ ಬೇರೆ ನಾಯಕರು ಬರುವಂತಿಲ್ಲ. ಆದರೆ ಮನೆ ಮನೆಗೆ ತೆರಳಿ ಅಭ್ಯರ್ಥಿ ಸೇರಿ 6 ಜನರು ಮಾತ್ರ ಪ್ರಚಾರ ಮಾಡಲು ಅವಕಾಶವಿದೆ.
Published On - 7:14 am, Mon, 8 May 23