ತೀವ್ರ ಕುತೂಹಲ ಸೃಷ್ಟಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದಿದ್ದು, ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ಬಿಜೆಪಿಯ ಘಟಾನುಘಟಿ ನಾಯಕರು ರಾಜ್ಯದಲ್ಲಿ ಸರಣಿ ಪ್ರಚಾರ ಮಾಡಿದರೂ ಕಾಂಗ್ರೆಸ್ ಬಹುಮತ ಮಡೆಯುವಲ್ಲಿ ಯಶಸ್ವಿಯಾಗಿದೆ. ಅಭೂತಪೂರ್ವ ಬಹುಮತದಿಂದ ಹಿರಿ ಹಿರಿ ಹಿಗ್ಗಿರುವ ಕಾಂಗ್ರೆಸ್ ನಾಯಕರು ಹೊಸ ಸರ್ಕಾರದ ರಚನೆಯ ಉತ್ಸಾಹದಲ್ಲಿದ್ದಾರೆ. ಇದರ ನಡುವೆ ಕರ್ನಾಟಕ ಮುಂದಿನ ಮುಖ್ಯಮಂತ್ರಿ ಯಾರು ಆಗುತ್ತಾರೆ ಎಂಬ ಕುತೂಹಲವೂ ಹೆಚ್ಚಾಗಿದೆ. ಸದ್ಯ ಕಾಂಗ್ರೆಸ್ ಪಕ್ಷದ ಸಿಎಂ ರೇಸ್ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಂದಿದ್ದು, ಇಂದು ಶಾಸಕರ ಸಭೆ ಬಳಿಕ ಅಂತಿಮ ನಿರ್ಧಾರವಾಗುವ ಸಾಧ್ಯತೆ ಇದೆ. ಇಂದಿನ ರಾಜ್ಯ ರಾಜಕೀಯ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ.
ಬಳ್ಳಾರಿ: ಚುನಾವಣೆ ಮುಗಿಯುತ್ತಿದ್ದಂತೆ ಬಳ್ಳಾರಿಯಲ್ಲಿ ದ್ವೇಷದ ರಾಜಕಾರಣ ಶುರುವಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ನಾಗೇಂದ್ರ ಅವರು ಗೆಲುವು ಸಾಧಿಸಿದ್ದಾರೆ. ಹೀಗಾಗಿ ಶುಭಾಶಯ ಕೋರುವ ನೆಪದಲ್ಲಿ ರಿಮ್ಯಾಂಡ್ ಹೋಂ ಬಳಿ ಬೈಕ್ನಲ್ಲಿ ಎದುರು ಬಂದಿದ್ದಾರೆ. ಈ ವೇಳೆ ನಾಲ್ವರನ್ನು ಶಾಸಕರು ಮಾತನಾಡಿಸಲು ಹೋದಾಗ ನಾಲ್ವರ ಕೈಯಲ್ಲಿ ಮಾರಕಾಸ್ತ್ರಗಳನ್ನು ನೋಡಿದ ಭದ್ರತಾ ಸಿಬ್ಬಂದಿ ಕೂಡಲೇ ಅವರನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ಇಬ್ಬರು ಪರಾರಿಯಾಗಿದ್ದಾರೆ. ರಮೇಶ್ ಮತ್ತು ವೆಂಕಟೇಶ್ ಸೇರಿದಂತೆ ನಾಲ್ವರಿಂದ ಕೃತ್ಯ ಎಸಗಿದ್ದು, ಕೌಲಬಜಾರ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಂತರ ಶಾಸಕರಿಗೆ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಯಿತು.
ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ನಲ್ಲಿ ಕಾಂಗ್ರೆಸ್ ಶಾಸಕರಿಗೆ ಔತಣಕೂಟ ಏರ್ಪಡಿಸಲಾಗಿದ್ದು, ಇದರ ಜೊತೆಗೆ ಕೈ ನಾಯಕರು ಶಾಸಕರಿಂದ ಮೌಖಿಕವಾಗಿ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ. ಆದರೆ ಕೆಲವು ಶಾಸಕರು ಮೌಖಿಕವಾಗಿ ಅಭಿಪ್ರಾಯ ತಿಳಿಸಲು ಹಿಂದೇಟು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಲಿಖಿತ ರೂಪದಲ್ಲಿ ಅಭಿಪ್ರಾಯ ತಿಳಿಸುವಂತೆ ಸೂಚಿಸಿದ್ದಾರೆ.
ಶಾಸಕಾಂಗ ಪಕ್ಷದಲ್ಲಿ ಕಾಂಗ್ರೆಸ್ ನಾಯಕರು ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದಾರೆ. ಆರಂಭದಲ್ಲಿ ಗದ್ದಲಕ್ಕೆ ಎಡೆಮಾಡಿಕೊಡಬಾರದು ಎಂಬ ಉದ್ದೇಶದಿಂದ ಲಿಖಿತ ರೂಪದಲ್ಲಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದರು. ಇದೀಗ ಲಿಖಿತ ಬಿಟ್ಟು ಮೌಖಿಕ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದಾರೆ.
ಬೆಂಗಳೂರು: ಶಾಸಕರ ಅಭಿಪ್ರಾಯ ಇವತ್ತು ತೆಗೆದುಕೊಳ್ಳುತ್ತೇವೆ ಎಂದು ಕೆಸಿ ವೇಣುಗೋಪಾಲ್ ಹೇಳಿದ್ದಾರೆ. ಆದಷ್ಟು ಶೀಘ್ರದಲ್ಲಿ ಹೈಕಮಾಂಡ್ ನಿರ್ಧರ ತೆಗೆದುಕೊಳ್ಳುತ್ತದೆ. ನಾಳೆ ದೆಹಲಿಗೆ ತೆರಳಿ ಶಾಸಕರ ಅಭಿಪ್ರಾಯವನ್ನ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿಳಿಸುತ್ತಾರೆ. ಬಳಿಕ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಒಂದು ಸಾಲಿನ ನಿರ್ಣಯವನ್ನ ಮಂಡಿಸಿದ್ದಾರೆ. ಅದೇನಂದ್ರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಹೊಸ ನಾಯಕನನ್ನ ನೇಮಕ ಮಾಡುವಂತೆ ಎಐಸಿಸಿ ಅಧ್ಯಕ್ಷರಿಗೆ ತಿಳಿಸುವ ನಿರ್ಣಯವನ್ನ ಮಂಡಿಸಿದ್ದಾರೆ ಎಂದು ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ. ಈ ನಿರ್ಣಯವನ್ನ 135 ಶಾಸಕರು ಒಮ್ಮತದಿಂದ ಒಪ್ಪಿಕೊಂಡಿದ್ದಾರೆ.
ಒಂದು ಸಾಲಿನ ನಿರ್ಣಯಕ್ಕೆ ಸಭೆಯಲ್ಲಿ ಸಹಮತಿ ಸೂಚಿಸಲಾಗಿದೆ. ಇನ್ನು, ಶಾಸಕರ ಅಭಿಪ್ರಾಯ ಸಂಗ್ರಹ ಮಾಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದು, ಲಿಖಿತ ರೂಪದ ಮೂಲಕ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಮೌಕಿಕ ಅಭಿಪ್ರಾಯದಿಂದ ಗದ್ದಲ ಸಾಧ್ಯತೆ ಹಿನ್ನೆಲೆ ಔತಣ ಕೂಟದ ಬಳಿಕ ಲಿಖಿತ ರೂಪದ ಮೂಲಕ ಶಾಸಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಗಿದೆ ಎಂದು ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ಒಂದು ಸಾಲಿನ ನಿರ್ಣಯವನ್ನು ಸಿದ್ದರಾಮಯ್ಯ ಮಂಡಿಸಿದ್ದರು. ನಿರ್ಣಯಕ್ಕೆ ಡಿಕೆ ಶಿವಕುಮಾರ್ ಸೇರಿ ಎಲ್ಲರೂ ಅನುಮೋದನೆ ನೀಡಿದ್ದಾರೆ. ಎಐಸಿಸಿ ವೀಕ್ಷಕರು ಶಾಸಕರ ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸುತ್ತಾರೆ. ಡಿನ್ನರ್ ಮೀಟಿಂಗ್‌ನಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಾರೆ ಎಂದರು.
ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಆಯ್ಕೆಯನ್ನು ಎಐಸಿಸಿ ಅಧ್ಯಕ್ಷರ ನಿರ್ಧಾರಕ್ಕೆ ಬಿಡಲು ಕಾಂಗ್ರೆಸ್ ಶಾಸಕಾಂಗ ಪಕ್ಷವು ಸರ್ವಾನುಮತದಿಂದ ನಿರ್ಧರಿಸಿದೆ. ಬೆಂಗಳೂರು ನಗರದಲ್ಲಿರುವ ಶಾಂಗ್ರಿಲಾ ಹೊಟೇಲ್ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಮಾತನಾಡುತ್ತಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಗೆದ್ದ ಎಲ್ಲಾ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು. ಸಂಘಟಿತ ಹೋರಾಟದಿಂದ ಗೆಲುವು ಸಾಧಿಸಿದ್ದೇವೆ. ಕಾಂಗ್ರೆಸ್ ಗ್ಯಾರಂಟಿಗಳನ್ನು ಮನೆ ಮನೆಗೆ ಸರಿಯಾಗಿ ತಲುಪಿಸಿದ್ದೀರಿ. ಕಾಂಗ್ರೆಸ್ ಗ್ಯಾರಂಟಿಗಳೇ ನಮಗೆ ಗೆಲುವು ತಂದುಕೊಟ್ಟಿದೆ. ಗೆದ್ದವರ ಶ್ರಮಕ್ಕೆ ನಿಮಗೆಲ್ಲ ಅಭಿನಂದನೆ ಎಂದರು.
ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ನಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ನಾಯಕರ ಪ್ರತ್ಯೇಕ ಸಭೆ ಅಂತ್ಯಗೊಂಡಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜೊತೆ ಪ್ರತ್ಯೇಕ ಚರ್ಚೆ ನಡೆಸಲಾಯಿತು. ಇನ್ನು, ಶಾಸಕರೊಂದಿಗೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.
ಶಾಂಗ್ರಿಲಾ ಹೋಟೆಲ್ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದ್ದು, ಹೋಟೆಲ್‌ನ ಕೊಠಡಿಯಲ್ಲಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಸುರ್ಜೇವಾಲ ಅವರು ಪ್ರತ್ಯೇಕ ಚರ್ಚೆ ನಡೆಸುತ್ತಿದ್ದಾರೆ. ಎಐಸಿಸಿ ವೀಕ್ಷಕರಾದ ಎಐಸಿಸಿ ವೀಕ್ಷಕರಾದ ಜಿತೇಂದ್ರ ಸಿಂಗ್, ಸುಶೀಲ್ ಕುಮಾರ್ ಶಿಂಧೆ, ದೀಪಕ್ ಬಬಾರಿಯಾ ಕೂಡ ಜೊತೆಗಿದ್ದಾರೆ.
ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಯಾರು ಎಂಬ ಚರ್ಚೆ ಜೋರಾಗಿದ್ದು, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣಗಳ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಭಾರೀ ಜಟಾಪಟಿ ನಡೆಯುತ್ತಿದೆ. ನಾಯಕರು ಕೂಡ ಸಭೆಗಳನ್ನು ನಡೆಸುತ್ತಿದ್ದರೆ. ಒಂದೆಡೆ ಸಿದ್ದರಾಮಯ್ಯ ಸಿಎಂ ಎಂದು ಬೆಂಬಲಿಗರು ಘೋಷಣೆ ಮಾಡುತ್ತಿದ್ದರೆ, ಇನ್ನೊಂದೆಡೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಎಂದು ಘೋಷಣೆ ಕೂಗಲಾಗುತ್ತಿದೆ.
ಬೆಂಗಳೂರು: ನಗರದಲ್ಲಿರುವ ಶಾಂಗ್ರಿಲಾ ಹೊಟೇಲ್ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭಗೊಂಡಿದೆ. ಸಭೆಯಲ್ಲಿ ಎಐಸಿಸಿ ವೀಕ್ಷಕರಾದ ಜಿತೇಂದ್ರ ಸಿಂಗ್, ಸುಶೀಲ್ ಕುಮಾರ್ ಶಿಂಧೆ, ದೀಪಕ್ ಬಬಾರಿಯಾ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಭಾಗಿಯಾಗಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಹಿನ್ನೆಲೆ ಬೆಂಗಳೂರು ನಗರದ ವಸಂತನಗರದಲ್ಲಿರುವ ಶಾಂಗ್ರಿಲಾ ಹೊಟೇಲ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಆಗಮಿಸಿದ್ದಾರೆ. ಈಗಾಗಲೇ ಅನೇಕ ಶಾಸಕರು ಆಗಮಿಸಿದ್ದಾರೆ.
ಬೆಂಗಳೂರಿನ ಶಾಂಗ್ರಿಲಾ ಹೊಟೇಲ್ನಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಎಐಸಿಸಿ ವೀಕ್ಷಕರು ಆಗಮಿಸಿದ್ದಾರೆ. ದೀಪಕ್ ಬಬಾರಿಯಾ, ಸುಶೀಲ್ ಕುಮಾರ್ ಶಿಂಧೆ, ಜಿತೇಂದ್ರ ಸಿಂಗ್ ಆಗಮಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನ ಕೇಳಿದ್ದು ತಪ್ಪಲ್ಲ ಎಂದು ಬೆಂಗಳೂರಿನಲ್ಲಿ ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅವರು ಉತ್ತಮ ಕೆಲಸ ಮಾಡಿದ್ದಾರೆ. ಸಿಎಂ ಸ್ಥಾನಕ್ಕೆ ಒತ್ತಡ ಹಾಕುತ್ತಿಲ್ಲ, ಮನವಿ ಮಾಡಿದ್ದೇವೆ. ಇದು ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲ್ಲ ಎಂದರು.
ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್ಗೆ ಬೆಂಬಲ ನೀಡುತ್ತೇನೆ ಎಂದು ಹರಪನಹಳ್ಳಿ ಕ್ಷೇತ್ರದ ಶಾಸಕಿ ಲತಾ ಮಲ್ಲಿಕಾರ್ಜುನ ಹೇಳಿದ್ದಾರೆ. ಬೆಂಗಳೂರಿನ ಸದಾಶಿವನಗರದ ಡಿಕೆ ಶಿವಕುಮಾರ್ ನಿವಾಸದ ಬಳಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ಮಠಕ್ಕೆ ಹೋಗಿದ್ದರಿಂದ ಸಂಜೆ ಬರುವಂತೆ ಹೇಳಿದ್ದರು. ಹರಪನಹಳ್ಳಿ ಕ್ಷೇತ್ರದ ಟಿಕೆಟ್ ಬೇರೆಯವರಿಗೆ ನೀಡಿದ್ದರು. ಆಗಿನ ಸಂದರ್ಭದಲ್ಲಿ ಬೇರೆಯವರಿಗೆ ಟಿಕೆಟ್ ಕೊಟ್ಟಿದ್ದರು. ನನಗೆ ಟಿಕೆಟ್ ನೀಡದಿದ್ದರಿಂದ ಯಾವುದೇ ಬೇಜಾರಿಲ್ಲ. ಬೇಷರತ್ ಆಗಿ ಕಾಂಗ್ರೆಸ್ಗೆ ಬೆಂಬಲ ಸೂಚಿಸುತ್ತಿದ್ದೇನೆ ಎಂದರು.
ಮುಸ್ಲಿಂ ಸಮುದಾಯದಿಂದ ಡಿಸಿಎಂ ಸ್ಥಾನಕ್ಕೆ ಬೇಡಿಕೆ ಹಿನ್ನೆಲೆ ಇಂದು ನಡೆಯುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ. ಶೇಕಡಾ 80ರಷ್ಟು ಮುಸ್ಲಿಂ ಮತಗಳು ಕಾಂಗ್ರೆಸ್ಗೆ ಬಂದಿದ್ದು, ಹಾಗಾಗಿ ಡಿಸಿಎಂ ಸ್ಥಾನ ನೀಡಬೇಕೆಂದು ಮುಸ್ಲಿಮರು ಬೇಡಿಕೆ ಇಟ್ಟಿದ್ದಾರೆ. ಡಿಸಿಎಂ ರೇಸ್ನಲ್ಲಿ ಜಮೀರ್ ಅಹಮದ್ ಖಾನ್, ಯು.ಟಿ.ಖಾದರ್, ತನ್ವೀರ್ ಸೇಠ್ ಇದ್ದಾರೆ.
ಕಾಂಗ್ರೆಸ್ನಲ್ಲಿ ಸಿಎಂ ಹಾಗೂ ಡಿಸಿಎಂ ಲೆಕ್ಕಾಚಾರ ಜೋರಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದು, ಇವರಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಬೆಂಬಲಕ್ಕೆ ನಿಂತಿದ್ದಾರೆ. ಸಿಎಂ ಸ್ಥಾನದ ಪಟ್ಟು ಬಿಡಬೇಡಿ, ನಾನು ನಿಮ್ಮ ಜೊತೆ ಇದ್ದೇನೆ ಎಂದು ಹರಿಪ್ರಸಾದ್ ಹೇಳಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆದರೆ ಸಿದ್ದರಾಮಯ್ಯ ಸರ್ಕಾರದಿಂದ ಹೊರಹೋಗುವ ಸಾಧ್ಯತೆ ಇದೆ. ಇನ್ನೊಂದೆಡೆ, ಒಬಿಸಿ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆ ಇದೆ. ಒಬಿಸಿ ಕೋಟಾದಡಿ ಹರಿಪ್ರಸಾದ್ ಡಿಸಿಎಂ ಸ್ಥಾನಕ್ಕೆ ಲಾಬಿ ಸಾಧ್ಯತೆ ಇದೆ. ಹರಿಪ್ರಸಾದ್ ಪರ ಡಿಕೆಶಿ ಬ್ಯಾಟ್ ಕೂಡ ಬೀಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದ ನಂತರ ಸಿಎಂ ಯಾರು ಎಂಬ ಪ್ರಶ್ನೆ ಎದ್ದಿರುವ ನಡುವೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಒಂದೆಡೆ ಸಿದ್ದರಾಮಯ್ಯ ಅವರು ತಮ್ಮ ಬಣದ ಶಾಸಕರ ಜೊತೆಗೆ ಸಭೆ ನಡೆಸಿದ್ದು, ಇನ್ನೊಂದೆಡೆ, ಡಿಕೆ ಶಿವಕುಮಾರ್ ಬೆಂಬಲಿಗರಿಂದಲೂ ಸಭೆ ನಡೆಸಲಾಗುತ್ತಿದೆ. ಡಿಕೆ ಶಿವಕುಮಾರ್ ಬಣದಲ್ಲಿ ಗುರಿಸಿಕೊಂಡ ಶಾಸಕರು ಡಿಕೆ ಶಿವಕುಮಾರ್ ಮನೆಗೆ ಆಗಮಿಸುತ್ತಿದ್ದಾರೆ.
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮುಖ್ಯಮಂತ್ರಿ ಆಗಬೇಕೆಂದು ಬೆಂಬಲಿಗರು ಘೋಷಣೆ ಕೂಗುತ್ತಿದ್ದಾರೆ. ಬೆಂಗಳೂರಿನ ಸದಾಶಿವನಗರದ ಡಿಕೆಶಿ ನಿವಾಸದ ಬಳಿ ಜಮಾಯಿಸಿದ ಬೆಂಬಲಿಗರು, ಡಿಕೆ ಶಿವಕುಮಾರ್ಗೆ ಸಿಎಂ ಸ್ಥಾನ ಕೊಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಒಂದು ಅವಕಾಶ ಸಿಕ್ಕಿದೆ. ಹೀಗಾಗಿ ಈ ಭಾರಿ ಡಿಕೆ ಶಿವಕುಮಾರ್ಗೆ ಅವಕಾಶ ಕೊಡಬೇಕು. ಇವರು ಸಾಕಷ್ಟು ಕಷ್ಟಪಟ್ಟು ಪಕ್ಷವನ್ನು ಕಟ್ಟಿದ್ದಾರೆ. ಐಟಿ ಇಡಿ ದಾಳಿ ಮಾಡಿದರೂ ಎದೆಗುಂದದೇ ಪಕ್ಷ ಸಂಘಟನೆ ನಡೆಸಿದ್ದಾರೆ ಎಂದು ಹೇಳುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದು ಕುರಿತಂತೆ ಚರ್ಚೆ ನಡೆಯುತ್ತಿರುವಾಗಲೇ ಮುಖ್ಯಮಂತ್ರಿಯನ್ನಾಗಿ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ನೇಮಕ ಮಾಡಬೇಕೆಂದು ಕಾಂಗ್ರೆಸ್ ಪಕ್ಷದ ಹೈಕಮಾಂಡ್, ವರಿಷ್ಠರಲ್ಲಿ ಒತ್ತಡ ಹೇರಲು ಇಂದು ಬೆಂಗಳೂರಿನ ಕುರುಬರ ಸಂಘದಲ್ಲಿ ಕುರುಬ ಜನಾಂಗದ ಮುಖಂಡರ ಸಭೆ ನಡೆಯಿತು. ಈ ವೇಳೆ, ಕಳೆದ ಐದು ವರ್ಷಗಳ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಅನ್ನಭಾಗ್ಯ, ಇಂದಿರಾ ಕ್ಯಾಂಟಿನ್ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಜನಮನ ಗೆದ್ದಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಶಾಸಕರನ್ನು ಬಿಟ್ಟು ಯಾರನ್ನೂ ಭೇಟಿ ಮಾಡುವ ಪರಿಸ್ಥಿತಿಯಲ್ಲಿಲ್ಲ, ಮನೆ ಬಳಿ ಯಾರೂ ಗಲಾಟೆ ಮಾಡಬೇಡಿ, ಕೂಗಾಡಬೇಡಿ ಎಂದು ತಮ್ಮ ಬೆಂಬಲಿಗರಿಗೆ ಬೆಂಗಳೂರಿನ ಸದಾಶಿವನಗರದಲ್ಲಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ. ಇದೇ ವೇಳೆ ಶಿವಕುಮಾರ್ ನಿವಾಸಕ್ಕೆ ರಾಮಲಿಂಗ ರೆಡ್ಡಿ ಅವರು ಆಗಮಿಸಿದ್ದಾರೆ.
ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಡಿಕೆ ಶಿವಕುಮಾರ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ನಿರ್ಣಯಿಸಲಾಗಿದೆ. ಸಭೆಯಲ್ಲಿ ಮಾತನಾಡಿದ ಸ್ಫಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿ, ಕಳೆದ ಬಾರಿ ಕುಮಾರಸ್ವಾಮಿಗೆ ಬೆಂಬಲಿಸಿದ್ದೆವು. ಈ ಬಾರಿ ಡಿಕೆ ಶಿವಕುಮಾರ್ ಅವರಿಗೆ ಬೆಂಬಲಿಸುತ್ತಿದ್ದೇವೆ ಎಂದರು. ಒಕ್ಕಲಿಗ ಸಿಎಂಗಳು ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಸಿಎಂ ಆಗಿದ್ದ ನಮ್ಮ ಸಮುದಾಯದವರಿಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಕುಮಾರಸ್ವಾಮಿ ಸೇರಿದಂತೆ ಹಲವರಿಗೆ 5 ವರ್ಷ ಪೂರ್ಣ ಅವಧಿ ಸಿಕ್ಕಿಲ್ಲ. ಸಿಕ್ಕ ಸಮಯದಲ್ಲೇ ಹಲವು ಜನಪರ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ಎಸ್.ಎಂ.ಕೃಷ್ಣ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿ ಆಗಿತ್ತು. ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಮಾಡಿದ ಕೀರ್ತಿ ಎಸ್‌ಎಂಕೃಷ್ಣಾಗೆ ಸಲುತ್ತದೆ ಎಂದರು.
ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಸಭೆ ಇನ್ನು ಕೆಲವೇ ಕ್ಷಣಗಳಲ್ಲಿ ಆರಂಭಗೊಳ್ಳಲಿದ್ದು, ಒಬ್ಬೊಬ್ಬರಾಗಿ ಶಾಸಕರು ಆಗಮಿಸುತ್ತಿದ್ದಾರೆ. ಶಾಂಗ್ರಿಲಾ ಹೊಟೇಲ್ನಲ್ಲಿ ನಡೆಯುವ ಕಾಂಗ್ರೆಸ್ ನೂತನ ಶಾಸಕಾಂಗ ಸಭೆಗೆ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ. 150 ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಚಿಕ್ಕಮಗಳೂರು: ಹೊಂದಾಣಿಕೆ ಮಾಡಿಕೊಂಡು ರಾಜಕೀಯ ಮಾಡಲು ಬರಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಜವಾಬ್ದಾರಿ ಸಿಕ್ಕಿದ ಮೇಲೆ ಕ್ಷೇತ್ರದ ಓಡಾಟ ಕಡಿಮೆ ಆಯ್ತು. ನಾನು ಯಾರ ಮೇಲೂ ಬೊಟ್ಟು ಮಾಡುವುದಿಲ್ಲ. ನಿರಂತರವಾಗಿ ಗೆಲ್ಲುವುದೊಂದೇ ನಾಯಕನ ಲಕ್ಷಣ ಅಲ್ಲ. ಹೊಂದಾಣಿಕೆ ಮಾಡಿಕೊಂಡು ರಾಜಕೀಯ ಮಾಡಲು ನನಗೆ ಬರಲ್ಲ
ಹಾಗೆ ಮಾಡುವುದಿದ್ದರೆ ನಾನು ಮಾಡಿಕೊಳ್ಳಬಹುದಿತ್ತು. ನನಗೆ ಸಿದ್ಧಾಂತ ಪಕ್ಷ ಮುಖ್ಯ, ವೈಯಕ್ತಿಕ ಹಿತಾಸಕ್ತಿ ಇಲ್ಲ. ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿ ಹಾಕಿಸಿಕೊಂಡವರೂ ಇದ್ದಾರೆ. ನಾನು ಸೋಲನ್ನು ವಿನಮ್ರವಾಗಿ ತೆಗೆದುಕೊಂಡಿದ್ದೇನೆ. ಗೆದ್ದವನು ಈಗ ಏನೋ ಮಾತಾಡಬಹುದು. ಅವರಿಗೆ ಗೆದ್ದ ಅಮಲು ಇದೆ. ಆದರೆ ಆ ಅಮಲು ಸದಾ ಇರಲು ಸಾಧ್ಯವಿಲ್ಲ, ಅಮಲು ಇಳಿಯಲೇಬೇಕು ಎಂದರು.
ವಿಜಯಪುರ: ನಗರ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಗೆಲುವು ಸಾಧಿಸಿದ ಹಿನ್ನೆಲೆ ಯುವಕರು ಖಡ್ಗ ಹಿಡಿದು ಸಂಭ್ರಮಾಚರಣೆ ನಡೆಸಿದರು. ನಿನ್ನೆ ನಡೆದ ಘಟನೆಯ ವಿಡಿಯೋ ಇಂದು ವೈರಲ್ ಆಗುತ್ತಿದೆ. ನಗರದ ಸಿದ್ದೇಶ್ವರ ದೇವಸ್ಥಾನ ಬಳಿ ನಡೆದಿದ್ದ ವಿಜಯೋತ್ಸವ ಇದಾಗಿದೆ. ಖಡ್ಗ ಹಿಡಿದು ಓಡಾಡಿದ ಯುವಕನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಚಿಕ್ಕಮಗಳೂರು: ಹಣ ಬಲದ ನಡುವೆ ಇಂದು ಜನ ಬಲ ಗೆದ್ದಿದೆ. ಸಿಟಿ ರವಿಯ ದುರಹಂಕಾರವೇ ಅವರ ಸೋಲಿಗೆ ಕಾರಣ ಎಂದು ಸಿಟಿ ರವಿ ವಿರುದ್ಧ ಗೆಲುವು ಸಾಧಿಸಿದ ಕಾಂಗ್ರೆಸ್‌ನ ಹೆಚ್ ಡಿ ತಮ್ಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ, ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಕೇವಲವಾಗಿ ಮಾತನಾಡುತ್ತಾರೆ. ಅದನ್ನೆಲ್ಲ ನೋಡಿಯೇ ನಾವು ಅವರಿಂದ ದೂರ ಬಂದಿದ್ದು. ಅದನ್ನೇ ನಾವು ಜನರ ಮುಂದಿಟ್ಟಿದ್ದೆವು, ಜನ ಈಗ ಅವರನ್ನ ತಿರಸ್ಕಾರ ಮಾಡಿದ್ದಾರೆ. ನಾನು ಅಭ್ಯರ್ಥಿಯಾಗಿ ಯಾವಾಗ ಘೋಷಣೆ ಆದೆನೋ ಆಗಲೇ ಸಿಟಿ ರವಿಗೆ ಫ್ಯಾಮಿಲಿ ಫೀಲ್ಡಿಗೆ ಇಳಿದ್ದರು. ನನಗೆ ಸಿಟಿ ರವಿ ದೊಡ್ಡ ಅಭ್ಯರ್ಥಿಯಾಗಿ ಕಣಿಸಲೇ ಇಲ್ಲ ಎಂದರು.
ನಮ್ಮ ಸಮುದಾಯಕ್ಕೆ ಗೌರವ ಸಿಗಬೇಕಾದ್ರೆ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಎಂದು ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕ ಉಮಾಪತಿ ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ಗೆ ನಾವು ಬೆಂಬಲ ಸೂಚಿಸುತ್ತೇವೆ. ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಸಭೆ ಮಾಡುತ್ತಿದ್ದೇವೆ. ಮನವಿ ಮಾಡುತ್ತಿದ್ದೇವೆ ಹೊರತು ಡಿಮ್ಯಾಂಡ್ ಮಾಡುತ್ತಿಲ್ಲ. ಡಿಕೆ ಶಿವಕುಮಾರ್ ಅವರು ನಮ್ಮ ಸಮುದಾಯದ ಧ್ವನಿಯಾಗಿದ್ದಾರೆ ಎಂದರು.
ತುಮಕೂರು: ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಡಿ.ಕೆ ಶಿವಕುಮಾರ್, ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ನಮಸ್ಕರಿದರು. ನಂತರ ಶ್ರೀ ಸಿದ್ದಲಿಂಗ ಸ್ವಾಮೀಜಿಯಿಂದ ಆಶೀರ್ವಾದ ಪಡೆದರು. ಈ ವೇಳೆ ಶ್ರೀಗಳು ಡಿಕೆ ಶಿವಕುಮಾರ್ಗೆ ಶಾಲು ಹೊದಿಸಿ, ಹಾರ ಹಾಕಿ ಆಶೀರ್ವಾದ ಮಾಡಿದರು. ಜಿಲ್ಲಾ ಕಾಂಗ್ರೆಸ್‌ನ ಮುಖಂಡರು ಜೊತೆಗಿದ್ದರು.
ಬೆಂಗಳೂರು: ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಅಸದಿ, ರಾಜ್ಯದಲ್ಲಿ 90% ರಷ್ಟು ಮುಸ್ಲಿಂಮರಿದ್ದಾರೆ. ಅದರಲ್ಲಿ 88% ರಷ್ಟು ಮುಸ್ಲಿಮರು ಕಾಂಗ್ರೆಸ್ ಪಾರ್ಟಿಗೆ ಮತ ನೀಡಿದರು. ಹದಿನೈದು ಕಡೆಗಳಲ್ಲಿ ಮುಸ್ಲಿಮರು ಎಲೆಕ್ಷನ್ಗೆ ನಿಂತಿದ್ದರು. ಅದರಲ್ಲಿ 9 ಜನರು ಗೆದ್ದಿದ್ದಾರೆ. ರಾಜ್ಯದಲ್ಲಿ 73 ಶಾಸಕರು ಗೆಲ್ಲಲು ಮುಸ್ಲಿಮರು ಪ್ರಮುಖ ಪಾತ್ರವಹಿಸಿದ್ದಾರೆ. ನಾವು ಮತದಾನ ಮಾಡಲು ಎಲ್ಲಾ ಮಸೀದಿಗಳಲ್ಲಿ ಅಭಿಯಾನ, ಜಾಗೃತಿ ಮಾಡಿದ್ದೆವು. ಹಿಂದೆ ಎಸ್ ಎಂ ಕೃಷ್ಣ ಸರ್ಕಾರದಲ್ಲಿ ಮುಸ್ಲಿಂನ ಐದು ಜನರಿಗೆ ಸಚಿವ ಸ್ಥಾನ ನೀಡಿದ್ದರು. ಹಾಗಾಗಿ ಈ ಬಾರಿಯ ಸರ್ಕಾರದಲ್ಲೂ ಐವರಿಗೆ ಸಚಿವ ಸ್ಥಾನ ಮತ್ತು ಒಂದು ಡಿಸಿಎಂ ಹುದ್ದೆ ನೀಡಬೇಕು ಎಂದರು.
ಚಾಮರಾಜನಗರ ಮತ್ತು ವರುಣ ಎರಡೂ ಕ್ಷೇತ್ರಗಳಲ್ಲಿ ವಿ. ಸೋಮಣ್ಣ ಸೋಲು ಹಿನ್ನೆಲೆ ಸೋಮಣ್ಣಗೆ ಕರೆ ಮಾಡಿದ ಕೇಂದ್ರ ಗೃಹಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಈ ರೀತಿಯ ಫಲಿತಾಂಶ ಬರುತ್ತದೆ ಅಂತ ನಿರೀಕ್ಷೆ ಮಾಡಿರಲಿಲ್ಲ, ನಮ್ಮ ಎಣಿಕೆ ತಪ್ಪಾಗಿದೆ. ನಿಮ್ಮ ಜತೆ ಪಕ್ಷ ಹಾಗೂ ನಾವು ಸದಾ ಇರುತ್ತೇವೆ ಎಂದು ಧೈರ್ಯ ಹೇಳಿದ್ದಾರೆ.
ತುಮಕೂರು: ನೋಣವಿನಕೆರೆ ಮಠಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಮಾಜಿ ಸಚಿವ ವಿ ಸೋಮಣ್ಣ, ನಾನು ನೋಣವಿನಕೆರೆ ಮಠದ ಭಕ್ತ. ಅದಕ್ಕೆ ಬಂದು ಪೂಜೆ ಮಾಡಿದ್ದೇನೆ. ಡಿಕೆ ಶಿವಕುಮಾರ್ ಕೂಡ ಒಬ್ಬ ಭಕ್ತ ಅವರೂ ಪೂಜೆ ಮಾಡಿದ್ದಾರೆ. ಅವರ ಭೇಟಿಗೂ ನನ್ನ ಭೇಟಿಗೂ ಯಾವುದೇ ಸಂಬಂಧ ಇಲ್ಲ. ನಾನು ಚುನಾವಣೆಯಲ್ಲಿ ಸೋತಿದ್ದೇನೆ. ಜನರ ತೀರ್ಪುನ್ನು ಸ್ವೀಕರಿಸಿದ್ದೇನೆ. ಸೋಲಿಗೆ ಕಾರಣ ಇನ್ನೇನು ಇಲ್ಲ. ಕಳೆದ ಬಾರಿ ಕಾಂಗ್ರೆಸ್ ಸೋತಿತ್ತು. ಸಿಎಂ ಆಗಿದ್ದರೂ ಸಿದ್ದರಾಮಯ್ಯ ಸೋತಿದ್ದರು. ಇದೆಲ್ಲಾ ನಡೆಯುತ್ತಾ ಇರುತ್ತದೆ. ಯಡಿಯೂರಪ್ಪ ಪಕ್ಷದ ಪ್ರಶ್ನಾತೀತ ನಾಯಕರು. ನಾನಾಗಲಿ ಯಡಿಯೂರಪ್ಪನವರಾಗರಾಗಲಿ ಕೆಲವೊಮ್ಮೆ ಅನಿವಾರ್ಯ ಅಲ್ಲ. ವ್ಯಕ್ತಿಗಿಂತ ಪಕ್ಷ ಮುಖ್ಯ, ನಾವ್ಯಾರು ಪಕ್ಷಕ್ಕೆ ಅನಿವಾರ್ಯ ಅಲ್ಲ. ಇಂದಿರಾಗಾಂಧಿ, ರಾಜೀವ್ ಗಾಂಧಿ, ವಾಜಪೇಯಿ ಇವರ್ಯಾರು ಇಲ್ಲ. ಆದರೂ ಪಕ್ಷಗಳಿಲ್ವ. ಯಡಿಯೂರಪ್ಪ ಇಳಿಸಿದಕ್ಕೆ ಲಿಂಗಾಯತರು ಬಿಜೆಪಿಯನ್ನ ಸೋಲಿಸಿದರು ಅನ್ನೋದು ಸರಿಯಲ್ಲ. ಲಿಂಗಾಯತರನ್ನೆ ಯಾಕೆ ಟಾರ್ಗೆಟ್ ಮಾಡುತ್ತೀರ? ಲಿಂಗಾಯತರು ಸ್ವತಂತ್ರವಾಗಿ ಬದುಕುವುದುಬೇಡ್ವ ಎಂದು ಪ್ರಶ್ನಿಸಿದರು.
ವಿಧಾನಸಭೆಗೆ ಆಯ್ಕೆಗೊಂಡ 224 ವಿಧಾನಸಭಾ ಸದಸ್ಯರುಗಳ ಅಧಿಸೂಚಿತ ಪಟ್ಟಿ ರಾಜ್ಯಪಾಲರಿಗೆ ಹಸ್ತಾಂತರ ಮಾಡಲಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ರಾಜಭವನದಲ್ಲಿ ಹಸ್ತಾಂತರ ಮಾಡಲಾಗಿದೆ. ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತ ಅಜಯ್ ಬಾಡೂ, ಪ್ರಧಾನ ಕಾರ್ಯದರ್ಶಿ ನರೇಂದ್ರ ಎನ್. ಬುಟೋಲಿಯ ಹಾಗೂ ಕಾರ್ಯದರ್ಶಿ ಬಿ.ಸಿ. ಪಾತ್ರ ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಂದ ಹಸ್ತಾಂತರ ಮಾಡಲಾಗಿದೆ. ಈ ವೇಳೆ ಅಪರ ಮುಖ್ಯ ಚುನಾವಣಾಧಿಕಾರಿಗಳಾದ ರಾಜೇಂದ್ರ ಚೋಳನ್ ಹಾಗೂ ವೆಂಕಟೇಶ್ ಕುಮಾರ್ ಉಪಸ್ಥಿತರಿದ್ದರು.
ಕೊಪ್ಪಳ: ಸಚಿವ ಹಾಲಪ್ಪ ಆಚಾರ್ ಸೋಲಿಗೆ ಬೆಂಬಲಿಗರು ಕಣ್ಣೀರು ಹಾಕಿದ್ದಾರೆ. ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಹಾಲಪ್ಪ ಆಚಾರ್ ಮುಂದೆ ಬಿಕ್ಕಿ, ಬಿಕ್ಕಿ ಅತ್ತಿದ್ದಾರೆ. ಸೋಲಿನ ಹಿನ್ನಲೆಯಲ್ಲಿ ಹಾಲಪ್ಪ ಆಚಾರ್ ರನ್ನ ಸಂತೈಸಲು ಬೆಂಬಲಿಗರು ಆಗಮಿಸುತ್ತಿದ್ದಾರೆ. ಇತ್ತ ಕಣ್ಣೀರು ಹಾಕಿದ ಬೆಂಬಲಿಗರನ್ನು ಹಾಲಪ್ಪ ಆಚಾರ್ ಸಂತೈಸುತ್ತಿದ್ದಾರೆ.
ತಮ್ಮ ಹಾಗೂ ಕ್ಷೇತ್ರದ ಜೊತೆಗೆ ನಾನು ನಿರಂತರ ಸಂಪರ್ಕದಲ್ಲಿರುತ್ತೇನೆ. ರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯ. ಯಾರೂ ಎದೆಗುಂದಬೇಡಿ ಎಂದು ಬೆಂಬಲಿಗರಿಗೆ ಧೈರ್ಯ ತುಂಬಿದರು.
ಹಾವೇರಿ: ಜನರ ತೀರ್ಪಿಗೆ ನಾವು ತಲೆಬಾಗುತ್ತೇವೆ ಎಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ. ಹಿರೇಕೆರೂರಿನಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ವಿಚಾರದಲ್ಲಿ ತಾಂಡಾಗಳಲ್ಲಿ ಮತ ಸಿಕ್ಕಿಲ್ಲ. ಕಾಂಗ್ರೆಸ್‌ನ ಭರವಸೆಗಳ ಮೇಲೆ ನಂಬಿಕೆ ಇಟ್ಟು ಮತ ನೀಡಿದ್ದಾರೆ. ಕೊಟ್ಟ ಮಾತಿನಂತೆ ನಡೆಯದಿದ್ದರೆ ಕಾಂಗ್ರೆಸ್ ವಿರುದ್ಧ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಮಗಳೂರು: ಬಿಜೆಪಿ ಅಭ್ಯರ್ಥಿ ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್‌ನ ತಮ್ಮಯ್ಯ ಗೆಲುವು ಸಾಧಿಸಿದ ಹಿನ್ನೆಲೆ ಜೆಡಿಎಸ್ ಕಾರ್ಯಕರ್ತರು ಜೆಡಿಎಸ್ ಎಂಎಲ್ಸಿ ಎಸ್ಎಲ್ ಭೋಜೇಗೌಡ ಅವರಿಗೆ ಹಾಲಿನಭಿಷೇಕ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಭೋಜೇಗೌಡರು ಮತಯಾಚನೆ ನಡೆಸಿದ್ದರು. ಭೋಜೇಗೌಡ ಅವರು ಕುಮಾರಸ್ವಾಮಿ ಆಪ್ತರೂ ಆಗಿದ್ದಾರೆ.
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಸೋಲು ಅನುಭಿವಿಸಿದ್ದಾರೆ. ಹೀಗಾಗಿ ಬಾಲಕನೊಬ್ಬ ಸಿಟಿ ರವಿ ಅವರಿಗೆ ಸಾಂತ್ವನ ಹೇಳಿದ್ದಾನೆ. ಸರ್…. ನಿಮ್ಮ ಜೊತೆ ನಾವಿರುತ್ತೇವೆ ಎಂದು ಧೈರ್ಯ ತುಂಬಿದ್ದಾನೆ. ನಾವು ಬಿಜೆಪಿ ಜೊತೆ ಇರುತ್ತೇವೆ, ನೀವು ಭಯ ಪಡಬೇಡಿ ಎಂದು ಸಿ.ಟಿ.ರವಿ ನಿವಾಸಕ್ಕೆ ಭೇಟಿ ನೀಡಿ ಧೈರ್ಯ ತುಂಬಿದ್ದಾನೆ. ಕಳೆದ 20 ವರ್ಷಗಳಿಂದ ಗೆಲ್ಲುತ್ತಲೇ ಬಂದಿದ್ದ ಸಿಟಿ ರವಿ ಪ್ರಸಕ್ತ ಚುನಾವಣೆಯಲ್ಲಿ ಸೋಲುಂಡಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಸಿಎಲ್ಪಿ ಸಭೆಯಲ್ಲಿಅಭಿಪ್ರಾಯ ಸಂಗ್ರಹಿಸುತ್ತಾರೆ. ಶಾಸಕರ ಅಭಿಪ್ರಾಯದಂತೆ ಹೈಕಮಾಂಡ್ ಮತ್ತು ಮಲ್ಲಿಕಾರ್ಜುನ ಖರ್ಗೆ ನಿರ್ಧರಿಸುತ್ತಾರೆ ಎಂದು ಬೆಂಗಳೂರಿನಲ್ಲಿ ಟಿವಿ9ಗೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ. ಸಹಜವಾಗಿಯೇ ಎಲ್ಲರಿಗೂ ಸಿಎಂ ಆಗಬೇಕೆಂಬ ಆಸೆ ಇರುತ್ತದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಬ್ಬರು ಮಾತ್ರ ಅಲ್ಲ, ಪರಮೇಶ್ವರ್, ಎಂ.ಬಿ.ಪಾಟೀಲ್ಗೂ ಸಿಎಂ ಹುದ್ದೆ ಆಸೆ ಇದೆ. ಯಾರೇ ಮುಖ್ಯಮಂತ್ರಿ ಆದರೂ ಕಾಂಗ್ರೆಸ್ನವರೇ ಆಗುತ್ತಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪಕ್ಷ ಸಂಘಟನೆ ಮಾಡಿದ್ದಾರೆ. ಶಾಸಕರ ಅಭಿಪ್ರಾಯದಂತೆ ಹೈಕಮಾಂಡ್ ತೀರ್ಮಾನಿಸಲಿದೆ. ನನಗೆ ಸಿಎಂ ಆಗುವಾಸೆ ಇಲ್ಲ, ಸಚಿವ ಸ್ಥಾನಕ್ಕೆ ಲಾಬಿ ಮಾಡಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು ಎಂದರು.
ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಚಂಡ ಬಹುಮತ ವಿಚಾರವಾಗಿ ಮಾತನಾಡಿದ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ, ಕರ್ನಾಟಕ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದಿದ್ದಾರೆ. ಕೆಂಪೇಗೌಡ ಏರ್ಪೋರ್ಟ್ನಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ನಂತರ ಕಾಂಗ್ರೆಸ್ಗೆ ಶಕ್ತಿ ಬಂದಿದೆ. ಹಿಮಾಚಲಪ್ರದೇಶದ ಬಳಿಕ ಕರ್ನಾಟಕದಲ್ಲೂ ಕಾಂಗ್ರೆಸ್ ಗೆದ್ದಿದೆ. 9 ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳು ಅಧಿಕಾರಕ್ಕೆ ಬಂದಿವೆ. ತೆಲಂಗಾಣದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಅನ್ಯಮಾರ್ಗ, ಕುತಂತ್ರದಿಂದ ಅಧಿಕಾರ ಹಿಡಿಯುತ್ತದೆ. ಕಳೆದ ಬಾರಿ ಶ್ರೀರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿತ್ತು. ಈ ಬಾರಿ ಬಿಜೆಪಿ ಹನುಮನ ಹೆಸರು ಜಪಿಸಿತ್ತು. ರಾಮನಿಗೆ ವಂಚಿಸಿದವರನ್ನು ಹನುಮಂತ ಹೇಗೆ ಕೈಹಿಡಿಯುತ್ತಾನೆ? ಹನುಮಂತನೇ ಬಿಜೆಪಿಯನ್ನು ಸೋಲುವಂತೆ ಮಾಡಿದ್ದಾನೆ ಎಂದು ಟಾಂಗ್ ಕೊಟ್ಟರು.
ಬೆಂಗಳೂರು: ರಾಜ್ಯ ಬಿಜೆಪಿ ಘಟಕ ಅಧ್ಯಕ್ಷರ ರಾಜೀನಾಮೆ ಬಗ್ಗೆ ಚರ್ಚೆಯಾಗಿಲ್ಲ. ವಿಪಕ್ಷ ನಾಯಕನ ಸ್ಥಾನದ ಬಗ್ಗೆ ಇದುವರೆಗೂ ಚರ್ಚೆಯಾಗಿಲ್ಲ. ಫಲಿತಾಂಶದ ಬಗ್ಗೆ ಹೈಕಮಾಂಡ್ ನಾಯಕರು ಧೈರ್ಯ ಹೇಳಿದ್ದಾರೆ. ಚುನಾವಣಾ ಫಲಿತಾಂಶದ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡಿದ್ದೇವೆ. ಚುನಾಯಿತ ಅಭ್ಯರ್ಥಿಗಳ ಸಭೆ ಕರೆಯಬೇಕು ಎಂದು ಹೇಳಿದ್ದಾರೆ. ಪಕ್ಷದ ಸಂಘಟನೆ ಹೇಗೆ ಮಾಡಬೇಕು ಎಂದು ಚರ್ಚೆ ಮಾಡಿದ್ದೇವೆ. ನಮ್ಮಲ್ಲಿ ಪಕ್ಷ ಸಂಘಟನೆಗೆ ವಿಶ್ರಾಂತಿ ಇರಲ್ಲ. ಚುನಾವಣೆ ಸೋಲನ್ನು ಬಹಳ ವಿನಯದಿಂದ ಸ್ವೀಕಾರ ಮಾಡಿದ್ದೇವೆ ಎಂದು ಬೆಂಗಳೂರಿನಲ್ಲಿ ಹಂಗಾಮಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ರನ್ನು ಸಿಎಂ ಮಾಡದಂತೆ ವಂದೇ ಮಾತರಂ ಸಂಘಟನೆಯ ಶಿವಕುಮಾರ್ ನಾಯ್ಕ್ ರಾಜಭವನಕ್ಕೆ ಮನವಿ ಸಲ್ಲಿಸಿದ್ದಾರೆ. ಡಿಕೆ ಶಿವಕುಮಾರ್ ವಿರುದ್ಧ ಅನೇಕ ಪ್ರಕರಣಗಳು ಚಾಲ್ತಿಯಲ್ಲಿವೆ. ಐಟಿ ಹಾಗು ಇಡಿ ಇಲಾಖೆಗಳು ಅವರ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿವೆ. ಇಂತಹ ಸಂದರ್ಭದಲ್ಲಿ ಅವರನ್ನು ಸಿಎಂ ಮಾಡಿದರೆ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ. ಈ ಹಿನ್ನೆಲೆ ಅವರನ್ನು ಸಿಎಂ ಆಗಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದಾರೆ.
ತುಮಕೂರು: ಕಾಡಸಿದ್ದೇಶ್ವರ ಮಠ ನಮಗೆ ಪುಣ್ಯ ಕ್ಷೇತ್ರ. ಪ್ರತಿ ಸಂದರ್ಭದಲ್ಲೂ ಶ್ರೀಗಳು ನಮಗೆ ಮಾರ್ಗದರ್ಶನ ನೀಡಿದ್ದಾರೆ. ಟಿಕೆಟ್ ಹಂಚಿಕೆ ಸೇರಿ ಎಲ್ಲಾ ತೀರ್ಮಾನವನ್ನು ಇಲ್ಲೇ ಮಾಡಿದ್ದೆ. ರಾಜ್ಯಕ್ಕೆ ಒಳ್ಳೆಯದಾಗಲಿ ಅಂತ ಮಾರ್ಗದರ್ಶನ ಕೊಟ್ಟಿದ್ದಾರೆ. ಮಂಡ್ಯ ಜಿಲ್ಲೆಯಲ್ಲೂ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದಿದೆ. ಗುರು ಇಲ್ಲದೆ ಗುರಿ ತಲುಪಲು ಸಾಧ್ಯವಿಲ್ಲ ಎಂದು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿ: ಬೆಳಗಾವಿಯಲ್ಲಿ ಪಾಕ್ ಪರ ಘೋಷಣೆ ವಿಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಆ ವಿಡಿಯೋ ಫೇಕ್. ಈ ಬಗ್ಗೆ ವಿಡಿಯೋ ಹೇಳಿಕೆ ಮೂಲಕವೂ ಸ್ಪಷ್ಟನೆ ನೀಡಿದ್ದೇನೆ. ಬಿಜೆಪಿಯ ಕೆಲವರು ಇಂತಹ ಕೆಲಸ ಮಾಡ್ತಿದ್ದಾರೆ. ಚುನಾವಣೆ ಸಂದರ್ಭದಲ್ಲೂ ಬಿಜೆಪಿಯವರು ಇದನ್ನೇ ಮಾಡಿದ್ದರು. ಬೆಳಗಾವಿ ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಚರ್ಚಿಸುವೆ. ಮಾನನಷ್ಟ ಮೊಕದ್ದಮೆ ದಾಖಲಿಸಲು ಸಿದ್ಧತೆ ನಡೆಸಿದ್ದೇನೆ ಎಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಹೇಳಿದ್ದಾರೆ
ದಾವಣಗೆರೆ: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ರೇಣುಕಾಚಾರ್ಯ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಹಾಳು ಮಾಡಿದ ಬಿಎಲ್ ಸಂತೋಷ್ಗೆ ದಿಕ್ಕಾರ. ಬಿಎಸ್ ಯಡಿಯೂಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗೆ ಇಳಿಸಿದ್ದೇ ರೇಣುಕಾಚಾರ್ಯ ಸೋಲಿಗೆ ಕಾರಣ. ಕರ್ನಾಟಕದಲ್ಲಿ ಬಿಎಲ್ ಸಂತೋಷ ಬಿಜೆಪಿ ಹಾಳು ಮಾಡಿದ್ಧಾರೆ. ರೇಣುಕಾಚಾರ್ಯ ರಾಜಕೀಯ ನಿವೃತ್ತಿ ಪಡೆದರೇ ನಾವು ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.
ಬೆಂಗಳೂರು: ವಿಧಾನಸಭೆ ಚುನಾವಣಾ ಸೋಲಿನ ಅವಲೋಕನಕ್ಕೆ ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದು, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮುಖ್ಯ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ಸಿ .ಸಿ.ಪಾಟೀಲ್, ಶಾಸಕ ಮುನಿರತ್ನ, ರವಿಸುಬ್ರಹ್ಮಣ್ಯ ಸೇರಿದಂತೆ ಪಕ್ಷದ ರಾಜ್ಯ ಪದಾಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ. ಪಕ್ಷದ ರಾಜ್ಯ ಪದಾಧಿಕಾರಿಗಳು ಕೂಡಾ ಸಭೆಯಲ್ಲಿ ಭಾಗಿ.
ಬೆಂಗಳೂರು: ಸದಾಶಿವನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಿವಾಸಕ್ಕೆ ಕಾಂಗ್ರೆಸ್ ನಾಯಕರು ಭೇಟಿ ನೀಡುತ್ತಿದ್ದಾರೆ. ಶಾಸಕರ ಜಮೀರ್ ಅಹ್ಮದ್, ಹೆಚ್.ಕೆ.ಪಾಟೀಲ್, ಆರ್ ವಿ ದೇಶಪಾಂಡೆ ಹಾಗು ಎಂಬಿ ಪಾಟೀಲ್ ಬೇಟಿ ಭೇಟಿಯಾಗಿ ಸಭೆ ನಡೆಸಿದ್ದಾರೆ.
ಬೆಂಗಳೂರು: ಇಂದು ಶಾಸಕಾಂಗ ಪಕ್ಷದ ಸಭೆ ಹಿನ್ನೆಲೆ ಶಾಸಕ ಸಿದ್ದರಾಮಯ್ಯ ತನ್ನ ಬಣದ ಶಾಸಕರೊಂದಿಗೆ ಪ್ರತ್ಯೇಕ ಮೀಟಿಂಗ್ ನಡೆಸಿದ್ದಾರೆ. ಕನ್ನಿಂಗ್ ಹ್ಯಾಂ ರಸ್ತೆಯಲ್ಲಿ ಪ್ರತ್ಯೇಕ ಮೀಟಿಂಗ್ ನಡೆಸಿದ್ದು, ಶಾಸಕ ಭೈರತಿ ಸುರೇಶ್, ಎಂಬಿ ಪಾಟೀಲ್, ಝಮೀರ್ ಅಹಮದ್ ಖಾನ್ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಬಹುಮತ ಬಂದ ಹಿನ್ನೆಲೆ ಕಾಂಗ್ರೆಸ್ ನಾಯಕರು ಶಾಸಕಾಂಗ ಸಭೆ ಕರೆದಿದ್ದಾರೆ. ಇಂದು (ಮೇ.14) ಸಂಜೆ 5.30 ಕ್ಕೆ ನಡೆಯುವ ಶಾಸಕಾಂಗ ಸಭೆಯಲ್ಲಿ, ಶಾಸಕರ ಅಭಿಪ್ರಾಯ ಆಧರಿಸಿ ಮುಖ್ಯಮಂತ್ರಿ ಆಯ್ಕೆ ಮಾಡಲಾಗುತ್ತದೆ ಎಂದು ಈಗಾಗಲೇ ಹೈಕಮಾಂಡ್ ಹೇಳಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಶಾಸಕರ ವಿಶ್ವಾಸ ಗಳಿಸಲು ಸಿದ್ದರಾಮಯ್ಯ ಕಸರತ್ತು ನಡೆಸಿದ್ದಾರೆ. ಹಳೆ ಮೈಸೂರು ಮಧ್ಯ ಕರ್ನಾಟಕ ಭಾಗದ ಶಾಸಕರು ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸದಲ್ಲಿ ಡಿಕೆಶಿವಕುಮಾರ್ ಇದ್ದಾರೆ. ಸಿದ್ದರಾಮಯ್ಯ ಪರ ಎಷ್ಟು ಶಾಸಕರು, ಡಿಕೆಶಿವಕುಮಾರ್ ಪರ ಎಷ್ಟು ಶಾಸಕರು ಎಂಬ ಸಂಖ್ಯೆಗೆ ಹೆಚ್ಚು ಮಹತ್ವವಿದೆ. ಟಿಕೆಟ್ ಹಂಚಿಕೆ ವೇಳೆ ಡಿಕೆಶಿವಕುಮಾರ್ ತಮ್ಮ ಬೆಂಬಲಿಗರಿಗೆ ಹೆಚ್ಚಿನ ಅವಕಾಶ ಕೊಡಿಸಿದ್ದರು. ಇದೀಗ ಶಾಸಕಾಂಗ ನಾಯಕನ ಆಯ್ಕೆ ವೇಳೆ ಯಾರು ಯಾರಿಗೆ ಬೆಂಬಲ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಬೆಂಗಳೂರು: ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ ಗೆದ್ದ ಶಾಸಕರು ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸುತ್ತಿದ್ದಾರೆ. ಇಂದು (ಮೇ.15) ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಹಿನ್ನೆಲೆ ಮಾಜಿ ಸಚಿವ ಕೃಷ್ಣಭೈರೇಗೌಡ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಬೆಂಗಳೂರು: ಸೋತಾಗಿದೆ, ಏನು ಮಾತನಾಡಲಿ ? ಮಾತನಾಡುವುದು ಅಗತ್ಯ ಇಲ್ಲ, ಸೋತಿದ್ದೇನೆ ಅಷ್ಟೆ. ಹೈಕಮಾಂಡ್ ಸೂಚನೆ ಮೇರೆಗೆ ಹೋಗಿ ಸ್ಪರ್ಧಿಸಿದೆ. ಚಾಲೆಂಜ್ ಆಗಿ ತೆಗೆದುಕೊಂಡೆ, ಪ್ರತಿಯೊಂದಕ್ಕೂ ಕಾಲ ಅಂತ ಇರುತ್ತದೆ. ನನ್ನಈ ಕ್ಷೇತ್ರ ಚಿನ್ನದಂತೆ ಇತ್ತು. ಹೈಕಮಾಂಡ್ ಹೇಳಿತು ಅಂತ ಹೋದೆ. ಜನ ತೀರ್ಮಾನ ಮಾಡಿದ್ದಾರೆ. ಕ್ಷೇತ್ರಕ್ಕಿಂತ ಪಕ್ಷ ದೊಡ್ಡದು, ಪಕ್ಷದ ಮಾತು ಕೇಳಿದೆ ಅಷ್ಟೇ ಎಂದು ಬಿಜೆಪಿ ನಾಯಕ ವಿ. ಸೋಮಣ್ಣ ಹೇಳಿದ್ದಾರೆ.
ಬೆಂಗಳೂರು: ಕುತೂಹಲ ಪಡಬೇಕಾದದ್ದು ಏನಿಲ್ಲ, ಯಾರು ಟೆನ್ಷನ್ ಮಾಡಿಕೊಳ್ಳಬೇಡಿ. ಎಲ್ಲಿ ಶ್ರಮವಿದೆಯೋ ಅಲ್ಲಿ ಪ್ರತಿಫಲ ಇದೆ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ. ನಾನು ನಂಬಿರುವ ಶಕ್ತಿ ನನಗೆ ಮಾರ್ಗದರ್ಶನ ಮಾಡಿದೆ. ಪ್ರತಿ ಹೆಜ್ಜೆಯಲ್ಲೂ ದೈರ್ಯ ತುಂಬಿ, ನನ್ನ ಕಷ್ಟದಲ್ಲೂ ಪಾರು ಮಾಡಿದ ನೊಣವಿನಕೆರೆಯ ಅಜ್ಜನನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ. ಮಧ್ಯಾಹ್ನ 1ಗಂಟೆಗೆ ವಾಪಸ್ ಬರುತ್ತೇನೆ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿ: ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಪಟ್ಟಣ್ ಗೆಲುವು ಸಾಧಿಸಿದ ಹಿನ್ನೆಲೆ 15ಕ್ಕೂ ಹೆಚ್ಚು ಬೆಂಬಲಿಗರು ರಾಮದುರ್ಗ ತಾಲೂಕಿನ ಪಂಚಗಾಂವ, ಕುಳ್ಳೂರ ಗ್ರಾಮದಿಂದ ರಾಮದುರ್ಗವರೆಗೆ ದೀರ್ಘದಂಡ ನಮಸ್ಕಾರ ಹಾಕಲು ನಿರ್ಧರಿಸಿದ್ದಾರೆ. ರಾಮದುರ್ಗ ಹೊರವಲಯ ಮುಳ್ಳೂರು ಗುಡ್ಡದಲ್ಲಿರುವ ಶಿವನ ಪ್ರತಿಮೆವರೆಗೂ ಸುಮಾರು 30 ಕಿಮೀ ದೀರ್ಘದಂಡ ನಮಸ್ಕಾರ ಮೂಲಕ ತೆರಳಲು ಸಿದ್ದರಾಗಿದ್ದಾರೆ.
ಕಲಬುರಗಿ: ನಮ್ಮ ಸಿಎಂ ಪ್ರಿಯಾಂಕ್ ಖರ್ಗೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಿತ್ತಾರಪುರ ವಿಧಾನಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಪ್ರಿಯಾಂಕ್ ಖರ್ಗೆಯವರಿಗೆ ಮುಖ್ಯಮಂತ್ರಿ ಮಾಡಬೇಕೆಂದು ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿ ಮಾಡುತ್ತಿದ್ದಾರೆ. ಅಪ್ಪನ ಕನಸಲ್ಲೆ ಕೋಟ್ಯಂತರ ಕನ್ನಡಿಗರ ಕನಸು, ಅನ್ನೋ ಪೋಸ್ಟರ್ಗಳು ವೈರಲ್ ಆಗುತ್ತಿವೆ. ಮತ್ತೊಂದಡೆ ಟ್ವೀಟರ್ನಲ್ಲಿ ಕೂಡ ನಮ್ಮ ಸಿಎಂ ಪ್ರಿಯಾಂಕ್ ಖರ್ಗೆ ಎಂದು ಬೆಂಬಲಿಗರು ಟ್ರೆಂಡ್ ಹುಟ್ಟು ಹಾಕುತ್ತಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ನಾಯಕಿ ಸೌಮ್ಯ ರೆಡ್ಡಿ ಅವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ವಿಧಾನಸಭೆ ಚುನಾವಣೆಯ ಮತ ಎಣಿಕೆ ನಿನ್ನೆ (ಮೇ.13) ರಂದು ನಡೆದಿದ್ದು, ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿಯವರಿಗೆ ಸೋಲಾಗಿದೆ. ಹೌದು ನಿನ್ನೆ ಮಧ್ಯಾಹ್ನದ ವೇಳೆಗೆ 116 ಮತಗಳ ಅಂತರದಿಂದ ಗೆದ್ದಿದ್ದ ಸೌಮ್ಯ ರೆಡ್ಡಿಯವರು, ಮರು ಎಣಿಕೆಯಲ್ಲಿ 16 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಹೀಗಾಗಿ ಸೌಮ್ಯ ರೆಡ್ಡಿಯವರು ಇಂದು (ಮೇ.14) ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಿದ್ದಾರೆ.
Published On - 8:13 am, Sun, 14 May 23